‘ಮನ್ ಕೀ ಬಾತ್’ನಲ್ಲಿ ಮೈಸೂರಿನ ಸಂತೋಷರಿಗೆ ಅಭಿನಂದನೆ, ಮೋದಿ ಮಾತಿನುದ್ದಕ್ಕೂ ಹಲವರಿಗೆ ಧನ್ಯವಾದ ಸಮರ್ಪಣೆ

ಡಿಜಿಟಲ್ ಕನ್ನಡ ಟೀಮ್:

ಈ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ರೆಡಿಯೊ ಕಾರ್ಯಕ್ರಮ ಡಿಜಿಟಲ್ ಹಣಕಾಸು ವ್ಯವಸ್ಥೆಯ ಮುಖ್ಯ ಪ್ರಸ್ತಾಪ ಹೊಂದಿತ್ತು. ಆದಾಗ್ಯೂ ಅವರ ಒಟ್ಟಾರೆ ಭಾಷಣವು ಶ್ರೇಯಸ್ಸು ಸಮರ್ಪಣೆಯ ಕಾರ್ಯಸೂಚಿಯನ್ನು ಹೊಂದಿದಂತಿತ್ತು.

ಡಿಜಿಧನ್ ಯೋಜನೆಯ ಬಗ್ಗೆ ಮಾತನಾಡುತ್ತಲೂ ಅವರು ಮೈಸೂರಿನ ಸಂತೋಷ್ ಅವರನ್ನು ಪ್ರಶಂಸಿಸಿದರು. ಡಿಜಿಟಲ್ ಹಣದ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ನೀಡಲಾಗುವ ಬಹುಮಾನ ಯೋಜನೆ ಭಾಗವಾಗಿ ಸಂತೋಷ್ ಅವರು ₹1000ವನ್ನು ಗೆದ್ದಿದ್ದರು. ಅದನ್ನವರು ಅಗ್ನಿ ಆಕಸ್ಮಿಕದಲ್ಲಿ ಎಲ್ಲವನ್ನೂ ಕಳೆದುಕೊಂಡ ಹಿರಿಯ ನಾಗರಿಕರೊಬ್ಬರಿಗೆ ನೀಡಿದ್ದಾಗಿ ನರೇಂದ್ರ ಮೋದಿ ಆ್ಯಪ್’ನಲ್ಲಿ ಅನುಭವ ದಾಖಲಿಸಿದ್ದರು. ‘ಸಂತೋಷರೇ ನಿಮ್ಮೀ ಕಾರ್ಯ ನಮ್ಮೆಲ್ಲರಿಗೂ ಸಂತೋಷವನ್ನು ಉಂಟುಮಾಡುತ್ತಿದೆ. ಇದೊಂದು ಅನುಕರಣೀಯ ಮಾದರಿ’ ಎಂದು ಶ್ಲಾಘಿಸಿದರು ಪ್ರಧಾನಿ ಮೋದಿ.

ನಗದುರಹಿತ ವ್ಯವಹಾರಕ್ಕೆ ಅನುಕೂಲವಾಗುವಂತೆ ಸರ್ಕಾರ ರೂಪಿಸಿರುವ ಭೀಮ್ ಕಿರುತಂತ್ರಾಂಶಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದರ ಬಗ್ಗೆ ಪ್ರಧಾನಿ ಹರ್ಷ ವ್ಯಕ್ತಪಡಿಸಿದರಲ್ಲದೇ, ಏಪ್ರಿಲ್ 14ರ ಅಂಬೇಡ್ಕರ್ ದಿನವನ್ನು ಜನರಿಗೆ ಭೀಮ್ ಆ್ಯಪ್ ಬಳಕೆಯನ್ನು ಕಲಿಸುವುದರ ಮೂಲಕ ಆಚರಿಸಬೇಕೆಂಬ ಕರೆ ಪ್ರಧಾನಿಯವರದ್ದು. ಈ ಕಿರುತಂತ್ರಾಂಶ ಬಳಸುತ್ತಿರುವವರು ಕನಿಷ್ಠ ಇನ್ನೂ 125 ಮಂದಿಗೆ ಇದರ ಬಗ್ಗೆ ತಿಳಿಸುವಂತಾಗಲಿ ಎಂದರು.

