ಕಾಂಗ್ರೆಸ್ಸಿನ ಉಕ್ಕಿನ ಸೇತುವೆ ಕನಸನ್ನು ಕರಗಿಸಿತು ಬಿಜೆಪಿಯ ಡೈರಿ ಅಸ್ತ್ರ

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರಿನಲ್ಲಿ ವಿಮಾನ ನಿಲ್ದಾಣ ಮಾರ್ಗದ ಸಂಚಾರ ದಟ್ಟಣೆ ಕಡಿಮೆಗೊಳಿಸುವುದಕ್ಕೆ ನಿರ್ಮಿಸಲು ಯೋಜಿಸಿದ್ದ ಉಕ್ಕಿನ ಸೇತುವೆ ಯೋಜನೆಯನ್ನು ಕೈಬಿಡಲಾಗಿದೆ. ಇದರೊಂದಿಗೆ ಬಿಜೆಪಿ ಹೂಡಿದ್ದ ಡೈರಿ ಅಸ್ತ್ರಕ್ಕೆ ಕಾಂಗ್ರೆಸ್ ತುಸು ಕಂಪಿಸಿರುವುದು ಸ್ಪಷ್ಟವಾಗಿದೆ.

ಸಾವಿರಾರು ಮರಗಳ ಹನನ ಮಾಡಿ ಉಕ್ಕಿನ ಸೇತುವೆ ನಿರ್ಮಿಸುವುದು ಅಗತ್ಯವಿಲ್ಲದ್ದು ಎಂದು ಅನೇಕ ನಾಗರಿಕ ಹಿತರಕ್ಷಣೆ ಸಂಸ್ಥೆಗಳು ಪ್ರತಿಭಟಿಸಿದ್ದವು. ಇದನ್ನು ಪ್ರತಿಭಟಿಸುವಲ್ಲಿ ಬಿಜೆಪಿಯೂ ಜತೆಯಾಗಿತ್ತು. ತಾನು ಅಧಿಕಾರದಲ್ಲಿದ್ದಾಗ ಅನುಮೋದಿಸಿದ್ದ ಯೋಜನೆಯನ್ನು ವಿರೋಧಿಸುವಲ್ಲಿ ಬಿಜೆಪಿಯ ಬೂಟಾಟಿಕೆ ನಿಚ್ಚಳವೇ ಆಗಿದ್ದರೂ, ಉಕ್ಕಿನ ಸೇತುವೆ ಸುತ್ತ ಕಪ್ಪಕಾಣಿಕೆ ವ್ಯಾಖ್ಯಾನ ಕಟ್ಟುವಲ್ಲಿ ಅದು ಯಶಸ್ವಿಯಾಯಿತು.

ಜನರು ಸಹ ಕೇಳಲು ಶುರು ಮಾಡಿದ್ದ ಪ್ರಶ್ನೆ ಎಂದರೆ- ಇಷ್ಟೆಲ್ಲ ವಿರೋಧವನ್ನೂ ಲೆಕ್ಕಿಸದೇ ನಗರಾಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್ ಅವರು ಅದೇಕೆ ಉಕ್ಕಿನ ಸೇತುವೆ ಆಗಿಯೇ ಸಿದ್ಧ ಎಂಬ ಹಟಕ್ಕೆ ಬಿದ್ದಿದ್ದಾರೆ? ಈ ಯೋಜನೆ ವೆಚ್ಚದಲ್ಲಿ ಹಣ ಎತ್ತಿಟ್ಟು ಅದನ್ನು ಹೈಕಮಾಂಡಿಗೆ ಕಳುಹಿಸಲಾಗುತ್ತದೆಯೇ? ದೇಶದ ಬೇರೆಲ್ಲ ಪ್ರಮುಖ ವಿಧಾನಸಭೆಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ಸಿಗೆ ಸಂಪನ್ಮೂಲ ಸಂಗ್ರಹಿಸಿಕೊಡುವ ಶಕ್ತಿ ಕರ್ನಾಟಕಕ್ಕೆ ಮಾತ್ರವಿದೆಯಲ್ಲವೇ? ಇಂಥದೊಂದು ಒತ್ತಡ ಸಿದ್ದರಾಮಯ್ಯ ಸರ್ಕಾರದ ಮೇಲೆ ರೂಪುಗೊಂಡಿದೆಯೇ? ಇಂಥ ಎಲ್ಲ ಪ್ರಶ್ನೆಗಳೆದ್ದಿದ್ದವು. ಇಲ್ಲೆಲ್ಲೂ ಕಿಕ್ಬ್ಯಾಕ್ ಆಗುತ್ತಿರುವುದಕ್ಕೆ ಪುರಾವೆಗಳಿರದಿದ್ದರೂ ಇದೊಂದು ಗ್ರಹಿಕೆಯಾಗಿ ರೂಪುಗೊಂಡು ಕಾಂಗ್ರೆಸ್ಸನ್ನು ಚುಚ್ಚತೊಡಗಿತು.

