ಮತ್ತೆ ಬರುತ್ತಿದೆ ನೊಕಿಯಾ! ಮೂರು ಮಾದರಿಯಲ್ಲಿ ಮಾರುಕಟ್ಟೆ ಪ್ರವೇಶಿಸುತ್ತಿರುವ ಸ್ಮಾರ್ಟ್ ಫೋನ್ ವಿಶೇಷತೆಗಳೇನು?

ಡಿಜಿಟಲ್ ಕನ್ನಡ ಟೀಮ್:

ಒಂದು ಕಾಲದಲ್ಲಿ ಭಾರತೀಯರ ಫೇವರೆಟ್ ಮೊಬೈಲ್ ಬ್ರ್ಯಾಂಡ್ ಆಗಿದ್ದ ನೋಕಿಯಾ ಈಗ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಈ ಬಾರಿ ಮೂರು ವಿಭಿನ್ನ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳ ಮೂಲಕ ಮಾರುಕಟ್ಟೆ ಪ್ರವೇಶಿಸುತ್ತಿದೆ.

ನೊಕಿಯಾ ಹೆಸರಿನಲ್ಲಿ ಮೊಬೈಲ್ ಉತ್ಪಾದನೆ ಹಾಗೂ ಮಾರಾಟದ ಹಕ್ಕು ಹೊಂದಿರುವ ಫಿನ್ ಲ್ಯಾಂಡಿನ ಎಚ್ಎಂಡಿ ಕಂಪನಿ ಈಗ ಹೊಸ ಮಾದರಿಯ ಸ್ಮಾರ್ಟ್ ಫೋನುಗಳನ್ನು ಪರಿಚಯಿಸಿದೆ. ಕಳೆದ ಒಂದು ತಿಂಗಳಿನಿಂದ ಚೀನಾ ಮಾರುಕಟ್ಟೆಯಲ್ಲಿ ಈ ಫೋನುಗಳು ಬಿಡುಗಡೆಯಾಗಿದ್ದು, ಈಗ ಜಾಗತಿಕ ಮಾರುಕಟ್ಟೆ ಪ್ರವೇಶಿಸಲು ಸಿದ್ಧವಾಗಿದೆ. ಕಂಪನಿಯು ಈ ಫೋನುಗಳನ್ನು ಇತ್ತೀಚೆಗೆ ಬಾರ್ಸಿಲೋನಾದಲ್ಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ಅನಾವರಣಗೊಳಿಸಿದೆ. ಮೊಬೈಲ್ ತಂತ್ರಜ್ಞಾನದ ಆಗುಹೋಗುಗಳ ಬಗ್ಗೆ ಆವಿಷ್ಕಾರಗಳ ಪ್ರದರ್ಶನ ಹಾಗೂ ತಂತ್ರಜ್ಞಾನ ದಿಗ್ಗಜರುಗಳು ನಡೆಸುವ ವಾರ್ಷಿಕ ಕಾರ್ಯಕ್ರಮ ಇದಾಗಿದೆ. ಈಗಾಗಲೇ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಹವಾ ಎಬ್ಬಿಸಿರುವ ಚೀನಾ ಮೂಲದ ಮೊಬೈಲ್ ಕಂಪನಿಗಳಿಗೆ ನೂತನ ನೊಕಿಯಾ ಫೋನ್ ಗಳು ಯಾವ ರೀತಿ ಪೈಪೋಟಿ ನೀಡಲಿವೆ ಎಂಬುದು ಸದ್ಯದ ಕುತೂಹಲ.

ನೊಕಿಯಾ ಕಂಪನಿಯು ನೊಕಿಯಾ6, ನೋಕಿಯಾ5 ಹಾಗೂ ನೋಕಿಯಾ3 ಶ್ರೇಣಿಯ ಮೊಬೈಲ್ ಗಳನ್ನು ಪರಿಚಯಿಸಿದ್ದು, ಇವುಗಳು ಮಧ್ಯಮ ದರದ ಫೋನ್ ಗಳಾಗಿರಲಿವೆ ಎಂದು ಹೇಳಲಾಗುತ್ತಿದೆ. ಈ ಮೊಬೈಲ್ ಗಳ ವಿಶೇಷತೆಗಳೇನು ಎಂಬುದರ ಬೆಗೆಗಿನ ಮಾಹಿತಿ ಇಲ್ಲಿದೆ…

