ಗೆದ್ದಿದ್ದು ನನ್ನ ಹಾರ್ಡ್ವರ್ಕ್ ವಿನಃ ಹಾರ್ವರ್ಡ್ ಅರ್ಥಶಾಸ್ತ್ರವಲ್ಲ: ಮೋದಿ ಡೈಲಾಗ್, ಇತ್ತ ಡಿಡಿಎಲ್ಜೆ ಗುಂಗಲ್ಲಿ ರಾಹುಲ್ ಕಲಸುಮೇಲೋಗರ!

ಡಿಜಿಟಲ್ ಕನ್ನಡ ಟೀಮ್:

ಉತ್ತರ ಪ್ರದೇಶದ ಚುನಾವಣಾ ಕಣ ಕೇವಲ ವಿಸ್ತಾರದ ಸವಾಲನ್ನಷ್ಟೇ ಹೊಂದಿಲ್ಲ, ಸಂದೇಶ ನೀಡಿಕೆಯ ವಿಶಿಷ್ಟತೆ ಮೆರೆಯಬೇಕಾದ ಸವಾಲನ್ನೂ ಹೊಂದಿದೆ.

ಕೈಗಾರಿಕಾ ಬೆಳವಣಿಗೆ, ಉದ್ಯೋಗ ನೀಡಿಕೆ ಇವನ್ನೆಲ್ಲ ಅಂಕಿಅಂಶದ ಮೂಲಕ ಹೇಳುತ್ತ ವಾದ-ಪ್ರತಿವಾದ ಮಾಡಿದರೆ ಅಲ್ಲಿನ ಜನಮಾನಸವನ್ನು ನಾಟುವುದು ಕಷ್ಟ. ಏಕೆಂದರೆ ಅಲ್ಲಿನ ಮತದಾರ ಇನ್ನೂ ಪ್ರಾಥಮಿಕ ಹಂತದ ಅಭಿವೃದ್ಧಿಗೆ ಮುಖವಾಗಬೇಕಿರುವಾತ. ಹಾಗೆಂದೇ ಅಲ್ಲಿ ಚತುರ ಸಂಭಾಷೆಣೆಗಳ ಮೂಲಕ ತಮ್ಮ ಗುಣವನ್ನೂ ಎದುರಾಳಿಯ ಅವಗುಣಗಳನ್ನೂ ಹೇಳಲಾಗುತ್ತಿದೆ. ಈ ಹಂತದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ನೇತಾರರೆಲ್ಲ ಒಂದರ್ಥದಲ್ಲಿ ಸ್ಟ್ಯಾಂಡಪ್ ಕಮೆಡಿಯನ್ ಇಲ್ಲವೇ ಕುಶಾಲಿನ ಕತೆಗಾರರ ರೀತಿಯಲ್ಲೇ ತಮ್ಮನ್ನು ಪ್ರಸ್ತುತಪಡಿಸಿಕೊಳ್ಳುತ್ತಿದ್ದಾರೆ.

ಈ ಕಥಾಶೈಲಿಯಲ್ಲಿ ಎಂದಿನಂತೆ ನರೇಂದ್ರ ಮೋದಿ ಮುಂದಿದ್ದಾರೆ. ನಂತರದ ಚುರುಕು ಮಾತಿನ ಶ್ರೇಯಸ್ಸು ಅಖಿಲೇಶ್ ಯಾದವರಿಗೆ ಸಲ್ಲಬೇಕು. ಏನೋ ಪ್ರಯತ್ನ ಮಾಡಲು ಹೋಗಿ ಎಡವಟ್ಟು ಮಾಡಿಕೊಳ್ಳುತ್ತಿರುವ ಸಾಲಿನಲ್ಲಿ ರಾಹುಲ್ ಗಾಂಧಿ ಎಂದಿನಂತೆ ವಿರಾಜಮಾನರು. ಈ ಡೈಲಾಗ್ ಹೆಣೆಯುವಿಕೆಯ ಚಾಕಚಕ್ಯತೆಯಿಂದ ದೂರ ಉಳಿದಿರುವ ಮಾಯಾವತಿಯವರ ಪ್ರಚಾರ ಇದೇ ಕಾರಣಕ್ಕಾಗಿಯೇ ಮಾಧ್ಯಮದಲ್ಲಿ ಸುದ್ದಿಯನ್ನೇ ಸೃಷ್ಟಿಸುತ್ತಿಲ್ಲ.

