ಇನ್ನುಮುಂದೆ ನಗದು ವಹಿವಾಟಿನ ಮೇಲೆ ಶುಲ್ಕ ವಿಧಿಸಲಿವೆ ಬ್ಯಾಂಕುಗಳು, ಡಿಜಿಟಲ್ ವಹಿವಾಟಿಗೆ ಉತ್ತೇಜನವಾಗಲಿದೆಯೇ ಈ ನಿರ್ಧಾರ?

ಡಿಜಿಟಲ್ ಕನ್ನಡ ಟೀಮ್:

ಇಂದಿನಿಂದ ನಿಮ್ಮ ನಗದು ವಹಿವಾಟುಗಳ ಮೇಲೆ ಶುಲ್ಕ ವಿಧಿಸಲು ಬ್ಯಾಂಕುಗಳು ನಿರ್ಧರಿಸಿವೆ. ಸದ್ಯ ನೋಟು ಅಮಾನ್ಯದ ನಿರ್ಧಾರದಿಂದ ಚೇತರಿಸಿಕೊಂಡಿರುವ ಗ್ರಾಹಕರಿಗೆ ತಿಂಗಳಿಗೆ ನಿರ್ದಿಷ್ಟ ಮಿತಿಯನ್ನು ನಿಗದಿಪಡಿಸಿ ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ವಹಿವಾಟು ಮಾಡಿದರೆ ಅದಕ್ಕೆ ಶುಲ್ಕ ವಿಧಿಸಲಿವೆ. ಈಗಾಗಲೇ ಎಚ್ ಡಿ ಎಫ್ ಸಿ ಈಗಾಗಲೇ ತಮ್ಮ ಗ್ರಾಹಕರಿಗೆ ಈ ಬಗ್ಗೆ ಸೂಚನೆ ನೀಡಿದ್ದು, ಶುಲ್ಕವನ್ನು ವಿಧಿಸಲಿದೆ. ಆದರೆ ಐಸಿಐಸಿಐ ಹಾಗೂ ಎಕ್ಸಿಕ್ಸ್ ಬ್ಯಾಂಕುಗಳು ಇನ್ನು ನಗದು ವಹಿವಾಟು ಮಿತಿ ನಿರ್ಧರಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿವೆ.

ಈಗಾಗಲೇ ಪ್ರತಿ ತಿಂಗಳಿಗೆ ಒಂದು ಖಾತೆಯಿಂದ ಗರಿಷ್ಠ ₹ 2 ಲಕ್ಷ ಡ್ರಾ ಮಾಡಿಕೊಳ್ಳವ ಮಿತಿ ಹೇರಲಾಗಿದ್ದು, ಅದಕ್ಕೂ ಹೆಚ್ಚಿನ ಹಣ ಡ್ರಾ ಮಾಡಿಕೊಂಡರೆ ಅದಕ್ಕೂ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ. ಕಳೆದ ತಿಂಗಳು ಮಂಡನೆಯಾದ ಕೇಂದ್ರ ಬಜೆಟ್ ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಗರಿಷ್ಠ ₹ 3 ಲಕ್ಷವರೆಗೆ ಮಾತ್ರ ನಗದಿನ ಮೂಲಕ ವ್ಯವಹಾರ ಮಾಡಬಹುದು ಎಂದು ಮಿತಿ ಹಾಕಿದ್ದಾರೆ.

ಈಗ ಪ್ರತಿ ಬ್ಯಾಂಕುಗಳು ತಮ್ಮ ನಿರ್ಧಾರದಂತೆ ವಹಿವಾಟಿನ ಮಿತಿ ನಿಗದಿ ಹಾಗೂ ಶುಲ್ಕ ರಹಿತ ನಗದು ವ್ಯವಹಾರದ ಮಿತಿಯನ್ನು ನಿರ್ಧರಿಸಲಿವೆ. ಸದ್ಯ ಎಚ್ ಡಿಎಫ್ ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡಿರುವ ಸೂಚನೆ ಪ್ರಕಾರ, ನಗದು ಠೇವಣಿ ಅಥವಾ ಡ್ರಾ ಮಾಡಿಕೊಳ್ಳುವುದು ಎರಡಕ್ಕೂ ಸೇರಿ ಒಬ್ಬ ಗ್ರಾಹಕ ನಾಲ್ಕು ಬಾರಿ ನಗದು ವಹಿವಾಟು ಮಾಡಬಹುದು. ಆ ನಂತರ ಮಾಡುವ ಪ್ರತಿ ವಹಿವಾಟಿಗೂ ₹5 ರಿಂದ ₹ 150 ಶುಲ್ಕ ವಿಧಿಸಲಾಗುವುದು. ಇದು ಆ ಗ್ರಾಹಕ ನಡೆಸುವ ವಹಿವಾಟಿನ ಪ್ರಮಾಣದ ಮೇಲೆ ಅವಲಂಬಿತವಾಗಲಿದೆ.

