ಹುತಾತ್ಮನ ಮಗಳಾಗಿರುವುದು ಪ್ರತ್ಯೇಕತಾವಾದಕ್ಕಿರುವ ಪರವಾನಗಿಯಲ್ಲವಲ್ಲ? ಟ್ವೀಟಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ ಸೆಹ್ವಾಗರಿಗೂ ಇದೆಯಲ್ಲ?

ಡಿಜಿಟಲ್ ಕನ್ನಡ ಟೀಮ್:

ಅದೇಕೆ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಟ್ವೀಟ್ ಅಷ್ಟೊಂದು ಸದ್ದು ಮಾಡುತ್ತಿದೆ? ತಥಾಕಥಿತ ಉದಾರವಾದಿಗಳೆಲ್ಲ ಅದೇಕೆ ವಿರೇಂದ್ರ ಸೆಹ್ವಾಗರ ವಿರುದ್ಧ ನೀವು ಹಿಂಗೆಲ್ಲ ಬರೆಯಬಾರದಿತ್ತು ಅಂತ ಮುರಕೊಂಡು ಬಿದ್ದಿದ್ದಾರೆ?

ವಿಷಯ ಅರ್ಥ ಮಾಡಿಕೊಳ್ಳಬೇಕಾದರೆ ದೆಹಲಿಯ ರಾಮ್ಜಾಸ್ ಕಾಲೇಜಿನಲ್ಲಿ ಆಗಿದ್ದೇನು ಅಂತ ತಿಳಿದುಕೊಳ್ಳಬೇಕು. ಜೆಎನ್ಯುದಲ್ಲಿ ನಿಂತು ‘ಭಾರತವೇ ನಿನ್ನನ್ನು ತುಂಡರಿಸುತ್ತೇವೆ, ಇನ್ಶಾ ಅಲ್ಲಾ’ ಅಂತ ಕೂಗಿದ ಆರೋಪ ಹೊತ್ತಿರುವ ಗ್ಯಾಂಗಿನ ಉಮರ್ ಖಾಲೀದ್ ಎಂಬಾತನನ್ನು ಭಾಷಣಕ್ಕೆ ಕರೆಸಿತು ಕಾಲೇಜು. ಫೆಬ್ರವರಿ 22ರಂದು ಇದರ ವಿರುದ್ಧ ಭಾರಿ ಪ್ರತಿಭಟನೆಗೆ ಇಳಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಅದನ್ನು ರದ್ದುಗೊಳಿಸುವಲ್ಲಿ ಯಶಸ್ವಿಯಾಯಿತು. ದೇಶದ್ರೋಹದ ಆರೋಪ ಹೊತ್ತಿರುವವನನ್ನು, ಪಾಕ್ ಉಗ್ರರ ಪರ ಮಾತಾಡಿಕೊಂಡಿರುವವನನ್ನು ಅದ್ಯಾವ ಸಾರ್ಥಕ್ಯಕ್ಕೆಂದು ಭಾಷಣ ಬಿಗಿಯಲು ಕರೆಸುತ್ತೀರಿ ಎಂಬುದು ಅದರ ಆಕ್ರೋಶವಾಗಿತ್ತು. ಈ ಹಂತದಲ್ಲಿ ಖಾಲೀದ್ ಮತ್ತು ಗ್ಯಾಂಗ್ ಅನ್ನು ಸಮರ್ಥಿಸಿಕೊಳ್ಳುವ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಎಬಿವಿಪಿ ಪ್ರತಿಭಟನಕಾರರೊಂದಿಗೆ ಸಂಘರ್ಷಕ್ಕೆ ಇಳಿದರು.

ಇಂಥ ಸಂಘರ್ಷಗಳಲ್ಲಿ ಎರಡೂ ಪಡೆಯೂ ಸರಿ-ತಪ್ಪುಗಳನ್ನು ಹೊಂದಿರುತ್ತದೆ ಎಂಬುದು ಸಾಮಾನ್ಯಜ್ಞಾನ. ಆದರೆ ಕೇಸರಿ ಪಾಳೆಯವನ್ನು ಲಾಗಾಯ್ತಿನಿಂದ ವಿರೋಧಿಸಿಕೊಂಡು ಬರುತ್ತಿರುವ ಮುಖ್ಯವಾಹಿನಿ ಮಾಧ್ಯಮದ ದೊಡ್ಡ ವರ್ಗ, ‘ಇದು ಎಬಿವಿಪಿಯ ಗೂಂಡಾಗಿರಿ’ ಎಂದು ಶರಾ ಬರೆದವು.

