ಚೈತನ್ಯ ಹೆಗಡೆ
‘ನಾವು ಚೀನಾ ನೆಲದಲ್ಲಿ ರಕ್ತವನ್ನು ನೀರಿನಂತೆ ಹರಿಸಲಿದ್ದೇವೆ’ ಇದು ಐಎಸ್ಐಎಸ್ ಜತೆ ಗುರುತಿಸಿಕೊಂಡಿರುವ ಉಯ್ಗರ್ ಪ್ರತ್ಯೇಕತಾವಾದಿಗಳು ನೀಡಿರುವ ವಿಡಿಯೋ ಸಂದೇಶ.
‘ರಾಜಕೀಯವಾಗಿ ಸರಿ ಹೇಳಿಕೆ’ಯನ್ನು ಬದಿಗಿಟ್ಟು ಮಾತನಾಡುವುದಾದರೆ ಚೀನಾಕ್ಕೆ ಇಂಥದೊಂದು ಹೊಡೆತ ಬೇಕಿತ್ತು. ಹಾಗಂದಮಾತ್ರಕ್ಕೆ ಐಎಸ್ಐಎಸ್ ಉಗ್ರ ಸಂಘಟನೆಯನ್ನು ಬೆಂಬಲಿಸುವ ಮಾತು ಇದಲ್ಲ. ಆದರೆ ಭಾರತವು ಉಗ್ರವಾದದಿಂದ ಉಂಡಿರುವ ನೋವಿನ ಬಗ್ಗೆ ತುಸುವೂ ಸಹಾನೂಭೂತಿ ಇಲ್ಲದೇ ಪಕ್ಕದ ಪಾಕಿಸ್ತಾನದೊಂದಿಗೆ ಸೇರಿಕೊಂಡು ಅಪಾಯಕಾರಿ ಜಾಗತಿಕ ಆಟಗಳನ್ನು ಹೆಣೆಯುತ್ತಿದ್ದ ಚೀನಾಕ್ಕೆ ಇಂಥದೊಂದು ಬೆದರಿಕೆ ಎಚ್ಚರಿಕೆ ಗಂಟೆಯಾಗಿ ಬೇಕಾಗಿತ್ತು. ಈಗ ಬಂದಿದೆ.
ಇತಿಹಾಸವನ್ನು ನೋಡಿದಾಗ ಉಗ್ರವಾದವನ್ನು ಉಪಯೋಗಿಸಿಕೊಂಡು ಜಾಗತಿಕ ಆಟಗಳನ್ನು ಆಡಹೊರಟ ಶಾಣ್ಯಾ ಶಕ್ತಿಗಳೆಲ್ಲ ಒದೆ ತಿಂದಿರುವುದು ನಿಚ್ಚಳ. ರಷ್ಯಾವನ್ನು ಹಣಿಯಬೇಕೆಂದು ಅಫಘಾನಿಸ್ತಾನದ ತಾಲಿಬಾನ್ ಅನ್ನು ಬೆಳೆಸಿದ ಅಮೆರಿಕ ನಂತರ ಅವರಿಂದಲೇ ಒದೆ ತಿಂತು. ಅದಾದ ನಂತರವೂ ಪಾಕಿಸ್ತಾನವನ್ನು ಬೆಂಬಲಿಸಿಕೊಂಡಿದ್ದ ಅಮೆರಿಕಕ್ಕೆ ಇತ್ತೀಚೆಗೆ ಅದರ ಅಪಾಯ ಅರಿವಾಗಿದೆ. ಅಂತೆಯೇ ಮಾರುಕಟ್ಟೆ ಶಕ್ತಿಯಾದ ಭಾರತದ ಜತೆ ಚೆನ್ನಾಗಿರಬೇಕಾದ ಅನಿವಾರ್ಯತೆಯೂ ಅದನ್ನು ಮೆತ್ತಗಾಗಿಸಿದೆ.
