ಸೈನಿಕರ ಸಾವನ್ನು ಸಂಭ್ರಮಿಸುವ ಎಡಪಂಥೀಯರು ಯುವಕರ ದಾರಿ ತಪ್ಪಿಸುತ್ತಿದ್ದಾರೆ: ಕಿರಣ್ ರಿಜಿಜು, ದೆಹಲಿಯ ಪ್ರತಿಭಟನೆ ವೇಳೆ ಯೋಗೇಂದ್ರ ಯಾದವ್- ಸೀತಾರಾಮ್ ಯೆಚೂರಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

‘ನಮ್ಮ ಯೋಧರು ಗಡಿಯಲ್ಲಿ ಪ್ರಾಣ ಬಿಡುತ್ತಿದ್ದಾಗ ಸಂಭ್ರಮಿಸುತ್ತಿದ್ದ ಎಂಡಪಂಥೀಯ ರಾಜಕೀಯ ಪಕ್ಷಗಳು, ಯುವಕರನ್ನು ತಪ್ಪು ದಾರಿಗೆ ಎಳೆಯುತ್ತಿವೆ…’ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಆರೋಪಿಸಿದ್ದಾರೆ.

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಮಂದೀಪ್ ಸಿಂಗ್ ಅವರ ಪುತ್ರಿ ಗುರುಮಹರ್ ಕೌರ್ ಅವರ ಸಾಮಾಜಿಕ ಜಾಲತಾಣ ಎಬ್ಬಿಸಿರುವ ವಿವಾದಕ್ಕೆ ಪ್ರತಿಕ್ರಿಯಿಸಿರುವ ರಿಜಿಜು, ‘ಆಕೆ ಇನ್ನು ಚಿಕ್ಕ ಹುಡುಗಿ. ಆಕೆಯನ್ನು ಗುರಿಯಾಗಿಸಿಕೊಂಡು ವಿವಾದ ಸೃಷ್ಟಿಸುವುದು ಸರಿಯಲ್ಲ. ಇಲ್ಲಿ ಗಮನ ಹರಿಸಬೇಕಿರುವುದು ನಮ್ಮ ಯೋಧರು ಸತ್ತಾಗ ಸಂಭ್ರಮಿಸಿದ್ದ ಎಡಪಂಥೀಯರ ಬಗ್ಗೆ. ಭಾರತ ಮತ್ತು ಚೀನಾ ನಡುವಣ ಯುದ್ಧದಲ್ಲಿ ಎಡಪಂಥಿಯರು ಚೀನಾವನ್ನು ಬೆಂಬಲಿಸಿದ್ದರು. ಇಂತಹವರು ನಮ್ಮ ಯುವಕರನ್ನು ತಪ್ಪು ದಾರಿಗೆ ಕರೆದೊಯ್ಯುತ್ತಿರುವುದು ಸರಿಯಲ್ಲ. ಕೌರ್ ಹುತಾತ್ಮರ ಪುತ್ರಿ. ಆಕೆಯನ್ನು ತಪ್ಪು ದಾರಿಗೆ ಎಳೆದಿರುವುದಕ್ಕೆ ಆ ಹುತಾತ್ಮನ ಆತ್ಮ ನಿಜಕ್ಕೂ ದುಃಖಿಸಲಿದೆ.’

ಕಳೆದ ವರ್ಷ ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಬಿಕ್ಕಟ್ಟು ಹೆಚ್ಚಿ ಯುದ್ಧದ ವಾತಾವರಣ ನಿರ್ಮಾಣವಾಗುತ್ತಿರುವಾಗ ಗುರುಮಹರ್ ಈ ವಿಡಿಯೋ ಅನ್ನು ಪೋಸ್ಟ್ ಮಾಡಿದ್ದಳು. ಆದರೆ ಇದೇ ತಿಂಗಳು 22ರಂದು ರಾಮಜಾಸ್ ಕಾಲೇಜಿನಲ್ಲಿ ಪ್ರತಿಭಟನೆ ವೇಳೆ ನಡೆದ ಗಲಾಟೆಯ ನಂತರ ಎಬಿವಿಪಿ ಸಂಘಟನೆ ವಿರುದ್ಧದ ಅಭಿಯಾನವಾಗಿ ಈ ವಿಡಿಯೋ ಅನ್ನು ಮತ್ತೆ ಶೇರ್ ಮಾಡಿದ್ದರು. ನಂತರ ಇದು ತೀವ್ರ ಮಟ್ಟದ ವಿವಾದಕ್ಕೆ ದಾರಿಯಾಗಿದೆ.

