ಯಡಿಯೂರಪ್ಪ ಖುಲಾಸೆ ಕೇಸ್ ಗಳಿಗೆ ಜೀವ ನೀಡಲು ಸಿಎಂ ನಿರ್ಧಾರ? ಪಡಿತರದಲ್ಲಿ ಸೀಮೆಎಣ್ಣೆ- ಆದ್ರೆ ಕೈ ತಪ್ಪಲಿದೆ ಸಕ್ಕರೆ, ಯಲಹಂಕ ಶಾಲಾ ವಿದ್ಯಾರ್ಥಿ ಹತ್ಯೆ- ಇಲ್ಲಿಗೂ ಬಂತೆ ಅಮೆರಿಕ ಮಾದರಿ?, ರೋಮಿಂಗ್ ಶುಲ್ಕ ತೆರವಿಗೆ ಏರ್ ಟೆಲ್ ನಿರ್ಧಾರ

355

ಕನಿಷ್ಟ ವೇತನ ಹೆಚ್ಚಳ ಹಾಗೂ ಆರು ತಿಂಗಳ ಬಾಕಿ ನೀಡಲು ಒತ್ತಾಯಿಸಿ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಪೌರಕಾರ್ಮಿಕರು ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಡಿಜಿಟಲ್ ಕನ್ನಡ ಟೀಮ್:

ಬಿಎಸ್ ವೈ ವಿರುದ್ಧ ಕಾನೂನಿನ ಅಸ್ತ್ರ ಪ್ರಯೋಗ

ವಿವಾದಿತ ಡೈರಿ ಪ್ರಕರಣದ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರ ವಿರುದ್ಧ ನ್ಯಾಯಾಂಗ ಅಸ್ತ್ರ ಪ್ರಯೋಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ಡಿನೋಟಿಫಿಕೇಷನ್ ಸಂಬಂಧಿಸಿದಂತೆ ಯಡಿಯೂರಪ್ಪನವರ ವಿರುದ್ಧ ಒಟ್ಟು 22 ಪ್ರಕರಣಗಳನ್ನು ಮತ್ತೆ ಕೋರ್ಟಿನಲ್ಲಿ ಮರು ವಿಚಾರಣೆಗೆ ಅರ್ಜಿ ಹಾಕುವ ಮೂಲಕ ಬಿಎಸ್ ವೈ ನ್ಯಾಯಾಲಯದ ಮೆಟ್ಟಿಲು ಹತ್ತುವಂತೆ ಮಾಡಲು ರಣತಂತ್ರ ರೂಪಿಸಲಾಗಿದೆ ಎಂಬ ಮಾತುಗಳು ಕೇಳಿ ಬರ್ತಿವೆ.

ತಮ್ಮ ನಿವಾಸ ಕಾವೇರಿಯಲ್ಲಿ ರಾಜ್ಯದ ಅಡ್ವೋಕೇಟ್ ಜನರಲ್ ಹಾಗೂ ಕಾನೂನು ಇಲಾಖೆ ಹಿರಿಯ ಅಧಿಕಾರಿಗಳೊಟ್ಟಿಗೆ ಸಮಾಲೋಚನೆ ನಡೆಸಿ, 22 ಪ್ರಕರಣಗಳಲ್ಲಿ ಯಡಿಯೂರಪ್ಪನವರು ಖುಲಾಸೆಯಾಗಿರುವ 15 ಪ್ರಕರಣಗಳನ್ನು ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವ ಬಗ್ಗೆ ಚರ್ಚಿಸಿದರು. ಖುಲಾಸೆಯಾದ 15 ಪ್ರಕರಣಗಳ ಹೊರತಾಗಿ ಉಳಿದಿರುವ 7 ಪ್ರಕರಣಗಳ ಪೈಕಿ ಐದು ಪ್ರಕರಣ ವಿಚಾರಣೆ ಹಂತದಲ್ಲಿದ್ದು, ಎರಡು ಪ್ರಕರಣ ಲೋಕಾಯುಕ್ತ ವಿಚಾರಣೆ ಹಂತದಲ್ಲಿದೆ.

