ಕನ್ಸಾಸ್ ಶೂಟೌಟ್ ವೇಳೆ ಪ್ರಾಣದ ಹಂಗು ತೊರೆದು ಹೀರೋ ಆದ ಇಯಾನ್ ಗ್ರಿಲ್ಲೊಟಿಗೆ ಭಾರತದಿಂದ ಆಹ್ವಾನ! ಸಮಾಜವನ್ನು ಬೆಸೆಯುವ ಈ ಮಾನವೀಯ ಬೆಳವಣಿಗೆ ಆಶಾದಾಯಕ

ಡಿಜಿಟಲ್ ಕನ್ನಡ ಟೀಮ್:

ಅಮೆರಿಕದಲ್ಲಿನ ಜನಾಂಗೀಯ ದಾಳಿ, ಕನ್ಸಾಸ್ ಶೂಟೌಟ್ ಪ್ರಕರಣಗಳು ಸಾಕಷ್ಟು ಆತಂಕಕಾರಿಯಾಗಿ ನಕಾರಾತ್ಮಕ ಸುದ್ದಿಗಳು ಕೇಳಿಬರುತ್ತಿರುವ ಸಂದರ್ಭದಲ್ಲೇ ಸಕಾರಾತ್ಮಕ ಬೆಳವಣಿಗೆಗಳು ಕಂಡುಬರುತ್ತಿವೆ. ಕಳೆದ ತಿಂಗಳು ನಡೆದ ಶೂಟೌಟ್ ವೇಳೆ ಭಾರತೀಯ ಇಂಜಿನಿಯರ್ ಗಳ ಪ್ರಾಣ ರಕ್ಷಣೆಗಾಗಿ ತಾನು ಗುಂಡೇಟು ತಿಂದು ಆಸ್ಪತ್ರೆಗೆ ದಾಖಲಾಗಿದ್ದ ಕನ್ಸಾಸ್ ನಿವಾಸಿ ಇಯಾನ್ ಗ್ರಿಲ್ಲೊಟ್ ಸಾಹಸಕ್ಕೆ ಭಾರತ ಸರ್ಕಾರ ಶ್ಲಾಘಿಸುವುದರ ಜತೆಗೆ ಭಾರತಕ್ಕೆ ಆಗಮಿಸುವಂತೆ ಆಮಂತ್ರಣ ಸಹ ಕೊಟ್ಟಿದೆ.

ಈ ಶೂಟೌಟ್ ನಲ್ಲಿ ಭಾರತದ ಇಂಜಿನಿಯರ್ ಬಲಿಯಾದ ನಂತರ ಅಮೆರಿಕದಲ್ಲಿ ಭಾರತೀಯ ವಿರೋಧಿ ವಾತಾವರಣ ನಿರ್ಮಾಣವಾಗಿದೆಯೇ ಎಂಬ ಆತಂಕ ಮೂಡಿತ್ತು. ಆದರೆ ಇಯಾನ್ ಅವರ ಧೈರ್ಯ ಹಾಗೂ ತ್ಯಾಗದ ಮನೋಭಾವ, ಅಮೆರಿಕದಲ್ಲಿನ ಇಡೀ ಸಮಾಜ ಭಾರತ ವಿರೋಧಿಯಾಗಿಲ್ಲ ಎಂಬುದನ್ನು ಸಾಬೀತುಪಡಿಸಿ ಆತಂಕ ದೂರಮಾಡಿದೆ.

ಕಳೆದ ತಿಂಗಳು 28ರಂದು ಅಮೆರಿಕದ ಬಾರ್ ವೊಂದರಲ್ಲಿ ಅಮೆರಿಕದ ನಿವೃತ್ತ ನೌಕಾಧಿಕಾರಿ ಆಡಮ್ ಪುರಿಂಟನ್ ‘ನಮ್ಮ ದೇಶ ಬಿಟ್ಟು ಹೋಗಿ’ ಎಂದು ಕೂಗುತ್ತಾ ಭಾರತ ಇಂಜಿನಿಯರ್ ಶ್ರೀನಿವಾಸ್ ಕುಚಿಭೊಟ್ಲಾ ಹಾಗೂ ಆತನ ಸ್ನೇಹಿತನ ಮೇಲೆ ಗುಂಡಿನ ದಾಳಿ ನಡೆಸಿದ. ಈ ವೇಳೆ ಅಲ್ಲಿದ್ದ ಇಯಾನ್ ಗ್ರಿಲ್ಲೊಟ್, ಪುರಿಂಟನ್ ನನ್ನು ನಿಯಂತ್ರಿಸುವ ಸಲುವಾಗಿ ಮಧ್ಯ ಪ್ರವೇಶಿಸಿದ. ಈ ವೇಳೆ ಇಯಾನ್ ಅವರ ಎದೆಗೆ ಗುಂಡು ಹಾರಿತು. ಈ ಘಟನೆಯಲ್ಲಿ ಶ್ರೀನಿವಾಸ್ ಮೃತಪಟ್ಟರೂ ಮತ್ತೊಬ್ಬ ಇಂಜಿನಿಯರ್ ಗಾಯಗೊಂಡು ಪ್ರಾಣಾಪಾಯದಿಂದ ಪಾರಾದರು. ಹೀಗೆ ತನ್ನ ಪ್ರಾಣವನ್ನು ಲೆಕ್ಕಿಸದೇ ಈ ಇಬ್ಬರ ಪ್ರಾಣ ರಕ್ಷಣೆಗೆ ಮುಂದಾದ ಇಯಾನ್ ನಿಜಕ್ಕೂ ಹಿರೋ ಆದರು.

ian-grillot

ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಯಾನ್ ಅವರಿಗೆ ಭಾರತದಿಂದ ಅಭಿನಂದನೆಗಳ ಮಾಹಾಪೂರವೇ ಹರಿದು ಹೋಗಿವೆ. ಭಾರತ ಸರ್ಕಾರ ಸಹ ಈತನ ಕಾರ್ಯಕ್ಕೆ ಪ್ರಶಂಸೆ ನೀಡಿತು. ಭಾರತದ ರಾಯಭಾರಿ ಕಚೇರಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಇಯಾನ್ ಅವರ ಆರೋಗ್ಯ ವಿಚಾರಿಸಿ, ಇಯಾನ್ ಚೇತರಿಸಿಕೊಂಡ ನಂತರ ತಮ್ಮ ಕುಟುಂಬದ ಜತೆಗೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.

ಇತ್ತ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಹ, ‘ಇಯಾನ್ ಗ್ರಿಲ್ಲೊಟ್ ಅವರ ಸಾಹಸಕ್ಕೆ ಇಡೀ ಭಾರತವೇ ಅಭಿನಂದನೆ ಸಲ್ಲಿಸುತ್ತದೆ. ಆದಷ್ಟು ಬೇಗ ಗುಣಮುಖರಾಗಲಿ ಎಂದು ಶುಭಕೋರುತ್ತೇವೆ.’ ಎಂದು ಟ್ವೀಟ್ ಮಾಡಿದ್ದಾರೆ.

ದ್ವೇಷ, ರಕ್ತಚರಿತ್ರೆಗಳ ನಡುವೆ ಮಾನವೀಯ ಗುಣಗಳೇ ಎಲ್ಲ ಸಮಾಜಗಳನ್ನು ಬೆಸೆಯುತ್ತವೆ ಎಂಬುದಕ್ಕೆ ಈ ಬೆಳವಣಿಗೆ ಸಾಕ್ಷಿಯಾಗಿದೆ.

1 COMMENT

Leave a Reply