ಈ ಯೋಧನನ್ನು ನೇಣಿಗೆ ಕೊರಳೊಡ್ಡುವಂತೆ ಮಾಡಿದ್ದರಲ್ಲಿ ಮಾಧ್ಯಮದ ಪಾತ್ರವೇ ದೊಡ್ಡದಿಲ್ಲವೇ?

 

ಡಿಜಿಟಲ್ ಕನ್ನಡ ವಿಶೇಷ:

ಲ್ಯಾನ್ಸ್ ನಾಯಕ್ ರಾಯ್ ಮ್ಯಾಥ್ಯೂ(33) ಆತ್ಮಹತ್ಯೆಗೆ ಶರಣಾಗಿದ್ದು ಶುಕ್ರವಾರ ಬಹಿರಂಗವಾಯಿತು. ಅದರ ಬೆನ್ನಲ್ಲೇ ಶುರುವಾದ ಚರ್ಚೆಗಳೆಂದರೆ- ಸೇನೆಯಲ್ಲಿ ಸಹಾಯಕ ಪದ್ಧತಿ ಇರಬೇಕೆ? ಇದು ಅವಮಾನಕಾರಿಯಲ್ಲವೇ? ಯೋಧ ನಿಜಕ್ಕೂ ಆತ್ಮಹತ್ಯೆ ಮಾಡಿಕೊಂಡಿರುವುದಾ ಅಥವಾ ಇನ್ಯಾವುದಾದರೂ ಕಾರಣಗಳಿವೆಯಾ? ಸೇನೆಯ ಮೇಲುಹಂತದ ಅಧಿಕಾರಿಗಳು ಅವರನ್ನು ಆತ್ಮಹತ್ಯೆಗೆ ನೂಕಿದರೇ?

ಎಲ್ಲ ಚರ್ಚಾರ್ಹ ವಿಷಯಗಳೇ. ಆದರೆ ಎಲ್ಲವನ್ನೂ ಚರ್ಚೆಗೆ ಒಳಪಡಿಸುವ ಮಾಧ್ಯಮದ ಆಯಾಮ ಮಾತ್ರ ಈ ಮೇಲಿನ ಪ್ರಶ್ನೆಗಳಿಗೆ ಸಿಗುವುದೇ ಇಲ್ಲ ಎಂಬುದು ಸೋಜಿಗ. ಏಕೆಂದರೆ ಎಲ್ಲವೂ ಶುರುವಾಗಿದ್ದು, ‘ದ ಕ್ವಿಂಟ್’ ತಾಣದ ಕುಟುಕು ಕಾರ್ಯಾಚರಣೆಯಿಂದ. ಲ್ಯಾನ್ಸ್ ನಾಯಕ್ ರಾಯ್ ಮ್ಯಾಥ್ಯೂರನ್ನು ಮಾತಿಗೆ ಎಳೆಯಲಾಗಿದೆ. ಅವರಿಗೆ ಗೊತ್ತಿಲ್ಲದಂತೆ ಚಿತ್ರೀಕರಣ ನಡೆಸಲಾಗಿದೆ. ಸಹಾಯಕ್ ಪಾತ್ರದಲ್ಲಿ ಏನೆಲ್ಲ ಕಷ್ಟವಾಗುತ್ತದೆ ಎಂದು ಹೇಳುವ ಭರದಲ್ಲಿ ಆ ಯೋಧ ತನ್ನ ಮೇಲಿನವರ ಮೇಲೂ ಹರಿಹಾಯ್ದಿದ್ದಾರೆ. ಆದರೆ ಇಲ್ಲೆಲ್ಲೂ ಮಾಧ್ಯಮ ತನ್ನ ಮೇಲೆ ಕುಟುಕು ನಡೆಸುತ್ತಿದೆ ಅಂತ ತಿಳಿದಿಲ್ಲ.

ಯಾವಾಗ ವಿಡಿಯೋ ಬಿಡುಗಡೆಯಾಯಿತೋ ಆಗ ಆಘಾತ, ಮೇಲಿನವರಿಗೆ ಬಯ್ಯಬಾರದಿತ್ತೆಂಬ ಪಶ್ಚಾತಾಪ, ಕೆಲಸ ಹೋಗುವ ಹೆದರಿಕೆ ಎಲ್ಲವೂ ಅವರಿಗೆ ಕಾಡಿದೆ. ಸೇನೆ ತನ್ನ ಮೇಲೆ ಏನು ಕ್ರಮ ಕೈಗೊಂಡಿತೋ ಎಂಬ ಹೆದರಿಕೆಯಲ್ಲಿ ರಜೆಯನ್ನೂ ಹಾಕದೇ ಕರ್ತವ್ಯ ತೊರೆದು ಹೋದ ವ್ಯಕ್ತಿ ನಂತರ ಕಂಡಿದ್ದು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ.