ಕಾನೂನು ತಜ್ಞರ ಜತೆ ಚರ್ಚೆ ನಡೆಸಿದ ನಂತರ ನಗರಾಭಿವೃದ್ಧಿ ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳನ್ನು ಕರೆಸಿಕೊಂಡು, ಬಿಜೆಪಿ ಅಧಿಕಾರ ಅವಧಿಯಲ್ಲಿ ಭೂವ್ಯವಹಾರಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಎಲ್ಲ ದೂರುಗಳ ಬಗ್ಗೆ ಒಂದು ವಾರದಲ್ಲಿ ವರದಿ ನೀಡುವಂತೆ  ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪಡಿತರ ಚೀಟಿದಾರರಿಗೆ ಸಿಗಲಿದೆ ಸೀಮೇಎಣ್ಣೆ,  ಆದರೆ ಸಕ್ಕರೆ ಇಲ್ಲ…

ಗ್ರಾಮಾಂತರ ಪ್ರದೇಶಗಳಲ್ಲಿ ಅನಿಲ ಪಡಿತರ ಚೀಟಿದಾರರಿಗೆ ಮಾಸಿಕ ಒಂದು ಲೀಟರ್ ಸೀಮೆಎಣ್ಣೆ ವಿತರಿಸಲು ಸರ್ಕಾರ ನಿರ್ಧರಿಸಿದ್ದು, ಏಪ್ರಿಲ್ 1ರಿಂದ ಈಗ ನೀಡಲಾಗುತ್ತಿರುವ ಸಕ್ಕರೆ ವಿತರಣೆ ಕೈ ಬಿಡಲು ಸರ್ಕಾರ ನಿರ್ಧರಿಸಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ‘ಅನಿಲ ಸಂಪರ್ಕ ಹೊಂದಿಲ್ಲದವರಿಗೆ ಎಂದಿನಂತೆ ಮೂರು ಲೀಟರ್ ಸೀಮೆಎಣ್ಣೆ ವಿತರಿಸಲಾಗುವುದು. ನಗರ ಪ್ರದೇಶದಲ್ಲಿ ಬಿಪಿಎಲ್ ಪಡಿತರ ಚೀಟಿದಾರರು ಅನಿಲ ಸಂಪರ್ಕ ಹೊಂದಿದ್ದಾರೆ ಹೀಗಾಗಿ ಅಂತಹವರಿಗೆ ಇದರ ಲಾಭ ದೊರಕುವುದಿಲ್ಲ. ಮಾರ್ಚ್ ಒಂದರಿಂದ ಪ್ರತಿ ಲೀಟರ್ ಗೆ ₹ 25 ನಿಗದಿ ಪಡಿಸಲಾಗಿದೆ. ಈ ಸೀಮೆಎಣ್ಣೆ ಪಡೆಯಲು ಗ್ರಾಮೀಣ ಭಾಗದ ಜನರು ತಮ್ಮ ಅವಶ್ಯಕತೆಯ ಬಗ್ಗೆ ತಮ್ಮ ವ್ಯಾಪ್ತಿಯ ಪಂಚಾಯಿತಿ ಕಛೇರಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು. ಈ ಕೋರಿಕೆ ಆಧಾರದ ಮೇಲೆ ಸೀಮೆಎಣ್ಣೆ ವಿತರಿಸಲಾಗುವುದು.’ ಎಂದರು.