ಉತ್ತರ ಪ್ರದೇಶದ ಫಲಿತಾಂಶ ಏನಾಗುತ್ತದೋ, ಆದರೆ ಪ್ರಚಾರಪರ್ವದಲ್ಲಿ ಸುದ್ದಿಯಲ್ಲಿರಬೇಕಾದರೆ ಕಾರ್ಯಸೂಚಿಯ ಅಂಶಗಳನ್ನು ರೋಚಕವಾಗಿ ಹೇಳುವ, ವಿರೋಧಿಯನ್ನು ಪ್ರಶ್ನಿಸುವಾಗಲೂ ಆಕರ್ಷಣೆ ಮೆರೆಯುವ ಕಲೆ ಇರಬೇಕೆಂಬುದು ನಿಚ್ಚಳವಾಗುತ್ತಿದೆ.

ನೋಟು ಅಮಾನ್ಯದ ಹೊರತಾಗಿಯೂ ದೇಶದ ಜಿಡಿಪಿ ಶೇ. 7ರ ದರವನ್ನೇ ಕಾಪಾಡಿಕೊಂಡಿದೆ ಎನ್ನುವುದನ್ನು ಬುಧವಾರ ತಮ್ಮ ಭಾಷಣದಲ್ಲಿ ನರೇಂದ್ರ ಮೋದಿ ಕಟ್ಟಿಕೊಟ್ಟ ರೀತಿ ಇಂಥ ಆಕರ್ಷಕ ಕಥಾ ಕೌಶಲಕ್ಕೊಂದು ಉದಾಹರಣೆ. ನೋಡಿ, ವಿದೇಶಿ ಹಾರ್ವರ್ಡ್ ಜ್ಞಾನಕ್ಕಿಂತ ನನ್ನ ಹಾರ್ಡ್ ವರ್ಕ್ ಗೆದ್ದಿದೆ ಅಂತ ಪದಗಳನ್ನು ಪೋಣಿಸಿ ಎದೆ ತಟ್ಟಿಕೊಂಡರು ಮೋದಿ. ಇದನ್ನು ಹೇಳುವಾಗ ಅವರು ವಾತಾವರಣವನ್ನು ರಂಗೇರಿಸಿದ ರೀತಿಯೂ ಕುತೂಹಲಕರವಾಗಿತ್ತು. ‘ನವೆಂಬರ್ 8ರ ರಾತ್ರಿ 8 ಗಂಟೆಗೆ ನಾನು ಪ್ಯಾರೇ ದೇಶ್ವಾಸಿಯೋ ಎಂದೆ. ಇಡೀ ದೇಶದ ಜನ ಎದ್ದುಕುಳಿತರು. 500-1000 ರುಪಾಯಿಗಳ ನೋಟು ರದ್ದಾಯಿತು.’

ಈ ಹಂತದಲ್ಲಿ ಜನರ ಚಪ್ಪಾಳೆ. ಮೋದಿ ಮುಂದಿನ ಮಾತು- ‘ಆದರೆ ವಿಪಕ್ಷದ ಹಲವರು ಮೋದಿ ಇದೇನು ಮಾಡಿಬಿಟ್ಟಿರಿ ಅಂತ ಕೇಳಿದರು. ಅರ್ಥವ್ಯವಸ್ಥೆ ಚೆನ್ನಾಗಿ ಸಾಗುತ್ತಿರಬೇಕಾದರೆ ಈ ಕ್ರಮ ಕೈಗೊಂಡಿರುವುದು ಜಿಡಿಪಿಗೆ ಮಾರಕ ಎಂದರು. ಕೆಲವರು ಇದರಿಂದ ಶೇ. 4ಕ್ಕೆ ಜಿಡಿಪಿ ಕುಸಿಯಲಿದೆ ಎಂದರು. ಇನ್ನು ಕೆಲವರು ಶೇ. 3.5ರ ಅಂಕಿ ನೀಡಿದರು. ಹೀಗೆ ಹೇಳಿದವರಲ್ಲಿ ಹಾರ್ವರ್ಡ್ ನಲ್ಲಿ ಓದಿದವರು, ಆಕ್ಸ್ಫರ್ಡ್ ನಲ್ಲಿ ಓದಿದವರು ಇದ್ದರು. ಆದರೆ ಜಿಡಿಪಿ ಇಳಿದಿಲ್ಲ. ಕೊನೆಗೂ ಸಾಬೀತಾಗಿದ್ದೆಂದರೆ ಹಾರ್ವರ್ಡಿಗಿಂತ ಈ ಬಡತಾಯಿಯ ಮಗನ ಹಾರ್ಡ್ ವರ್ಕ್ ಫಲ ಕೊಡುತ್ತಿದೆ.’

