ಮತ್ತೆ ಸುದ್ದಿಯಲ್ಲಿ ಗುರುವಿನ ಗುಲಾಮ-ಯೂರೋಪ ಚಂದ್ರಮ: ಸಿಕ್ಕೀತೆ ಜೀವಿಗಳಿರುವ ಸಾಕ್ಷ್ಯ?

 

author-ananthramuಅನ್ಯಲೋಕದ ಜೀವಿಗಳು ಎಂದೊಡನೆ ನಮ್ಮ ಊಹೆಯೇ ಬೇರೆ. ವಿಕಾರ, ಭಯಂಕರ ಮುಖ, ಸಣ್ಣ ಬುರುಡೆ, ವಿಚಿತ್ರ ಕೈಕಾಲು, ಬೀಭತ್ಸ ಕಣ್ಣುಗಳು, ವಕ್ರ ತಲೆ, ದಿಢೀರೆಂದು ಮೇಲೆರಗಿ ಯಾವ ಘಳಿಗೆಯಲ್ಲಾದರೂ ಮನುಷ್ಯನನ್ನು ಅಪಹರಿಸಿ ಬೇರೆ ಲೋಕಕ್ಕೆ ಒಯ್ಯುವ ಜೀವಿಗಳು-ಹೀಗೆಲ್ಲ. ಪ್ರಾಯಶಃ ವಿಜ್ಞಾನ ಕಲ್ಪನೆಯ ಸಿನಿಮಾಗಳು ಬಂದಮೇಲೆ ಈ ಚಿತ್ರಣ ಬಿಗಿಯಾಗಿ ನಮ್ಮ ತಲೆಯಲ್ಲಿ ಹೊಕ್ಕಿದೆ. ವಾಸ್ತವತೆ ಏನಿದೆಯೋ ಸದ್ಯಕ್ಕಂತೂ ಅನೂಹ್ಯ. ಆದರೆ ಕಲ್ಪನೆಯೇ ದಿಗಿಲು ಹುಟ್ಟಿಸುವಂತದ್ದು.

ಸದ್ಯ ಸೌರಮಂಡಲದಲ್ಲಿ ಅಂಥ ಜೀವಿಗಳು ಎಲ್ಲೂ ಇಲ್ಲ ಎಂದು ತೋರಿಸಿಕೊಟ್ಟಿವೆ 24×7  ಸಮಯದುದ್ದಕ್ಕೂ ಇಡೀ ವಿಶ್ವದ ಮೇಲೆ ಕಣ್ಣಿಟ್ಟಿರುವ ದೂರದರ್ಶಕಗಳು. ಅದರಲ್ಲೂ ಹಬಲ್ ಅಂತರಿಕ್ಷ ದೂರದರ್ಶಕ ನಮ್ಮ ಸೌರಮಂಡಲದಾಚೆಯಷ್ಟೇ ಅಲ್ಲ, ಬೇರೆ ಗೆಲಾಕ್ಸಿಗಳಲ್ಲೂ ಏನಾಗುತ್ತಿದೆ ಎಂದು ಕ್ಷಣಕ್ಷಣಕ್ಕೂ ವರದಿ ಮಾಡುತ್ತಿದೆ. ಎರಡು ಗೆಲಾಕ್ಸಿಗಳು ಡಿಕ್ಕಿ ಹೊಡೆಯುತ್ತಿರುವ ವಿರಳಾತಿವಿರಳ ದೃಶ್ಯವನ್ನು ಅದು ಸೆರೆಹಿಡಿದಿದೆ. 2012ರಲ್ಲಿ ಹೀಗೆಯೇ ಅದು ತೆರೆದ ಕಣ್ಣಿನಲ್ಲಿ ನೋಡುತ್ತಿದ್ದಾಗ ಗುರುಗ್ರಹದ ನಾಲ್ಕು ಉಪಗ್ರಹಗಳಲ್ಲಿ ಅತಿ ಚಿಕ್ಕದಾದ ಯೂರೋಪ ಎನ್ನುವ ಉಪಗ್ರಹದ ಮೇಲೆ ಹಿಮದ ನೀರೇ ಬುಗ್ಗೆಯಾಗಿ ಚಿಮ್ಮುತ್ತಿರುವ ದೃಶ್ಯವನ್ನು ಸೆರೆಹಿಡಿದಿತ್ತು. ನಾಸಾ ವಿಜ್ಞಾನಿಗಳು ಇದನ್ನು ನೋಡಿ ಪುಲಕಗೊಂಡಿದ್ದರು, ಆಗಲೇ ತೀರ್ಮಾನಿಸಿದ್ದರು `ನಮ್ಮ ಮುಂದಿನ ಗುರಿ ಯೂರೋಪ’.

ಗುರುಗ್ರಹಕ್ಕೆ ಸದ್ಯದಲ್ಲಿ 67 ಮಂದಿ ಚಂದ್ರಮರಿದ್ದಾರೆ. ಅವುಗಳಿಗೆ ಎಂದೂ ಬಿಡುಗಡೆಯಿಲ್ಲ. ಗುರುವನ್ನು ಪರಿಭ್ರಮಿಸುವುದೊಂದೇ ಕಾಯಕ. ಕ್ರಿ.ಶ. 1610ರಲ್ಲೇ ಗೆಲಿಲಿಯೋ ಗೆಲಿಲಿ, ತಾನೇ ಸೃಷ್ಟಿಸಿದ ದೂರದರ್ಶಕದಿಂದ ಇವನ್ನು ವೀಕ್ಷಿಸಿ ಗ್ರೀಕ್ ಪುರಾಣದ ಆಧಾರದ ಮೇಲೆ ಇದಕ್ಕೆ ಯೂರೋಪ ಎಂದು ಹೆಸರುಕೊಟ್ಟ. ಜೂಯಿಸ್‍ನ ಪ್ರಿಯತಮೆ ಯೂರೋಪ. ಅದಾದ ನಂತರ ಈಗಲೂ ಯೂರೋಪದ ಹಲವು ಮುಖಗಳನ್ನು ದೂರದರ್ಶಕಗಳು ಸೆರೆಹಿಡಿದಿವೆ. ಪಯೋನಿರ್-10, 11 ಮತ್ತು ವಾಯೇಜರ್ 1, 2, ಎಪ್ಪತ್ತರ ದಶಕದಲ್ಲೇ ಯೂರೋಪದ ಹತ್ತಿರದ ಮುಖವನ್ನು ಕಂಡಿದ್ದವು. 1985ರಿಂದ 2007ರವರೆಗೆ ಗೆಲಿಲಿಯೋ ಎಂಬ ದೂರದರ್ಶಕ ಕೂಡ ಯೂರೋಪದ ಎಲ್ಲ ಮುಖವನ್ನೂ ವೀಕ್ಷಿಸಿತ್ತು.