ಸಚಿವರನ್ನು ಕೈಬಿಡುವ ವದಂತಿ ಬಗ್ಗೆ ಆಂತರಿಕ ತನಿಖೆ

ಸಂಪುಟದ ಇಪ್ಪತ್ತು ಸಚಿವರನ್ನು ಕೈಬಿಡುವ ವದಂತಿ ಹಬ್ಬಿಸಿ ಗೊಂದಲಕ್ಕೆ ಕಾರಣವಾದವರನ್ನು ಪತ್ತೆ ಹಚ್ಚಲು ಆಂತರಿಕ ತನಿಖೆಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ್ ಇಂದು ಆದೇಶಿಸಿದ್ದಾರೆ. ಮಂತ್ರಿಗಿರಿ ಕಳೆದುಕೊಂಡ ನಾಯಕರೊಬ್ಬರು ಸೇರಿದಂತೆ ಕೆಪಿಸಿಸಿ ಆಯಕಟ್ಟಿನ ಜಾಗದಲ್ಲಿರುವ ಕೆಲ ಪ್ರಮುಖರೇ ಈ ವದಂತಿ ಹಬ್ಬಲು ಕಾರಣ ಎಂದು ಪರಮೇಶ್ವರ್ ಶಂಕಿಸಿದ್ದಾರೆ. ಜತೆಗೆ ಈ ರೀತಿಯಾದ ಗೊಂದಲ ಮತ್ತೆ ಉದ್ಭವಿಸಬಾರದು ಎಂದು ಹೇಳಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಸಹಪಾಠಿಯಿಂದಲೇ ವಿದ್ಯಾರ್ಥಿ ಕೊಲೆ

ಅಮೆರಿಕದಲ್ಲಿನ ಶಾಲೆ ಕಾಲೇಜುಗಳಲ್ಲಿ ಶೂಟೌಟ್ ಪ್ರಕರಣಗಳ ಬಗ್ಗೆ ಸುದ್ದಿ ಓದುತ್ತಿದ್ದ ನಾವು ಈಗ ನಮ್ಮ ಶಾಲೆಗಳಲ್ಲೇ ಕೊಲೆಯಾಗುತ್ತಿರುವ ಸುದ್ದಿ ಕೇಳುವಂತಾಗಿದೆ. ಬೆಂಗಳೂರಿನ ಯಲಹಂಕದ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಹರ್ಷ ಎಂಬ ವಿದ್ಯಾರ್ಥಿ ವಾರ್ಷಿಕೋತ್ಸವ ಸಂದರ್ಭದ ಜಗಳದಲ್ಲಿ ಹತ್ಯೆಗೊಳಗಾಗಿದ್ದಾನೆ. ಚಾಕುವಿನ ಇರಿತದಿಂದ ಆದ ಹತ್ಯೆ ಸಹಪಾಠಿಯಿಂದಲೇ ನಡೆದಿದೆ ಎಂಬ ವರದಿಗಳು ಬರುತ್ತಿದ್ದರೂ ಈ ಬಗ್ಗೆ ಸ್ಪಷ್ಟತೆ ಇಲ್ಲ. ಸೋಮವಾರ ಈ ದುರ್ಘಟನೆ ನಡೆದಿದ್ದು, ಘಟನೆಯಲ್ಲಿ ಇನ್ನು ಕೆಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಈ ಘಟನೆಗೆ ನಿರ್ದಿಷ್ಟ ಕಾರಣ ಇನ್ನಷ್ಟೇ ತಿಳಿದುಬರಬೇಕಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿ ಸಾಲುಗಳು…