ನಿಜ. ಸೇನೆ ಅದರೊಳಗಿನ ಸಹಾಯಕ ಪದ್ಧತಿ ಇವೆಲ್ಲ ಪ್ರಶ್ನಾತೀತ ಸಂಗತಿಗಳಲ್ಲ. ಆದರೆ ಯಾರನ್ನೋ ಬಲಿಪಶುವಾಗಿಸಿ ಚರ್ಚೆಯ ಕುಲುಮೆ ಹೊತ್ತಿಸಬೇಕಾದ ದರ್ದಿದೆಯೇ? ಲ್ಯಾನ್ಸ್ ನಾಯಕ್ ಮ್ಯಾಥ್ಯೂ ಆತ್ಮಹತ್ಯೆ ಸಂಬಂಧ ಪ್ರಶ್ನೆಗೆ ಒಳಗಾಗಬೇಕಿರುವುದು ಕ್ವಿಂಟ್ ಜಾಲತಾಣದ ಬೇಜವಾಬ್ದಾರಿ ರೋಚಕ ಪ್ರಯತ್ನವೇ ಹೊರತು ಸೇನೆಯಲ್ಲ.

ಇದೇ ಮಾತನ್ನು ಮೃತ ಯೋಧನ ಕುಟುಂಬವೂ ಹೇಳುತ್ತಿದೆ. ಏಕೆಂದರೆ ವಿಡಿಯೋ ಬಂದ ನಂತರವೂ ಸೇನೆ ಮ್ಯಾಥ್ಯೂ ಅವರನ್ನು ಕಟಕಟೆಯಲ್ಲಿ ನಿಲ್ಲಿಸಿರಲಿಲ್ಲ. ಹಿರಿಯ ಸೇನಾಧಿಕಾರಿಗಳ ಮೇಲೆ ದೂರಿದ ಕಾರಣಕ್ಕೆ ಅದು ಕ್ರಮ ತೆಗೆದುಕೊಳ್ಳುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಖುದ್ದು ಮ್ಯಾಥ್ಯೂ ಆಘಾತಕ್ಕೆ ಒಳಗಾದರು. ಏಕೆಂದರೆ ಅದ್ಯಾವುದೋ ಗಳಿಗೆಯಲ್ಲಿ ತಮ್ಮ ಸಿಟ್ಟನ್ನು ಹೊರಹಾಕಿಕೊಂಡಿದ್ದರಷ್ಟೆ. ಮಾಧ್ಯಮದ ಮುಂದೆ ಸೇನೆಯನ್ನು ಹಳಿಯಬೇಕು, ತನ್ನ ಕಷ್ಟಕ್ಕೆ ಸೇನೆಯ ಅಧಿಕಾರಿಗಳನ್ನು ಗುರಿಯಾಗಿಸಬೇಕು ಎಂಬಂಥ ಯಾವ ಉದ್ದೇಶಗಳಿಲ್ಲದೇ ಆಡಿದ್ದ ಮಾತುಗಳವು. ಅವನ್ನು ಅವರಿಗರಿವಿಲ್ಲದಂತೆ ಚಿತ್ರಿಸಿಕೊಂಡು ಪ್ರಸಾರ ಮಾಡುವುದು ಕ್ಷುಲ್ಲಕತನವಲ್ಲವೇ?

ಸರಳವಾಗಿ ಹೇಳಬೇಕೆಂದರೆ- ಕೆಲಸದ ಒತ್ತಡದಲ್ಲಿರುವ ವ್ಯಕ್ತಿ ‘ಅಯ್ಯೋ ನನ್ನ ಬಾಸ್ ಸೈತಾನ, ಏಗಿ ಏಗಿ ನಂಗೆ ಸಾಕಾಗಿದೆ’ ಅಂತ ಹೇಳಿದ್ದನ್ನು ವಿಡಿಯೋ ಮಾಡಿ ಸಾರ್ವಜನಿಕ ಪ್ರದರ್ಶನಕ್ಕಿರಿಸಿಬಿಟ್ಟರೆ ಆ ವ್ಯಕ್ತಿಗೆ ಆಗುವ ಮಾನಸಿಕ ಆಘಾತದ ಪರಿ ಏನು?