ಇನ್ನು ಎಕ್ಸಿಸ್ ಬ್ಯಾಂಕ್ ಈ ಬಗ್ಗೆ ಅಂತಿಮ ನಿರ್ಧಾರವನ್ನು ಇನ್ನಷ್ಟೇ ಪ್ರಕಟಿಸಬೇಕಿದ್ದು, ಈ ಬ್ಯಾಂಕ್ ತನ್ನ ಗ್ರಾಹಕರಿಗೆ ಪ್ರತಿ ತಿಂಗಳಿಗೆ ಐದು ಬಾರಿ ವಹಿವಾಟು ಮಾಡಲು ಅಥವಾ ಶುಲ್ಕ ರಹಿತ ನಗದು ವಹಿವಾಟಿನ ಮಿತಿಯನ್ನು ₹ 10 ಲಕ್ಷಕ್ಕೆ ನಿಗದಿ ಪಡಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಬಂದಿದೆ. ಐಸಿಐಸಿಐ ಬ್ಯಾಂಕ್ ಆರಂಭಿಕ ಐದು ವಹಿವಾಟಿಗೆ ಯಾವುದೇ ಶುಲ್ಕ ವಿಧಿಸದೇ ನಂತರ ವಹಿವಾಟಿಗೆ ಶುಲ್ಕ ವಿಧಿಸಲು ನಿರ್ಧರಿಸಿದೆ. ಐದು ಬಾರಿ ವಹಿವಾಟಿನ ನಂತರದ ಎಲ್ಲ ವಹಿವಾಟಿಗೆ ಒಟ್ಟಿಗೆ ₹ 150 ಶುಲ್ಕ ವಿಧಿಸುವುದು ಅಥವಾ ಪ್ರತಿ ₹ 1000 ವಹಿವಾಟಿಗೆ ₹5 ಶುಲ್ಕ ವಿಧಿಸುವ ಬಗ್ಗೆ ಚರ್ಚೆ ನಡೆಸುತ್ತಿದೆ. ಈ ಬಗ್ಗೆ ಅಂತಿಮ ನಿರ್ಧಾರ ಇನ್ನಷ್ಟೇ ಹೊರಬರಬೇಕಿದೆ.

ಬ್ಯಾಂಕುಗಳು ಹೀಗೆ ನಗದು ವಹಿವಾಟಿಗೆ ಶುಲ್ಕ ವಿಧಿಸುವ ನಿರ್ಧಾರದಿಂದ, ನಮ್ಮ ಹಣವನ್ನು ಪಡೆಯಲು ಶುಲ್ಕ ಪಾವತಿಸಬೇಕೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಇದಕ್ಕೆ ಬ್ಯಾಂಕುಗಳು ನೀಡುವ ಸಮರ್ಥನೆ ಹೀಗಿದೆ… ‘ಈ ರೀತಿಯಾಗಿ ನಿರ್ದಿಷ್ಟ ಮಿತಿ ನಂತರದ ವಹಿವಾಟಿಗೆ ಶುಲ್ಕ ವಿಧಿಸುವುದರಿಂದ ಜನರು ನಗದು ವಹಿವಾಟಿನಿಂದ ಡಿಜಿಟಲ್ ವಹಿವಾಟಿನತ್ತ ಮುಖ ಮಾಡುವ ಸಾಧ್ಯತೆ ಹೆಚ್ಚಿದೆ. ನೋಟು ಅಮಾನ್ಯದ ನಂತರ ಉದ್ಭವಿಸಿದ್ದ ನಗದು ಕೊರತೆ ಸಮಸ್ಯೆ ಇನ್ನು ಮುಂದುವರೆದಿದ್ದು, ಈ ರೀತಿಯಾಗಿ ಶುಲ್ಕ ವಿಧಿಸಲು ಆರಂಭಿಸಿದರೆ ನಗದು ವ್ಯವಹಾರಕ್ಕೆ ಬ್ರೇಕ್ ಹಾಕಿದಂತಾಗಲಿದೆ. ಜನರು ಡಿಜಿಟಲ್ ವ್ಯವಹಾರಕ್ಕೆ ಹೊಂದಿಕೊಳ್ಳುತ್ತಿದ್ದಂತೆ ನಗದು ಚಲಾವಣೆ ಪ್ರಮಾಣ ಕಡಿಮೆಯಾಗಲಿದೆ.’

Leave a Reply