ಕೇಂದ್ರ ಸರ್ಕಾರದಿಂದ ಈ ವರ್ಷ 2.80 ಲಕ್ಷ ಸಿಬ್ಬಂದಿ ನೇಮಕ! ತೆರಿಗೆ ಮತ್ತು ಅಬಕಾರಿ ಇಲಾಖೆಗೆ ಸಿಂಹಪಾಲು…

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಸರ್ಕಾರ ದೇಶದ ವಿದ್ಯಾವಂತ ಯುವಕರಿಗೆ ಸಂತಸದ ಸುದ್ದಿಯನ್ನು ಕೊಟ್ಟಿದೆ. ಅದೇನೆಂದರೆ ಈ ವರ್ಷ ವಿವಿಧ ಇಲಾಖೆಗಳಲ್ಲಿ ಬರೋಬ್ಬರಿ 2.80 ಲಕ್ಷ ಸಿಬ್ಬಂದಿ ನೇಮಕಕ್ಕೆ ನಿರ್ಧರಿಸಿದೆ. ಕಳೆದ ತಿಂಗಳು ನಡೆದ ಕೇಂದ್ರ ಬಜೆಟ್ ನಲ್ಲಿ ಈ ಸಿಬ್ಬಂದಿ ನೇಮಕಕ್ಕೆ ಒಪ್ಪಿಗೆ ಸಿಕ್ಕಿದ್ದು, ಉದ್ಯೋಗದ ನಿರೀಕ್ಷೆಯಲ್ಲಿದ್ದ ಪ್ರತಿಭಾನ್ವಿತರ ಮುಖದಲ್ಲಿ ಮಂದಹಾಸ ಮೂಡಿದೆ.

ಸರ್ಕಾರ ಈ ನಿರ್ಧಾರದಲ್ಲಿ ತೆರಿಗೆ ಇಲಾಖೆ, ಅಬಕಾರಿ ಇಲಾಖೆಗಳು ಇದರಲ್ಲಿ ಸಿಂಹಪಾಲು ಪಡೆಯಲಿವೆ. ನೋಟು ಅಮಾನ್ಯ ನಿರ್ಧಾರದ ನಂತರ ಕಪ್ಪುಹಣದ ವಿರುದ್ಧ ಸಮರ ಸಾರಲು ಮುಂದಾಗಿರುವ ಕೇಂದ್ರ ಸರ್ಕಾರ ತೆರಿಗೆ ಇಲಾಖೆಯ ಸಾಮರ್ಥ್ಯವನ್ನು ವಿಸ್ತರಿಸಲು ನಿರ್ಧರಿಸಿದೆ. ಅದರ ಪರಿಣಾಮವಾಗಿ ಸದ್ಯ ತೆರಿಗೆ ಇಲಾಖೆಯಲ್ಲಿರುವ 46 ಸಾವಿರ ಸಿಬ್ಬಂದಿ ಸಾಮರ್ಥ್ಯ, ಮಾರ್ಚ್ 2018ರ ವೇಳೆಗೆ 80 ಸಾವಿರಕ್ಕೆ ಹೆಚ್ಚಲಿದೆ. ಅದೇ ರೀತಿ ಅಬಕಾರಿ ಇಲಾಖೆಯು ಸದ್ಯವಿರುವ ಸಿಬ್ಬಂದಿ ಜತೆಗೆ ಹೆಚ್ಚುವರಿಯಾಗಿ 41 ಸಾವಿರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಿದೆ. ಆ ಮೂಲಕ ಈ ಇಲಾಖೆಯಲ್ಲಿನ ಸಿಬ್ಬಂದಿ ಸಂಖ್ಯೆ 50,600 ರಿಂದ 91,700ಕ್ಕೆ ಹೆಚ್ಚಾಗಲಿದೆ.

ಉಳಿದಂತೆ ಅಂತರಿಕ್ಷ, ಇಂಧನ, ಸಂಸದೀಯ ಕಾರ್ಯಾಲಯ ಹಾಗೂ ವಾರ್ತಾ ಮತ್ತು ಪ್ರಸರಣ ಇಲಾಖೆ ಹಾಗೂ ವಿದೇಶಾಂಗ ಇಲಾಖೆಗಳಲ್ಲಿ ಸಿಬ್ಬಂದಿಯ ಹೆಚ್ಚಳಕ್ಕೆ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಾಂಗ ನೀತಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ಈ ಇಲಾಖೆಯ ಬಲ ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ಇಲಾಖೆಯಲ್ಲಿ 2 ಸಾವಿರ ಸಿಬ್ಬಂದಿ ನೇಮಕಾತಿಗೆ ನಿರ್ಧರಿಸಲಾಗಿದ್ದು, ವಾರ್ತಾ ಮತ್ತು ಪ್ರಸರಣ ಇಲಾಖೆಯಲ್ಲಿ 2200, ಸಂಸದೀಯ ವ್ಯವಹಾರಗಳ ಕಾರ್ಯಾಲಯದಲ್ಲಿ 300 ಸಿಬ್ಬಂದಿ ನೇಮಕಾತಿಗೆ ಮುಂದಾಗಿದೆ.

ಕೇಂದ್ರ ಸರ್ಕಾರ 2016ರಲ್ಲೇ 1.88 ಲಕ್ಷ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಗುರಿ ಹೊಂದಿತ್ತಾದರೂ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿ ನೇಮಕಕ್ಕೆ ಸರ್ಕಾರ ನಿರ್ಧರಿಸಿದೆ.

2 COMMENTS

Leave a Reply