‘ನೋಟು ಅಮಾನ್ಯ ನಿರ್ಧಾರದ ನಂತರ ₹ 70 ಸಾವಿರ ಕೋಟಿ ಕಪ್ಪುಹಣ ಪತ್ತೆ’- ಇದು ಸುಪ್ರೀಂ ನೇಮಿತ ಎಸ್ಐಟಿಯ ನ್ಯಾ.ಅರಿಜಿತ್ ನೀಡಿರುವ ಮಾಹಿತಿ

ಡಿಜಿಟಲ್ ಕನ್ನಡ ಟೀಮ್:

ಭ್ರಷ್ಟಾಚಾರ, ಕಪ್ಪು ಹಣದ ವಿರುದ್ಧದ ಸಮರ ಎಂದು ಹೇಳುತ್ತಾ ನೋಟು ಅಮಾನ್ಯದ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಈ ನಿರ್ಧಾರದ ನಂತರ ಎಷ್ಟು ಪ್ರಮಾಣದಲ್ಲಿ ಕಪ್ಪುಹಣ ಪತ್ತೆಯಾಗಿವೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಈಗ ಈ ಪ್ರಶ್ನೆಗೆ ನ್ಯಾ.ಅರಿಜಿತ್ ಪಸಾಯತ್ ಉತ್ತರ ನೀಡಿದ್ದು, ‘ನೋಟು ಅಮಾನ್ಯದ ನಂತರ ದೇಶದಲ್ಲಿ ₹ 70 ಸಾವಿರ ಕೋಟಿ ಕಪ್ಪುಹಣ ಪತ್ತೆ ಹಚ್ಚಲಾಗಿದೆ’ ಎಂದು ಹೇಳಿದ್ದಾರೆ.

ಕಪ್ಪುಹಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೇಮಿತ ವಿಶೇಷ ತನಿಖಾ ತಂಡದ ಉಪ ಮುಖ್ಯಸ್ಥರಾಗಿದ್ದಾರೆ ನ್ಯಾ.ಅರಿಜಿತ್. ಈ ತಂಡ ಕಳೆದ ಎರಡು ವರ್ಷಗಳಿಂದ ಈ ಬಗ್ಗೆ ಅಧ್ಯಯನ ನಡೆಸಿ ಸುಪ್ರೀಂ ಕೋರ್ಟಿಗೆ ಆಗಾಗ್ಗೆ ವರದಿ ಸಲ್ಲಿಸುತ್ತಿದೆ. ಈವರೆಗೂ ಐದು ವರದಿಗಳನ್ನು ನೀಡಿರುವ ಈ ತಂಡ ತನ್ನ ಆರನೇ ವರದಿಯನ್ನು ಏಪ್ರಿಲ್ ಮೊದಲ ವಾರದಲ್ಲಿ ಸುಪ್ರೀಂ ಕೋರ್ಟಿಗೆ ಸಲ್ಲಿಸುವುದಾಗಿ ನ್ಯಾ.ಅರಿಜಿತ್ ಅವರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ನ್ಯಾ.ಅರಿಜಿತ್ ಪಸಾಯತ್ ಹೇಳಿರುವುದಿಷ್ಟು…

‘ನೋಟು ಅಮಾನ್ಯದ ನಂತರ 70 ಸಾವಿರ ಕೋಟಿ ಕಪ್ಪು ಹಣ ಪತ್ತೆಯಾಗಿದೆ. ಜಾಗತಿಕ ಮಟ್ಟದಲ್ಲಿ ದಾಖಲೆಗಳ ಸೋರಿಕೆ ಪ್ರಕರಣಗಳ ಮೂಲಕ ವಿದೇಶಗಳಲ್ಲಿ ಹೂಡಿಕೆಯಾಗಿರುವ ಸುಮಾರು ₹ 16 ಸಾವಿರಕ್ಕೂ ಹೆಚ್ಚು ಪ್ರಮಾಣದ ಕಪ್ಪುಹಣ ಬೆಳಕಿಗೆ ಬಂದಿದೆ. ಈ ಎಲ್ಲದರ ಕುರಿತ ವರದಿಯನ್ನು ಏಪ್ರಿಲ್ ನಲ್ಲಿ ಸುಪ್ರೀಂ ಕೋರ್ಟಿಗೆ ಸಲ್ಲಿಸಲಿದ್ದೇವೆ.’