ಆದರೆ ಇದು ಸಾಮಾಜಿಕ ಮಾಧ್ಯಮದ ಯುಗ. ತಾವು ಬಲಿಪಶುಗಳೆಂದು ನಾಟಕವಾಡುತ್ತಿರುವ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಹೇಗೆ ಕೈಯಲ್ಲಿ ಕಬ್ಬಿಣದ ಸಲಾಕೆ ಹಿಡಿದು ಎಬಿವಿಪಿ ಸದಸ್ಯರನ್ನು ಥಳಿಸಿತು, ಏನೆಲ್ಲ ಗೂಂಡಾಗಿರಿ ನಡೆಸಿತು ಎಂಬುದನ್ನು ಚಿತ್ರಸಹಿತವಾಗಿ ಎಬಿವಿಪಿ ಪರ ವಿದ್ಯಾರ್ಥಿಗಳು ವೆಬ್ ತಾಣ, ಬ್ಲಾಗ್, ಸಾಮಾಜಿಕ ಮಾಧ್ಯಮದಲ್ಲಿ ತೇಲಿಬಿಟ್ಟರು.

tweet

ಚಿತ್ರಕೃಪೆ- ಒಪಿಂಡಿಯಾ ಜಾಲತಾಣ

ದ ಹಿಂದು ಪತ್ರಿಕೆ ಅದೆಂಥ ನಾಚಿಕೆಗೇಡಿನ ವರ್ತನೆ ತೋರಿತೆಂದರೆ, ಎಸ್ಎಫ್ಐ ಅಧ್ಯಕ್ಷ ಪ್ರಶಾಂತ ಮುಖರ್ಜಿ ಎಂಬಾತ ಎಬಿವಿಪಿ ಸದಸ್ಯನಿಗೆ ಥಳಿಸುತ್ತಿರುವ ಫೊಟೋ ಹಾಕಿ, ‘ನೋಡಿ, ಎಬಿವಿಪಿಯ ಗೂಂಡಾನ ಮುಖ’ ಅಂತ ಅತ್ತುಗರೆಯಿತು. ಇದೇ ಪ್ರಶಾಂತ ಮುಖರ್ಜಿ ಎನ್ಡಿಟಿವಿಯಲ್ಲಿ ಕುಳಿತು, ‘ರಾಮ್ಜಾ ವಿದ್ಯಾರ್ಥಿಗಳನ್ನು ಎಬಿವಿಪಿ ಒತ್ತೆಯಾಳಾಗಿ ಇಟ್ಟಾಗ ಪೊಲೀಸರು ಮೂರ್ಖ ಪ್ರೇಕ್ಷಕರಾಗಿದ್ದರು’ ಅಂತ ಬಲಿಪಶು ನಾಟಕವಾಡಿದ. ಒಪಿಂಡಿಯಾದ ಲೇಖನದಲ್ಲಿ ಈ ದ್ವಂದ್ವಗಳನ್ನು ಚೆನ್ನಾಗಿ ಕಟ್ಟಿಕೊಡಲಾಗಿದೆ. ಇದೀಗ, ಪ್ರತಿಭಟನೆ ವೇಳೆ ಎಡಪಂಥೀಯ ಐಸಾ ಸಂಘಟನೆ ಕಾರ್ಯಕರ್ತರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿ ಪೊಲೀಸ್ ದೂರು ದಾಖಲಿಸಿದ್ದಾರೆ.

delhi-collage

delhi-collage1

ಚಿತ್ರ 1- ಐಶಾ ಸಂಘಟನೆ ಕಾರ್ಯಕರ್ತರು ಸಲಾಕೆ ಹಿಡಿದು ದಾಳಿ ಮಾಡಿರುವುದಕ್ಕೆ ಎಬಿವಿಪಿ ನೀಡಿದ ಪುರಾವೆ. ಚಿತ್ರ 2- ಎಬಿವಿಪಿ ಕಾರ್ಯಕರ್ತೆ ಮೇಲಾಗಿರುವ ಹಲ್ಲೆ. (ಚಿತ್ರಕೃಪೆ- ಸ್ವರಾಜ್ಯಮ್ಯಾಗ್ ಜಾಲತಾಣ)