ಮಾರ್ಚ್ 8ರ ಮಹಿಳಾ ದಿನವನ್ನು ನೆನಪಿಸುತ್ತ ಹಲವು ಮಹಿಳಾ ಸಾಧಕರನ್ನು ಪ್ರಶಂಸಿಸಿದರು ಮೋದಿ. ಅವರ ಮಾತಿನಲ್ಲಿ ಹಲವರಿಗೆ ಶ್ರೇಯಸ್ಸು ಸಮರ್ಪಿತವಾಯಿತು. ಏಷ್ಯನ್ ರಗ್ಬಿ ಟ್ರೋಫಿ ಗೆದ್ದ ಮಹಿಳಾ ತಂಡವನ್ನು ಅಭಿನಂದಿಸಿದರು, 104 ಉಪಗ್ರಹಗಳನ್ನು ಕಕ್ಷೆಗೇರಿಸುವ ಮೂಲಕ ಇಸ್ರೊ ವಿಶ್ವದಾಖಲೆ ಮಾಡಿದೆ ಎಂದು ಅಭಿನಂದಿಸುತ್ತಲೇ, ಸಂಸ್ಥೆಯ ಮಹಿಳಾ ವಿಜ್ಞಾನಿಗಳನ್ನು ವಿಶೇಷವಾಗಿ ನೆನೆದರು.

ಟಿ 20 ಅಂಧರ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಸಲ್ಲಿಕೆಯಾಯಿತು ಅಭಿನಂದನೆ. ತೆಲಂಗಾಣದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಸ್ವಚ್ಛತಾ ಆಂದೋಲನದಲ್ಲಿ ತೊಡಗಿಸಿಕೊಂಡಿರುವ ಪರಿಯನ್ನು ಪ್ರಧಾನಿ ಮೆಚ್ಚಿದರು. ಖುದ್ದು ಸಾರ್ವಜನಿಕ ಶೌಚಾಲಯ ಸ್ವಚ್ಛಗೊಳಿಸಿದ ನಡೆಯನ್ನು ಪ್ರಶಂಸಿಸಿದರು.

ಹಿಂದಿಗಿಂತ ಶೇ. 8ರಷ್ಟು ಹೆಚ್ಚು ಆಹಾರ ಉತ್ಪಾದನೆಯಾಗಿರುವ ಬಗ್ಗೆ ಅವರ ಮಾತಿನಲ್ಲಿ ಖುಷಿಯಿತ್ತು. ಯುವಕರು ಡಿಜಿಟಲ್ ಹಣಕಾಸು ವ್ಯವಹಾರದ ರಾಯಭಾರಿಗಳಾಗಬೇಕು ಎಂಬ ಆಶಯವಿತ್ತು. ತಂತ್ರಜ್ಞಾನವು ಬದುಕನ್ನು ಬದಲಿಸುವಂಥದ್ದು, ನೀತಿ ಆಯೋಗವು ನಡೆಸಿರುವ ತಂತ್ರಜ್ಞಾನ ಸ್ಪರ್ಧೆಗಳಲ್ಲಿ ಸಮಾಜದ ಉಪಯೋಗಕ್ಕೆ ಬರುವ ಉಪಾಯಗಳು ಅನಾವರಣಗೊಂಡವು. ಪ್ರವಾಹ ನಿರ್ವಹಣೆಯ ಕಿರುತಂತ್ರಾಂಶ, ಮೀನುಗಾರರಿಗೆ ಸಹಕರಿಸುವ ಆ್ಯಪ್ ಇವೆಲ್ಲ ರೂಪುಗೊಂಡಿವೆ ಎಂಬುದವರ ಪ್ರೇರಕ ಮಾತು.

Leave a Reply