ಮ್ಯಾಥ್ಯೂಗೆ ಆಗಿದ್ದು ಅದೇ ಎಂಬುದು ಅವರ ಕುಟುಂಬದವರ ಮಾತಿನಲ್ಲಿ ಸ್ಪಷ್ಟವಾಗುತ್ತದೆ. ಮ್ಯಾಥ್ಯೂ ಸಹೋದರ, ಚಿಕ್ಕಪ್ಪ ಎಲ್ಲರೂ ಮಾಧ್ಯಮದ ಬೇಜವಾಬ್ದಾರಿ ಚಿತ್ರೀಕರಣದಿಂದ ಯೋಧ ಸಾಯುವಂತಾಯಿತು ಎಂದೇ ಹೇಳಿದ್ದಾರೆ. ಅಲ್ಲದೇ ತನ್ನ ಮೇಲಿನ ಅಧಿಕಾರಿಗೆ ಸಾರಿ ಎಂದು ಮ್ಯಾಥ್ಯೂ ಸಂದೇಶ ಕಳುಹಿಸಿರುವುದರಲ್ಲೂ ಇದು ಸ್ಪಷ್ಟವಿದೆ. ಫೆಬ್ರವರಿ 23,24,25 ರಂದು ಮನೆಗೆ ಫೋನ್ ಮಾಡಿದ್ದ ಮ್ಯಾಥ್ಯೂ ಪದೇ ಪದೆ ಹೇಳಿಕೊಂಡಿದ್ದು ಈ ಆತಂಕವನ್ನೇ. ಆತ್ಮಹತ್ಯೆ ಪತ್ರದಲ್ಲೂ ‘ಕೋರ್ಟ್ ಮಾರ್ಶಲ್ ಗೆ ಒಳಗಾಗುವುದಕ್ಕಿಂತ ಸಾಯುವುದು ಮೇಲು’ ಎಂದು ಬರೆದಿರುವ ವರದಿಗಳಿವೆ.

ಅವರ ಹೆಂಡತಿ ಫಿನಿ ಹೇಳಿರುವಂತೆ, ‘ನನಗೆ ಫೋನ್ ಮಾಡಿದಾಗ ಅವರು ಹೆದರಿಕೆಯಲ್ಲಿದ್ದರು. ವಿಡಿಯೋ ಪ್ರಸಾರವಾಗಿದ್ದಕ್ಕೆ ಗಾಬರಿಗೆ ಬಿದ್ದಿದ್ದರು. ಏನಾಗುತ್ತದೋ ಎಂದು ಅಳತೊಡಗಿದರು. ಧೈರ್ಯವಾಗಿರಿ ಎಂದು ಹೇಳಿದ್ದೆ. ನಂತರ ತಿರುಗಿ ಫೋನ್ ಮಾಡಿದಾಗ ಅವರ ಫೋನ್ ಸ್ವಿಚ್ ಆಫ್ ಆಗಿತ್ತು.’

ಅಲ್ಲಿಗೆ ಮಾಧ್ಯಮವು ಒಂದು ಬಲಿ ಪಡೆದಿರುವುದು ಸ್ಪಷ್ಟ. ಇದರರ್ಥ ಸೈನ್ಯದ ಸಹಾಯಕ ಪದ್ಧತಿಯನ್ನೋ ಇಲ್ಲವೇ ಸರ್ಕಾರದ ಹಲವು ಅಧಿಕಾರಿಗಳು ಕಚೇರಿ ಕೆಲಸದವರನ್ನು ತಮ್ಮ ಮನೆ ಕೆಲಸಕ್ಕೆ ಬಳಸಿಕೊಳ್ಳುವುದನ್ನೋ ಪ್ರಶ್ನಿಸಬಾರದು ಅಂತಲ್ಲ. ಆದರೆ ಇಲ್ಲೆಲ್ಲ ಸಂತ್ರಸ್ತನಿಗೆ ನ್ಯಾಯ ಕೊಡಿಸುವುದು ಕಾಳಜಿಯಾಗಿರಬೇಕೇ ಹೊರತು ರೋಚಕ ಸರಕು ದೊರಕಿಸಿಕೊಳ್ಳುವ ತೀಟೆಯಲ್ಲ. ನಂಗೊಂದು ವಿಡಿಯೋ ಸಿಕ್ಕಿತು ಎಂಬುದಷ್ಟೇ ಮುಖ್ಯವಾಗಿಹೋದರೆ ಪರಿಣಾಮ ಗೌಣವಾಗುತ್ತದೆ. ಲ್ಯಾನ್ಸ್ ನಾಯಕ್ ಮ್ಯಾಥ್ಯೂ ಅಂಥವರ ಬದುಕನ್ನು ಸುಧಾರಿಸುವ ಉದ್ದೇಶದಿಂದ ನಿರೂಪಿತವಾಗಬೇಕಿದ್ದ ಸುದ್ದಿಕತೆ, ಆಂತರ್ಯದಲ್ಲಿ ಪ್ರಚೋದನೆಯನ್ನು ಮಾತ್ರವೇ ನೆಚ್ಚಿಕೊಂಡಿದ್ದರಿಂದ ಆ ಜೀವವೇ ಇಲ್ಲವಾಗಿದೆ.

Leave a Reply