ಕನ್ಸಾಸ್ ಶೂಟೌಟ್ ಖಂಡಿಸುತ್ತಲೇ, ವಲಸೆ ನೀತಿ ಸುಧಾರಣೆಗೆ ಬದ್ಧ ಎಂದ ಟ್ರಂಪ್

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗೆ ಕನ್ಸಾಸ್ ನಲ್ಲಿ ನಡೆದ ಜನಾಂಗೀಯ ದಾಳಿಯಲ್ಲಿ ಭಾರತೀಯ ಇಂಜಿನಿಯರ್ ಶೂಟೌಟ್ ಪ್ರಕರಣವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸಿದ್ದಾರೆ. ಜತೆಗೆ ವಲಸಿಗರ ವಿರುದ್ಧದ ತಮ್ಮ ನಿಲುವನ್ನು ಸಡಿಲಗೊಳಿಸಿದ್ದು, ಶೀಘ್ರದಲ್ಲೇ ವಲಸಿಗರ ನೀತಿಯನ್ನು ಸುಧಾರಣೆ ತರುವುದಾಗಿ ಟ್ರಂಪ್ ತಿಳಿಸಿದ್ದಾರೆ.

ಈ ವರ್ಷ ಜನವರಿಯಲ್ಲಿ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಟ್ರಂಪ್ ಇದೇ ಮೊದಲ ಬಾರಿಗೆ ಅಮೆರಿಕ ಸಂಸತ್ತಿನಲ್ಲಿ ಭಾಷಣ ಮಾಡಿದ್ದು, ‘ಯಹೂದಿ ಕೇಂದ್ರಗಳ ಮೇಲೆ ಹಾಗೂ ಕನ್ಸಾಸ್ ಶೂಟೌಟ್ ನಂತಹ ದ್ವೇಷಪೂರಿತ ದಾಳಿಯನ್ನು ನಾವು ಖಂಡಿಸುತ್ತೇವೆ. ಭಾರತೀಯರನ್ನು ಗುಂಡಿಕ್ಕಿ ಹತ್ಯೆ ಮಾಡುವುದು ದೇಶದ ಹಿತಾಸಕ್ತಿಗೆ ಉತ್ತಮವಲ್ಲ’ ಎಂದಿದ್ದಾರೆ. ಇದೇವೇಳೆ ಶೂಟೌಟಿನಲ್ಲಿ ಹತ್ಯೆಯಾದ ಭಾರತೀಯ ಇಂಜಿನಿಯರ್ ಶ್ರೀನಿವಾಸ್ ಕುಚಿಬೋಟ್ಲ ಅವರಿಗೆ ಅಮೆರಿಕ ಸಂಸತ್ತಿನಲ್ಲಿ ಒಂದು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು.

ಅಮೆರಿಕ ಸಂಸತ್ತಿನಲ್ಲಿ ಟ್ರಂಪ್ ಅವರ ಭಾಷಣದ ಮತ್ತೊಂದು ಪ್ರಮುಖ ಅಂಶ ಎಂದರೆ ವಲಸೆ ನೀತಿಯ ಬಗ್ಗೆ ಅವರು ಆಡಿದ ಮಾತುಗಳು. ‘ನಾವು ಶಾಂತಿ ಹಾಗೂ ಸಹಬಾಳ್ವೆಯನ್ನು ಬಯಸುತ್ತೇವೆ ಹೊರತು ಯುದ್ಧ ಅಥವಾ ಸಂಘರ್ಷವನ್ನಲ್ಲ. ಸಕಾರಾತ್ಮಕ ವಲಸೆ ನೀತಿ ಸುಧಾರಣೆಗೆ ಅವಕಾಶವಿದೆ ಎಂಬುದನ್ನು ನಾನು ನಂಬಿದ್ದೇನೆ. ನಾವು ಅರ್ಹತೆ ಹಾಗೂ ಕೌಶಲ್ಯ ಆಧಾರದ ಮೇಲೆ ವಲಸಿಗರನ್ನು ದೇಶದೊಳಗೆ ಪ್ರವೇಶಿಸಲು ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ನಮ್ಮ ದೇಶದ ನಾಗರೀಕರಿಗೆ ವೇತನ ಹೆಚ್ಚಿಸಬೇಕು. ಆ ಮೂಲಕ ನಮ್ಮ ನಾಗರೀಕ ಸಮುದಾಯ ಸುರಕ್ಷಿತವಾಗಿರಬೇಕು. ಇನ್ನು ದೇಶದ ಭದ್ರತೆಯನ್ನು ಬಿಗಿಗೊಳಿಸಬೇಕು. ಅದರ ಜತೆಗೆ ನಮ್ಮ ಕಾನೂನಿನ ಮೇಲೆ ಜನರಲ್ಲಿ ಗೌರವ ಮೂಡುವಂತೆ ಮಾಡಬೇಕು. ಆಗ ಮಾತ್ರ ನಮ್ಮ ಗುರಿ ಸಾಧಿಸಲು ಸಾಧ್ಯ’ ಎಂದರು.

ಇದೇ ವೇಳೆ ಇಸ್ಲಾಮಿಕ್ ಸಂಘಟನೆ ಉಗ್ರವಾದದ ಬಗ್ಗೆ ಕಿಡಿಕಾರಿದ ಟ್ರಂಪ್, ‘ನಾವು ಇಸ್ಲಾಮಿಕ್ ಉಗ್ರವಾದದಿಂದ ದೇಶವನ್ನು ರಕ್ಷಿಸಿಕೊಳ್ಳಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ. ಐಎಸ್ಐಎಸ್ ಉಗ್ರರು ಮುಸಲ್ಮಾನರು, ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲಾ ಧರ್ಮದವರನ್ನು ಹತ್ಯೆ ಮಾಡುತ್ತಿದ್ದಾರೆ. ಹೀಗಾಗಿ ನಾವು ನಮ್ಮ ಸ್ನೇಹಿತರಾಗಿರುವ ಮುಸ್ಲಿಂ ರಾಷ್ಟ್ರಗಳ ಸಹಕಾರದೊಂದಿಗೆ ಈ ಉಗ್ರ ಸಂಘಟನೆಯನ್ನು ನಿರ್ಮೂಲನೆ ಮಾಡಲು ಇಚ್ಛಿಸುತ್ತೇವೆ’ ಎಂದರು.

ಒಟ್ಟಿನಲ್ಲಿ ಕಳೆದ ಒಂದು ತಿಂಗಳ ಟ್ರಂಪ್ ಅಧಿಕಾರ ಅವಧಿಯಲ್ಲಿ ಏಳು ಮುಸ್ಲಿಂ ರಾಷ್ಟ್ರಗಳ ಮೇಲಿನ ತಾತ್ಕಾಲಿಕ ನಿಷೇಧದ ನಿರ್ಧಾರ ಸಾಕಷ್ಟು ವಿವಾದ ಉದ್ಭವಿಸಿದ ನಂತರ ಟ್ರಂಪ್ ಈ ವಿಷಯವಾಗಿ ತಮ್ಮ ನಿಲುವನ್ನು ಸಡಿಲಗೊಳಿಸಿರುವುದು ಅವರ ಮಾತುಗಳಲ್ಲಿ ಸ್ಪಷ್ಟವಾಗಿದೆ.

Leave a Reply