  • ನಾಗರಿಕರ ಕುಂದುಕೊರತೆಯನ್ನು ಆನ್ ಲೈನ್ ಮೂಲಕವೇ ಬಗೆಹರಿಸುವ ನಿಟ್ಟಿನಲ್ಲಿ ಜನಹಿತ ಮೊಬೈಲ್ ಆ್ಯಪ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ. ಈ ತಂತ್ರಜ್ಞಾನವನ್ನು ಎಲ್ಲ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಗೆ ತರಲಾಗಿದೆ. ‘ನಗರವಾಸಿಗಳ ಸಂಖ್ಯೆ ಶೇ.38ರಷ್ಟಿದ್ದು, ಶೇ.50ರಷ್ಟು ತಲುಪುವ ನಿರೀಕ್ಷೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ರಸ್ತೆ, ನೀರು, ಬೀದಿದೀಪ, ಒಳಚರಂಡಿ, ಸಾರ್ವಜನಿಕ ಆರೋಗ್ಯ ಸೇರಿದಂತೆ ಮೂಲಭೂತ ಸೌಕರ್ಯ ಉತ್ತಮಪಡಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ತಿಳಿಸಿದ್ದಾರೆ,
  • ‘ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಡೈರಿಯಲ್ಲಿ ಬಹಿರಂಗಗೊಂಡಿರುವ ಸತ್ಯಾಂಶಗಳಿಂದ ಕಾಂಗ್ರೆಸ್ ನಿಜ ಬಣ್ಣ ಬಯಲಾಗಿದೆ. ಸ್ವಚ್ಛ, ಪಾರದರ್ಶಕ ಆಡಳಿತ ನೀಡುತ್ತಿದ್ದೇವೆ ಎಂದು ಹೇಳುತ್ತಿದ್ದ ಸಿದ್ದರಾಮಯ್ಯನವರ ಅಸಲಿ ಮುಖ ಗೊತ್ತಾಗಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.
  • ಕನ್ನಡದ ಮೊದಲ ವಾಕ್ ಚಿತ್ರ ಸತಿಸುಲೋಚನ ನೆನಪಿನಲ್ಲಿ ಕನ್ನಡ ವಾಕ್ಚಿತ್ರ ಹುಟ್ಟುಹಬ್ಬ ಸಂಭ್ರಮಾಚರಣೆಗೆ ನಿರ್ಧರಿಸಲಾಗಿದ್ದು, ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ 15 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ ರಾಜೇಂದ್ರ ಸಿಂಗ್ ಬಾಬು ತಿಳಿಸಿದರು.
  • ನೋಟು ಅಮಾನ್ಯ ನಿರ್ಧಾರ ವಿರೋಧಿಸಿ ಬಾಗಲಕೋಟೆ ಜಿಲ್ಲೆ ಹುನಗುಂದದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಚಿವೆಗೆ ಚಿಕಿತ್ಸೆ ನೀಡಿರುವ ವೈದ್ಯರು ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ತಿಳಿಸಿದ್ದಾರೆ.
  • ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ ಸಿಮಿ ಸಂಘಟನೆಯ ಮಾಸ್ಟರ್ ಮೈಂಡ್ ಸಫ್ದಾರ್ ನಾಗೋರಿ ಸೇರಿದಂತೆ 11 ಮಂದಿ ಉಗ್ರರಿಗೆ ಇಂದೋರ್ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಲಯ ಸೋಮವಾರ ತನ್ನ ತೀರ್ಪು ಪ್ರಕಟಿಸಿದ್ದು, ಇವರನ್ನು ಶಸ್ತ್ರಾಸ್ತ್ರ, ಸ್ಫೋಟಕ ಹಾಗೂ ಮದ್ದುಗುಂಡು ಹೊಂದಿರುವ ಆರೋಪದಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
  • ರಿಲಾಯನ್ಸ್ ಜಿಯೋ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ನೀಡುತ್ತಿರುವ ಸ್ಪರ್ಧೆಯನ್ನು ಎದುರಿಸಲು ಮುಂದಾಗಿರುವ ಏರ್ ಟೆಲ್ ಈಗ ದೇಶದಲ್ಲಿ ತನ್ನ ಗ್ರಾಹಕರ ಕರೆಗಳು, ಎಸ್ಎಂಎಸ್ ಹಾಗೂ ಡಾಟಾ ಬಳಕೆ ಮೇಲಿನ ರೋಮಿಂಗ್ ಶುಲ್ಕವನ್ನು ತೆರವುಗೊಳಿಸಿದೆ. ಈ ನಿರ್ಧಾರವನ್ನು ಸೋಮವಾರ ಪ್ರಕಟಿಸಲಾಗಿದ್ದು, ಏಪ್ರಿಲ್ 1ರಿಂದ ಇದು ಜಾರಿಗೆ ಬರಲಿದೆ.

Leave a Reply