ಅವರ್ಯಾರೋ ಪ್ರಭಾವಿ ಪ್ರಚಾರದ ಮನುಷ್ಯರೆಂಬ ಕಾರಣಕ್ಕೆ ಮತ್ಯಾರೋ ಅವರ ಗೇಲಿಯ ವಸ್ತುವಾಗಬೇಕಿಲ್ಲ… ಈ ವಾರದ ಎರಡು ಮಾದರಿಗಳು

ಚೈತನ್ಯ ಹೆಗಡೆ

ಪುಗಸಟ್ಟೆ ಪ್ರಚಾರದಿಂದಲೋ, ಸಮಾಜದಲ್ಲಿ ಗಳಿಸಿಕೊಂಡಿರುವ ಪ್ರಭಾವದಿಂದಲೋ ಅಥವಾ ದುಡ್ಡಿನ ಬಲದಿಂದಾಗಿಯೋ ಹಲವು ತಥಾಕಥಿತ ದೊಡ್ಡ ಮನುಷ್ಯರು ಗೇಲಿ-ಉಡಾಫೆಗಳನ್ನು ತಮ್ಮ ಬಂಡವಾಳ ಮಾಡಿಕೊಂಡಿರುತ್ತಾರೆ. ತಾವು ಮೇಲಿದ್ದೇವೆ ಎಂದು ತೋರಿಸಿಕೊಳ್ಳಲು ಇತರರನ್ನು ಕೆಳಮಟ್ಟದಲ್ಲಿ ಚಿತ್ರಿಸುವ ಅನಿವಾರ್ಯತೆ ಅವರಿಗೆ.

ಇಂಥವರನ್ನು ಬದಲಾಯಿಸುವ ಉಸಾಬರಿ ನಮಗೆ ಬೇಡ. ಆದರೆ ಇಂಥವರ ಉಗುಳನ್ನೆಲ್ಲ ಸಹಿಸಿಕೊಳ್ಳಬೇಕಿಲ್ಲ ಎಂಬುದೂ ಅಷ್ಟೇ ಖರೆ. ಅವರು ಧನಾಢ್ಯರೇ ಆಗಿರಬಹುದು, ನಿಮ್ಮ ಗ್ರಾಹಕರೇ ಆಗಿದ್ದಿರಬಹುದು, ಇನ್ಯಾವತ್ತೋ ನಿಮ್ಮ ಲಾಭಕ್ಕೆ ಒಲಿಯುವವರೂ ಆಗಿದ್ದಿರಬಹುದು… ಆದರೆ ಆತ್ಮಗೌರವ ಅವೆಲ್ಲಕ್ಕಿಂತ ದೊಡ್ಡದು ಎಂಬುದನ್ನು ಆಗೀಗ ಕೆಲ ಘಟನೆಗಳು ಸಾಬೀತು ಮಾಡುತ್ತಿರುತ್ತವೆ.

ಪಾಲಿಕೆ ಚುನಾವಣೆ ಕಾರಣಕ್ಕೆ ಮುಂಬೈ ಇತ್ತೀಚೆಗೆ ಸುದ್ದಿಯಲ್ಲಿತ್ತಷ್ಟೆ. ಹೀಗೆ ಸುದ್ದಿಯಲ್ಲಿರುವ ಸಂಗತಿಗಳನ್ನು ಬಳಸಿಕೊಂಡು ತಾವು ಸುದ್ದಿಯಾಗುವುದು ಕೆಲವು ಸೆಲೆಬ್ರಿಟಿಗಳ ಲಾಗಾಯ್ತಿನ ತಂತ್ರ. ಶೋಭಾ ಡೇ ಟ್ವೀಟು ಕುಟ್ಟಿಯೇ ಬಿಟ್ಟರು, ಬೊಜ್ಜಿನ ಪೊಲೀಸ್ ಸಿಬ್ಬಂದಿ ಚಿತ್ರವೊಂದನ್ನು ಅಂಟಿಸಿ… ‘ನೋಡಿ..ಎಂಥ ಬಂದೋಬಸ್ತ್ ಮುಂಬೈ ಪೊಲೀಸರದ್ದು’ ಅಂತ. ನಿರ್ದಿಷ್ಟ ಪ್ರಕರಣಗಳಲ್ಲಿ ಪೊಲೀಸ್ ವೈಫಲ್ಯವನ್ನು ಪ್ರಶ್ನಿಸುವುದು ಬೇರೆ, ಸಾರಾಸಗಟಾಗಿ ಪೊಲೀಸರನ್ನು ಅದಕ್ಷರೆಂದು ಬಿಂಬಿಸುವುದೇ ಬೇರೆ. ಶೋಭಾ ಮಾಡಿದ್ದು ಎರಡನೇ ಕೃತ್ಯ. ಈ ಹಿಂದೆ, ‘ಭಾರತದ ಕ್ರೀಡಾಳುಗಳು ಒಲಿಂಪಿಕ್ಸ್ ಗೆ ಹೋಗುವುದು ಸೆಲ್ಫಿ ತೆಗೆಸಿಕೊಳ್ಳುವುದಕ್ಕೆ’ ಅಂತ ಉಡಾಫೆಯಿಂದ ಮಾತನಾಡಿದ್ದರು ಆರಾಮ ಕುರ್ಚಿಯ ಪರಿಣತೆ ಶೋಭಾ ಡೇ.

