ಮೇ- ಜೂನಿನಲ್ಲಿ ಕಾವೇರಿ ಭಾಗದ ನಗರಗಳಲ್ಲಿ ನೀರಿಗೆ ಹಾಹಾಕಾರ ಖಚಿತ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತೀವ್ರವಾಯ್ತು ಪೈಪೋಟಿ, ಬಿಎಸ್ ವೈ- ಸಿದ್ದು ನಡುವೆ ಮಾನನಷ್ಟ ಮೊಕದ್ದಮೆ ವಾಕ್ಸಮರ, ಕೇಂದ್ರದ ವಿರುದ್ಧ ಖರ್ಗೆ ಅಸಮಾಧಾನ, ಆರೆಸ್ಸೆಸ್ ನಾಯಕನ ಬೆದರಿಕೆ ವಿವಾದ

ಮಲ್ಲಿಕಾರ್ಜನ ಖರ್ಗೆ ಅವರ ನೇತೃತ್ವದ ಹೈದರಾಬಾದ್ – ಕರ್ನಾಟಕ ಭಾಗದ ಶಾಸಕರ ನಿಯೋಗ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಈ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿತು.

ಡಿಜಿಟಲ್ ಕನ್ನಡ ಟೀಮ್:

ಮೇ- ಜೂನಿನಲ್ಲಿ ನೀರಿಗೆ ಹಾಹಾಕಾರ

‘ಕಾವೇರಿ ನೀರನ್ನೇ ಅವಲಂಬಿಸಿರುವ ಪ್ರಮುಖ ನಗರ ಮತ್ತು ಪಟ್ಟಣಗಳಲ್ಲಿ ಮೇ ಹಾಗೂ ಜೂನ್ ತಿಂಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ. ಸದ್ಯ ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಆಣೆಕಟ್ಟುಗಳಲ್ಲಿ 11.75 ಟಿಎಂಸಿ ನಿರು ಮಾತ್ರ ಲಭ್ಯವಿದ್ದು, ಏಪ್ರಿಲ್ ಅಂತ್ಯದವರೆಗೂ ಕುಡಿಯುವ ನೀರಿಗೆ ಲಭ್ಯವಾಗಲಿದೆ. ಈ ವೇಳೆಗೆ ಮುಂಗಾರು ಆರಂಭವಾಗದಿದ್ದರೆ ಮೇ- ಜೂನ್ ತಿಂಗಳಲ್ಲಿ ಬೆಂಗಳೂರು, ಮೈಸೂರು ಮಂಡ್ಯ, ಚಾಮರಾಜನಗರದ ಹಲವು ಭಾಗ ಹಾಗೂ ಸುತ್ತಮುತ್ತಲ ನಗರಗಳಲ್ಲಿ ನೀರಿನ ಅಭಾವ ಎದುರಾಗಲಿದೆ…’ ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಅವರಿಗೆ ವಿವರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವರು, ‘ನೀರಿನ ಕೊರತೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣವೇ ಪ್ರತ್ಯೇಕ ಜಲಮೂಲಗಳನ್ನು ಗುರುತಿಸಿ, ಖಾಸಗಿ ಟ್ಯಾಂಕರುಗಳನ್ನು ತ್ಕಾಲಿಕವಾಗಿ ಸರ್ಕಾರದ ವಶಕ್ಕೆ ಪಡೆಯಿರಿ. ಜತೆಗೆ ಅನಿವಾರ್ಯವಾದರೆ ಜಲಾಶಯಗಳ ಡೆಡ್ ಸ್ಟೋರೆಜ್ ನೀರನ್ನು ಮೇಲೆತ್ತಿ ಬಳಸಿಕೊಳ್ಳಿ’ ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಬಾರಿ ಕೆಪಿಸಿಸಿ ಮುಖ್ಯಸ್ಥ ಸ್ಥಾನ ಬದಲಾವಣೆ ನಿಶ್ಚಿತ ಎಂಬ ಮಾತುಗಳು ಕೇಳಿಬಂದಿರುವ ಬೆನ್ನಲ್ಲೇ ಹಾಲಿ ಅಧ್ಯಕ್ಷ ಪರಮೇಶ್ವರ್ ಪರವಾಗಿ ಕೆಲವು ನಾಯಕರು ಬ್ಯಾಟಿಂಗ್ ಆರಂಭಿಸಿದ್ದಾರೆ. ಇನ್ನು ಈ ಸ್ಥಾನಕ್ಕೆ ಎಸ್.ಆರ್ ಪಾಟೀಲ್ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಫಾರಸ್ಸು ಮಾಡಿದ್ದರೆ, ಮತ್ತೊಂದೆಡೆ ಇಂಧನ ಸಚಿವ ಡಿ.ಕೆ ಶಿವಕುಮಾರ್ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಮುದ್ದಹನುಮೇಗೌಡ, ಶಾಸಕರಾದ ಕೆ.ಎನ್.ರಾಜಣ್ಣ, ಪಾವಗಡ ವೆಂಕಟರಮಣಪ್ಪ ಹಾಗೂ ರಫೀಕ್ ಅಹ್ಮದ್ ಪರಮೇಶ್ವರ್ ಪರ ಧ್ವನಿ ಎತ್ತಿದರು. ‘ಪರಮೇಶ್ವರ್ ಅವರು ಸಂಕಷ್ಟದ ಕಾಲದಲ್ಲಿ ಪಕ್ಷವನ್ನು ಕಟ್ಟಿದ್ದಾರೆ. ಹೀಗಾಗಿ ಅವರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು. ಕಳೆದ ಬಾರಿ ಚುನಾವಣೆಯಲ್ಲಿ ಅವರು ಸೋತಿದ್ದರೂ ಅವರ ನಾಯಕತ್ವದಲ್ಲಿ ನಾವು ಅಧಿಕಾರಕ್ಕೆ ಬಂದಿದ್ದೇವೆ. ಉಪಚುನಾವಣೆಗಳಲ್ಲಿ ಗೆದ್ದಿದ್ದೇವೆ’ ಎಂದರು.

