17ರ ಬಾಲೆಯ ಮೇಲೆ ಅತ್ಯಾಚಾರ ಎಸಗಿದ ಪಾದ್ರಿ ಬಂಧನ, ಸಂತ್ರಸ್ತೆಯ ಧೈರ್ಯದಿಂದಲೇ ಬಯಲಾದ ಪ್ರಕರಣ

ಆರೋಪಿ ಫಾದರ್ ವಡಕ್ಕುಮ್ಚಿರಿಯಲ್ (48)

ಡಿಜಿಟಲ್ ಕನ್ನಡ ಟೀಮ್:

ಮಗುವಿನ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ ಪ್ರಕರಣದಲ್ಲಿ ಕೇರಳದ ಕ್ರೈಸ್ತ ಪಾದ್ರಿ ಬಂಧನವಾಗಿದೆ.

ಕೊಟ್ಟಿಯೂರು ಸೆಬಾಸ್ಟಿಯನ್ ಚರ್ಚಿನ ಫಾದರ್ ವಡಕ್ಕುಮ್ಚಿರಿಯಲ್ (48) ಮಂಗಳವಾರ ಬಂಧಿತನಾದ ವ್ಯಕ್ತಿ. ಕೆನಡಾಕ್ಕೆ ಪರಾರಿಯಾಗುವ ಸಿದ್ಧತೆಯಲ್ಲಿದ್ದಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿರುವ ಕ್ರೂರ ವ್ಯಂಗ್ಯವೇನೆಂದರೆ, ಇದೇ ಫಾದರ್ ವಿಚಾರಗೋಷ್ಟಿಗಳಲ್ಲಿ ಭಾಗವಹಿಸಿ ಮಕ್ಕಳ ವಿರುದ್ಧದ ದೌರ್ಜನ್ಯದ ಬಗ್ಗೆ ಭಾಷಣ ಮಾಡಿರುವುದು!

ಈತನ ದೌರ್ಜನ್ಯಕ್ಕೆ ಸಿಕ್ಕಿ ತಾಯಿಯಾಗಿರುವವಳು 17 ವರ್ಷದ ಬಾಲೆ. ಎರಡು ವರ್ಷಗಳ ಕಾಲ ಈಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದು ಆಕೆ ದಾಖಲಿಸಿರುವ ಹೇಳಿಕೆಯಿಂದ ತಿಳಿದುಬಂದಿರುವ ಭಯಾನಕ ಅಂಶ.

ಸಂತ್ರಸ್ತೆಯ ಕುಟುಂಬವು ಚರ್ಚಿನ ಹತ್ತಿರದಲ್ಲೇ ಇತ್ತಾದ್ದರಿಂದ ಆಕೆ ದಿನನಿತ್ಯ ಚರ್ಚಿಗೆ ಭೇಟಿ ನೀಡುವ ಅಭ್ಯಾಸ ರೂಢಿಸಿಕೊಂಡಿದ್ದಳು. ಚರ್ಚ್ ವತಿಯಿಂದ ಕಂಪ್ಯೂಟರ್ ಶಿಕ್ಷಣವೂ ನಡೆಯುತ್ತಿತ್ತು. ಈ ತರಬೇತಿ ಕೇಂದ್ರದಲ್ಲೇ ಈ ಫಾದರ್ ಆಕೆಯನ್ನು ಬಲಿಪಶುವಾಗಿಸಿದ. ಕುಟುಂಬವು ಆರ್ಥಿಕವಾಗಿ ದುರ್ಬಲವಾಗಿದ್ದರಿಂದ, ಈ ಬಗ್ಗೆ ತುಟಿ ಬಿಚ್ಚಿದರೆ ಹುಡುಗಿಯ ತಂದೆಯನ್ನೇ ಪ್ರಕರಣದಲ್ಲಿ ಸಿಲುಕಿಸುವ ಬೆದರಿಕೆ ಬಂದಿತ್ತು ಫಾದರಿನಿಂದ.

ಕೊನೆಗೂ ಪ್ರಕರಣ ಬಯಲಿಗೆ ಬಂದಿದ್ದು ಸಂತ್ರಸ್ತ ಹುಡುಗಿಯ ಧೈರ್ಯದಿಂದಲೇ. ಆಕೆ ಮಕ್ಕಳ ಸಹಾಯವಾಣಿ ಬಳಸಿಕೊಂಡು ತನಗಾಗಿರುವ ದೌರ್ಜನ್ಯದ ಬಗ್ಗೆ ಹೇಳಿಕೊಂಡಳು. ತಕ್ಷಣವೇ ಸಹಾಯವಾಣಿ ಕೇಂದ್ರವು ಪೊಲೀಸರನ್ನು ಎಚ್ಚರಿಸಿತು.

ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ (ಪೊಕ್ಸೊ) ಹಾಗೂ ಐಪಿಸಿ ಅಡಿಯಲ್ಲಿ ಕಠಿಣ ಆರೋಪವನ್ನೇ ಈ ಪಾದ್ರಿ ವಿರುದ್ಧ ಹೇರಲಾಗಿದೆ. ಅಲ್ಲದೇ ಪ್ರಕರಣವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನವಜಾತ ಶಿಶುವಿನೊಂದಿಗೆ ವಂಶವಾಹಿ ಹೋಲಿಕೆ ಪರೀಕ್ಷೆಯನ್ನು ಮಾಡಲಾಗುತ್ತದೆ.

ತನಗೆ ಎರಡು ವರ್ಷದಿಂದ ಕ್ರೂರ ಮಾನಸಿಕ ಹಿಂಸೆಯಾಗಿತ್ತು ಅಂತ ಹೇಳಿಕೆಯಲ್ಲಿ ದಾಖಲಿಸಿರುವ ಆ ಬಾಲಕಿಯ ಮಾತುಗಳು ನಮ್ಮ ಕಾಲುಗಳನ್ನೇ ಕಂಪಿಸುವಂತಿವೆ. ತಿಂಗಳ ಹಿಂದೆ ಮಗುವಿಗೆ ಜನನ ನೀಡಿರುವ ಈಕೆಯನ್ನು ಖಾಸಗಿ ಆಸ್ಪತ್ರೆಯಿಂದ ಯಾವುದೇ ಸುದ್ದಿಯಾಗದಂತೆ ಉತ್ತರ ಕೇರಳದ ಅನಾಥಾಲಯವೊಂದಕ್ಕೆ ವರ್ಗಾಯಿಸಲಾಗಿತ್ತು. ಇದೀಗ ಆಸ್ಪತ್ರೆ ವಿರುದ್ಧವೂ ವಿದ್ಯಮಾನ ಮುಚ್ಚಿಟ್ಟಿರುವುದರ ವಿರುದ್ಧ ಪ್ರಕರಣ ದಾಖಲಾಗಿದೆ.

1 COMMENT

Leave a Reply