ಅಷ್ಟಾಗಿಯೂ ಈ ವಿಷಯದಲ್ಲಿ ಉಕ್ಕಿನ ಸೇತುವೆ ಮಾಡಿಯೇ ಸಿದ್ಧ ಎಂಬ ನಿಲುವಿಗೇ ಕಾಂಗ್ರೆಸ್ ಅಂಟಿಕೊಂಡಿತ್ತು. ಇದೀಗ ಗುರುವಾರ ಈ ಯೋಜನೆ ಕೈಬಿಟ್ಟಿರುವುದಾಗಿ ಘೋಷಿಸುತ್ತ ಸಚಿವ ಜಾರ್ಜ್ ಹೇಳುತ್ತಿರುವುದು- ‘ನಮ್ಮ ಪ್ರಾಮಾಣಿಕತೆಯನ್ನು ಸಾಬೀತುಪಡಿಸುವುದಕ್ಕೆ ಈ ಯೋಜನೆ ಕೈಬಿಟ್ಟಿದ್ದೇವೆ. ಒಂದು ರುಪಾಯಿ ಸಹ ಆಚೀಚೆ ಆಗದ ಈ ಯೋಜನೆಯಲ್ಲಿ ಕಿಕ್ಬ್ಯಾಕ್ ಸಲ್ಲಿಕೆಯಾಗುತ್ತಿದೆ ಎಂಬ ವೃಥಾ ಆರೋಪವನ್ನು ನಾವೇಕೆ ಹೊರೋಣ?’

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತ, ‘ಪ್ರಸ್ತಾವಿತ ಉಕ್ಕಿನ ಸೇತುವೆ ಕಾಂಗ್ರೆಸ್ಸಿನ ಭ್ರಷ್ಟಾಚಾರದ ಸ್ಮಾರಕ ಎಂದು ಪ್ರತಿಪಕ್ಷಗಳು ಬಿಂಬಿಸುತ್ತಿವೆ. ನಮ್ಮ ಉದ್ದೇಶ ಬೆಂಗಳೂರಿನ ಅಭಿವೃದ್ಧಿಯಾಗಿರುವಾಗ ಸಲ್ಲದ ಆರೋಪಗಳನ್ನು ನಾವೇಕೆ ಹೊತ್ತುಕೊಳ್ಳೋಣ?’