ನೊಕಿಯಾ6: ಸದ್ಯ ನೊಕಿಯಾ ಕಂಪನಿ ಪರಿಚಯಿಸಿರುವ ಮೊದಲ ಫೋನ್ ಇದಾಗಿದ್ದು, ಚೀನಾ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ. ಇದು ಕ್ವಾಲ್ಕಮ್ ಸ್ನ್ಯಾಪ್ ಡ್ರಾಗನ್ 430 ಪ್ರೋಸೆಸರ್, 3ಜಿಬಿ ರಾಮ್, 5.5 ಇಂಚುಗಳ ಪರದೆ (1920/ 1080), ಮೈಕ್ರೋ ಎಸ್ಡಿ ಕಾರ್ಡ್ ಸೇರಿದಂತೆ 32 ಜಿಬಿ ಮೆಮೊರಿ ಸಾಮರ್ಥ್ಯ ಹೊಂದಿದೆ. ಇನ್ನು ಈ ಫೋನಿನ ಹಿಂಬದಿ ಕ್ಯಾಮೆರಾ 16 ಮೆಗಾ ಪಿಕ್ಸೆಲ್ ಆಗಿದ್ದು, ಮುಂಬದಿಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಜತೆಗೆ ವೈಡ್ ಆಂಗಲ್ ಆಟೋ ಫೋಕಸ್ ನದ್ದಾಗಿದೆ. ಇದು ಅಲ್ಯುಮಿನಿಯಂ ಹೊರಭಾಗದ ಪದರ ಹೊಂದಿದೆ. ಇದು ಸಾಮಾನ್ಯ ಮಾದರಿಯಾದರೆ, ಇದೇ ಶ್ರೇಣಿಯ ಮತ್ತೊಂದು ಮಾದರಿ ಕಪ್ಪು ಬಣ್ಣದ 64 ಜಿಬಿ ಮೆಮೋರಿ ಹಾಗೂ 4 ಜಿಬಿ ರ್ಯಾಮ್ ಸಾಮರ್ಥ್ಯದ ಸೀಮಿತ ಫೋನ್ ಮಾದರಿಯನ್ನು ಒಳಗೊಂಡಿರಲಿದೆ. ಈ ಮಾದರಿಯ ಫೋನ್ ಗಳನ್ನು 2017ರ ದ್ವಿತೀಯ ತ್ರೈಮಾಸಕ ಅವಧಿಯಲ್ಲಿ ಬಿಡುಗಡೆ ಮಾಡಲಾಗುವುದು. ಯಾವ ದೇಶಗಳಲ್ಲಿ ಬಿಡುಗಡೆಯಾಗಲಿದೆ ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದ್ದು, ಈ ಶ್ರೇಣಿಯ ಸಾಮಾನ್ಯ ಮಾದರಿಯ ಫೋನ್ ಬೆಲೆ 242 ಅಮೆರಿಕನ್ ಡಾಲರ್ (₹ 16 ಸಾವಿರ) ಹಾಗೂ ಸೀಮಿತ ಮಾದರಿಯ ಫೋನ್ ಬೆಲೆ 315 ಅಮೆರಿಕನ್ ಡಾಲರ್ (₹ 21 ಸಾವಿರ) ನಿಗದಿಪಡಿಸಲಾಗಿದೆ.

ನೊಕಿಯಾ5: ಇದು ನೊಕಿಯಾ6 ನಂತರದ ಶ್ರೇಣಿಯಾಗಿದ್ದು, ಇದು ಸಮಾನ್ಯ ಬಳಕೆದಾರರಿಗೆ ಸೂಕ್ತವಾಗಲಿದೆ. ಇದರಲ್ಲಿ 5.2 ಇಂಚಿನ ಪರದೆ ಇದ್ದು, ಎಚ್ಡಿ ಡಿಸ್ ಪ್ಲೇ ಹೊಂದಿದೆ. ಕ್ವಾಲ್ಕಮ್ ಸ್ನ್ಯಾಪ್ ಡ್ರಾಗನ್ 430 ಪ್ರೋಸೆಸರ್, 3ಜಿಬಿ ರಾಮಿನ ಫೋನ್ ಇದಾಗಿದ್ದು, ಹಿಂಬದಿಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ನದ್ದಾಗಿದೆ. ಇದು ಸಹ ಅಲ್ಯೂಮಿನಿಯಂ ಮೇಲ್ಭಾಗದ ಕವಚ ಹೊಂದಿದ್ದು, ವಿನ್ಯಾಸದಲ್ಲಿ ಕೊಂಚ ಬದಲಾವಣೆ ಕಾಣಬಹುದು. ಇದರ ಕವಚದ ವಿನ್ಯಾಸ ಆಪಲ್ ಫೋನಿನಂತೆ ಹೋಲುತ್ತದೆ. ಇದರ ಬಿಡುಗಡೆ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದ್ದು ಮೂರನೇ ತ್ರೈಮಾಸಿಕದಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಇದರ ಬೆಲೆ 199 ಅಮೆರಿಕನ್ ಡಾಲರ್ (₹ 13,275) ಆಗಿದೆ.

ನೊಕಿಯಾ3: ಈ ಶ್ರೇಣಿಯ ಫೋನ್ ಗಳು ಬೇಸಿಕ್ ಮೊಬೈಲ್ ಗಳಾಗಿದ್ದು, ಮಿಡಿಯಾ ಟೆಕ್ ಎಂಟಿಕೆ6737 ಕ್ವಾಡ್ ಕೋರ್ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, 2 ಜಿಬಿ ರಾಮ್ ಮತ್ತು 16 ಜಿಬಿ ಮೆಮೊರಿ ಸಾಮರ್ಥ್ಯ ಹೊಂದಿದೆ. ಇದರ ಮುಂಬದಿ ಹಾಗೂ ಹಿಂಬದಿ ಕ್ಯಾಮೆರಾಗಳು 8 ಮೆಗಾ ಪಿಕ್ಸೆಲ್ ನದ್ದಾಗಿದ್ದು, ಇದು ಪಾಲಿಕಾರ್ಬೊನೆಟ್ ಕವಚವಿದ್ದು ತುದಿಯಲ್ಲಿ ಅಲ್ಯೂಮಿನಿಯಂ ಹೊಂದಿದೆ. ಈ ಫೋನ್ ಕಡಿಮೆ ದರದ್ದಾಗಿದ್ದು ನೊಕಿಯಾ ಲೂಮಿಯಾ ಫೋನ್ ಗಳಂತೆ ಇರಲಿದೆ. ಈ ಫೋನ್ ಅನ್ನು ಎರಡನೇ ತ್ರೈ ಮಾಸಿಕದಲ್ಲಿ ಬಿಡುವ ಸಾಧ್ಯತೆ ಇದ್ದು, ಇದರ ಬೆಲೆಯನ್ನು 147 ಅಮೆರಿಕನ್ ಡಾಲರ್ (₹ 9800) ಗೆ ನಿಗದಿಪಡಿಸಲಾಗಿದೆ.

Leave a Reply