ಕಾಂಗ್ರೆಸ್ ತೊರೆದು ಕಮಲಕ್ಕೆ ಕುಮಾರ್ ಬಂಗಾರಪ್ಪ, ಪರಿಶಿಷ್ಟರಿಗೆ ಸೇವಾ ಬಡ್ತಿ ಮೀಸಲಾತಿ: ಮಸೂದೆ ಜಾರಿಗೆ ತರಲು ಸರ್ಕಾರ ಚಿಂತನೆ, ರಾಜ್ಯದ 5 ಜಿಲ್ಲೆಗಳು ಬಯಲು ಶೌಚ ಮುಕ್ತ, ಕೊನೆಯಿಲ್ಲದ ಕೇರಳ ರಕ್ತಚರಿತೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯದ ವಿವಿಧ ಪ್ರದೇಶಗಳಿಂದ ಬಂದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ತೊರೆದ ಕುಮಾರ್ ಬಂಗಾರಪ್ಪ

ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕೈ ಪಾಳಯಕ್ಕೆ ವಿದಾಯ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರುವ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡಿತ್ತು. ಇಂದು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಕೊಟ್ಟಿರುವ ಕುಮಾರ್ ಬಂಗಾರಪ್ಪ, ರಾಜಿನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ರವಾನಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದಲ್ಲಿ ನಮ್ಮನ್ನು ಕಡೆಗಣಿಸಲಾಗಿದೆ. ಆ ಕಾರಣಕ್ಕೆ ಪಕ್ಷ ತೊರೆಯಲು ನಿರ್ಧರಿಸಿದ್ದೇನೆ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕಾಗೋಡು ತಿಮ್ಮಪ್ಪ ಶಾಂತಿವೇರಿ ಗೋಪಾಲಗೌಡರಿಂದ ಹಿಡಿದು ಇಲ್ಲಿಯವರೆಗೂ ದ್ವೇಷದ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ನನ್ನ ರಾಜಿನಾಮೆ ಹಿಂದಿರುವ ಕಾರಣಗಳನ್ನು ಪತ್ರದಲ್ಲಿ ವಿವರವಾಗಿ ಹೇಳಿದ್ದಾನೆ. ಕಾಂಗ್ರೆಸ್ ಪಕ್ಷ ಒಂದೆಡೆಯಾದರೆ ಮುಖ್ಯಮಂತ್ರಿಗಳು ಮತ್ತೊಂದು ಕಡೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಸ್.ಎಂ ಕೃಷ್ಣಾ ಅವರು ಹೇಳಿದಂತೆ ಕಾಂಗ್ರೆಸ್ ನಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ಆಡಳಿತ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಾಯಕತ್ವ, ರಾಜ್ಯದಲ್ಲಿ ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ ಸದಾನಂದಗೌಡ ಹಾಗೂ ಅನಂತಕುಮಾರ್ ಅವರ ನಾಯಕತ್ವದಲ್ಲಿ ನಂಬಿಕೆ ಇಟ್ಟು ಯಾವುದೇ ಷರತ್ತುಗಳಿಲ್ಲದೆ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರುತ್ತಿದ್ದೇನೆ. ನನ್ನ ಜತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಮುಖಂಡರು ಸಹ ಬಿಜೆಪಿ ಸೇರುತ್ತಿದ್ದಾರೆ’ ಎಂದರು.

ಮಸೂದೆ ಮೂಲಕ ಪರಿಶಿಷ್ಟರಿಗೆ ಸೇವಾ ಬಡ್ತಿ ಮೀಸಲಾತಿ

ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರ ಬಡ್ತಿಯಲ್ಲಿ ಮೀಸಲಾತಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಈ ಮೀಸಲಾತಿಯನ್ನು ಮಸೂದೆ ಮೂಲಕ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.

