ಗುರುಮಹರ್ ಕೌರ್ ವಿಷಯದಲ್ಲಿ ಉದಾರವಾದಿಗಳು, ಮಾಧ್ಯಮಗಳ ಟೀಕೆಗೆ ರಣದೀಪ್ ಹೂಡಾ ತಿರುಗೇಟು

ಡಿಜಿಟಲ್ ಕನ್ನಡ ಟೀಮ್:

ಗುರುಮಹರ್ ಕೌರ್ ಅವರ ವಿಷಯದಲ್ಲಿ ಹಾಸ್ಯ ಮಾಡಿದ್ದಕ್ಕೆ ಸೆಹ್ವಾಗ್ ವಿರುದ್ಧ ಉದಾರವಾದಿಗಳೆಲ್ಲ ಟೀಕಾ ಪ್ರಹಾರ ಮಾಡುತ್ತಿರುವುದು ನಿಮಗೆಲ್ಲಾ ಗೊತ್ತಿರುವ ವಿಚಾರ. ಸೆಹ್ವಾಗ್ ರೀತಿಯಲ್ಲೇ ಉದಾರವಾದಿಗಳ ಟೀಕೆಗೆ ಗುರಿಯಾದ ಮತ್ತೊಬ್ಬ ಸೆಲೆಬ್ರಿಟಿ ಬಾಲಿವುಟ್ ನಟ ರಣದೀಪ್ ಹೂಡಾ. ಕಾರಣ ಇಷ್ಟೆ, ರಣದೀಪ್ ಹೂಡ ಸೆಹ್ವಾಗ್ ಅವರ ತಮಾಷೆಯ ಟ್ವೀಟ್ ಅನ್ನು ಬೆಂಬಲಿಸಿದ್ದರು.

ಇವರಿಬ್ಬರ ಟ್ವೀಟ್ ಗೆ ಹಲವಾರು ಮುಖ್ಯವಾಹಿನಿ ಮಾಧ್ಯಮಗಳು ಸೆಹ್ವಾಗ್ ಹಾಗೂ ರಣದೀಪ್ ಹೂಡಾರನ್ನು ಟ್ರಾಲ್ ಎಂದು ಹಣೆಪಟ್ಟಿ ಕಟ್ಟಿದ್ದವು. ಈ ಎಲ್ಲ ಬೆಳವಣಿಗೆಗಳ ನಂತರ ಮೌನ ಮುರಿದಿರುವ ರಣದೀಪ್ ಹೂಡಾ, ತಮ್ಮ ಫೇಸ್ ಬುಕ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಸೆಹ್ವಾಗ್ ಅವರ ಟ್ವೀಟಿಗೆ ನಕ್ಕಿದ್ದು ನಿಜ, ಆದರೆ ಅದನ್ನು ಹಿಂಸೆಗೆ ಪ್ರಚೋದಿಸುತ್ತಿದ್ದೇನೆ ಎಂಬ ವ್ಯಾಖ್ಯಾನಿಸುವುದು ತಪ್ಪು. ಗುರುಮಹರ್ ಕೌರ್ ತಮ್ಮ ಅಭಿಪ್ರಾಯವನ್ನು ಹೇಳುತ್ತಿದ್ದಾರೆ. ಅದಕ್ಕೆ ಸೆಹ್ವಾಗ್ ತಮಾಷೆ ಮಾಡಿದ್ದಾರೆ. ಅದು ನನಗೆ ಇಷ್ಟವಾಯಿತು. ಯಾರೇ ಆಗಲಿ ತಮ್ಮ ವಾದವನ್ನು ಮಂಡಿಸಿದಾಗ ಬೇರೊಬ್ಬರು ಅದಕ್ಕೆ ವಿರುದ್ಧವಾಗಿ ಮಾತನಾಡಿದರೆ ಅದನ್ನು ಸ್ವೀಕರಿಸುವ ಮನೋಭಾವ ಹೊಂದಿರಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ. ರಣದೀಪ್ ಹೂಡಾ ತಮ್ಮ ಫೇಸ್ ಬುಕ್ ನಲ್ಲಿ ವಿವರವಾಗಿ ಬರೆದುಕೊಂಡಿರುವುದು ಹೀಗೆ…

ನಕ್ಕಿದ್ದಕ್ಕೆ ನೇಣಿಗೆ ಹಾಕಿದರೆ ಹೇಗೆ

ವಿರೇಂದ್ರ ಸೆಹ್ವಾಗ್ ಅವರು ಹಾಸ್ಯ ಮಾಡಿದ್ದು, ಅದನ್ನು ನಾನು ಆನಂದಿಸಿದ್ದೇನೆ. ಈ ಹಿಂದೆಯೂ ಸೆಹ್ವಾಗ್ ಸಾಕಷ್ಟು ಹಾಸ್ಯ ಮಾಡಿದ್ದಾರೆ. ಆಗಲೂ ನಕ್ಕಿದ್ದ ನಾನು ಈ ಬಾರಿಯೂ ಅದನ್ನು ಆನಂದಿಸಿದ್ದೇನೆ.