ಆದರೆ ಪಾಕಿಸ್ತಾನವು ಅಮೆರಿಕ ಮಿತ್ರತ್ವದ ಗಾಢತೆಯನ್ನು ಕಳೆದುಕೊಳ್ಳುವ ಹೊತ್ತಿಗೆಲ್ಲ ಚೀನಾ ಅದರ ಬೆನ್ನಿಗೆ ನಿಂತಿತು. ಈ ಹಿಂದೆಯೂ ಪಾಕಿಸ್ತಾನದ ಅಣ್ವಸ್ತ್ರ ಪರೀಕ್ಷೆಗಳಂಥ ಸಂದರ್ಭದಲ್ಲಿ ಚೀನಾವೇ ಬೆನ್ನಿಗೆ ನಿಂತಿದ್ದು. ಇಷ್ಟಕ್ಕೂ ಪಾಕಿಸ್ತಾನದ ಅಣ್ವಸ್ತ್ರ ಎಂಬಂಥ ಸಂಗತಿಯೇ ಇಲ್ಲ, ಅಲ್ಲೇನಿದ್ದರೂ ಚೀನಾ ಇಟ್ಟಿರುವ ಅಣ್ವಸ್ತ್ರವಿದೆ ಎಂಬ ಮಾತುಗಳೂ ಇವೆ. ಮಸೂದ್ ಅಜರನಂಥ ಪಾತಕಿಯನ್ನು ಅಂತಾರಾಷ್ಟ್ರೀಯ ಉಗ್ರನನ್ನಾಗಿಸಿ ನಿಷೇಧದ ಮೂಲಕ ಆತ ಶರಣಾಗಬೇಕಾದ ಸ್ಥಿತಿ ನಿರ್ಮಿಸುವಲ್ಲೂ ಭಾರತಕ್ಕೆ ಚೀನಾವೇ ಅಡ್ಡಗಾಲು ಹಾಕಿ ಕುಳಿತಿದೆ. ಅಮೆರಿಕದಂಥ ಅವಕಾಶವಾದಿ ರಾಷ್ಟ್ರ ಸಹ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನಕ್ಕೆ ಉಗ್ರವಾದವನ್ನು ಹತ್ತಿಕ್ಕುವಂತೆ ಹೇಳುತ್ತಿದ್ದರೆ, ಚೀನಾ ಮಾತ್ರ ಪಾಕಿಸ್ತಾನದ ನೆಲದಲ್ಲಿ ಅಂಥದ್ದೆಲ್ಲ ನಡೆಯುತ್ತಲೇ ಇಲ್ಲ ಎಂಬಂತೆ, ಜಾಗತಿಕವಾಗಿ ಅದಕ್ಕೆ ಬೆಂಬಲ ನೀಡುತ್ತ ತನ್ನ ರಾಜಕಾರಣದ ಬೇಳೆ ಬೆಯ್ಯಿಸಿಕೊಳ್ಳುತ್ತಿದೆ.
ಹೀಗಿರುವಾಗ ಐಎಸ್ಐಎಸ್ ಉಗ್ರಗಾಮಿ ಸಂಘಟನೆಗೆ ನಿಷ್ಠೆ ತೋರಿಸಿರುವ ಉಯ್ಗರ್ ಪ್ರತ್ಯೇಕತಾವಾದಿಗಳು ಇದೀಗ ವಿಡಿಯೋ ಒಂದರಲ್ಲಿ ‘ಚೀನಾದಲ್ಲಿ ರಕ್ತ ಹರಿಸಲಿದ್ದೇವೆ’ ಎಂದಿರುವುದು ನಮ್ಮ ಪಾಲಿಗಂತೂ ಪ್ರಮುಖ ವಿದ್ಯಮಾನ. ಉಗ್ರವಾದದ ನಿಗ್ರಹದಲ್ಲಿ ದ್ವಿಮುಖ ನೀತಿ ತೋರುವವರಿಗೆಲ್ಲ ಕಾಲುಬುಡ ಹೀಗೆಯೇ ಸುಡಬೇಕಿರುವುದು ಅವಶ್ಯ. ಇನ್ನಾದರೂ ಉಗ್ರವಾದದಿಂದ ಭಾರತ ಉಣ್ಣುತ್ತಿರುವ ನೋವು ಅರ್ಥವಾಗುತ್ತದೋ ಅಥವಾ ಉಗ್ರರು ನಿಮ್ಮ ಮೇಲೊಂದು ಬಾಂಬನ್ನೇ ಒಗೆಯಬೇಕೋ ಅಂತ ಕೇಳಬೇಕಾದ ಸರದಿ ನಮ್ಮದು.
