ELSS ಎಂದರೇನು? ತೆರಿಗೆ ಉಳಿಸಲು ಇದರಲ್ಲಿ ಹೂಡಿಕೆ ಮಾಡಬಹುದೇ?

 

authors-rangaswamyಕೆಲಸಕ್ಕೆ ಸೇರಿ ಒಂದೆರಡು ವರ್ಷ ಆಗಿರುವ ಹೆಚ್ಚಿನ ಸಂಸಾರದ ಜವಾಬ್ಧಾರಿ ಇಲ್ಲದ ಆದರೆ ತಿಂಗಳಿಗೆ ಹದಿನೈದು ಅಥವಾ ಇಪ್ಪತ್ತು ಸಾವಿರ ಉಳಿಸುವ ಇಚ್ಛೆ ಇದೆ ಆದರೆ ಎಲ್ಲಿ ಹೂಡಿಕೆ ಮಾಡುವುದು ತಿಳಿಯುತ್ತಿಲ್ಲ. ಇನ್ನೇನು ಮಾರ್ಚ್ ಬಂದೆ ಬಿಟ್ಟಿತು ನಮ್ಮ ಕಂಪನಿಯಲ್ಲಿ ಹೆಚ್ಚಿನ ಜನ ತೆರಿಗೆ ಉಳಿಸುವ ಸಲುವಾಗಿ ELSS ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ELSS ಎಂದರೇನು ತಿಳಿಸಿ… ಈ ಬಾರಿ ಬಂದ ಮುಕ್ಕಾಲು ಪಾಲು ಮಿಚಂಚೆಯ ಸಾರಾಂಶವಿದು. ಹೆಚ್ಚಿನವರು ತೆರಿಗೆ ಉಳಿಸಲು ಯಾವ ಹೂಡಿಕೆ ಉತ್ತಮ ಎನ್ನುವ ಪ್ರಶ್ನೆ ಕೇಳಿದ್ದಾರೆ.

ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ಮುಂಚೆ ವ್ಯಕ್ತಿಯ ಹಣಕಾಸು ಸ್ಥಿತಿಗತಿ ಮತ್ತು ಮುಂಬರುವ ವರ್ಷಗಳಲ್ಲಿ ಹಣದ ಅವಶ್ಯಕತೆ ಇದೆಯೇ ಇಲ್ಲವೇ ಎನ್ನುವುದು ಬಹಳ ಮುಖ್ಯ. ಎಲ್ಲರಿಗೂ ಒಂದೇ ಉತ್ತರ ಸರಿ ಹೊಂದುವುದಿಲ್ಲ. ಉದಾಹರಣೆಗೆ ELSS ನನ್ನೇ ತೆಗೆದುಕೊಳ್ಳೋಣ. ELSS ಅಂದರೆ ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್. ಇದೊಂದು ತೆರೆನಾದ ಮೂಚ್ಯಲ್ ಫಂಡ್. ಇದರ ವಿಶೇಷತೆ ಏನೆಂದರೆ ಇನ್ಕಮ್ ಟ್ಯಾಕ್ಸ್ ಸೆಕ್ಷನ್ 80 ಸಿ  ಪ್ರಕಾರ ಒಂದು ಲಕ್ಷ ಐವತ್ತು ಸಾವಿರ ರೂಪಾಯಿ ತನಕ ಇದರ ಮೇಲೆ ಮಾಡಿದ ಹೂಡಿಕೆ ಮೇಲೆ ತೆರಿಗೆ ವಿನಾಯ್ತಿ ಸಿಗಲಿದೆ. ಇದರಲ್ಲಿ ಬಂದ ಆದಾಯ ಕೂಡ ತೆರಿಗೆ ವಿನಾಯ್ತಿ ಹೊಂದಿದೆ. ಮಾರ್ಚ್ ತಿಂಗಳು ಸನಿಹವಾದಂತೆ ತೆರಿಗೆ ಉಳಿಸುವ ಇಂತಹ ಸ್ಕೀಮ್ ಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದು ಬಿಡುತ್ತದೆ. ಅದರ ಪೂರ್ಣ ಜಾತಕ ತಿಳಿದುಕೊಳ್ಳದೆ ಹೂಡಿಕೆ ಮಾಡುವುದು ತರವಲ್ಲ. ಅಲ್ಲದೆ ತೆರಿಗೆ ವಿನಾಯತಿ ಪಡೆಯುವುದು ಹಾಗೂ ಹೂಡಿಕೆ ಮಾಡುವುದು ಎರಡು ಬೇರೆ ಬೇರೆ ವಿಷಯಗಳನ್ನು ಬೆರೆಸಿದಂತೆ. ಹೂಡಿಕೆ ಮುಂಬರುವ ವರ್ಷಗಳಲ್ಲಿ ಹಣ ವೃದ್ಧಿಸಲು ಮಾಡುವ ಕ್ರಿಯೆ. ಅಲ್ಲಿ ಹಣ ವೃದ್ಧಿಯಷ್ಟೇ ಮುಖ್ಯವಾಗಿರಬೇಕು. ಮಧ್ಯದಲ್ಲಿ ತೆರಿಗೆಯೂ ಉಳಿಸಬೇಕು ಎಂದರೆ ವೃದ್ಧಿಯಲ್ಲಿ ಕುಂಠಿತವಾಗದೆ? ಅಲ್ಲದೆ ಈ ಹೂಡಿಕೆ ಈಕ್ವಿಟಿಯಲ್ಲಿ ಹಣ ಹೂಡುತ್ತದೆ. ಇದರ ಲಾಭ ಅಥವಾ ನಷ್ಟ ಮಾರುಕಟ್ಟೆಯ ಏರುಪೇರಿನ ಮೇಲೆ ನಿರ್ಧಾರವಾಗುತ್ತದೆ. ಹೀಗೆ ಹೂಡಿಕೆ ಮಾಡಿದ ಹಣವನ್ನು ಕನಿಷ್ಠ 3 ವರ್ಷಗಳ ಕಾಲ ಹಿಂಪಡೆಯಲು ಬರುವುದಿಲ್ಲ. ಅಂದರೆ ಇದು 3 ವರ್ಷದ ಲಾಕ್ ಇನ್ ಪಿರಿಯಡ್ ಹೊಂದಿರುವ ಹೂಡಿಕೆ. ವ್ಯಕ್ತಿಯೊಬ್ಬನಿಗೆ ಮುಂದಿನ ವರ್ಷ ಹಣದ ಅವಶ್ಯಕತೆ ಇದ್ದರೆ ಇಂತಹ ಹೂಡಿಕೆ ಮಾಡುವುದು ಸರಿಯಲ್ಲ. ಹೀಗಾಗಿಯೆ ಹೂಡಿಕೆ ಯಾವುದೇ ಇರಲಿ ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತದೆ ಎಂದದ್ದು.