ಹೀಗೆಲ್ಲ ಕಾಂಗ್ರೆಸ್ ಪ್ರತಿಕ್ರಿಯೆ ನೀಡುತ್ತಿದೆಯಾದರೂ ಒಂದಂತೂ ಬಹುಸ್ಪಷ್ಟ. ಹೀಗೊಂದು ಅಂತಿಮ ನಿರ್ಧಾರಕ್ಕೆ ಸರ್ಕಾರವನ್ನು ದೂಡಿದ್ದು ಎಂಎಲ್ಸಿ ಗೋವಿಂದರಾಜು ಅವರ ಡೈರಿ ಪ್ರಕರಣವೇ. ಐಟಿ ಇಲಾಖೆ ವಶಪಡಿಸಿಕೊಂಡಿರುವ ಡೈರಿಯಲ್ಲಿ ಕಾಂಗ್ರೆಸ್ಸಿನ ಹೈಕಮಾಂಡಿಗೆ ಕಪ್ಪಕಾಣಿಕೆ ಒಪ್ಪಿಸಿರುವ ಬಗ್ಗೆ ಲೆಕ್ಕಗಳಿವೆ ಎನ್ನಲಾಗಿದ್ದು ಈ ದಾಖಲೆಗಳನ್ನು ಬಿಜೆಪಿ ಬಿಡುಗಡೆ ಮಾಡಿತ್ತು. ಕಾಂಗ್ರೆಸ್ಸಿನ ರಾಜ್ಯ-ರಾಷ್ಟ್ರಮಟ್ಟದ ಧುರೀಣರ ಹೆಸರನ್ನು ಬಿಂಬಿಸುವ ಸಂಕೇತಾಕ್ಷರಗಳೂ ಇದರಲ್ಲಿದ್ದವು. ಈ ಡೈರಿಯ ಅಧಿಕೃತತೆ ಏನು? ಐಟಿ ದಾಖಲೆ ಯಡಿಯೂರಪ್ಪನವರಿಗೆ ಸಿಕ್ಕಿದ್ದು ಹೇಗೆ? ಸಂಕೇತಾಕ್ಷರಗಳಿದ್ದ ಮಾತ್ರಕ್ಕೆ ಇಂಥದೇ ವ್ಯಕ್ತಿಗಳು ಎನ್ನುವುದು ಹೇಗೆ? ಇಷ್ಟಕ್ಕೂ ಈ ಡೈರಿ ಕಾನೂನಿನ ಪ್ರಕಾರ ಮಾನ್ಯವಾಗುತ್ತದೆಯೇ… ಇಂಥ ಎಲ್ಲ ಪ್ರಶ್ನೆಗಳ ಮೂಲಕ ಪ್ರತಿಪಕ್ಷದ ಆರೋಪಗಳನ್ನು ಎದುರಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಿತಾದರೂ ಜನರ ಗ್ರಹಿಕೆಯೊಂದು ರೂಪುಗೊಳ್ಳುವುದನ್ನು ತಡೆಯಲಾಗಲಿಲ್ಲ. ಸಾಕ್ಷ್ಯ-ಸಾಬೀತು ಇವೆಲ್ಲವುಗಳ ಮಾತು ಆಮೇಲಿನದು. ಆದರೆ ವರ್ಷ ಜಾರಿದರೆ ಇರುವುದು ಚುನಾವಣೆ. ಈ ಹಂತದಲ್ಲಿ ಜನರ ಮನದಲ್ಲಿ ಅಶಂಕೆ-ಕುಹಕಗಳು ಎದ್ದರೆ ಆನಂತರ ಯಾವ ನ್ಯಾಯಾಲಯ ನಿರ್ದೋಶಿತ್ವದ ತೀರ್ಪಿತ್ತರೂ ಆಗಬೇಕಾದ ಹಾನಿ ಆಗಿಯೇಬಿಟ್ಟಿರುತ್ತದೆ.

ಇವನ್ನೆಲ್ಲ ಅಳೆದೂ ತೂಗಿ ಉಕ್ಕಿನ ಸೇತುವೆಯನ್ನು ಕೈಬಿಟ್ಟಿದೆ ಕಾಂಗ್ರೆಸ್ ಸರ್ಕಾರ. ಅಲ್ಲಿಗೆ ಡೈರಿಯ ಸಾಚಾತನ, ಅದರ ಕಾನೂನು ಮಹತ್ವ ಏನಿರಲಿ ಬಿಡಲಿ, ದಿನಚರಿ ಅಸ್ತ್ರದಿಂದ ಕಾಂಗ್ರೆಸ್ ತುಸು ಅಲುಗಾಡಿರುವುದಂತೂ ನಿಚ್ಚಳ.

Leave a Reply