ಇಷ್ಟಕ್ಕೂ ಚೀನಾಕ್ಕೆ ಎದುರಾಗಿರುವುದೂ ಇಸ್ಲಾಂ ಆಕ್ರಮಣವಾದದ ಸಮಸ್ಯೆಯೇ. ಇದು ಇವತ್ತಿಗೆ ಹುಟ್ಟಿದ್ದಲ್ಲ, ಆದರೆ ಇಷ್ಟರಮಟ್ಟಿಗೆ ಉಲ್ಬಣಿಸಿದೆ. ಚೀನಾದ ಕ್ಸಿನಿಯಾಂಗ್ ಪ್ರಾಂತ್ಯವು ಲಾಗಾಯ್ತಿನಿಂದ ಪ್ರತ್ಯೇಕತೆಯ ಕುದಿ ಇಟ್ಟುಕೊಂಡೇ ಬಂದಿದೆ. ಅಲ್ಲಿರುವವರು ಉಯ್ಗರ್ ಮುಸ್ಲಿಂ ಸಮುದಾಯದವರು. ತುರ್ಕ್ ಸಂಸ್ಕೃತಿಯೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವ ಇವರು ಚೀನಾಕ್ಕಿಂತ ಮಧ್ಯ ಏಷ್ಯಕ್ಕೆ ಸೇರುವವರು ನಾವು ಅಂತಲೇ ಪ್ರತಿಪಾದಿಸಿಕೊಂಡಿದ್ದಾರೆ. ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರ, ಮಂಗೋಲಿಯಾ, ರಷ್ಯಾ, ಕಿರ್ಗಿಸ್ತಾನ್, ತಜಕಿಸ್ತಾನ, ಅಫಘಾನಿಸ್ತಾನಗಳೊಂದಿಗೆ ಗಡಿ ಹಂಚಿಕೊಂಡಿರುವ ಈ ಪ್ರಾಂತ್ಯವನ್ನು ಇಸ್ಲಾಮಿಯರಿಗೆ ಬಿಟ್ಟುಕೊಡುವುದಕ್ಕೆ ಚೀನಾ ತಯಾರಿಲ್ಲ. ಒಂದು ಕಡೆ ಜಮ್ಮು-ಕಾಶ್ಮೀರವನ್ನು ವಿವಾದಿತ ಪ್ರದೇಶವೆಂಬಂತೆ ಕಂಡು ಆ ನಿಟ್ಟಿನಲ್ಲಿ ಪರೋಕ್ಷವಾಗಿ ಪಾಕಿಸ್ತಾನದ ಕೈಬಲಪಡಿಸುವುದರಲ್ಲೇ ತೊಡಗಿರುವ ಚೀನಾ, ಇನ್ನೊಂದೆಡೆ ಕ್ಸಿನಿಯಾಂಗ್ ನಲ್ಲಿ ತನ್ನ ಪ್ರಾಬಲ್ಯಕ್ಕಾಗಿ ಹೊಡೆದಾಡಿಕೊಂಡಿರುವುದು ಸೋಜಿಗ.