ಹೀಗೆಲ್ಲ ಆಗುತ್ತಿರುವಾಗಲೇ ಪ್ರವೇಶ ಪಡೆದಿದ್ದು ವಿದ್ಯಾರ್ಥಿನಿ ಗುರುಮಹರ್ ಕೌರ್. ಗೂಂಡಾಗಿರಿ ನಡೆಸುತ್ತಿರುವವರು ಯಾರು ಎಂಬ ಸ್ಪಷ್ಟ ಚಿತ್ರಣ ಕಣ್ಣ ಮುಂದಿರುವಾಗ, ‘ನಾನು ಎಬಿವಿಪಿ ಗೂಂಡಾಗಿರಿಯನ್ನು ವಿರೋಧಿಸುತ್ತೇನೆ’ ಅಂತ ಹೇಳಿಕೆ ಕೊಟ್ಟರು. ಇದರ ಜತೆಗೆ ವರ್ಷದ ಹಿಂದೆ ಕೌರ್ ಮಾಡಿದ್ದ ವಿಡಿಯೊ ಒಂದು ಮತ್ತೆ ಪ್ರಚಾರಕ್ಕೆ ಬಂತು. ಅದರಲ್ಲಿ ಪಾಕಿಸ್ತಾನದ ಜತೆ ಶಾಂತಿ ಸಾಧಿಸಬೇಕು ಎಂದು ಪ್ರತಿಪಾದಿಸುತ್ತ ಒಂದಿಷ್ಟು ಭಿತ್ತಿಚಿತ್ರಗಳನ್ನು ಹಿಡಿದು ಸಂವಾದಿಸಿದ್ದರು. ಖಂಡಿತ ಇದು ಗುರುಮಹರ್ ಅಭಿವ್ಯಕ್ತಿ ಸ್ವಾತಂತ್ರ್ಯ. ಆದರೆ ಆ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿ ಆಕೆ ವ್ಯಕ್ತಪಡಿಸುತ್ತಿರುವ ಅಭಿಪ್ರಾಯದ ಟೊಳ್ಳುತನವನ್ನು ಕಟ್ಟಿಕೊಡುವ ಅಭಿವ್ಯಕ್ತಿ ಸ್ವಾತಂತ್ರ್ಯ ಸೆಹ್ವಾಗ್ ಸೇರಿದಂತೆ ಎಲ್ಲರಿಗೂ ಇದೆಯಲ್ಲವೇ? ನಿಂದನೆ, ಬೆದರಿಕೆ ಇಂಥ ಕಾನೂನು ವಿರೋಧಿ ದಾರಿಯಲ್ಲಲ್ಲದೇ ವ್ಯಂಗ್ಯದಲ್ಲಿ ಇನ್ನೊಬ್ಬರನ್ನು ಪ್ರಶ್ನಿಸುವ ಸ್ವಾತಂತ್ರ್ಯ ಖಂಡಿತ ಎಲ್ಲ ಲಿಂಗ, ಸಮುದಾಯ, ವರ್ಗಗಳಿಗೆ ಸೇರಿದ ಯಾರಿಗೇ ಆದರು ಇದೆ.

ಇಷ್ಟಕ್ಕೂ ಗುರುಮಹರ್ ಕೌರ್ ಭಿತ್ತಿಚಿತ್ರಗಳ ಮೂಲಕ ಸಾರಿದ್ದೇನು? ‘ನಾನು ಗುರುಮಹರ್ ಕೌರ್. 199ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಮನ್ದೀಪ್ ಸಿಂಗ್ ಪುತ್ರಿ. ನನ್ನ ತಂದೆಯನ್ನು ಕೊಂದಿದ್ದು ಪಾಕಿಸ್ತಾನವಲ್ಲ, ಯುದ್ಧ.’

ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮದ ಮುಖಾಂತರ ಅತ್ಯಾಚಾರ ಬೆದರಿಕೆಗಳೆಲ್ಲ ಬಂದಿವೆ ಎಂದು ಕೌರ್ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಖಂಡಿತ ಇಂಥವರಿಗೆಲ್ಲ ಶಿಕ್ಷೆಯಾಗಬೇಕು, ಅನುಮಾನವೇ ಬೇಡ. ಆದರೆ ಕೌರ್ ಅವರ ಹೇಳಿಕೆಯ ತರ್ಕವನ್ನು ಪ್ರಶ್ನಿಸುವುದೇ ಸಲ್ಲ ಎಂಬ ಅತಿರೇಕ ಒಪ್ಪಲಾಗದ್ದು. ಸೆಹ್ವಾಗ್ ಅವರ ಟ್ವೀಟ್ ತೋರಿಸಿರುವುದು ಕೌರ್ ಅವರ ನಿಲುವಿನಲ್ಲಿರುವ ತರ್ಕಹೀನತೆಯನ್ನೇ ಹೊರತು ಆಕೆಯನ್ನೇನೂ ನಿಂದಿಸಿಲ್ಲ. ಭಾರತಕ್ಕಿಂತ ಅನನ್ಯ ಜಾಗ ಮತ್ತೊಂದಿಲ್ಲ ಎಂಬ ಮುಕುಟಸಾಲಿನಲ್ಲಿ ಸೆಹ್ವಾಗ್ ಅವರು ಬರೆದ ಟ್ವೀಟ್ ಹೀಗಿತ್ತು- ‘ಎರಡು ತ್ರಿಶತಕಗಳನ್ನು ನಾನು ಹೊಡೆದಿಲ್ಲ. ನನ್ನ ಬ್ಯಾಟ್ ಹೊಡೆಯಿತಷ್ಟೆ.’