ಈ ಬಾರಿ ಮುಂಬೈ ಪೊಲೀಸರು ಸುಮ್ಮನಾಗಲಿಲ್ಲ. ತಾವೂ ಒಂದು ಪ್ರತಿ ಟ್ವೀಟು ಬಿಟ್ಟರು. ‘ನಾವೂ ತಮಾಷೆಯನ್ನು ಇಷ್ಟಪಡುತ್ತೇವೆ. ಆದರೆ ಇದು ದಾರಿತಪ್ಪಿದ್ದು. ಈ ಸಮವಸ್ತ್ರದ ವ್ಯಕ್ತಿ ಮುಂಬೈ ಪೊಲೀಸ್ ಇಲಾಖೆಗೆ ಸೇರಿದವರಲ್ಲ. ನಿಮ್ಮಂಥ ಜವಾಬ್ದಾರಿಯುತ ನಾಗರಿಕರಿಂದ ಹೆಚ್ಚಿನ ಹೊಣೆಗಾರಿಕೆ ನಿರೀಕ್ಷಿಸುತ್ತೇವೆ.’

ಆ ಮೂಲಕ ಏನಕೇನ ಪ್ರಸಿದ್ಧಿಯಾಗುವ ಶೋಭಾ ಡೇ ಮುಖವನ್ನು ಚೆನ್ನಾಗಿ ಬಿಂಬಿಸುವ ಕೆಲಸ ಮಾಡಿತು ಮುಂಬೈ ಪೊಲೀಸ್ ಇಲಾಖೆ. ಟ್ವೀಟಿಗರೂ ಕಟು ಮಾತುಗಳಲ್ಲಿ ಶೋಭಾರನ್ನು ತರಾಟೆಗೆ ತೆಗೆದುಕೊಂಡರು.

ಎರಡನೇ ಪ್ರಕರಣ ಒಬ್ಬ ಅಹಂಕಾರಿ ವಿಮಾನ ಪ್ರಯಾಣಿಕನದ್ದು. ಶುಭೊ ಸೇನ್ ಗುಪ್ತ ಎಂಬ ವಿಮಾನ ಪ್ರಯಾಣಿಕ ಇಂಡಿಗೋದ ಗಗನಸಖಿಯ ಇಂಗ್ಲಿಷನ್ನು ಆಡಿಕೊಳ್ಳುವುದರ ಮೂಲಕ ತನ್ನ ಶಾಣ್ಯಾತನವನ್ನು ತೋರಿಸಿಕೊಳ್ಳಲು ಹೋಗಿ ಟ್ವಿಟ್ಟರಿನಲ್ಲಿ ವಿದ್ಯುಕ್ತವಾಗಿ ಉಗಿಸಿಕೊಂಡಿದ್ದಾರೆ. ‘ಇಂಗ್ಲಿಷ್ ಭಾಷೆಯಲ್ಲಿ ಸಂವಹನ ನಡೆಸುವುದು ನಿಮಗೆ ಆರಾಮದಾಯಕವಷ್ಟೇ’ ಅಂತ ಕೇಳುವಾಗ ದ ಇಂಗ್ಲಿಷ್ ಅಂತೇನೋ ಹೇಳಲು ಹೋಗಿ ಸ್ವಲ್ಪ ವ್ಯತ್ಯಾಸವಾಗಿದೆ. ಹಾಗಂತ ಗಗನಸಖಿ ಹೇಳಿದ್ದೇನು ಅಂತ ಈತನಿಗೆ ಗೊತ್ತಾಗಿದೆ. ಇವನದ್ದೇನೋ ವ್ಯಂಗ್ಯದ ಉತ್ತರ.

ಸರಿ ಬಿಡಿ. ವಿಮಾನಕ್ಕೆ ಕೊಡುವ ಹಣದಲ್ಲಿ ಭಾಷಾ ಸೇವೆಯೂ ಅಪೇಕ್ಷಣೀಯ ಎಂಬ ವಾದದಲ್ಲಿ ಆತನ ವ್ಯಂಗ್ಯ ಸರಿ ಎಂದುಕೊಳ್ಳೋಣ. ಮಾನವೀಯ ಸ್ಪಂದನೆ ದೃಷ್ಟಿಯಿಂದ ನೋಡಿದಾಗ ಇದು ವಿಕೃತಿಯೇ. ಏಕೆಂದರೆ ಇವತ್ತು ಸಣ್ಣ ಪಟ್ಟಣದ ಹುಡುಗಿಯರು ಗಗನಸಖಿಯರಾಗಿ ವೃತ್ತಿ ಬದುಕು ಕಂಡುಕೊಳ್ಳುತ್ತಿದ್ದಾರೆ. ಇಲ್ಲಿ ಇಂಗ್ಲಿಷು ಸ್ವಲ್ಪ ಆಚೀಚೆ ಆದರೆ ಅದೇನು ತಲೆಹೋಗುವ ವಿಷಯವಾಗಬೇಕಿಲ್ಲ.