ಪ್ರಧಾನಿ ನರೇಂದ್ರ ಮೋದಿಗೆ ಆರ್ಥಿಕತೆ ಬಗ್ಗೆ ಏನೂ ಗೊತ್ತಿಲ್ಲ ಎಂದು ಟೀಕಿಸಿದ್ದ ಹಾರ್ವರ್ಡ್ ಪದವೀಧರ, ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರಿಗೆ ನೀಡಿದ ಉತ್ತರದಂತೆಯೂ ಇವೆ ಈ ಮಾತುಗಳು.

ಇನ್ನೊಂದೆಡೆ ರಾಹುಲ್ ಗಾಂಧಿ ಸಹ ಹೀಗೊಂದು ಆಕರ್ಷಣೆಯ ಕತೆ ಕಟ್ಟುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಆದರೆ ಸಮಸ್ಯೆ ಎಂದರೆ ನಿರಂತರತೆ ಇಲ್ಲ. ವಾರದ ಹಿಂದೆ ಹೇಳಿದ್ದು ಈಗ ಮರೆತಿರುತ್ತದೆ. ಅದು ವಿರೋಧಾಭಾಸಕ್ಕೂ ಕಾರಣವಾಗುತ್ತದೆ. ಉದಾಹರಣೆಗೆ ಮಂಗಳವಾರ ಅವರು ಮೋದಿ ಭರವಸೆಗಳನ್ನು ಟೀಕಿಸುತ್ತ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಚಿತ್ರಕ್ಕೆ ಹೋಲಿಸಿದರು. ಜನಮಾನಸವನ್ನು ಆಳುವ ಹಿಂದಿ ಚಿತ್ರಗಳ ಹೆಸರು ಬಳಸಿಕೊಂಡು ಜನರಿಗೆ ಸಂದೇಶ ಮುಟ್ಟಿಸೋದು ಒಳ್ಳೆಯ ಮಾದರಿಯೇ. ಆದರೆ ಅಲ್ಲಿಯೂ ಗೊಂದಲ. ಏಕೆಂದರೆ ಶಾರುಖ್ ಖಾನ್-ಕಾಜೋಲ್ ಅಭಿನಯದ ಡಿಡಿಎಲ್ಜೆ ಒಂದು ಕಾಲದಲ್ಲಿ ಜನರನ್ನು ಗೆದ್ದ ಚಿತ್ರ. ಅದನ್ನಿಟ್ಟುಕೊಂಡು ನಕಾರಾತ್ಮಕ ಟೀಕೆ ಮಾಡಲು ಹೋದರೆ ಜನರಿಗೆ ಗೊಂದಲವೇ ಕಾಡುತ್ತದೆ. ಅಧಿಕಾರ ಸಿಕ್ಕರೆ ಉತ್ತರ ಪ್ರದೇಶವನ್ನು ಆಮೂಲಾಗ್ರ ಪರಿವರ್ತಿಸುವ ಮಾತನ್ನಾಡುತ್ತಿರುವ ಮೋದಿಯವರು ಡಿಡಿಎಲ್ಜೆಯಂಥ ಭ್ರಮೆಯನ್ನೇ ಸೃಷ್ಟಿಸುತ್ತಿದ್ದಾರೆ ಎಂಬುದು ರಾಹುಲ್ ಹೇಳಲು ಪ್ರಯತ್ನಿಸಿದ ಸಂದೇಶ. ಆದರೆ ಇದೇ ರಾಹುಲ್ ಗಾಂಧಿ ಎರಡು ವಾರದ ಹಿಂದಷ್ಟೆ ನರೇಂದ್ರ ಮೋದಿಯವರನ್ನು ಟೀಕಿಸುತ್ತ, ‘ಇವರ ಅಚ್ಛೇ ದಿನಗಳ ಭಾಷಣ ಕೇಳಿದ್ದ ಜನ ಡಿಡಿಎಲ್ಜೆ ಚಿತ್ರ ತೋರಿಸುತ್ತಾರೆ ಎಂದುಕೊಂಡರೆ ಕೊನೆಗೆ ಸಿಕ್ಕಿದ್ದು ಶೋಲೆಯ ಗಬ್ಬರ್ ಸಿಂಗ್’ ಎಂದಿದ್ದರು. ತಮಾಷೆ ನೋಡಿ. ಆಗ ಡಿಡಿಎಲ್ಜೆ ತೋರಿಸಬೇಕಾಗಿತ್ತೂ ಅಂತ ಬಯಸಿದವರೂ ಇವರೇ, ಈಗ ಅದೇ ಸಿನಿಮಾ ಹೆಸರಲ್ಲಿ ನಕಾರಾತ್ಮಕ ಉದಾಹರಣೆ ಹೇಳುತ್ತಿರುವವರೂ ಇವರೇ. ಅದೂ ಎರಡು ವಾರಗಳ ಅಂತರದಲ್ಲಿ. ಅಂದಮೇಲೆ ರಾಹುಲ್ ಗಾಂಧಿ ಮಾತುಗಳನ್ನು ಸಾಮಾನ್ಯರು ಹೇಗೆ ಅರ್ಥ ಮಾಡಿಕೊಂಡಾರು?

