ಸಿದ್ದರಾಮಯ್ಯ ಸರ್ಕಾರ ಸಂಘ ಪರಿವಾರಕ್ಕೆ ಹೆದರಿದೆಯೇ? ಪಿಣರಾಯಿ ಭೇಟಿ ವಿದ್ಯಮಾನದಲ್ಲಿ ದೇವೇಗೌಡರಿಗೆ ಉದ್ಭವಿಸಿದ ಪ್ರಶ್ನೆ

ನಗರದಲ್ಲಿ ಬಸ್ಸುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಬೇಕು, ದರ ಕಡಿಮೆ ಆಗಬೇಕು ಎಂದು ನಾಗರಿಕ ಸಂಘಟನೆಗಳು ಬೆಂಗಳೂರಿನಲ್ಲಿ ಹಕ್ಕೊತ್ತಾಯ ಪ್ರದರ್ಶನಗಳನ್ನು ನಡೆಸುತ್ತಿವೆ. ಶನಿವಾರ ಅಂಥದೇ ಒಂದು ಪ್ರದರ್ಶನದಲ್ಲಿ ನಟಿ ಶ್ರದ್ಧಾ ಶ್ರೀನಾಥ್ ಮತ್ತಿತರರು.

ಡಿಜಿಟಲ್ ಕನ್ನಡ ಟೀಮ್:

ಮಾಜಿ ಪ್ರಧಾನಿ ದೇವೇಗೌಡರಿಂದ ಶನಿವಾರ ಸುದ್ದಿಗೋಷ್ಟಿ. ಮುಖ್ಯಾಂಶ- ಸಿದ್ದರಾಮಯ್ಯ ಸರ್ಕಾರ ಮತ್ತು ಸಂಘ ಪರಿವಾರಕ್ಕೊಂದಿಷ್ಟು ತರಾಟೆ.

‘ಬರಗಾಲ, ಕಾನೂನು ಸುವ್ಯವಸ್ಥೆ ನಿರ್ವಹಣೆ ಸೇರಿದಂತೆ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಆಡಳಿತ ಯಂತ್ರ ಕುಸಿದು ಬಿದ್ದಿದೆ. ಮುಖ್ಯಮಂತ್ರಿ ಆದೇಶ ಮಾಡಿದರೂ, ಅದನ್ನು ಪಾಲಿಸುವ ಮನಸ್ಥಿತಿಯಲ್ಲಿ ಅಧಿಕಾರಿಗಳಿಲ್ಲ. ಅಧಿಕಾರಿಗಳು ಇಷ್ಟೊಂದು ಅಸಡ್ಡೆ ತೋರುತ್ತಿರುವುದನ್ನು ಈ ಹಿಂದೆ ಕಂಡಿಲ್ಲ’ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಒಂದಡೆ ಬರದಿಂದ ಜನ ನರಳುತ್ತಿದ್ದರೆ, ಮತ್ತೊಂದಡೆ ಕಾನೂನು ಸುವ್ಯವಸ್ಥೆ ಕುಸಿದಿದೆ. ಆರ್‍ಎಸ್‍ಎಸ್ ಕಪಿಮುಷ್ಟಿಯಲ್ಲಿ ಈ ಸರ್ಕಾರ ಇದ್ದಂತಿದೆ ಎಂದು ಕಿಡಿಕಾರಿದರು. ಕೇರಳದ ಮುಖ್ಯಮಂತ್ರಿಗಳು, ಮಂಗಳೂರು ಪ್ರವಾಸ ಕೈಗೊಂಡರೆ ಸರ್ಕಾರ ಅವರಿಗೆ ಸೂಕ್ತ ರಕ್ಷಣೆ ಕಲ್ಪಿಸದೇ ಮಹಾ ಲೋಪವೆಸಗಿದೆ. ಆ ಜಿಲ್ಲೆಯನ್ನು ಪ್ರತಿನಿಧಿಸುವ ಇಬ್ಬರೂ ಮೂವರು ಸಚಿವರಿದ್ದಾರೆ. ಅವರೇನು ಮಾಡುತ್ತಿದ್ದರು? ಜಾತ್ಯತೀತ ಸರ್ಕಾರ ಎಂದು ಹೇಳಿಕೊಳ್ಳುತ್ತೀದ್ದೀರಿ. ಅದಕ್ಕಾಗಿ ಹೋರಾಟ ನಡೆಸುವ ಮುಖ್ಯಮಂತ್ರಿಯೊಬ್ಬರು ರಾಜ್ಯ ಪ್ರವಾಸ ಕೈಗೊಂಡರೆ ಅವರನ್ನು ಗೌರವಿಸಿ, ಅವರಿಗೆ ರಕ್ಷಣೆ ಕೊಡುವ ಗೋಜಿಗು ಹೋಗುವುದಿಲ್ಲ. ನೀವೇನು ಆರ್‍ಎಸ್‍ಎಸ್ ಕಪಿಮುಷ್ಠಿಯಲ್ಲಿದ್ದೀರಾ? ಇಂತಹ ಶಕ್ತಿಗಳನ್ನು ಎದುರಿಸಿ, ಕಾನೂನು ಸುವ್ಯವಸ್ಥೆ ಕಾಪಾಡಲು ನಿಮಗೆ ಸಾಧ್ಯವಿಲ್ಲವೆ?

