ಯಡಿಯೂರಪ್ಪ ಹೆಸರೆತ್ತುತ್ತಲೇ ಮಾಧ್ಯಮದವರ ವಿರುದ್ಧ ಕಿಡಿಯಾದ್ರು ಮುಮಂ!, ಸಿದ್ದರಾಮಯ್ಯನವರ ಭವಿಷ್ಯ ನುಡಿದ ಬಿಎಸ್ ವೈ, ರಾಜ್ಯದಲ್ಲಿ ಈ ಬಾರಿ ಹಾಲು ಉತ್ಪಾದನೆ ಕುಸಿತ, ಪಕ್ಷ ಬಿಡುವವರು ಬಿಡಬಹುದು ಅಂದ್ರು ಕುಮಾರಸ್ವಾಮಿ

ಕಾಂಗ್ರೆಸ್ ಪಕ್ಷದಿಂದ ಪ್ರಮೋದ್ ಹೆಗಡೆ ಹಾಗೂ ಜೆಡಿಎಸ್ ಪಕ್ಷದಿಂದ ದಿನಕರಶೆಟ್ಟಿ ಅವರು ಮಂಗಳವಾರ ಬಿಜೆಪಿ ಸೇರಿದ್ದು, ಈ ಇಬ್ಬರನ್ನು ಪಕ್ಷದ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಸೇರಿದಂತೆ ಇತರೆ ನಾಯಕರ ಸಮ್ಮುಖದಲ್ಲಿ ಬರಮಾಡಿಕೊಳ್ಳಲಾಯಿತು.

ಡಿಜಿಟಲ್ ಕನ್ನಡ ಟೀಮ್:

ಬಿಎಸ್ ವೈ ಜಪ ಬಿಡಿ ಎಂದ ಸಿಎಂ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರ ಜಪ ಬಿಟ್ಟು ನಿಮ್ಮ ಕೆಲಸದ ಕಡೆ ಗಮನ ಹರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದವರ ವಿರುದ್ಧ ಕಿಡಿ ಕಾರಿದ್ದಾರೆ. ವಿದ್ಯುತ್ ನಿಗಮದ ಶಕ್ತಿ ಭವನದಲ್ಲಿ ಬಜೆಟ್ ಪೂರ್ವ ಸಭೆಗೂ ಮುನ್ನ ಸುದ್ದಿಗಾರರು ಮುಖ್ಯಮಂತ್ರಿಯವರನ್ನು ಮಾತನಾಡಿಸಲು ಪ್ರಯತ್ನಿಸಿದಾಗ ಕಿಡಿಕಾರಿದ ಸಿದ್ದರಾಮಯ್ಯ, ‘ನಿಮಗೆ ಬೇರೆ ಕೆಲಸ ಇಲ್ಲ. ಪದೇ ಪದೇ ಯಡಿಯೂರಪ್ಪ ಅಂತ ಜಪಿಸುತ್ತೀರಲ್ಲ’ ಎಂದು ಕೋಪಗೊಂಡರು. ಅದರ ನಡುವೆಯೂ ಯಡಿಯೂರಪ್ಪನವರ ವಿರುದ್ಧದ ಪ್ರಕರಣಗಳಿಗೆ ಮರುಜೀವ ನೀಡುವುದರ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಬಯಸದ ಮುಖ್ಯಮಂತ್ರಿಗಳು, ‘ಕಾನೂನು ಸಚಿವರನ್ನು ಕೇಳ್ರಿ, ನನ್ನನ್ನು ಏನು ಕೇಳುತ್ತೀರಿ’ ಎಂದರು.

ಈ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕಾನೂನು ಸಚಿವ ಟಿ.ಬಿ ಜಯಚಂದ್ರ, ‘ಯಡಿಯೂರಪ್ಪನವರ ಪ್ರಕರಣಗಳ ಮೇಲ್ಮನವಿಗೂ ಹೈಕಮಾಂಡ್ ಕಪ್ಪ ಡೈರಿ ಪ್ರಕರಣಕ್ಕೂ ಸಂಬಂಧವಿಲ್ಲ’ ಎಂದರು.

ಭವಿಷ್ಯ ನುಡಿದ ಯಡಿಯೂರಪ್ಪ

ಕಾಂಗ್ರೆಸ್ ಹೈಕಮಾಂಡಿಗೆ ಕಪ್ಪ ನೀಡಿರುವ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮುಂದಿನ ದಿನಗಳಲ್ಲಿ ಉರುಳಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ.