ಈ ವಿಚಾರವಾಗಿ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ ಅವರು ಇಂದು ನಿವೃತ್ತ ನ್ಯಾಯಮೂರ್ತಿ ಎ.ಜಿ.ಸದಾಶಿವ, ಮಾಜಿ ಅಡ್ವೋಕೇಟ್ ಜೆನರಲ್ ರವಿವರ್ಮ ಕುಮಾರ್ ಸೇರಿದಂತೆ ಹಲವು ಕಾನೂನು ತಜ್ಞರೊಟ್ಟಿಗೆ ಚರ್ಚೆ ನಡೆಸಿ ಸಲಹೆ ಪಡೆದಿದ್ದಾರೆ. ಈ ಬಗ್ಗೆ ಮತ್ತಷ್ಟು ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋಮವಾರ ಮಂತ್ರಿ ಪರಿಷತ್ ಸಭೆ ಕರೆದಿದ್ದು, ಚರ್ಚೆ ಮಾಡಿದ ನಂತರ ಸರ್ಕಾರ ಅಧಿಕೃತ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಒದಗಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರದ 39 ವರ್ಷಗಳ ಕೋಟಾ ಕಾನೂನಿಗೆ ಮಾನ್ಯತೆ ಇಲ್ಲ ಎಂಬ ಕಾರಣ ಕೊಟ್ಟು ಸುಪ್ರೀಂ ಕೋರ್ಟ್ ಸರ್ಕಾರದ ನಿರ್ಧಾರಕ್ಕೆ ತಡೆಯಾಜ್ಞೆ ಕೊಟ್ಟಿದೆ. ಜತೆಗೆ ಈಗಾಗಲೇ ಮುಂಬಡ್ತಿ ನೀಡಿರುವ ನೌಕರರಿಗೆ ಹಿಂಬಡ್ತಿ ನೀಡಲು ಆರು ತಿಂಗಳ ಕಾಲಾವಕಾಶ ಕೊಟ್ಟಿದೆ.

ಹೀಗಾಗಿ ಈ ಎಲ್ಲ ಅಂಶಗಳನ್ನು ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲು ಸರ್ಕಾರ ನಿರ್ಧರಿಸಿದೆ. ಸರ್ಕಾರ ಮಸೂದೆಯನ್ನು ಜಾರಿಗೆ ತರುವುದೇ ಆದರೆ ಬಜೆಟ್ ಅಧಿವೇಶನದಲ್ಲಿ ಮಂಡಿಸುವ ಚಿಂತನೆ ಮಾಡಿದೆ. ಆದರೆ ಇದಕ್ಕೆ ಸಂಪುಟದಲ್ಲೇ ಭಿನ್ನಾಭಿಪ್ರಾಯ ಎದ್ದಿದೆ.

ಐದು ಜಿಲ್ಲೆಗಳು ಬಯಲು ಶೌಚ ಮುಕ್ತ

ಬಯಲು ಶೌಚ ಮುಕ್ತದ ಕೇಂದ್ರ ಸರ್ಕಾರದ ಅಭಿಯಾನದಲ್ಲಿ ಈವರೆಗೂ 101 ಜಿಲ್ಲೆಗಳನ್ನು ಕೇಂದ್ರ ಸರ್ಕಾರ ಬಯಲು ಶೌಚ ಮುಕ್ತ ಎಂದು ಪ್ರಕಟಿಸಿದ್ದು, ಆ ಪೈಕಿ ರಾಜ್ಯದ ಐದು ಜಿಲ್ಲೆಗಳು ಸ್ಥಾನ ಪಡೆದಿವೆ. ಈ ಬಗ್ಗೆ ಮಾಹಿತಿ ನೀಡಿರುವ ಕುಡಿಯುವ ನೀರು ಮತ್ತು ಸ್ವಚ್ಛತಾ ಖಾತೆ ರಾಜ್ಯ ಸಚಿವ ರಮೇಶ್ ಜಿಗಜಿಣಗಿ, ‘ದೇಶದಲ್ಲಿ 101 ಜಿಲ್ಲೆಗಳನ್ನು ಬಯಲು ಶೌಚ ಮುಕ್ತ ಎಂದು ಕೇಂದ್ರ ಸರ್ಕಾರ ಪರಿಗಣಿಸಿದೆ. ಆ ಪೈಕಿ ರಾಜ್ಯದ ಐದು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಉಡುಪಿ ಮತ್ತು ಕೊಡಗು ಸ್ಥಾನ ಪಡೆದಿವೆ. ದೇಶದಲ್ಲಿ 11 ಕೋಟಿ ಜನರಿಗೆ ಶೌಚಾಲಯ ಸೌಲಭ್ಯವಿಲ್ಲದಿರುವುದರಿಂದ ₹ 3.5 ಕೋಟಿ ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. 2019 ಅಕ್ಟೋಬರ್ ವೇಳೆಗೆ ಭಾರತವನ್ನು ಬಯಲು ಶೌಚ ಮುಕ್ತ ಮಾಡಲಾಗುವುದು’ ಎಂದರು.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಸುದ್ದಿ ಸಾಲುಗಳು… 