ಇಷ್ಟಾಗಿ, ‘ಮೋದಿಯವರೇ ರೈತರ ಸಾಲ ಮನ್ನಾ ಮಾಡಿ ಎಂದಿದ್ದಕ್ಕೆ ಅವರ ಉತ್ತರವೇನಿತ್ತು ಗೊತ್ತೇ’ ಎನ್ನುತ್ತ ಮೌನ ಪ್ರದರ್ಶನ ಮಾಡಿ ಜನರನ್ನು ಚಕಿತಗೊಳಿಸುವ ನಾಟಕೀಯತೆಯನ್ನೂ ರಾಹುಲ್ ಗಾಂಧಿ ಪ್ರಯತ್ನಿಸಿದರು.

ಇದ್ದಿದ್ದರಲ್ಲಿ ಅಖಿಲೇಶ್ ಯಾದವ್ ಆಕರ್ಷಕ ಪ್ರತಿಮಾತುಗಳನ್ನಾಡುವ ಕೌಶಲ ಹೊಂದಿದ್ದಾರೆ. SCAM ಅಂದ್ರೆ ಸಮಾಜವಾದಿ, ಕಾಂಗ್ರೆಸ್, ಅಖಿಲೇಶ್, ಮಾಯಾವತಿ ಅಂತ ಮೋದಿ ವ್ಯಾಖ್ಯಾನಿಸಿದ್ದಕ್ಕೆ ಪ್ರತಿಯಾಗಿ ಅಖಿಲೇಶ್ ಹೇಳಿದ್ದು- SCAM ಅಂದ್ರೆ ಸೇವಿಂಗ್ ಕಂಟ್ರಿ ಫ್ರಾಮ್ ಅಮಿತ್ ಶಾ ಆ್ಯಂಡ್ ಮೋದಿ! ಇಲ್ಲೂ ಅತಿ ಪೆದ್ದಾಗಿ ಪ್ರತಿಕ್ರಿಯಿಸಿದ ಕುಖ್ಯಾತಿ ರಾಹುಲ್ ಗಾಂಧಿಗೇ ಸೇರುತ್ತದೆ. SCAM ಅಂದ್ರೆ ಸೇವೆ, ಕರೇಜ್, ಅಬಿಲಿಟಿ ಅಂತೆಲ್ಲ ಹೇಳಿ ಮತ್ತಷ್ಟು ಟೀಕೆ ಬರಮಾಡಿಕೊಂಡರು. ‘ನೋಟು ಅಮಾನ್ಯ ಹೆಸರಲ್ಲಿ ಜನಸಾಮಾನ್ಯರ ನೆಮ್ಮದಿ ಕಸಿದು ಸಾಲಿನಲ್ಲಿ ನಿಲ್ಲಿಸಿದರು ಮೋದಿ. ಈಗ ನೀವು ಮತದಾನದ ಸಾಲಿನಲ್ಲಿ ನಿಂತು ಸೇಡು ತೀರಿಸಿಕೊಳ್ಳಿ’ ಎಂಬ ಚಮತ್ಕಾರದ ಮಾತುಗಳು ಅಖಿಲೇಶ್ ಬಾಯಿಂದ ಬಂದವೇ ಹೊರತು ರಾಹುಲ್ ಕಡೆಯಿಂದಲ್ಲ.

