362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಕ್ಕೆ ಸರ್ಕಾರ ಅಸ್ತು- ಸಚಿವ ಸಂಪುಟದ ಪ್ರಮುಖ ನಿರ್ಧಾರಗಳು, ಡೈರಿ ಪ್ರಕರಣದ ಬಗ್ಗೆ ರಮೇಶ್ ಕುಮಾರ್ ಹೇಳಿದ್ದೇನು? ದಿನೇಶ್ ಗುಂಡೂರಾವ್ ವಿರುದ್ಧ ಎಫ್ಐಆರ್? ಶೂಟಿಂಗ್ ವಿಶ್ವಕಪ್: ಜಿತು ರೈಗೆ ಚಿನ್ನ

ಕೇರಳದಲ್ಲಿ ಹೆಚ್ಚಾಗಿರುವ ಕಮ್ಯುನಿಷ್ಟರ ಹಿಂಸಾಚಾರ ಹಾಗೂ ದೌರ್ಜನ್ಯವನ್ನು ವಿರೋಧಿಸಿ ರಾಜ್ಯ ಬಿಜೆಪಿ ಬುಧವಾರ ಬೆಂಗಳೂರಿನ ಟೌನ್ ಹಾಲ್ ವೃತ್ತದ ಬಳಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ.

ಡಿಜಿಟಲ್ ಕನ್ನಡ ಟೀಮ್:

2011ನೇ ಸಾಲಿನ 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ನ್ಯಾಯ ಮಂಡಳಿ (ಕೆಎಟಿ) ನೀಡಿರುವ ಆದೇಶಕ್ಕೆ ಬದ್ಧವಾಗಿ ಈ ಅಧಿಕಾರಿಗಳ ನೇಮಕಾತಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವಾಗಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ನಂತರ ಮಾಧ್ಯಮಗಳ ಜತೆ ಮಾತನಾಡಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ‘ಕೆಎಟಿ ಅಕ್ಟೋಬರ್ 2016ರಲ್ಲಿ ನೀಡಿರುವ ತೀರ್ಪಿಗೆ ತಲೆಬಾಗಿ ಪ್ರೊಬೆಷನರಿ ಹುದ್ದೆಗಳಿಗೆ ಆಯ್ಕೆಗೊಂಡವರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಆಡಳಿತದ ದೃಷ್ಟಿಯಿಂದ ಸರ್ಕಾರ ಇಂತಹ ತೀರ್ಮಾನವನ್ನು ಕೈಗೊಂಡಿದೆ. ಭಾರೀ ಪ್ರಮಾಣದಲ್ಲಿ ಕೆಎಎಸ್ ಹಿರಿಯ ಮತ್ತು ಕಿರಿಯ ಶ್ರೇಣಿ ಹುದ್ದೆಗಳು ಖಾಲಿ ಉಳಿದಿದ್ದು, ದೈನಂದಿನ ಆಡಳಿತಕ್ಕೆ ತೊಂದರೆಯಾಗಿದೆ. ನೇಮಕಾತಿ ಆದೇಶ ನೀಡದಿದ್ದರೆ 2014ರಲ್ಲಿ ಆಯ್ಕೆಯಾದವರಿಗೂ ನೇಮಕಾತಿ ಆದೇಶ ನೀಡಲು ಸಾಧ್ಯವಿಲ್ಲ. ಇದರಿಂದ ಭಾರಿ ಹುದ್ದೆಗಳು ಖಾಲಿ ಉಳಿಯಲಿವೆ. ಇದನ್ನು ತಪ್ಪಿಸುವ ಮತ್ತು ನ್ಯಾಯಾಲಯದ ಆದೇಶಕ್ಕೆ ಗೌರವ ಕೊಡುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದರು.