‘ಕಳೆದ ಎರಡು ವರ್ಷಗಳಲ್ಲಿ ನಮ್ಮ ತಂಡ ಕಪ್ಪುಹಣ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಲವು ಶಿಫಾರಸ್ಸುಗಳ ನೀಡಿದ್ದು, ಆ ಪೈಕಿ ಬಹುತೇಕ ಶಿಫಾರಸ್ಸುಗಳನ್ನು ಸರ್ಕಾರ ಒಪ್ಪಿಕೊಂಡಿವೆ. ಮತ್ತೆ ಕೆಲವು ಶಿಫಾರಸ್ಸುಗಳ ಬಗ್ಗೆ ಪರಿಶೀಲನೆ ನಡೆಯುತ್ತಿವೆ. ಆ ಪೈಕಿ ಪ್ರಮುಖವಾದ ಶಿಫಾರಸ್ಸು ಎಂದರೆ ₹ 15 ಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನಗದನ್ನು ಹೊಂದಿದ್ದರೆ ಅದನ್ನು ಬಹಿರಂಗಪಡಿಸದ ಸಂಪತ್ತು ಎಂದು ಪರಿಗಣಿಸಬೇಕು ಎಂಬುದಾಗಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚರ್ಚೆ ನಡೆಸುತ್ತಿದೆ. ಇನ್ನು ನಮ್ಮ ತಂಡ ನೀಡಿದ್ದ ನಗದು ಮೂಲಕದ ವ್ಯವಹಾರ ಮಿತಿಯನ್ನು ₹ 3 ಲಕ್ಷಕ್ಕೆ ಸೀಮಿತಗೊಳಿಸಿ ಅದಕ್ಕಿಂತ ಹೆಚ್ಚಿನ ವ್ಯವಹಾರವನ್ನು ನಗದಿನ ಮೂಲಕ ಮಾಡಿದರೆ ಕಾನೂನು ರೀತಿಯ ಶಿಕ್ಷೆ ಗುರಿಯಾಗಿಸುವ ಶಿಫಾರಸ್ಸನ್ನು ಸರ್ಕಾರ ಈಗಾಗಲೇ ಜಾರಿಗೆ ತಂದಿದೆ.’

‘ಇನ್ನು ಎಲ್ಲಾ ರಾಜ್ಯದ ಅಪರಾಧ ವಿಭಾಗಗಳನ್ನು ಸಂಪರ್ಕಿಸಿದ್ದು, ಆಯಾ ರಾಜ್ಯಗಳಲ್ಲಿನ ಶೈಕ್ಷಣಿಕ ಸಂಸ್ಥೆ, ಆಭರಣ ಅಂಗಡಿ, ರಿಯಲ್ ಎಸ್ಟೇಟ್, ಸ್ವಘೋಷಿತ ದೇವಮಾನವರು, ಮಾಫಿಯಾ ದೊರೆಗಳ ಕಾನೂನು ಬಾಹೀರ ಪ್ರಕರಣಗಳ ವಿಚಾರಣೆಯಲ್ಲಿನ ಮಾಹಿತಿಯನ್ನು ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಗಳ ಜತೆ ಹಂಚಿಕೊಳ್ಳಬೇಕೆಂದು ಕೇಳಿಕೊಳ್ಳಲಾಗಿದೆ. ಇದರಿಂದ ಈ ಪ್ರಕರಣಗಳ ಮೂಲಕ ಮತ್ತಷ್ಟು ಕಪ್ಪುಹಣ ಪತ್ತೆ ಹಚ್ಚಬಹುದು.’

Leave a Reply