ಸಾಮಾಜಿಕ ಜಾಲ ತಾಣಗಳಲ್ಲಿ ಗಣ್ಯರಿಂದ ಟೀಕೆಗಳು ಹಾಗೂ ಲೇವಡಿ ಎದುರಿಸಿದ ನಂತರ ಗುರುಮಹರ್ ಕೌರ್ ತಮ್ಮ ಎಬಿವಿಪಿ ವಿರುದ್ಧದ ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ. ಆದರೆ ದೆಹಲಿ ವಿಶ್ವವಿದ್ಯಾಲಯ, ಜೆಎನ್ ಯು ಹಾಗೂ ಜಮೈ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗವಹಿಸಿ ಎಬಿವಿಪಿ ವಿರುದ್ಧ ಕಿಡಿ ಕಾರಿದ್ದಾರೆ. ಈ ಪ್ರತಿಭಟನೆ ವೇಳೆ ‘ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಮುಂದೆ ನಿಮ್ಮ ರಾಷ್ಟ್ರವಾದ ಮೇಲೆ ನಿಲ್ಲುವುದಿಲ್ಲ.’ ‘ಎಬಿವಿಪಿ ತೊಲಗಲಿ’ ಹಾಗೂ ‘ಅಜಾದಿ’ ಎಂಬ ಕೂಗು ವ್ಯಾಪಕವಾಗಿ ಕೇಳಿ ಬಂದವು. ವಿದ್ಯಾರ್ಥಿಗಳ ಈ ಪ್ರತಿಭಟನೆಯಲ್ಲಿ ಬಾಗವಹಿಸಿ ಸ್ವರಾಜ್ ಇಂಡಿಯಾದ ನಾಯಕ ಯೋಗೇಂದ್ರ ಯಾದವ್, ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ, ಆಮ್ ಆದ್ಮಿ ಪಕ್ಷದ ನಾಯಕರು ಬೆಂಬಲ ಸೂಚಿಸಿದ್ದರು. ಈ ವೇಳೆ ಮಾತನಾಡಿದ ನಾಯಕರು ಹೇಳಿದಿಷ್ಟು…

  • ‘ನಮ್ಮ ರಾಷ್ಟ್ರವಾದವನ್ನು ನಾವು ಭಗತ್ ಸಿಂಗ್ ಅವರನ್ನು ನೋಡಿ ಕಲಿಯುತ್ತೇವೆ ಹೊರತು, ಎಂದಿಗೂ ರಾಷ್ಟ್ರ ಧ್ವಜವನ್ನು ತಮ್ಮ ಮನೆಯಲ್ಲಿ ಹಾರಿಸದ ವ್ಯಕ್ತಿಗಳ ತಲೆಮಾರಿನವರಿಂದ ಕಲಿಯುವುದಿಲ್ಲ. ನಾವು ಅಸಹಿಷ್ಣುಗಳೂ ಅಲ್ಲ, ಹಿಂಸಾಚಾರವನ್ನೂ ಅನುಸರಿಸುವುದಿಲ್ಲ. ನಮ್ಮ ಹೋರಾಟ ಎಡ ಹಾಗೂ ಬಲದ ವಿಷಯಕ್ಕೆ ಸಂಬಂಧಿಸಿರುವುದಿಲ್ಲ. ಅದು ಕೇವಲ ಸರಿ ಅಥವಾ ತಪ್ಪುಗಳಿಗೆ ಸಂಬಂಧಿಸಿರುತ್ತದೆ. ಕಾಲೇಜಿನ ಕ್ಯಾಂಪಸ್ ನಲ್ಲಿ ಗುಂಡಾಗಿರಿ ಮಾಡಿರುವ ಬಿಜೆಪಿ ಬೆಂಬಲಿತ ಎಬಿವಿಪಿ ಸಂಘಟನೆ ವಿರುದ್ಧ ಮಾತ್ರ ನಮ್ಮ ಹೋರಾಟ’ ಎಂದು ಸ್ವರಾಜ್ ಇಂಡಿಯಾ ಸಂಸ್ಥಾಪಕ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.
  • ‘ನಾವೆಲ್ಲರೂ ಭಾರತೀಯರು’ ಎಂಬುದು ನಮ್ಮ ರಾಷ್ಟ್ರವಾದವಾಗಿದೆಯೇ ಹೊರತು, ‘ಯಾರು ಹಿಂದುಗಳು’ ಎಂಬುದಲ್ಲ… ಎಂದಿದ್ದಾರೆ ಸಿತಾರಾಮ್ ಯೆಚೂರಿ.

ಮತ್ತೊಂದೆಡೆ ಗುರುಮಹರ್ ಕೌರ್ ಅವರು ತಮ್ಮ ಮೇಲೆ ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ಬೆನ್ನಲ್ಲೇ, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಎಬಿವಿಪಿ ಸಂಘಟನೆ ಸದಸ್ಯರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಾಕೇತ್ ಬಹುಗುಣ, ‘ಫೆ.22ರಂದು ನಡೆದ ಹಿಂಸಾಚಾರದಲ್ಲಿ ಹೊರಗಿನವರು ಕಾರಣ. ಆದರೆ ಎಲ್ಲ ತಪ್ಪುಗಳನ್ನು ನಮ್ಮ ಮೇಲೆ ಹೊರಿಸಲಾಗುತ್ತಿದೆ.’ ಎಂದಿದ್ದಾರೆ.

Leave a Reply