ಇದೇನೂ ದೊಡ್ಡ ಉಪಗ್ರಹವಲ್ಲ. ವ್ಯಾಸದಲ್ಲಿ ನಮ್ಮ ಚಂದ್ರಮನಿಗಿಂತ ಚಿಕ್ಕದು (3,121 ಕಿ.ಮೀ.). ಆದರೆ ಕುಂಬಳಕಾಯಿಯನ್ನು ಎರ್ರಾಬಿರ್ರಿಯಾಗಿ ಚಾಕುವಿನಿಂದ ಗೀರಿದರೆ ಹೇಗೋ ಕಾಣುತ್ತದೋ, ಯೂರೋಪದ ಮೈ ಕೂಡ ಹಾಗೆಯೇ. ಹಿಮ ಗಟ್ಟಿಯಾಗಿ ಮೇಲ್ಮೈ ಮೇಲೆ ಬಿಟ್ಟಿರುವ ಬಿರುಕುಗಳು ಇವು. ಆದರೆ ಈ ಉಪಗ್ರಹದ ಒಳಗೆ ಹಿಡಿದಿಟ್ಟಿರುವ ನೀರು ನಮ್ಮ ಸಾಗರಗಳನ್ನೂ ಮೀರಿಸುತ್ತದೆ ಎನ್ನುವುದೇ ವಿಸ್ಮಯವಷ್ಟೇ ಅಲ್ಲ, ನಿರೀಕ್ಷೆಯನ್ನೂ ಹೆಚ್ಚಿಸಿದೆ. ವಿಜ್ಞಾನಿಗಳ ಅಂದಾಜಿನಂತೆ ಯೂರೋಪದ ಚಿಪ್ಪಿನಿಂದ ಒಳಗಡೆ 100 ಕಿಲೋ ಮೀಟರ್ ಆಳದವರೆಗೆ ನೀರು ವಿಸ್ತರಿಸಿದೆ. ಗುರುಗ್ರಹವನ್ನು 6,70,900 ಕಿಲೋ ಮೀಟರ್ ದೂರದಿಂದ ಮೂರೂವರೆ ದಿನಗಳಿಗೊಮ್ಮೆ ಇದು ಪರಿಭ್ರಮಿಸುತ್ತಿದೆ. ಇನ್ನು ಶೈತ್ಯವೋ, ಅದು ಪರಾಕಾಷ್ಠೆ. ಮಧ್ಯರೇಖೆಯಲ್ಲಿ -1600 ಸೆಂ. ಧ್ರುವದಲ್ಲಿ 2200 ಸೆಂ. ದೂರದರ್ಶಕಗಳ ನೆರವಿನಿಂದ ಹಾಗೂ ಹತ್ತಿರದಲ್ಲೇ ಹಾದುಹೋದ ಅಂತರಿಕ್ಷ ನೌಕೆಗಳು ಕೊಟ್ಟಿರುವ ಮಾಹಿತಿಯಿಂದ ವಿಜ್ಞಾನಿಗಳು ಯೂರೋಪದ ಜಾತಕವನ್ನು ಬರೆದಿದ್ದಾರೆ. ನಮ್ಮ ಭೂಮಿಯಂತೆಯೇ ಇದಕ್ಕೂ ಲೋಹದಿಂದಾದ ಗರ್ಭವಿದೆಯೆಂದು ತೀರ್ಮಾನಿಸಿದ್ದಾರೆ. ವಾಸ್ತವವಾಗಿ ಯೂರೋಪದ ಅಂತರ್ಗತ ಸಾಗರ ಎಂದೋ ಘನೀಭವಿಸಿ ಕಲ್ಲಿನಂತಾಗಬಹುದಾಗಿತ್ತು. ಆದರೆ ಅದರ ಸಹಚರ ಉಪಗ್ರಹಗಳು ಗ್ಯಾನಿಮೀಡ, ಕಲಿಸ್ಟೋ ಮತ್ತು ಅಯೋ-ಇದರ ಮುಂದೆ ಹಾದುಹೋಗುವಾಗ ತಮ್ಮ ಗುರುತ್ವದಿಂದಾಗಿ ಈ ಕಾಯವನ್ನು ಬಲವಾಗಿ ಅಲುಗಿಸುತ್ತಿವೆ. ಈ ಅಲುಗಾಟವೇ ಸಾಕು ಹಿಮಗಡ್ಡೆ ಕರಗಲು. ಜೊತೆಗೆ ಆಂತರಿಕ ಉಷ್ಣತೆ ಹೆಚ್ಚಿಸಲು. ಇದಲ್ಲದೆ ನಮ್ಮ ಸಾಗರ ತಳದಲ್ಲಿ ಇರುವಂತೆ ಇಲ್ಲೂ ತಳದಲ್ಲಿ ಕೊಳವೆಗಳಿದ್ದು, ಅವುಗಳಿಂದ ಅಪಾರ ಪ್ರಮಾಣದ ಉಷ್ಣತೆ, ವಿವಿಧ ರಾಸಾಯನಿಕ ದ್ರವ್ಯ ಹೊರಬೀಳುತ್ತಿದೆ ಎಂಬುದು ಒಂದು ಅಂದಾಜು. ಅಂದರೆ ಜೀವಿಗಳು ಉಗಮವಾಗಲು ಇದೊಂದು ಯುಕ್ತವಾದ ಪರಿಸರ. ನಮ್ಮ ಚಂದ್ರಮನಂತೆ ಅದಕ್ಕೂ ವಾಯುಗೋಳವಿಲ್ಲ ಎಂದು ಹಿಂದೆ ಭಾವಿಸಿತ್ತು. ಈಗ ಆಕ್ಸಿಜನ್ ಇದೆಯೆಂದು ಕೆಲವು ಸಾಕ್ಷ್ಯಗಳು ತೋರಿಸಿವೆ.