hana class

ಹೊಸದಾಗಿ ಕೆಲಸಕ್ಕೆ ಸೇರಿದ ಮತ್ತು ತಿಂಗಳಿಗೆ ಹದಿನೈದು ಅಥವಾ ಇಪ್ಪತ್ತು ಸಾವಿರ ಉಳಿಸಬಲ್ಲ ಯುವಕ- ಯುವತಿ ಕೆಲಸ ಪ್ರಾರಂಭಿಸಿದ ದಿನದಿಂದ ಕೆಳಕಂಡ ಮೂಲಭೂತ (fundamental) ಕಾರ್ಯಗಳನ್ನು ನಿರ್ವಹಿಸಿದ್ದೆ ಆದರೆ ಮುಂಬರುವ ಅವರ ವಿತ್ತ ಬದುಕು ಭದ್ರವಾಗಿರುತ್ತದೆ.

  • ಟರ್ಮ್ ಇನ್ಶೂರೆನ್ಸ್ ಕೊಳ್ಳುವುದು. ಕೋಟಿ ರುಪಾಯಿಗೆ ವರ್ಷಕ್ಕೆ 8-9 ಸಾವಿರ ರೂಪಾಯಿ ಪ್ರೀಮಿಯಂ. ವರ್ಷದಿಂದ ವರ್ಷಕ್ಕೆ ಪ್ರೀಮಿಯಂ ಕಡಿಮೆಯಾಗುತ್ತದೆ. ಬೇರೆ ಯಾವುದೇ ರೀತಿಯ ವಿಮೆಯಲ್ಲಿ ಹಣ ತೊಡಗಿಸಬೇಡಿ. ಅದು ಹೆಚ್ಚಿನ ಲಾಭ ತಂದು ಕೊಡುವುದಿಲ್ಲ.
  • ಕಂಪನಿ ಹೆಲ್ಥ್ ಇನ್ಶೂರೆನ್ಸ್ ಕೊಟ್ಟಿರುತ್ತದೆ ಆದರೂ ಇಂದಿನ ಅನಿಶ್ಚಿತ ಬದುಕು ಕೆಲಸದಲ್ಲಿ ಯಾವುದು ಸ್ಥಿರ ? ಚಿಕ್ಕ ವಯಸ್ಸಿನಲ್ಲಿ ಹೆಲ್ತ್ ಇನ್ಶೂರೆನ್ಸ್ ಕೊಳ್ಳುವುದು ಬಹಳ ಮುಖ್ಯ. ರೋಗ ಇರದೇ ಇರುವುದು ಮತ್ತು ವಯಸ್ಸು ಕಡಿಮೆ ಇರುವುದರಿಂದ ಪ್ರೀಮಿಯಂ ಮೊತ್ತ ಕಡಿಮೆ ಇರುತ್ತದೆ.
  • ಜೀವನದಲ್ಲಿ ಅನಿಶ್ಚಿತತೆಯೊಂದೇ ಸತ್ಯ ಅನ್ನುವ ಮಟ್ಟಕ್ಕೆ ಜಗತ್ತು ಬದಲಾಗಿದೆ. ಹೂಡಿಕೆ ಮಾಡುವ ಮೊದಲು ಕನಿಷ್ಠ ಹತ್ತು ತಿಂಗಳ ವೇತನ ‘ಎಮರ್ಜೆನ್ಸಿ ಫಂಡ್’ ನಿರ್ಮಿಸಿಕೊಳ್ಳಿ.