‘ತಿಲಕ್, ತರಾಜು ಔರ್ ತಲ್ವಾರ್- ಇನ್ಕೊ ಮಾರೋ ಜೂತೆಚಾರ್’ ಎಂಬ ಘೋಷಮೆ ಮೂಲಕ ಮೇಲ್ವರ್ಗದವರಿಗೆ ಚಪ್ಪಲ್ಲಿಯಲ್ಲಿ ಹೊಡೆಯಲು ಪ್ರಚೋದಿಸಿದ ಬಿಎಸ್ಪಿ, ನಂತರದ ದಿನಗಳಲ್ಲಿ ‘ಹಾಥಿ ನಹೀ ಗಣೇಶ್ ಹೈ, ಬ್ರಹ್ಮ-ವಿಷ್ಣು-ಮಹೇಶ್ ಹೈ’ ಅಂತ ರಾಗ ಬದಲಿಸಿ ಎಲ್ಲರನ್ನೂ ಪುಸಲಾಯಿಸಿದ್ದ ಬಿಎಸ್ಪಿ ಈ ಬಾರಿ ಮಾತ್ರ ಮಾತಿನ ಮನೆ ಕಟ್ಟುವಲ್ಲಿ ಹಿಂದೆ ಸರಿದಿದೆ. ಭಾರತೀಯ ಜುಮ್ಲಾ ಪಾರ್ಟಿಯನ್ನು ನಂಬಬೇಡಿ ಅಂತ ಬಿಜೆಯನ್ನು ಮಾಯಾವತಿ ಟೀಕಿಸಿದ್ದು, ಮೋದಿ ತಮ್ಮ ಪ್ರಚಾರವೊಂದರಲ್ಲಿ ಬಿಎಸ್ಪಿ ಎಂದರೆ ಬೆಹನ್ಜಿ ಸಂಪತ್ತಿ ಪಾರ್ಟಿ ಅಂತ ಮರುಏಟು ನೀಡಿದ್ದು ಬಿಟ್ಟರೆ ಮಾಧ್ಯಮ ರಂಗದಲ್ಲಂತೂ ಮೋದಿ ವರ್ಸಸ್ ಅಖಿಲೇಶ್ ಮಾತುಗಾರಿಕೆಯೇ ರಂಗೇರಿದೆ.

ಮಾತಿನಿಂದಲೇ ಗೆಲ್ಲಲಾಗದು ಎಂಬುದು ನಿಜವಾದರೂ ಜನಮಾನಸದಲ್ಲಿ ಸಹಾನೂಭೂತಿ ಅಥವಾ ಉತ್ಕರ್ಷದ ಕತೆಯೊಂದನ್ನು ಅರಳಿಸುವಲ್ಲಿ ಮಾತುಗಾರಿಕೆ ಕಲೆ ಪ್ರಧಾನ ಪಾತ್ರವನ್ನೇ ವಹಿಸುತ್ತದೆ. ಚುನಾವಣಾ ಫಲಿತಾಂಶದಲ್ಲಿ ಮಾತಾಡದವರ ಕೈಯೇ ಮೇಲಾದರೆ ಆಗ ಈ ಮಾತು ಹಿಂದಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಕಾಯೋಣ…

Leave a Reply