europa-geyser

ಗುರುಗ್ರಹದ ಸುತ್ತ ಇರುವ ವಿಕಿರಣಪಟ್ಟಿಯಿಂದಾಗಿ ಯೂರೋಪ ಚಂದ್ರಮನನ್ನು ತಲುಪುವುದು ಸುಲಭವಲ್ಲ. ವಿಕಿರಣಪಟ್ಟಿ ಎಂದರೆ ಬಲವಾಗಿ ತಾಡಿಸುವ ಎಲೆಕ್ಟ್ರಾನ್‍ಗಳು. ಈ ಪಟ್ಟಿ ಯೂರೋಪ ಗುರುವನ್ನು ಸುತ್ತುವುದಕ್ಕಿಂತ ಹೆಚ್ಚು ವೇಗವಾಗಿ ಸುತ್ತುತ್ತಿದೆ. ನಾಲ್ಕು ಗೆಲಿಲಿಯನ್ ಉಪಗ್ರಹಗಳಿಗೆ ನೇರವಾಗಿ ಅದು ತಟ್ಟುತ್ತಿದೆ. ಒಂದುವೇಳೆ ಸೂಕ್ಷ್ಮಜೀವಿಗಳಿದ್ದರೆ ಅವು ಹೊರಬಂದೊಡನೆ ಈ ದಾಳಿಗೆ ಸಿಕ್ಕಿ ನಾಶವಾಗಿಬಿಡುತ್ತವೆ. ನಾಸಾ ಸಂಸ್ಥೆ 2022ರಲ್ಲಿ ಮತ್ತೆ 2024ರಲ್ಲಿ ಎರಡು ಅಂತರಿಕ್ಷ ಶೋಧಕಗಳನ್ನು ಯೂರೋಪಕ್ಕೆ ಕಳಿಸಲು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದೆ. ಸರ್ಕಾರಕ್ಕೆ ಇದೇನೂ ತುಂಬ ದೊಡ್ಡ ಹೊರೆಯಲ್ಲ, ಅಮೆರಿಕದ ತೆರಿಗೆದಾರರೆಲ್ಲ ಒಂದು ಕಪ್ ಕಾಫಿ ಕುಡಿಯದಿದ್ದರೆ ಎಷ್ಟು ಉಳಿತಾಯವಾಗುತ್ತದೋ ಅಷ್ಟರಲ್ಲಿ ಈ ಯೋಜನೆ ಮುಗಿಸಬಹುದು ಎನ್ನುತ್ತಾರೆ. ಮೊದಲನೆಯ ಶೋಧಕ ಹಿಮದ ಪದರವನ್ನು ಬೈರಿಗೆಯಲ್ಲಿ ಕೊರೆಯುವಂತೆ ಯೋಜಿಸಿದೆ. ಇದು ಸುಲಭವಲ್ಲ. ಕೆಲವೆಡೆ ಯೂರೋಪದ ಹೊರಚಿಪ್ಪು ಒಂದು ಕಿಲೋ ಮೀಟರ್ ದಪ್ಪವಿದೆ. ಎರಡನೆಯ ಶೋಧಕ ನೌಕೆ ಯೂರೋಪ ಚಿಮ್ಮುತ್ತಿರುವ ಹಿಮನೀರಿನ ಬುಗ್ಗೆಯ ಮಾದರಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ. ಆ ರಾಸಾಯನಿಕಗಳನ್ನು ವಿಶ್ಲೇಷಿಸಿದರೆ ಸಾಕು, ಇಡೀ ಉಪಗ್ರಹದ ಚರಿತ್ರೆ ಬಿಟ್ಟುಕೊಡುತ್ತದೆ. ಅದರಲ್ಲಿ ಸೂಕ್ಷ್ಮಜೀವಿಗಳಿದ್ದರೂ ಪತ್ತೆಯಾಗಬಹುದೆಂದು ನಿರೀಕ್ಷೆ.