ಚೀನಾ ಅಂದರೆ ಗೊತ್ತಲ್ಲ. ಬೇರೆಯವರಂತೆ ಮಾನವ ಹಕ್ಕು, ಜಾಗತಿಕ ಅಭಿಪ್ರಾಯ ಇವಕ್ಕೆಲ್ಲ ತಲೆ ಕೆಡಿಸಿಕೊಳ್ಳದೇ ತನಗೇನು ಬೇಕೋ ಅದನ್ನು ಮಾಡುತ್ತದೆ. ಕ್ಸಿನಿಯಾಂಗಿನಲ್ಲೂ ಅಂಥದೇ ನಡೆ ಪ್ರದರ್ಶಿಸಿರುವ ವರದಿಗಳಿವೆ. ಮಧ್ಯ ಏಷ್ಯದ ಮುಸ್ಲಿಂ ರಾಷ್ಟ್ರಗಳ ಬೆಳವಣಿಗೆಯಿಂದ ಸ್ಫೂರ್ತಿ ಪಡೆದು ಯಾವಾಗ ಕ್ಸಿನಿಯಾಂಗ್ ಪ್ರತ್ಯೇಕತೆಯ ಕೂಗನ್ನು ಗಟ್ಟಿ ಮಾಡಿತೋ ಆಗಿನಿಂದಲೇ ಅಲ್ಲಿನ ಪ್ರಾದೇಶಿಕ ಜನಸಂಖ್ಯಾ ರಚನೆಯ ಮರುವಿನ್ಯಾಸಕ್ಕೆ ತೊಡಗಿಕೊಂಡಿತು ಚೀನಾ. ಹಾನ್ಸ್ ಚೀನಿಯರೆಂದು ಕರೆಯಲ್ಪಡುವ ಮುಖ್ಯನೆಲದ ಜನರ ಅಗಾಧ ವಲಸೆಗೆ ಅದು ಪ್ರೋತ್ಸಾಹಿಸಿತು. ಪರಿಣಾಮವಾಗಿ ಕ್ಸಿನಿಯಾಂಗಿನ ನಗರಗಳಲ್ಲಿ ಹಾನ್ಸ್ ಚೀನಿಯರು ಒಳ್ಳೊಳ್ಳೆ ಉದ್ಯೋಗ ಹಾಗೂ ಜೀವನಮಟ್ಟವನ್ನು ಪಡೆದರು. 2013ರ ವೇಳೆಗೆಲ್ಲ ಮುಸ್ಲಿಂ ಬಹುಸಂಖ್ಯಾತ ಕ್ಸಿನಿಯಾಂಗಿನಲ್ಲಿ ಹಾನ್ಸ್ ಚೀನಿ ಸಮುದಾಯ ಶೇ. 40ರ ಪ್ರಮಾಣದಲ್ಲಿ ನೆಲೆ ನಿಂತುಬಿಟ್ಟಿತ್ತು. ಅಲ್ಲಿನ ಧಾರ್ಮಿಕ ಆಚರಣೆಗಳಿಗೂ ನಿರ್ಬಂಧ ಹೇರಿತು ಕಮ್ಯುನಿಸ್ಟ್ ಚೀನಾ.
ಚೀನಾದಲ್ಲಿ ಸರ್ಕಾರಿ ಪ್ರಾಯೋಜಿತ ಮಾಧ್ಯಮಕ್ಕಲ್ಲದೇ ಬೇರೆಯವರಿಗೆ ಸೀಮಿತ ಅವಕಾಶಗಳಿರುವುದರಿಂದ ಇಂಥದ್ದೆಲ್ಲ ಜಾಗತಿಕ ಗಮನ ಸೆಳೆಯುವ ಸುದ್ದಿಯೇ ಆಗಲಿಲ್ಲ. ಇದೀಗ ಉಯ್ಗರ್ ಮುಸ್ಲಿಮರು ಐಎಸ್ಐಎಸ್ ಜತೆ ಕೈ ಸೇರಿಸಿ ರಕ್ತ ಹರಿಸುವ ಅವಾಜು ಹಾಕಿದ್ದಾರೆ.