ಬಿಜೆಪಿ ಪಕ್ಷದ ಕಚೇರಿಯಲ್ಲಿ ಮಂಗಳವಾರ ಮಾಜಿ ಶಾಸಕ ದಿನಕರ ಶೆಟ್ಟಿ ಹಾಗೂ ಕಾಂಗ್ರೆಸ್ ಮುಖಂಡ ಪ್ರಮೋದ್ ಹೆಗಡೆ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಮಾತನಾಡಿದ ಯಡಿಯೂರಪ್ಪ, ‘ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ತಮ್ಮ ಮನೆಯಲ್ಲಿ ಸಿಕ್ಕ ಡೈರಿ ನನ್ನದೇ ಎಂದು ಒಪ್ಪಿಕೊಂಡಿದ್ದಾರೆ. ಆ ಮೂಲಕ ಅವರು ಬಿಜೆಪಿಗೆ ಸಹಾಯ ಮಾಡಿದ್ದಾರೆ. ಡೈರಿಯಲ್ಲಿರುವ ಮಾಹಿತಿ ಮತ್ತಷ್ಟು ಹೊರ ಬರಲಿದೆ. ಯಾವ ಮಂತ್ರಿ ಯಾರಿಗೆ ಹಣ ಕೊಟ್ಟಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಹೊರ ಬೀಳಲಿದೆ. ಇದರ ಸಂಪೂರ್ಣ ಮಾಹಿತಿ ಹೊರ ಬಂದರೆ ಸಿದ್ದರಾಮಯ್ಯನವರು ತಲೆ ಎತ್ತಿಕೊಂಡು ಓಡಾಡುವುದಕ್ಕೂ ಆಗುವುದಿಲ್ಲ. ಈಗಾಗಲೇ ಡೈರಿ ಮಾಹಿತಿ ಹೊರ ಬಂದ ನಂತಪ ಅವರು ಮೂರು ದಿನ ಮನೆಯಿಂದ ಹೊರಗೆ ಬರಲಿಲ್ಲ. ಡೈರಿಯ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಮುಖ್ಯಮಂತ್ರಿಗಳು ಧೈರ್ಯವಿದ್ದರೆ ಈ ಪ್ರಕರಣವನ್ನು ಸಿಬಿಐನಿಂದ ತನಿಖೆ ಮಾಡಿಸಲಿ. ಮುಂದಿನ ದಿನಗಳಲ್ಲಿ ಈ ಪ್ರಕರಣ ಅವರಿಗೆ ಉರುಳಾಗಲಿದೆ’ ಎಂದರು.

ರಾಜ್ಯದಲ್ಲಿ ಹಾಲು ಉತ್ಪಾದನೆ ಕುಸಿತ

ಬರಗಾಲದಿಂದ ಮೇವು ಹಾಗೂ ನೀರಿನ ಕೊರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಾಲಿನ ಉತ್ಪಾದನೆ ಗಣನೀಯವಾಗಿ ಕುಸಿದಿದೆ ಎಂದು ಪಶುಸಂಗೋಪನಾ ಸಚಿವ ಎ.ಮಂಜು ತಿಳಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದಿಷ್ಟು…

‘ಪ್ರತಿನಿತ್ಯ ಕರ್ನಾಟಕ 72 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸಿ ಗುಜರಾತ್ ನಂತರ ದಾಖಲೆ ನಿರ್ಮಿಸಿದೆ. ಆದರೆ, ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಹಸುಗಳಿಗೆ ಮೇವಿನ ಕೊರತೆಯುಂಟಾಗಿ ಏಳು ಲಕ್ಷ ಲೀಟರ್ ಹಾಲು ಉತ್ಪಾದನೆ ಕುಸಿತಗೊಂಡಿದೆ. ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಮತ್ತಷ್ಟು ಕುಸಿಯಲಿದೆ. ಈವರೆಗೂ ಹೆಚ್ಚುವರಿ ಹಾಲನ್ನು ಹಾಲಿನ ಪುಡಿಯನ್ನಾಗಿ ಪರಿವರ್ತಿಸಲಾಗುತ್ತಿತ್ತು, ಮುಂದಿನ ದಿನಗಳಲ್ಲಿ ಅದನ್ನು ನಿಲ್ಲಿಸಲಾಗುವುದು. ಉಳಿದಂತೆ ರಾಜ್ಯದ ಜನರ ಬೇಡಿಕೆ ಹಾಗೂ ನೆರೆ ರಾಜ್ಯಗಳು ಹಾಗೂ ಕಂಪನಿಗಳಿಗೆ ನೀಡುತ್ತಿರುವ ಹಾಲನ್ನು ಎಂದಿನಂತೆ ಪೂರೈಕೆ ಮಾಡಲಾಗುವುದು.’ ಎಂದರು.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿಸಾಲುಗಳು…

  • ದಿನಕರ ಶೆಟ್ಟಿ ಹಾಗೂ ಪರಿಮಳಾ ನಾಗಪ್ಪ ಅವರು ಪಕ್ಷ ತೊರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ, ‘ಜೊಳ್ಳುಗಳೆಲ್ಲ ಪಕ್ಷ ತೊರೆದರೆ ನಷ್ಟವಿಲ್ಲ. ಕಾರ್ಯಕರ್ತರು ಗಟ್ಟಿಯಾಗಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯುವುದು ಖಚಿತ. ಅನ್ಯ ಪಕ್ಷಗಳ ಪ್ರಮುಖರು ಜೆಡಿಎಸ್ ಬಾಗಿಲು ತಟ್ಟುತ್ತಿದ್ದಾರೆ. ಯಾರೋ ತೊರೆದರು ಎಂದ ಮಾತ್ರಕ್ಕೆ ಪಕ್ಷ ಮುಳುಗುವುದಿಲ್ಲ. ಯಾರನ್ನು ಬೇಕಾದರು ಕರೆದುಕೊಂಡು ಹೋಗಬಹುದು. ಇದರಿಂದ ಪಕ್ಷ ಮತ್ತಷ್ಟು ಗಟ್ಟಿಯಾಗಲಿದೆ’ ಎಂದರು.
  • ಈ ಬಾರಿ ಮಳೆ ಕೊರತೆ ಹೆಚ್ಚಾಗಿದ್ದರೂ ವಿದ್ಯುತ್ ಉತ್ಪಾದನೆಯಲ್ಲಿ ಯಾವುದೇ ಕೊರತೆ ಎದುರಾಗುವುದಿಲ್ಲ. ಆ ಮೂಲಕ ರಾಜ್ಯದಲ್ಲಿ ಮೊದಲ ಬಾರಿಗೆ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಮುಕ್ತಿಯಾಗಲಿದೆ. ಮಾರ್ಚ್ ತಿಂಗಳಿನಿಂದ ರಾಜ್ಯದ ವಿದ್ಯುತ್ ಜಾಲಕ್ಕೆ 1300 ಮೆಗಾವ್ಯಾಟ್ ವಿದ್ಯುತ್ ಸೇರ್ಪಡೆಗೊಳ್ಳುತ್ತಿದೆ. ಸೋಲಾರ್ ನಿಂದ 550 ಹಾಗೂ ಎರಮರಸ್ ಉಷ್ಣ ವಿದ್ಯುತ್ ಸ್ಥಾವರದಿಂದ 800 ಮೆಗಾವ್ಯಾಟ್ ವಿದ್ಯುತ್ ಹೆಚ್ಚುವರಿಯಾಗಿ ಸೇರುತ್ತಿದೆ. ಹೀಗಾಗಿ ಜನರು ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆಗೆ ಹೆದರುವ ಪರಿಸ್ಥಿತಿ ಇರುವುದಿಲ್ಲ ಎಂದು ಹೇಳಲಾಗಿದೆ.
  • ಗುರುಮಹರ್ ಕೌರ್ ವಿವಾದದಲ್ಲಿ ಸಾಕಷ್ಟು ಚರ್ಚೆಯಾಗಿರುವ ತಮ್ಮ ಟ್ವೀಟ್ ಬಗ್ಗೆ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಸ್ಪಷ್ಟನೆ ಕೊಟ್ಟಿದ್ದಾರೆ. ‘ನನ್ನ ಟ್ವೀಟ್ ಗುರುಮಹರ್ ಕೌರ್ ಅವರನ್ನು ಉದ್ದೇಶಿಸಿರಲಿಲ್ಲ. ಆದರೆ ಜನರು ತಮಗೆ ಬೇಕಾದ ರೀತಿಯಲ್ಲಿ ಅದನ್ನು ಅರ್ಥೈಸಿಕೊಂಡಿದ್ದಾರೆ’ ಎಂದು ಸೆಹ್ವಾಗ್ ಹೇಳಿದ್ದಾರೆ. ಈ ವಿಚಾರವಾಗಿ ಸಾಹಿತಿ ಜಾವೆದ್ ಅಕ್ತರ್ ಟೀಕೆ ವ್ಯಕ್ತಪಡಿಸಿರುವುದು ಹೀಗೆ… ‘ಹೆಚ್ಚು ಓದಿಕೊಳ್ಳದ ಆಟಗಾರ ಅಥವಾ ಕುಸ್ತಿಪಟು ಗುರುಮಹರ್ ಕೌರ್ ಅವರನ್ನು ಟೀಕಿಸಿದರೆ ಅರ್ಥ ಮಾಡಿಕೊಳ್ಳಬಹುದು. ಆದರೆ ಸುಶಿಕ್ಷಿತರು ಸಹ ಗುರುಮಹರ್ ಕೌರ್ ಅವರನ್ನು ಟೀಕಿಸುತ್ತಿರುವುದು ಏಕೆ’ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ‘ಯುವಕರ ಮನಸನ್ನು ಹಾಳು ಮಾಡುತ್ತಿರುವವರು ಯಾರು’ ಎಂಬ ಕೇಂದ್ರ ಗೃಹ ಸಚಿವ ಕಿರಣ್ ರಿಜಿಜು ಅವರ ಹೇಳಿಕೆಗೆ ಜಾವೆದ್ ಅಕ್ತರ್ ಪ್ರತ್ಯುತ್ತರ ನೀಡಿದ್ದು ಹೀಗೆ… ‘ಯುವಕರ ಮನಸನ್ನು ಯಾರುಹಾಳು ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ನಿಮ್ಮ ಮನಸ್ಸನ್ನು ಯಾರು ಹಾಳು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ.’

Leave a Reply