ಈ ಯೋಜನೆ ಅಷ್ಟು ಸಲೀಸೂ ಅಲ್ಲ. ಏಕೆಂದರೆ 1967ರಲ್ಲಿ ಅಂದರೆ ಚಂದ್ರನ ಮೇಲೆ ಮನುಷ್ಯ ಹೆಜ್ಜೆ ಇಡುವ ಎರಡು ವರ್ಷ ಮೊದಲೇ ಬಾಹ್ಯಾಂತರಿಕ್ಷದ ಒಂದು ಒಪ್ಪಂದವನ್ನು ಎಲ್ಲರ ರಾಷ್ಟ್ರಗಳೂ ಪಾಲಿಸುವಂತೆ ರೂಪಿಸಲಾಗಿದೆ. ಯಾವುದೇ ಕಾರಣಕ್ಕಾಗಲಿ ಇಲ್ಲಿನ ಸೂಕ್ಷ್ಮಜೀವಿಯನ್ನು ಅಲ್ಲಿಗೆ ಒಯ್ಯಬಾರದು, ಅಲ್ಲಿನ ಸೂಕ್ಷ್ಮಜೀವಿ ತರುವಾಗ ಪ್ರಯೋಗಾಲಯದಲ್ಲಿ ಅವು ಹೊರಹೋಗದಂತೆ ಕಠಿಣ ನೀತಿ ಅನುಸರಿಸಿ ಭದ್ರಗೊಳಿಸಬೇಕು. ಇದಕ್ಕೆ ಕಾರಣವೂ ಇದೆ. ನಾವು ಯಂತ್ರಗಳೊಡನೆ ಕೆಲಸಮಾಡುತ್ತಿರುವಾಗ ನಮ್ಮ ಅರಿವಿಗೇ ಬಾರದಂತೆ ಕೋಟಿ ಕೋಟಿ ಸೂಕ್ಷ್ಮಜೀವಿಗಳು ನಮ್ಮಿಂದ ಅವಕ್ಕೆ ವರ್ಗಾವಣೆಯಾಗುತ್ತವೆ. 1975ರಲ್ಲಿ ಮಂಗಳ ಗ್ರಹಕ್ಕೆ ವೈಕಿಂಗ್ ನೌಕೆಗಳನ್ನು ಕಳುಸಹಿಸುವ ಮೊದಲು ಇಡೀ ಯಂತ್ರ ವ್ಯವಸ್ಥೆಯನ್ನೇ ಕ್ರಿಮಿಶುದ್ಧೀಕರಣಕ್ಕೆ ಒಳಪಡಿಸಲಾಗಿತ್ತು. ಇಷ್ಟೆಲ್ಲದರ ನಡುವೆಯೂ `ಫಂಡಿಂಗ್’ ಪ್ರಶ್ನೆ ಬಂದಾಗ ಡೊನಾಲ್ಡ್ ಟ್ರಂಪ್ ಏನು ಮಾಡುತ್ತಾರೋ ಎಂಬುದು ನಾಸಾ ವಿಜ್ಞಾನಿಗಳನ್ನೂ ಚಿಂತೆಗೀಡುಮಾಡಿದೆ. ವಿಜ್ಞಾನದ ರೀತಿಯೇ ಹೀಗೆ. ರಾಜಕೀಯ ಹಸ್ತಕ್ಷೇಪವಾದರೂ ಅದು ತನ್ನತನ ಉಳಿಸಿಕೊಳ್ಳಬೇಕು, ಅಭಿವೃದ್ಧಿಯತ್ತ ಮುಖಮಾಡಬೇಕು.

Leave a Reply