ಅದು ಚೀನಾ ಇರಬಹುದು, ಅಮೆರಿಕವೇ ಆಗಿರಬಹುದು; ‘ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಯೋಗಿಸುತ್ತಿರುವುದು ಇಸ್ಲಾಂ ಪ್ರೇರಿತ ಉಗ್ರವಾದವನ್ನು ನೋಡ್ರಪ್ಪಾ’ ಅಂತ ಭಾರತ ಹೇಳಿದಾಗಲೆಲ್ಲ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಜಮ್ಮು-ಕಾಶ್ಮೀರದ ಸಾವು-ನೋವುಗಳೇನಿದ್ದರೂ ಭಾರತ ಮತ್ತು ಪಾಕಿಸ್ತಾನಗಳು ತಮ್ಮ ಗಡಿ ಇತ್ಯರ್ಥಪಡಿಸಿಕೊಳ್ಳುವ ಸಂಘರ್ಷದಲ್ಲಿ ಆಗುತ್ತಿರುವ ಪ್ರಮಾದ ಎಂಬಂತೆ ನೋಡಿಕೊಂಡುಬಂದವು. ಅಂಥ ಎಲ್ಲ ಮನಸ್ಥಿತಿಗಳಿಗೂ ಸರಿಯಾದ ಬರೆಯೇ ಬಿದ್ದಿದೆ.
‘ಚೀನಾ ಜನರ ಮಾತನ್ನು ಕೇಳುತ್ತಿಲ್ಲ. ಇದೋ ನಾವು ಖಾಲಿಫತ್ (ಇಸ್ಲಾಂ ಸಾಮ್ರಾಜ್ಯದ ಕಲ್ಪನೆ) ಯೋಧರು. ನಮ್ಮ ಶಸ್ತ್ರಗಳನ್ನೇ ನಾಲಗೆಯನ್ನಾಗಿಸಿ ರಕ್ತ ಹರಿಸಿ ದಮನಿತರ ಪರ ಸೇಡು ತೀರಿಸಿಕೊಳ್ಳಲಿದ್ದೇವೆ’ ಅಂತ ಜಿಹಾದಿ ವಿಡಿಯೋದಲ್ಲಿ ಅವಾಜು ಹಾಕಿದ್ದಾರೆ ಉಯ್ಗರ್ ಐಎಸ್ಐಎಸ್ ಉಗ್ರರು. ಇದು ಚೀನಾ ಬಹಿರಂಗವಾಗಿ ಎದುರಿಸುತ್ತಿರುವ ಮೊದಲ ಇಸ್ಲಾಂ ತೀವ್ರವಾದದ ಸವಾಲು ಅಂತ ವ್ಯಾಖ್ಯಾನಿಸಲಾಗುತ್ತಿದೆ. ಉಯ್ಗರ್ ಪ್ರತ್ಯೇಕತಾವಾದಿಗಳು ಕೆಲವರು ಸಿರಿಯಾದಲ್ಲಿ ಐಎಸ್ಐಎಸ್ ಪರ ಯುದ್ಧದಲ್ಲಿ ತೊಡಗಿಕೊಂಡಿರುವ ವರದಿಗಳೂ ಈ ಹಿಂದೆ ಬಂದಿದ್ದವು.
ನಾಜೂಕು ಆಕ್ರಮಣ ನೀತಿಯನ್ನೇ ಜಾಯಮಾನವಾಗಿಸಿಕೊಂಡು ಇತರರ ನೋವಿಗೆ ಕುರುಡಾಗಿರುವ ಚೀನಾ, ಕ್ಸಿನಿಯಾಂಗ್ ಎಂಬ ಹುಣ್ಣನ್ನು ಹೇಗೆ ವಾಸಿ ಮಾಡಿಕೊಳ್ಳುವುದೋ ನೋಡೋಣ. ಆ ನೆಲ ಇಸ್ಲಾಮಿಕ್ ಖಲೀಫತ್ ಗೆ ಹಸನಾಗುತ್ತಿರುವ ಹೊತ್ತಿನಲ್ಲಿ ಆ ಬಗ್ಗೆ ಆತಂಕ ಪಡುತ್ತಲೇ ಇನ್ನೊಂದೆಡೆ ಚೀನಾಕ್ಕೆ ಇಂಥದೊಂದು ಒದೆತ ಬೇಕಿತ್ತು ಅಂತ ಜಾಗತಿಕ ರಾಜಕಾರಣವನ್ನು ಗಮನಿಸುವ ಯಾವುದೇ ಮನಸ್ಸು ಚೀರಿಕೊಂಡರೆ ತಪ್ಪೇನಿಲ್ಲ.