ಆದರೆ ಈಗ ಆಕೆಯ ಮೇಲಿನ ಬೆದರಿಕೆಗಳಿಗೆಲ್ಲ ನಮ್ಮನ್ನು ಜವಾಬ್ದಾರರನ್ನಾಗಿ ಮಾಡಲಾಗುತ್ತಿದೆ. ಆ ಹುಡುಗಿಯು ಸಹ ನಮ್ಮ ವಿರುದ್ಧ ಆರೋಪ ಮಾಡಿರುವುದು ಅಚ್ಚರಿ ತಂದಿದೆ. ಹಿಂಸೆಗೆ ಪ್ರಚೋದನೆ ನೀಡುವುದು ನಮ್ಮ ಉದ್ದೇಶವಾಗಿರಲಿಲ್ಲ.

ಆ ಹುಡುಗಿ ತನ್ನ ಅಭಿಪ್ರಾಯವನ್ನು ಹೇಳಿಕೊಂಡಿದ್ದಾಳೆ. ತನಗೆ ತಪ್ಪು ಎನಿಸಿದ್ದರ ಬಗ್ಗೆ ಧ್ವನಿ ಎತ್ತಿದ್ದಾಳೆ. ಹೀಗೆ ತನ್ನ ಧ್ವನಿ ಎತ್ತಿರುವ ಆಕೆ, ಅದರ ವಿರುದ್ಧವಾಗಿ ಬರುವ ಮಾತುಗಳನ್ನು ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅದರ ಬದಲಾಗಿ ಯಾವುದೋ ವಿಷಯಕ್ಕೆ ಮತ್ಯಾರಿಗೊ ಬೆರಳು ತೋರಿಸಿ ಅವರನ್ನು ಜವಾಬ್ದಾರರನ್ನಾಗಿಸುವುದು ಸರಿಯಲ್ಲ. ಆಕೆಯ ವಿರುದ್ಧ ನನಗೆ ಯಾವುದೇ ಅಭಿಪ್ರಾಯವಿಲ್ಲ. ಅಷ್ಟೇ ಅಲ್ಲದೆ ಮಹಿಳೆಯರ ವಿರುದ್ಧ ಹಿಂಸಾಚಾರ ನಡೆಸುವುದನ್ನು ನಾನು ವಿರೋಧಿಸುತ್ತೇನೆ. ದೌರ್ಜನ್ಯ ಮಾಡುವವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂಬುದು ನನ್ನ ಆಗ್ರಹ.

ಯುದ್ಧವನ್ನು ನಡೆಸಲು ಮುಂದಾಗುವ ಎರಡು ದೇಶಗಳ ನಡುವೆ ಶಾಂತಿ ಸಾರುವ ಆಕೆಯ ವಿಡಿಯೋ ನನಗೆ ಇಷ್ಟವಾಯಿತು. ಆದರೆ ಅದನ್ನು ಹೇಳಿರುವ ರೀತಿ ಸರಿಯಾಗಿಲ್ಲ ಎಂಬುದು ನನ್ನ ಅಭಿಪ್ರಾಯ. ತಪ್ಪು ಎನಿಸಿದ್ದರ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದು ಆಕೆಯ ಹಕ್ಕು. ಅದೇ ರೀತಿ ವೀರೂ ಅವರು ಹಾಸ್ಯ ಮಾಡುವ ಹಕ್ಕನ್ನು ಹೊಂದಿದ್ದಾರೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಆನಂದಿಸುತ್ತಿದ್ದೇವೆ.