ಇನ್ನುಳಿದಂತೆ ಸಚಿವ ಸಂಪುಟದ ಪ್ರಮುಖ ನಿರ್ಧಾರಗಳು…

  • ನಂಜನಗೂಡು ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಆ ತಾಲೂಕಿನ ಹುರ ಮತ್ತು ಇತರೆ 25 ಕೆರೆಗಳಿಗೆ ಕಬಿನಿ ನದಿಯಿಂದ ನೀರು ತುಂಬಿಸಲು ಸಚಿವ ಸಂಪುಟ ನಿರ್ಧರಿಸಿದೆ.
  • ಜಲ ಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ 1900 ಹಿರಿಯ ಮತ್ತು ಕಿರಿಯ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅನುಮೋದನೆ. ಇದರಿಂದ 1200 ಕಿರಿಯ ಹಾಗೂ 700 ಹಿರಿಯ ಇಂಜಿನಿಯರ್ಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಅವಕಾಶ.
  • ಕೈಗಾರಿಕೆಗಳಿಗೆ ನೀಡಲಾಗುವ ಭೂಮಿಯನ್ನು 99 ವರ್ಷಗಳಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ಸಂಪುಟ ತೀರ್ಮಾನಿಸಿದೆ. ಇದರಿಂದ ರಿಯಲ್ ಎಸ್ಟೇಟ್ ದಂಧೆ ತಪ್ಪಿಸಲು ಈ ರೀತಿಯಾಗಿ ನಿರ್ಧರಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ದಿಮೆಗಳು ಹಾಗೂ ಸಾರ್ಮಜನಿಕ ಉದ್ದಿಮೆಗಳಿಗೆ ಈ ಒಪ್ಪಂದ ಅನ್ವಯಿಸುವುದಿಲ್ಲ.
  • ನ್ಯಾಯಾಲಯದ ಆದೇಶ ಮತ್ತು ಶಿಕ್ಷಣ ಸಂಸ್ಥೆಗಳ ಮನವಿಗೆ ಸ್ಪಂದಿಸಿ ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ 2017-18ನೇ ಸಾಲಿನಲ್ಲಿ ಪ್ರವೇಶ ನೀಡುವ ವಿದ್ಯಾರ್ಥಿ ಶುಲ್ಕವನ್ನು ಹೆಚ್ಚಿಸಲು ನಿರ್ಧಾರ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ₹ 425 ಕೋಟಿ ಹೊರೆ ಬೀಳಲಿದೆ.

ಐಟಿ ಇಲಾಖೆ ಡೈರಿ ಬಿಡುಗಡೆ ಮಾಡಿದ್ರೆ ಸಿಎಂ ರಾಜಿನಾಮೆಗೆ ಸಲಹೆ: ರಮೇಶ್ ಕುಮಾರ್

ಗೋವಿಂದರಾಜು ಡೈರಿಯನ್ನು ತೆರಿಗೆ ಇಲಾಖೆ ಬಿಡುಗಡೆ ಮಾಡಿದರೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವಂತೆ ಸಿದ್ದರಾಮಯ್ಯ ಅವರಿಗೆ ನಾನೇ ಸಲಹೆ ನೀಡುತ್ತೇನೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ತಿಳಿಸಿದ್ದಾರೆ. ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಅಧಿಕಾರ ನಡೆಸುವ ಪಕ್ಷಗಳು ಹೈಕಮಾಂಡಿಗೆ ಕಪ್ಪ ಸಲ್ಲಿಸುವುದಿಲ್ಲ ಎಂದರೆ ಅದು ಆತ್ಮ ವಂಚನೆಯಾಗುತ್ತದೆ. ರಾಜಕೀಯದಲ್ಲಿ ಕಪ್ಪ ಕೊಡುವ ಸಂಸ್ಕೃತಿಯೇ ಇಲ್ಲ ಎಂಬುದು ಸರಿಯಲ್ಲ. ಆದರೆ ಗೋವಿಂದರಾಜು ಅವರ ಬಳಿ ಡೈರಿ ಸಿಕ್ಕಿದೆ, ಅದರಲ್ಲಿ ಸಿದ್ದರಾಮಯ್ಯ ಅವರು ಹೈ ಕಮಾಂಡಿಗೆ ₹ 1 ಸಾವಿರ ಕೋಟಿ ಕೊಟ್ಟಿದ್ದಾರೆ ಎಂಬ ಆರೋಪ ಸುಳ್ಳು. ಈ ಡೈರಿಯನ್ನು ಐಟಿ ಇಲಾಖೆ ಅಧಿಕೃತವಾಗಿ ಬಿಡುಗಡೆ ಮಾಡಬೇಕೇ ಹೊರತು ಯಡಿಯೂರಪ್ಪ ಅಲ್ಲ. ಹೀಗಾಗಿ ಅದರಲ್ಲಿ ಹುರುಳಿಲ್ಲ. ಒಂದು ವೇಳೆ ಐಟಿ ಇಲಾಖೆ ಈ ಡೈರಿ ಬಿಡುಗಡೆ ಮಾಡಿ, ಇದರಲ್ಲಿರುವುದು ನಿಜ ಎಂದು ಹೇಳಿದರೆ ನಾನು ಹಾಗೂ ಸಿದ್ದರಾಮಯ್ಯ ಇಬ್ಬರೂ ರಾಜ್ಯಪಾಲರ ಬಳಿ ಹೋಗಿ ರಾಜಿನಾಮೆ ಕೊಡುತ್ತೇವೆ’ ಎಂದರು.