  • ಕರ್ನಾಟಕ ಪತ್ರಿಕೋದ್ಯಮದ ಅತ್ಯುನ್ನತ ಪ್ರಶಸ್ತಿಗಳಾದ ಟಿಯೆಸ್ಸಾರ್ ಹಾಗೂ ಮೊಹರೆ ಹನುಮಂತರಾವ್ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀಮತಿ ಇಂದ್ರಕಲಾ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದ ಪತ್ರಿಕೋಕೋದ್ಯಮಕ್ಕೆ ಉತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲು ಈ ಸಮಿತಿ ರಚಿಸಲಾಗಿದ್ದು, ಶ್ರೀಮತಿ ಮಂದಾಕಿನಿ, ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣನವರ್ ಹಾಗೂ ಆರ್.ಟಿ ವಿಠ್ಠಲಮೂರ್ತಿ ಅವರು ಸದಸ್ಯರಾಗಿದ್ದಾರೆ.
  • ಡೈರಿ ವಿಚಾರದಲ್ಲಿ ಬಿಜೆಪಿಯವರು ಪದೇ ಪದೇ ಸುಳ್ಳು ಹೇಳುತ್ತಿದ್ದಾರೆ. ಅವರ ಸುಳ್ಳು ಆರೋಪಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಈ ವಿಚಾರದಲ್ಲಿ ಅವರು ರಾಜಕೀಯ ಷಡ್ಯಂತ್ರ ನಡೆಸುತ್ತಿದ್ದಾರೆ. ಕೇವಲ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅವರು ಮಾಡುತ್ತಿರುವ ಆರೋಪಗಳಿಗೆ ದಾಖಲೆಗಳಿಲ್ಲ ಎಂದರು. ಇನ್ನು ಪದವಿಪೂರ್ವ ಕಾಲೇಜು ಉಪನ್ಯಾಸಕರ ವೇತನದಲ್ಲಿ ಆಗಿರುವ ತಾರತಮ್ಯವನ್ನು ನಿವಾರಿಸಲು ಸರ್ಕಾರ ಬದ್ಧವಾಗಿದೆ ಎಂದು ತಮ್ಮನ್ನು ಭೇಟಿಯಾದ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಸದಸ್ಯರಿಗೆ ಭರವಸೆ ಕೊಟ್ಟರು.
  • ಕೇರಳದಲ್ಲಿ ರಾಜಕೀಯ ಪ್ರೇರಿತ ದಾಳಿಗಳು ಮುಂದುವರಿದಿವೆ. ಹಿಂದು ಮುಖಂಡರ ಮೇಲೆ ನಿರಂತರವಾಗಿ ದಾಳಿ ಮುಂದುವರಿದಿರುವ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಆದರೆ ಗುರುವಾರ ರಾತ್ರಿ ಡೆಮಾಕ್ರಾಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್ಐ) ಮೂವರು ಸದಸ್ಯರ ಮೇಲೆ ಐದು ಜನರ ಗುಂಪು ದಾಳಿ ಮಾಡಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ ಈ ದಾಳಿಗೆ ಬಿಜೆಪಿ ಕಾರ್ಯಕರ್ತರ ಮೇಲೆ ಆರೋಪ ಹೊರಿಸಲಾಗಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬರಬೇಕಿದೆ. ನಿನ್ನೆಯಷ್ಟೇ ಆರೆಸ್ಸೆಸ್ ಕಚೇರಿಗೆ ಮೇಲೆ ದಾಳಿ ನಡೆಸಲಾಗಿತ್ತು. ಇಂದು ಸಿಪಿಎಂ ಕಚೇರಿಗೆ ಬೆಂಕಿ ಹಚ್ಚಲಾಗಿದೆ.

Leave a Reply