ಮೇಲಿನ ಮೂರು ಕಾರ್ಯ ಮಾಡಿದ್ದೀರಿ ಎಂದ ಮೇಲೆ ನೀವು ಹೂಡಿಕೆ ಮಾಡಲು ಆರ್ಹರು ಎಂದರ್ಥ. ಈಗ ನಿಮ್ಮ ಆದ್ಯತೆಗೆ ಅನುಗುಣವಾಗಿ ಹೂಡಿಕೆ ಮಾಡಬಹದು. ನೆನಪಿರಲಿ ನಿಮ್ಮ ಕಷ್ಟದ ಹಣವನ್ನು ಯಾವುದೊ ಫಂಡ್ ಮ್ಯಾನೇಜರ್ ಕೈಲಿಡುವುದು ಒಂದು ನಿಮಿಷದ ಕೆಲಸ. ಮೊದಲು ಸ್ಥಿರತೆಗೆ ಆದ್ಯತೆ ಕೊಡಿ. ಬ್ಯಾಂಕ್ ರೆಕರಿಂಗ್ ಡೆಪಾಸಿಟ್, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಉಳಿಕೆಯ 40 ರಿಂದ 50 ಭಾಗ ಹಾಕಿ. ಉಳಿದ ಹಣ ರಿಸ್ಕ್ ತೆಗೆದುಕೊಳ್ಳುವ ಗುಣವಿದ್ದರೆ ಖಂಡಿತ ಮ್ಯೂಚುಯಲ್ ಫಂಡ್ ನಲ್ಲಿ ಹಣ ಹೂಡಿ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಶೀಘ್ರವಾಗಿ ಹಣವಂತರಾಗಲು ಸಾಧ್ಯವಿಲ್ಲ. ದಶಕಗಳ ತಾಳ್ಮೆ ಒಳ್ಳೆಯ ಹೂಡಿಕೆ ಮಾತ್ರ ನಿಮ್ಮನ್ನ ಹಣವಂತರನ್ನಾಗಿ ಮಾಡುತ್ತದೆ.

(ಹಣಕ್ಲಾಸು ಅಂಕಣ ಪ್ರತಿ ಸೋಮವಾರ ಪ್ರಕಟವಾಗುತ್ತದೆ. ಹಣಕಾಸು ಜಗತ್ತಿನಲ್ಲಿ ಇದೇಕೆ ಹೀಗೆ ಎಂಬ ಕೌತುಕದ ಯಾವುದೇ ಪ್ರಶ್ನೆಗಳನ್ನು ಓದುಗರೂ ಕೇಳಬಹುದು. ಅದೇಕೆ ಒಂದು ರುಪಾಯಿಗೆ ಒಂದು ಡಾಲರ್ ಸಮವಲ್ಲ? ಸರ್ಕಾರಗಳಿಗೆ ಹಣದ ಕೊರತೆಯಾದರೆ ಹೆಚ್ಚು ನೋಟುಗಳನ್ನು ಮುದ್ರಿಸಿದರಾಗದೇ? .. ಈ ಮಾದರಿಯ ಹತ್ತು ಹಲವು ಪ್ರಶ್ನೆಗಳು ನಿಮ್ಮನ್ನು ಕಾಡಿರಬಹುದು. ಕೇಳುವುದಕ್ಕೆ ಮುಜುಗರವೂ ಆಗಿದ್ದಿರಬಹುದು. ಅಂಥ ಎಲ್ಲ ಸಂದೇಹಗಳನ್ನೂ ನೀವು ಲೇಖಕ ರಂಗಸ್ವಾಮಿಯವರಿಗೆ ನೇರವಾಗಿ ಕೇಳಿಬಿಡಿ.. ಮಿಂಚಂಚೆ- muraram@yahoo.com)

Leave a Reply