ಇಲ್ಲಿರುವ ವ್ಯಂಗ್ಯ ಅದ್ಭುತವಾದದ್ದೇ. ಕಾರ್ಗಿಲ್ ವಿಷಯಕ್ಕೆ ಬಂದರೆ ಭಾರತವೇನೂ ದಂಡೆತ್ತಿ ಹೋಗಿದ್ದಲ್ಲ. ಚಳಿಗಾಲದಲ್ಲಿ ಪರ್ವತಗಳನ್ನು ವಶಪಡಿಸಿಕೊಳ್ಳುತ್ತ ಮುಂದೆ ಬರುತ್ತಿದ್ದ ಪಾಕಿಸ್ತಾನಿಯರನ್ನು ಹಿಮ್ಮೆಟ್ಟಿಸುವುದಕ್ಕೆ ನಡೆದಿದ್ದು ಕಾರ್ಗಿಲ್ ಯುದ್ಧ. ಆ ಯುದ್ಧ ಪಾಕಿಸ್ತಾನದ ವ್ಯೂಹವಾಗಿತ್ತು. ಹೀಗಿರುವಾಗ, ‘ನನ್ನ ತಂದೆಯನ್ನು ಕೊಂದಿದ್ದು ಪಾಕಿಸ್ತಾನವಲ್ಲ, ಯುದ್ಧ’ ಎನ್ನುವುದು ಹಲವರಿಗೆ ರೊಮ್ಯಾಂಟಿಕ್ ಆಗಿ ಕೇಳಬಹುದಾಗಲೀ ಅದರಲ್ಲಿ ಚಿಟಿಕೆಯಷ್ಟಾದರೂ ತರ್ಕವಿದೆಯೇ? ಈ ವಿತಂಡವಾದವನ್ನೇ ಸೆಹ್ವಾಗ್ ತಮ್ಮ ಟ್ವೀಟ್ ಮೂಲಕ ಸಿಕ್ಸರ್ ಎತ್ತಿದಂತೆ ಬಿಸಾಕಿದ್ದು.

ಕೌರ್ ಹುತಾತ್ಮರ ಮಗಳಾಗಿದ್ದರಿಂದ ಎದುರಾಡಲೇಬಾರದು ಎನ್ನುವುದಾದರೆ, ಸಿಮಿ ಕಾರ್ಯಕರ್ತನ ಮಗ ಉಮರ್ ಖಾಲೀದ್ ಸಹ ಅಪ್ಪನ ಹಿನ್ನಲೆ ಹೊಂದಿದವ ಎಂದು ಹೇಳಲಾದೀತೇ? ಕೇವಲ ವಂಶವಾಹಿ ಕಾರಣಕ್ಕೆ ಕೌರ್ ದೇಶಪ್ರೇಮದ ವ್ಯಾಖ್ಯಾನ ಒಪ್ಪುವುದಾದರೆ ಅದೇ ತರ್ಕದಲ್ಲಿ ಉಮರ್ ನಿಷೇಧಿತ ಸಿಮಿಗೆ ಸೇರಿದವ ಎಂದು ಹೇಳಬೇಕಾಗುತ್ತದಲ್ಲವೇ?

ನಿಜ. ಗುರುಮಹರ್ ಕೌರ್ ಅವರಿಗಾಗಲೀ ಮತ್ತೊಬ್ಬರಿಗಾಗಲೀ ಯಾರೂ ದೇಶಪ್ರೇಮದ ಸರ್ಟಿಫಿಕೇಟ್ ಕೊಡಬೇಕಾಗಿಲ್ಲ. ಆದರೆ ಯಾರದ್ದೇ ವಾದದ ಟೊಳ್ಳುತನ ತೋರಿಸುವುದಕ್ಕೆ ಆಕೆ ಮಹಿಳೆ ಎಂಬುದಾಗಲಿ, ಹುತಾತ್ಮನ ಮಗಳು ಎಂಬುದಾಗಲೀ ಅಡ್ಡಬರುವುದಿಲ್ಲ. ಕಾನೂನು ಸಮ್ಮತ ಭಾಷೆಯ ಮೂಲಕ ಅದನ್ನು ಹೇಳುವ ಅಧಿಕಾರ ಸೆಹ್ವಾಗ್ ಸೇರಿದಂತೆ ಎಲ್ಲರಿಗೂ ಇದೆ.

ಉದಾರವಾದಿಗಳಿಗೇಕೆ ಇಂಥ ಅಭಿವ್ಯಕ್ತಿ ಸ್ವಾತಂತ್ರ್ಯ ಆಗಿಬರುತ್ತಿಲ್ಲ?

Leave a Reply