ಎಬಿವಿಪಿಯಿಂದ ಇಬ್ಬರು ಕಾರ್ಯಕರ್ತರು ವಜಾ, ಪೊಲೀಸರ ಬಂಧನದಲ್ಲಿ ಪ್ರಶಾಂತ್ ಮಿಶ್ರಾ- ವಿನಾಯಕ್ ಶರ್ಮಾ

ಡಿಜಿಟಲ್ ಕನ್ನಡ ಟೀಮ್:

ರಾಷ್ಟ್ರವ್ಯಾಪಿ ವಿವಾದಕ್ಕೆ ಕಾರಣವಾಗಿರುವ ದೆಹಲಿ ವಿಶ್ವವಿದ್ಯಾಲಯ ಆವರಣದಲ್ಲಿನ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ತನ್ನ ಸಂಘಟನೆಯ ಇಬ್ಬರು ಕಾರ್ಯಕರ್ತರನ್ನು ಅಮಾನತುಗೊಳಿಸಿದೆ. ಅಲ್ಲದೆ ಪೊಲೀಸರು ಈ ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ನಿನ್ನೆಯಷ್ಟೇ ರಾಮಜಾಸ್, ದೆಹಲಿ ವಿಶ್ವವಿದ್ಯಾನಿಲಯ ಹಾಗೂ ಜೆಎನ್ ಯು ವಿದ್ಯಾರ್ಥಿ ಹಾಗೂ ಶಿಕ್ಷಕರು ಬೀದಿಗಿಳಿದು ಎಬಿವಿಪಿ ಸಂಘಟನೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಎಬಿವಿಪಿ ಈ ನಿರ್ಧಾರ ತೆಗೆದುಕೊಂಡಿದೆ. ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಬಿವಿಪಿಯ ಮಾಧ್ಯಮ ವಕ್ತಾರ ಸಾಕೇತ್ ಬಹುಗುಣ, ಈ ಘಟನೆಯನ್ನು ಖಂಡಿಸಿದರು. ‘ಎಬಿವಿಪಿ ಸಂಘಟನೆ ಹಿಂಸಾಚಾರವನ್ನು ಖಂಡಿಸುವುದರ ಜತೆಗೆ ವಿರೋಧಿಸುತ್ತದೆ. ಕಾಲೇಜಿನ ಆವರಣದಲ್ಲಿ ಹಿಂಸಾಚಾರ ಮುಕ್ತ ವಾತಾವರಣ ನಿರ್ಮಾಣವಾಗಬೇಕು ಎಂಬುದು ನಮ್ಮ ಉದ್ದೇಶ. ಈ ಘಟನೆಯ ನಂತರ ಸಂಘಟನೆ ಸಭೆ ನಡೆಸಲಾಗಿದ್ದು, ಹಿಂಸಾಚಾರದಲ್ಲಿ ಭಾಗವಹಿಸಿ ಕಾನೂನು ಉಲ್ಲಂಘಿಸಿದ ಇಬ್ಬರು ಕಾರ್ಯಕರ್ತರಾದ ಪ್ರಶಾಂತ್ ಮಿಶ್ರಾ ಹಾಗೂ ವಿನಾಯಕ್ ಶರ್ಮಾ ಅವರನ್ನು ಸಂಘದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಎಐಎಸ್ಎ ಕಾರ್ಯಕರ್ತ ರಾಜ್ ಸಿಂಗ್ ಹಾಗೂ ಉತ್ಕರ್ಷ್ ಭಾರದ್ವಾಜ್ ಅವರು ತಮ್ಮ ಮೇಲೆ ಪ್ರಶಾಂತ್ ಮಿಶ್ರಾ ಹಾಗೂ ಆತನ ಏಳೆಂಟು ಸ್ನೇಹಿತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಶಾಂತ್ ಹಾಗೂ ವಿನಾಯಕ್ ಶರ್ಮಾ ಅವರನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷನ್ 323 (ಉದ್ದೇಶಪೂರ್ವಕವಾಗಿ ಹಿಂಸಾಚಾರ ನಡೆಸಿದ್ದಕ್ಕೆ ಶಿಕ್ಷೆ), 341 ಹಾಗೂ 34 (ಬಲವಂತವಾಗಿ ನಿಯಂತ್ರಣ ಹೇರಲು ಪ್ರಯತ್ನಿಸಿದ್ದಕ್ಕೆ ಶಿಕ್ಷೆ) ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಇವರ ಜತೆಗೆ ಈ ದಾಳಿಯಲ್ಲಿ ಭಾಗವಹಿಸಿದ್ದ ಇತರೆ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply