ಗುರುಮಹರ್ ವಿವಾದಕ್ಕೆ ಕುಸ್ತಿಪಟು ಬಬಿತಾ ಫೋಗಟ್ ಹಾಗೂ ಯೋಗೇಶ್ವರ್ ದತ್ ಪ್ರವೇಶ! ಎಬಿವಿಪಿ ವಿರುದ್ಧದ ಪ್ರತಿಭಟನೆಯಿಂದ ಹಿಂದೆ ಸರಿದ ಕೌರ್

ಡಿಜಿಟಲ್ ಕನ್ನಡ ಟೀಮ್:

‘ದೇಶದ ಪರವಾಗಿ ಮಾತನಾಡದ ವ್ಯಕ್ತಿಗೆ ನಾನು ಬೆಂಬಲಿಸಬೇಕೆ?….’ ಇದು ಗುರುಮಹರ್ ಕೌರ್ ಅವರ ಅಸಂಬದ್ಧ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಭಾರತದ ಮಹಿಳಾ ಕುಸ್ತಿಪಟು ಬಬಿತಾ ಫೋಗಟ್ ಹಾಕಿರುವ ಪ್ರಶ್ನೆ. ಕೇವಲ ಬಬಿತಾ ಮಾತ್ರವಲ್ಲದೆ ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್ ದತ್ ಸಹ ಈ ವಿಚಾರದಲ್ಲಿ ಪ್ರವೇಶಿಸಿದ್ದು, ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮಾದರಿಯಲ್ಲೇ ಗುರುಮಹರ್ ಕೌರ್ ಅವರ ವಿಡಿಯೋ ಮೇಲೆ ಹಾಸ್ಯ ಮಾಡಿದ್ದಾರೆ.

ಕೌರ್ ಮೇಲೆ ಅತ್ಯಾಚಾರದ ಬೆದರಿಕೆಯನ್ನು ಖಂಡಿಸಿರುವ ಬಬಿತಾ, ಜತೆಗೆ ತನ್ನ ದೇಶದ ವಿರುದ್ಧ ಯಾರೇ ಮಾತನಾಡಿದರೂ ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನೂ ರವಾನಿಸಿದ್ದಾರೆ. ಅತ್ಯಾಚಾರ ಬೆದರಿಕೆ ವಿರೋಧಿಸುತ್ತಾ ಬಬಿತಾ ತಮ್ಮ ಟ್ವಿಟರ್ ನಲ್ಲಿ ಹೇಳಿದ್ದಿಷ್ಟು… ‘ಅತ್ಯಾಚಾರ ಬೆದರಿಕೆಯನ್ನು ನಾನು ಖಂಡಿಸುತ್ತೇನೆ. ಜನರು ಈ ರೀತಿಯಾಗಿ ಧಮಕಿ ಹಾಕಿದ್ದರೆ ಅದು ತಪ್ಪು. ಆದರೆ ನನ್ನ ದೇಶದ ವಿರುದ್ಧವಾಗಿ ಒಂದೇ ಒಂದು ಮಾತನ್ನು ಕೇಳಲು ನಾನು ಸಿದ್ಧಳಿಲ್ಲ.’

ಈ ವಿವಾದದಲ್ಲಿ ಬಬಿತಾ ಫೋಗಟ್ ಪ್ರವೇಶ ಪಡೆದಿದ್ದು ಹೇಗೆ ಎಂಬುದನ್ನು ನೋಡುವುದಾದರೆ, ಇದಕ್ಕೆ ಕಾರಣ ಪತ್ರಕರ್ತೆ ರಾಣಾ ಆಯುಬ್. ಈ ಪ್ರಕರಣದಲ್ಲಿ ರಣದೀಪ್ ಹೂಡಾ ವಿರುದ್ಧ ಟೀಕೆ ಮಾಡಿರುವ ರಾಣಾ ಆಯುಬ್ ‘ಕೌರ್ ಅವರನ್ನು ರಾಜಕೀಯ ಪಗಡೆಯಾಗಿ ಬಳಸಿಕೊಳ್ಳಲಾಗುತ್ತಿದೆ. ರಣದೀಪ್ ಹೂಡಾ ಹರ್ಯಾಣದಿಂದ ಬಂದಿದ್ದು, ಮಹಿಳೆಯರನ್ನು ಸ್ವತಂತ್ರವಾಗಿಸಲು ತನ್ನಿಂದ ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದಾರೆ’ ಎಂದು ಲೇವಡಿ ಮಾಡಿದ್ದರು. ಜತೆಗೆ ಫೋಗಟ್ ಸಹೋದರಿಯರು ಗುರುಮಹರ್ ಕೌರ್ ಬೆಂಬಲಕ್ಕೆ ನಿಲ್ಲುವಂತೆ ಆಗ್ರಹಿಸಿದ್ದರು.

ರಾಣಾ ಆಯುಬ್ ಅವರ ಆಗ್ರಹ ಸಹಿಸದ ಬಬಿತಾ ಫೋಗಟ್, ‘ನಾವು ಫೊಗಟ್ ಸಹೋದರಿಯರೂ ಸಹ ಹರ್ಯಾಣದಿಂದಲೇ ಬಂದಿದ್ದೇವೆ. ಹರ್ಯಾಣ ರಾಜ್ಯದ ಬಗ್ಗೆ ನಿಮಗೇನು ಗೊತ್ತು? ದೇಶದ ಪರವಾಗಿ ಮಾತನಾಡದ ವ್ಯಕ್ತಿಯ ಪರ ವಹಿಸಿಕೊಂಡು ನಾವು ಮಾತನಾಡಬೇಕೆ?’ ಎಂದು ಪ್ರಶ್ನಿಸಿ ರಾಣಾ ಆಯುಬ್ ಅವರಿಗೆ ಚುರುಕು ಮುಟ್ಟಿಸಿದ್ದಾರೆ.

ಇತ್ತ ಯೋಗೇಶ್ವರ್ ದತ್ ಸಹ ಸೆಹ್ವಾಗ್ ಮಾದರಿಯಲ್ಲೇ ಗುರುಮಹರ್ ಅವರ ವಿಡಿಯೋ ಕುರಿತು ಹಾಸ್ಯ ಮಾಡಿದ್ದು, ಅವರ ಟ್ವೀಟ್ ಹೀಗಿದೆ…

yogeshwar-tweet

ಇನ್ನು ನವದೆಹಲಿಯಲ್ಲಿ ಎಬಿವಿಪಿ ಸಂಘಟನೆ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳು ಜಮಾಯಿಸಿದ್ದಾರೆ. ಎಬಿವಿಪಿ ವಿರೋಧಿ ಪ್ರತಿಭಟನೆಯಲ್ಲಿ ಗುರುಮಹರ್ ಕೌರ್ ಸಹ ಭಾಗವಹಿಸಬೇಕಿತ್ತು. ಆದರೆ, ತಮ್ಮ ಹೇಳಿಕೆ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೌರ್ ಈ ಎಬಿವಿಪಿ ವಿರುದ್ಧದ ಪ್ರತಿಭಟನೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಅಲ್ಲದೆ ದೆಹಲಿ ಬಿಟ್ಟು ಬೇರೆಡೆಗೆ ತೆರಳಿದ್ದಾರೆ. ಆ ಮೂಲಕ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

Leave a Reply