ಇನ್ನು ಈ ಸ್ಥಾನ ಅಲಂಕರಿಸಲು ಮುಂದಾಗಿರುವ ಡಿ.ಕೆ ಶಿವಕುಮಾರ್ ಅವರಿಗೆ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ನಕಾರ ಎತ್ತಿದ್ದಾರೆ ಎಂದು ಹೇಳಲಾಗಿದೆ. ಡಿ.ಕೆ ಶಿವಕುಮಾರ್ ಒಕ್ಕಲಿಗರ ನಾಯಕರಲ್ಲ. ಕರ್ನಾಟಕದಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಎದುರು ಯಾವುದೇ ಒಕ್ಕಲಿಗ ನಾಯಕರನ್ನು ಮುಂಚೂಣಿಗೆ ತಂದು ನಿಲ್ಲಿಸಿದರೂ ಪಕ್ಷಕ್ಕೆ ಲಾಭವಾಗುವುದಿಲ್ಲ ಎಂದು ಹರಿಪ್ರಸಾದ್ ಹೈಕಮಾಂಡಿಗೆ ವಿವರಣೆ ನೀಡಿದ್ದಾರೆ. ಹೀಗಾಗಿ ವರಿಷ್ಟರು ಈ ವಿಷಯದಲ್ಲಿ ಮೌನ ವಹಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಬಿಎಸ್ ವೈ- ಸಿದ್ದು ನಡುವೆ ವಾಕ್ಸಮರ

ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿಕೆ ಕೊಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ವಿರುದ್ಧ ಗುಡುಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನಾನೂ ಕೂಡ ಯಡಿಯೂರಪ್ಪನವರ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ. ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗಾರರ ಜತೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಯಡಿಯೂರಪ್ಪ ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ದೇಶವೇ ಕಂಡಿರುವ ಭ್ರಷ್ಟ ರಾಜಕಾರಣಿ. ಅವರು ನನ್ನ ಮೇಲೂ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದ್ದಾರೆ. ನಾನೂ ಅದನ್ನು ರಾಜಕೀಯವಾಗಿಯೇ ತೆಗೆದುಕೊಳ್ಳುತ್ತೇನೆ. ಅವರು ಮಾನನಷ್ಟ ಮೊಕದ್ದಮೆ ಹೂಡಿದರೆ ನಾನೂ ಅವರ ಮೇಲೆ ಹೂಡಲು ಸಿದ್ಧ. ಪದೇ ಪದೇ ಯಡಿಯೂರಪ್ಪನವರ ವಿಚಾರ ಪ್ರಸ್ತಾಪಿಸುವುದನ್ನು ಬಿಡಿ’ ಎಂದು ಮಾಧ್ಯಮಗಳಿಗೆ ಸಲಹೆ ಕೊಟ್ಟರು.

ಕೇಂದ್ರದ ವಿರುದ್ಧ ಖರ್ಗೆ ಅಸಮಾಧಾನ

ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಕೇಂದ್ರ ಸರ್ಕಾರ ಸೂಕ್ತ ಅನುದಾನ ನೀಡಿಲ್ಲ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಹೈದರಾಬಾದ್ – ಕರ್ನಾಟಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಖರ್ಗೆ ಅವರು ಆ ಭಾಗದ ಅಭಿವೃದ್ಧಿ ಕೆಲಸಗಳು ಹಾಗೂ ವಿಶೇಷ ಯೋಜನೆಗಳ ಬಗ್ಗೆ ಚರ್ಚಿಸಿದರು. ಈ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮಳೆ ಇಲ್ಲದೆ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ಕಲ್ಪಿಸಲು ಕೇಂದ್ರ ಸರ್ಕಾರ ₹ 1780 ಕೋಟಿ ಮಂಜೂರು ಮಾಡಿದ್ದು, ಅದರಲ್ಲಿ ಕೇವಲ ₹450 ಕೋಟಿ ಮಾತ್ರ ಬಿಡುಗಡೆಯಾಗಿದೆ. ಈ ಕಡಿಮೆ ಪ್ರಮಾಣದ ಹಣದಲ್ಲಿ ರಾಜ್ಯಾದ್ಯಂತ ರೈತರು ಎದುರಿಸುತ್ತಿರುವ ಕಷ್ಟಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಕನಿಷ್ಠ ₹ 2 ಸಾವಿರ ಕೋಟಿ ನೀಡಿದ್ದರೆ ತಕ್ಕ ಮಟ್ಟಿಗೆ ರೈತರ ನೆರವಿಗೆ ನಿಲ್ಲಬಹುದಿತ್ತು’ ಎಂದರು.

ಕೇರಳ ಸಿಎಂ ಪಿಣರಾಯಿ ವಿಜಯನ್ ತಲೆಗೆ 1 ಕೋಟಿ ಬಹುಮಾನ!

ಕೇರಳದಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರ ಮೇಲೆ ಕಮ್ಯುನಿಷ್ಟರು ನಡೆಸುತ್ತಿರುವ ದೌರ್ಜನ್ಯವನ್ನು ವಿರೋಧಿಸಿರುವ ಮಧ್ಯ ಪ್ರದೇಶದ ಆರೆಸ್ಸೆಸ್ ನಾಯಕ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಲೆ ಕತ್ತರಿಸಿದವರೆಗಿ ₹ 1 ಕೋಟಿ ಬಹುಮಾನ ನೀಡುವುದಾಗಿ ಹೇಳಿ ವಿವಾದ ಸೃಷ್ಟಿಸಿದ್ದಾರೆ. ಉಜ್ಜೈನಿಯ ಆರೆಸ್ಸೆಸ್ ನಾಯಕ ಡಾ.ಚಂದ್ರಾವತ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದು, ವಿಜಯನ್ ಅವರ ತಲೆ ಕತ್ತರಿಸಿದವರಿಗೆ ಬಹುಮಾನ ನೀಡಲು ತನ್ನ ಎಲ್ಲಾ ಆಸ್ತಿಯನ್ನು ಮಾರಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.

Leave a Reply