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರತಿ ದಿನ 476 ದೇಶಿಯ ಹಾಗೂ 28 ಅಂತರರಾಷ್ಟ್ರೀಯ ವಿಮಾನಗಳು ಬಂದಿಳಿಯುತ್ತವೆ. ಇಂತಹ ಪ್ರತಿಷ್ಠಿತ ವಿಮಾನ ನಿಲ್ದಾಣವನ್ನು ರನ್‍ವೇ ವಿಸ್ತರಣೆ ನೆಪದಲ್ಲಿ ಬೆಳಿಗಿನಿಂದ ಸಂಜೆಯವರೆಗೂ, ಮುಚ್ಚಿ ಪ್ರಯಾಣಿಕರಿಗೆ ಗೋಳುಂಟುಮಾಡಿದ್ದಾರೆ. ರನ್‍ವೇ ವಿಸ್ತರಣೆ ಮಾಡಿದರೆ ಹಳೇಯ ಹೆಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಪಯಾರ್ಯ ವ್ಯವಸ್ಥೆ ಮಾಡಲಿ. 800 ಚದುರ ಕಿಲೋ ಮೀಟರ್ ವಿಸ್ತೀರ್ಣ ಹಾಗೂ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಬೆಂಗಳೂರಿಗೆ ಒಂದು ವಿಮಾನ ನಿಲ್ದಾಣ ಸಾಕಾಗುವುದಿಲ್ಲ. ಇನ್ಫೋಸಿಸ್ ನಾರಾಯಣಮೂರ್ತಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಿಮಾನ ನಿಲ್ದಾಣ ಮಾಡಲು ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ವಿಮಾನ ಪ್ರಯಾಣಿಕರಿಗೆ ಇದೇ ರೀತಿ ತೊಂದರೆ ಮುಂದುವರೆದರೆ ನಾನು ಹೋರಾಟಕ್ಕೆ ಇಳಿಯಬೇಕಾಗುತ್ತದೆ, ಜನಾಂದೋಲ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹಾಸನ ಜಿಲ್ಲೆಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಬೇಕು. ಹಾಗೂ ಬೆಳೆ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಅವರು ಸ್ಪಂದಿಸದಿದ್ದರೆ, ಅವರ ಮನೆಯ ಮುಂದೆ ಧರಣಿ ಕೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮಾರ್ಚ್ 15 ರಂದು ನೂತನ ಜೆಡಿಎಸ್ ಕಚೇರಿಯನ್ನು ಉದ್ಘಾಟಿಸಲಾಗುವುದು. ಅರಮನೆ ಮೈದಾನದ ಕಾರ್ಯಕ್ರಮವನ್ನು ಈ ತಿಂಗಳ ಅಂತ್ಯಕ್ಕೆ ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

 

ಕುಮಾರಸ್ವಾಮಿಯವರ ಆರೋಗ್ಯ ಏರುಪೇರು

ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದರಿಂದ ಶುಕ್ರವಾರ ಸಂಜೆ ನಗರದ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆತಂಕ ಪಡುವ ಆರೋಗ್ಯ ಏರುಪೇರೇನೂ ಇದಲ್ಲ. ಚಿತ್ರನಟ ಹಾಗೂ ಮಾಜಿ ಸಚಿವ ಅಂಬರೀಷ್ ಅವರಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯ ಡಾ.ಸತೀಶ್ ಅವರು ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಮನೆಗೆ ತೆರಳಿದರೆ ವಿಶ್ರಾಂತಿ ಸಿಗುವುದು ಕಷ್ಟವಾದ್ದರಿಂದ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಲಾಗಿದೆ. ಮೈಸೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಕೆ.ಎಸ್. ರಂಗಪ್ಪ ಅವರ ಕುಟುಂಬದ ಸಮಾರಂಭದಲ್ಲಿ ಭಾಗವಹಿಸಲು ಮೈಸೂರಿಗೆ ತೆರಳಿದ್ದ ಸಂದರ್ಭದಲ್ಲಿ ಎಚ್‍ಡಿಕೆ ಅವರು ತೀವ್ರ ವಾಗಿ ಬಳಲಿದ್ದರು. ಅಲ್ಲದೇ ಬೆಂಬಲಿಗರು ಸಿಡಿಸಿದ ಪಟಾಕಿ ಹೊಗೆಯಿಂದ ಅವರಿಗೆ ಉಸಿರಾಟದ ಸಮಸ್ಯೆಯಾಗಿತ್ತು.

Leave a Reply