ದಿನೇಶ್ ಗುಂಡುರಾವ್ ವಿರುದ್ಧ ಎಫ್ಐಆರ್

ತಮ್ಮ ವಿರುದ್ಧ ನಕಲಿ ಡೈರಿ ಆರೋಪ ಮಾಡಿದ್ದಾರೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್ ಅವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡುರಾವ್ ಅವರ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಸಂಜಯ್ ನಗರದ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.

ಬಿಎಸ್ ವೈ ವಿರುದ್ಧ ಸಿದ್ದರಾಮಯ್ಯ ಕಿಡಿ

ಹೈಕಮಾಂಡಿಗೆ ಕಪ್ಪ ಹಣ ನೀಡಿರುವ ವಿಚಾರದಲ್ಲಿ ತಮ್ಮ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಷ್ಟ್ರ ಕಂಡ ಅತ್ಯಂತ ಭ್ರಷ್ಟ ರಾಜಕಾರಣಿ ಯಡಿಯೂರಪ್ಪ. ಅವರಿಗೆ ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡುವ ಯಾವುದೇ ನೈತಿಕತೆ ಇಲ್ಲ. ಇದನ್ನು ನಾನೊಬ್ಬ ಹೇಳುತ್ತಿಲ್ಲ. ಇಡೀ ನಾಡೇ ಹೇಳುತ್ತದೆ. ಅಂತಹವರು ಮತ್ತೊಬ್ಬರನ್ನು ಭ್ರಷ್ಟರೆಂದು ಟೀಕಿಸುವುದು ಸರಿಯಲ್ಲ. ಯಡಿಯೂರಪ್ಪನವರ ಕಾಲಾವಧಿಯಲ್ಲಿ ಏನೇನು ನಡೆಯಿತು. ಆ ಸಂದರ್ಭದಲ್ಲಿ ಅವರು ಯಾವ ರೀತಿ ನಡೆದುಕೊಂಡರು ಎಂಬುದು ಜನರಿಗೆ ಗೊತ್ತಿದೆ’ ಎಂದರು.

ಜಿತು ರೈಗೆ ಚಿನ್ನ

ಭಾರತದ ಯುವ ಶೂಟಿಂಗ್ ತಾರೆ ಜಿತು ರೈ ಐಎಸ್ಎಸ್ಎಫ್ ವಿಶ್ವಕಪ್ ನಲ್ಲಿ ದಾಖಲೆಯ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್ ನ 50 ಮೀ.ಪಿಸ್ತೂಲ್ ವಿಭಾಗದಲ್ಲಿ ಸ್ವರ್ಣಕ್ಕೆ ಕೊರಳೊಡ್ಡಿದ್ದಾರೆ. ಆ ಮೂಲಕ ಈ ಸ್ಪರ್ಧೆಯಲ್ಲಿ ಭಾರತ ಮೊದಲ ಚಿನ್ನ ಗೆದ್ದುಕೊಂಡಂತಾಗಿದೆ.

ನಿನ್ನೆಯಷ್ಟೇ 10 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದ ಜಿತು, ಇಂದು ಅತ್ಯುತ್ತಮ ಪ್ರದರ್ಶನದ ಮೂಲಕ ಅಗ್ರಸ್ಥಾನ ಪಡೆದಿದ್ದಾರೆ. ಭಾರತದ ಮತ್ತೋರ್ವ ಶೂಟರ್ ಅಮನ್ ಪ್ರೀತ್ ಸಿಂಗ್ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದಿದ್ದಾರೆ.

ಇಂದಿನ ಸ್ಪರ್ಧೆಯಲ್ಲಿ ಜಿತು ರೈ ದಾಖಲೆಯ 230.1 ಅಂಕಗಳನ್ನು ಸಂಪಾದಿಸುವ ಮೂಲಕ ಪೊಡಿಯಂನಲ್ಲಿ ಮೊದಲ ಸ್ಥಾನ ಪಡೆದರು. ಅಮನ್ ಪ್ರೀತ್ ಸಿಂಗ್ 226.9 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನದಲ್ಲಿದ್ದರೆ, ಇರಾನಿನ ವಾಹಿದ್ ಗೊಲ್ಕಂಡನ್ 208.0 ಅಂಕಗಳ ಮೂಲಕ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಪಡೆದರು.

Leave a Reply