ಆದರೆ ಶುಭೊ ಸೇನಗುಪ್ತ ಮುಂದುವರಿದು ತನ್ನ ಟ್ವಿಟ್ಟರಿನಲ್ಲಿ ಆ ಗಗನಸಖಿಯ ಚಿತ್ರವನ್ನೂ ಹಾಕಿರುವುದು ವಿಕೃತಿಯ ಪರಾಕಾಷ್ಠೆ. ಈ ವಿಷಯದಲ್ಲಿ ಇಂಡಿಗೊ ಪ್ರತಿಕ್ರಿಯೆ ಸಮಾಧಾನಕರವಾದದ್ದು. ಎಷ್ಟೆಂದರೂ ಇದು ದುಡ್ಡು ಕೊಟ್ಟವನ ದರ್ಪ. ಗಗನಸಖಿ ಈಕೆ ಅಲ್ಲದಿದ್ರೆ ಮತ್ತೊಬ್ಬಳು, ಅವಮಾನ ನುಂಗಿಕೊಂಡಿರಲಿ ಅಂತ ಆ ಸಂಸ್ಥೆ ಯೋಚಿಸಲಿಲ್ಲ.

ಟ್ವಿಟ್ಟರಿನಲ್ಲಿ ಅದು ಪ್ರತಿಕ್ರಿಯಿಸಿತು- ‘ಶುಭೊ ನಿಮ್ಮ ತಮಾಷೆಯೇನೋ ಚೆನ್ನಾಗಿದೆ. ಅಷ್ಟರಮಟ್ಟಿಗೆ ನಮ್ಮ ಸಿಬ್ಬಂದಿ ನಿಮ್ಮ ನಗುವಿಗೆ ಕಾರಣರಾದರೆಂಬುದು ಒಳ್ಳೆಯದೇ. ಆದರೆ ವಿಮಾನದ ಒಳಗೆ ನಮ್ಮ ಸಿಬ್ಬಂದಿ ಫೊಟೋ ತೆಗೆಯುವುದು ನಿಷಿದ್ಧ. ಗಗನಸಖಿ ಫೊಟೋ ಹಾಕಿರುವ ನೀವು ಅದಕ್ಕೆ ಆಕೆಯಿಂದ ಅನುಮತಿ ತೆಗೆದುಕೊಂಡಿದ್ದೀರಾ?’

ಶುಭೊ ಎಂಬ ವಿಕೃತ ತಡಬಡಾಯಿಸುತ್ತ, ‘ನಾನು ಇಂಡಿಗೊ ಅಭಿಮಾನಿ ಎಂಬುದು ಎಲ್ಲರಿಗೂ ಗೊತ್ತು’ ಅಂತ ಅಸಂಬದ್ಧವಾಗಿ ಟ್ವೀಟಿಸಿದ್ದು ಬಿಟ್ಟರೆ ತಪ್ಪಿಗೆ ವಿಷಾದ ಸೂಚಿಸಲಿಲ್ಲ, ಚಿತ್ರ ತೆಗೆದುಹಾಕಲಿಲ್ಲ.

ಟ್ವೀಟಿಗರು ಮಾತ್ರ- ನಿನ್ನದೊಂದು ರೇಸಿಸ್ಟ್ ವಿಕೃತಿ ಅಂತ ಶುಭೊಗೆ ಛೀಮಾರಿ ಹಾಕುವುದಕ್ಕೆ ಹಿಂಜರಿಯಲಿಲ್ಲ.

ಈ ಶುಭೊ, ಶೋಭಾ ಇವರೆಲ್ಲ ಸರಿಹೋಗುವವರೇನಲ್ಲ. ಬಯ್ಸಿಕೊಂಡಾದರೂ ಸುದ್ದಿಯಲ್ಲಿರುವ ಮಾನಸಿಕ ಮಟ್ಟ ಇಂಥವರದ್ದು. ಆದರೆ ಉದ್ದೇಶ ಇಂಥವರನ್ನು ಸರಿ ಮಾಡಬೇಕಿರುವುದೇ ಅಲ್ಲ. ಬದಲಿಗೆ ಅವಮಾನಕ್ಕೆ ಒಳಗಾಗುವವರ ಪರ ಸಂವೇದನೆ. ಗೌರವ ಎಂಬುದು ಯಾವುದೋ ಹಿರಿತಲೆ, ಮುಖ್ಯಸ್ಥನಿಗೆ ಮಾತ್ರ ಸಂಬಂಧಿಸಿದ್ದಲ್ಲ. ಅದು ಸಂಸ್ಥೆಯ, ಜತೆಗೆ ಕೆಲಸ ಮಾಡುವವರೆಲ್ಲರಿಗೆ ಸಂಬಂಧಿಸಿದ್ದು. ಈ ವಿಷಯದಲ್ಲಿ ಇಂಡಿಗೊ ಅನುಸರಿಸಿರುವ ಕ್ರಮ ಅನುಕರಣೀಯ, ಶ್ಲಾಘನೀಯ.

Leave a Reply