ಆಸ್ಕರ್ 2017: ವಿವಾದಕ್ಕೆ ಕಾರಣವಾದ ಅತ್ಯುತ್ತಮ ಚಿತ್ರ ಪ್ರಶಸ್ತಿ ಆಯ್ಕೆ, ಲಾ ಲಾ ಲ್ಯಾಂಡ್ ಚಿತ್ರಕ್ಕೆ 6 ಗರಿ

ಈ ಬಾರಿಯ ಆಸ್ಕರ್ ಪ್ರಶಸ್ತಿ ಗೆದ್ದ ಪ್ರಮುಖರು… ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದ ಮಾಹೆರ್ಷಲ್ ಅಲಿ, ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಎಮ್ಮಾ ಸ್ಟೋನ್, ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದ ವಿಯೊಲಾ ಡೆವಿಸ್, ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಕ್ಯಾಸ್ಸೆ ಆಫ್ಲೆಕ್. (ಚಿತ್ರಕೃಪೆ: ಟ್ವಿಟರ್)

ಡಿಜಿಟಲ್ ಕನ್ನಡ ಟೀಮ್:

89ನೇ ಅಕಾಡೆಮಿ ಅವಾರ್ಡ್ ಅಥವಾ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ ಸೋಮವಾರ ಬೆಳಗ್ಗೆ ಲಾಸ್ ಏಂಜಲೀಸ್ ನ ಡೊಲ್ಬಿ ಥಿಯೇಟರ್ ನಲ್ಲಿ ಅದ್ಧೂರಿಯಾಗಿ ಸಾಗಿತು. ಆದರೆ ಕಾರ್ಯಕ್ರಮಕ್ಕೆ ಕಪ್ಪು ಚುಕ್ಕಿ ಎಂಬಂತೆ ಈ ಬಾರಿಯ ಅತ್ಯುತ್ತಮ ಪ್ರಶಸ್ತಿ ಘೋಷಣೆ ಸಂದರ್ಭದಲ್ಲಿನ ಗೊಂದಲ ಎಲ್ಲರನ್ನು ಕ್ಷಣಕಾಲ ದಿಗ್ಭ್ರಮೆಗೊಳಿಸಿತಲ್ಲದೇ ವಿವಾದಕ್ಕೂ ಕಾರಣವಾಯಿತು.

ಈ ಬಾರಿ 14 ವಿಭಾಗಗಳಲ್ಲಿ ನಾಮನಿರ್ದೇಶನ ಪಡೆದಿದ್ದ ಅಮೆರಿಕದ ‘ಲಾ ಲಾ ಲ್ಯಾಂಡ್’ ಚಿತ್ರ ಒಟ್ಟು 6 ಪ್ರಶಸ್ತಿಗಳನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಯ್ತು. ಅತ್ಯುತ್ತಮ ನಟಿ, ಪೋಷಕ ನಟ, ಅತ್ಯುತ್ತಮ ಛಾಯಾಗ್ರಾಹಕ, ನಿರ್ದೇಶಕ ಪ್ರಶಸ್ತಿ ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದ ಲಾ ಲಾ ಲ್ಯಾಂಡ್ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನೂ ಪಡೆಯಲಿದೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಪ್ರಶಸ್ತಿ ಘೋಷಣೆ ಸಂದರ್ಭದಲ್ಲಿ ಲಾ ಲಾ ಲ್ಯಾಂಡ್ ಚಿತ್ರಕ್ಕೆ ಈ ಪ್ರಶಸ್ತಿ ಸಿಕ್ಕಿದೆ ಎಂದು ಘೋಷಿಸಲಾಯಿತು. ಇದಾದ ಕೆಲವೇ ಹೊತ್ತಿನಲ್ಲಿ ಗೊಂದಲ ನಿರ್ಮಾಣವಾಗಿ ನಂತರ ಈ ಪ್ರಶಸ್ತಿಯನ್ನು ಮೂನ್ ಲೈಟ್ ಚಿತ್ರ ಪಡೆದಿರುವುದಾಗಿ ಪ್ರಕಟಿಸಲಾಯಿತು. ಆಯೋಜಕರು ತಪ್ಪು ಕ್ಯೂ ಕಾರ್ಡ್ ನೀಡಿದ ಪರಿಣಾಮ ವೇದಿಕೆ ಮೇಲಿದ್ದ ಅತಿಥಿಗಳು ಲಾ ಲಾ ಲ್ಯಾಂಡ್ ಚಿತ್ರ ಈ ಪ್ರಶಸ್ತಿ ವಿಜೇತ ಎಂದು ಘೋಷಿಸಿದರು. ಅದಾಗಲೇ ಪ್ರಶಸ್ತಿ ಗೆದ್ದ ಖುಷಿಯಲ್ಲಿ ವೇದಿಕೆಗೆ ಆಗಮಿಸಿ ಸಂಭ್ರಮಿಸುತ್ತಿದ್ದ ಲಾ ಲಾ ಲ್ಯಾಂಡ್ ಚಿತ್ರ ತಂಡಕ್ಕೆ ತೀವ್ರ ನಿರಾಸೆಯಾಯಿತು.

ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದ ಲಾ ಲಾ ಲ್ಯಾಂಡ್ ಚಿತ್ರದ ನಿರ್ದೇಶಕ ಡೇಮಿಯನ್ ಚಾಸೆಲ್ಲೆ ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ನಿರ್ದೇಶಕ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

ಇನ್ನು ಈ ಬಾರಿ ಭಾರತ ಮೂಲದ ದೇವ್ ಪಟೇಲ್ ‘ಲಯನ್’ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಟ್ಟಿಗೆ ನಾಮನಿರ್ದೇಶನಗೊಂಡಿದ್ದರು. ಆದರೆ ಈ ಪ್ರಶಸ್ತಿಯು ಮೂನ್ ಲೈಟ್ ಚಿತ್ರದ ಮಾಹೆರ್ಷಲ್ ಅಲಿ ಅವರ ಪಾಲಾಯಿತು.

ಈ ಬಾರಿಯ ಆಸ್ಕರ್ ವಿಜೇತರ ಪಟ್ಟಿ…

ಅತ್ಯುತ್ತಮ ಚಿತ್ರ: ಮೂನ್ ಲೈಟ್

ಅತ್ಯುತ್ತಮ ನಟ: ಕ್ಯಾಸ್ಸೆ ಆಫ್ಲೆಕ್ (ಮ್ಯಾಂಚೆಸ್ಟರ್ ಬೈ ಸೀ)

ಅತ್ಯುತ್ತಮ ನಟಿ: ಎಮ್ಮಾ ಸ್ಟೋನ್ (ಲಾ ಲಾ ಲ್ಯಾಂಡ್)

ಅತ್ಯುತ್ತಮ ನಿರ್ದೇಶಕ: ಡೇಮಿಯನ್ ಚಾಸೆಲ್ಲೆ (ಲಾ ಲಾ ಲ್ಯಾಂಡ್)

ಅತ್ಯುತ್ತಮ ಚಿತ್ರಕಥೆ (ಅಳವಡಿಕೆ): ಮೂನ್ ಲೈಟ್

ಅತ್ಯುತ್ತಮ ಚಿತ್ರಕಥೆ (ಸ್ವಂತಿಕೆ): ಮ್ಯಾಂಚೆಸ್ಟರ್ ಬೈ ಸೀ

ಅತ್ಯುತ್ತಮ ಹಾಡು: ಸಿಟಿ ಆಫ್ ಸ್ಟಾರ್ಸ್ (ಲಾ ಲಾ ಲ್ಯಾಂಡ್)

ಅತ್ಯುತ್ತಮ ಸಂಗೀತ: ಲಾ ಲಾ ಲ್ಯಾಂಡ್

ಅತ್ಯುತ್ತಮ ಛಾಯಾಗ್ರಹಣ: ಲಾ ಲಾ ಲ್ಯಾಂಡ್

ಅತ್ಯುತ್ತಮ ಸಂಕಲನ: ಹಾಕ್ಸಾ ರಿಡ್ಜ್

ಅತ್ಯುತ್ತಮ ಧ್ವನಿ ಸಂಕಲನ: ಅರೈವಲ್

ಅತ್ಯುತ್ತಮ ಪೋಷಕ ನಟ: ಮಾಹೆರ್ಷಲ್ ಅಲಿ (ಮೂನ್ ಲೈಟ್)

ಅತ್ಯುತ್ತಮ ಪೋಷಕ ನಟಿ: ವಿಯೊಲಾ ಡೇವಿಸ್ (ಫೆನ್ಸ್)

ಅತ್ಯುತ್ತಮ ಸಾಕ್ಷ್ಯ ಚಿತ್ರ: ಓಜೆ- ಮೇಡ್ ಇನ್ ಅಮೆರಿಕ

ಅತ್ಯುತ್ತಮ ಕಿರು ಚಿತ್ರ: ದ ವೈಟ್ ಹೆಲ್ಮೆಟ್ಸ್

ಅತ್ಯುತ್ತಮ ಅನಿಮೇಟೆಡ್ ಚಿತ್ರ: ಪೈಪರ್

ಅತ್ಯುತ್ತಮ ವಿದೇಶಿ ಚಿತ್ರ: ದ ಸೇಲ್ಸ್ ಮನ್

ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಡೇವಿಡ್ ವಾಸ್ಕೊ ಮತ್ತು ಸ್ಯಾಂಡಿ ರೆನಾಲ್ಡ್ ವಾಸ್ಕೊ (ಲಾ ಲಾ ಲ್ಯಾಂಡ್)

priyanka

ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ್ದ ನಟಿ ಪ್ರಿಯಾಂಕ ಚೋಪ್ರಾ

dev-patel

ಆಸ್ಕರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಟ್ಟಿಯಲ್ಲಿ ನಾಮನಿರ್ದೇಶನಗೊಂಡಿದ್ದ ಭಾರತದ ನಟ ದೇವ್ ಪಟೇಲ್ ತಮ್ಮ ತಾಯಿಯೊಂದಿಗೆ ಕಾಣಿಸಿಕೊಂಡಿದ್ದು…

Leave a Reply