ಸೆಹ್ವಾಗ್ ಅವರ ಹಾಸ್ಯದಲ್ಲಾಗಲಿ ಅಥವಾ ನಾನಾಗಲಿ ಆ ಹುಡುಗಿಯ ಹೆಸರನ್ನು ಬಳಸಿಲ್ಲ. ಆದರೆ ಕೆಲವು ಪತ್ರಕರ್ತರು ಹಾಗೂ ಇತರರು ನಮ್ಮ ವಿರುದ್ಧ ಬಣ್ಣ ಕಟ್ಟಿ ಅವರ ವಾದವನ್ನು ಸಾಬೀತುಪಡಿಸಲು ಮುಂದಾಗಿದ್ದಾರೆ. ಅವರ ಅಜೆಂಡಾವನ್ನು ಸಾಧಿಸಲು ನಮ್ಮ ಮೇಲೆ ಆರೋಪ ಹೊರಿಸುತ್ತಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದಲ್ಲಿನ ಗಲಭೆಗೂ ಆಕೆ ಯುದ್ಧದ ವಿರುದ್ಧದ ಧ್ವನಿಗೂ ಯಾವ ರೀತಿಯ ಸಂಬಂಧ ಕಲ್ಪಿಸುತ್ತಿದ್ದೀರಾ? ಸೆಹ್ವಾಗ್ ಅವರಿಗೂ ಆ ಗಲಭೆ, ಹಿಂಸಾಚಾರಕ್ಕೂ ಹೇಗೆ ಸಂಬಂಧವಿದೆ? ಇಲ್ಲಿ ಬೇಕಂತಲೇ ವಿಷಯವನ್ನು ತಿರುಚಲಾಗುತ್ತಿರುವುದು ಸ್ಪಷ್ಟವಾಗಿದೆ.

ಆಕೆ ಧ್ವನಿ ನಿಜಕ್ಕೂ ಮಹತ್ವದ್ದಾಗಿದೆ. ಹಾಗೆಂದು ಆಕೆಯನ್ನು ಎಲ್ಲ ಹುತಾತ್ಮರು ಹಾಗೂ ಅವರ ಕುಟುಂಬದವರ ಪ್ರತಿನಿಧಿ ಎಂದು ಪರಿಗಣಿಸಲಾಗುವುದಿಲ್ಲ. ಅದು ಕೇವಲ ಆಕೆಯ ಅಭಿಪ್ರಾಯ ಮಾತ್ರ. ಆಕೆ ಹುತಾತ್ಮ ಯೋಧನ ಮಗಳಾಗಿರಬಹುದು. ನನ್ನ ಜತೆ ಓದಿದ 6 ಸಹಪಾಠಿಗಳು ದೇಶಕ್ಕಾಗಿ ತಮ್ಮ ಪ್ರಾಣ ತ್ಯಜಿಸಿದ್ದಾರೆ. ಅದೇ ರೀತಿ ನನ್ನ ಸೀನಿಯರ್ ಗಳು ಮತ್ತು ಜೂನಿಯರ್ ಗಳು ಸಹ ದೇಶಕ್ಕಾಗಿ ಪ್ರಾಣ ಮುಡಿಪಿಟ್ಟಿದ್ದಾರೆ. ನನ್ನ ರಾಜ್ಯದ ಪ್ರತಿ ಗ್ರಾಮದಲ್ಲೂ ಹುತಾತ್ಮರಿದ್ದಾರೆ. ಯುದ್ಧ ಒಳ್ಳೆಯದಲ್ಲ ನಿಜ. ಹಾಗೆಂದ ಮಾತ್ರಕ್ಕೆ ನಾವು ಯುದ್ಧವನ್ನು ಆರಂಭಿಸಿಲ್ಲ ಅಥವಾ ಅದನ್ನು ಬಯಸುತ್ತಿಲ್ಲ. ನಮ್ಮ ಪ್ರೀತಿ ಪಾತ್ರರ ಪ್ರಾಣ ಹೋಗುತ್ತಿದೆ ಎಂಬ ಕಾರಣಕ್ಕೆ ನಮ್ಮ ಗಡಿ ರಕ್ಷಿಸಿಕೊಳ್ಳದಿರಲು ಸಾಧ್ಯವೇ? ಇಂತಹ ಪರಿಸ್ಥಿತಿಯಲ್ಲಿ ಬೇರೆ ದೇಶಗಳ ದಾಳಿಯಿಂದ ದೇಶವನ್ನು ರಕ್ಷಿಸುವುದಾದರೂ ಹೇಗೆ? ಎಂಬುದನ್ನು ಮೊದಲು ಯೋಚಿಸಬೇಕಿದೆ.

ಈ ಹೇಳಿಕೆಯ ಮೂಲಕ ಈ ವಿಷಯಕ್ಕೆ ನಾನು ಅಂತ್ಯ ಹಾಡಲು ಬಯಸುತ್ತಿದ್ದೇನೆ.

ಜೈ ಹಿಂದ್

Leave a Reply