ತನ್ನ ಮೊಮ್ಮಗ ಸರ್ಕಾರಿ ನೌಕರಿ ಸೇರಲಿ, ಕಾಶ್ಮೀರದ ಬಾಕಿ ಹುಡುಗರು ಕಲ್ಲು ತೂರಿಕೊಂಡಿರಲಿ: ಇದು ಪ್ರತ್ಯೇಕತಾವಾದಿ ಗಿಲಾನಿ ಬೂಟಾಟಿಕೆ

ಡಿಜಿಟಲ್ ಕನ್ನಡ ಟೀಮ್:

ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳ ತತ್ವ ಗೊತ್ತಲ್ಲ? ಸರ್ಕಾರದ ವಿರೋಧ, ಸಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ, ಶಾಲೆಗಳಿಗೆ ಬೆಂಕಿ ಹಚ್ಚಿ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡುವುದು, ಅನವರತ ಬಂದಿಗೆ ಕರೆಕೊಟ್ಟು ಜನಜೀವನ ಅಸ್ತವ್ಯಸ್ತಗೊಳಿಸಿಕೊಂಡಿರುವುದು… ಇವೆಲ್ಲ ಅವರ ಕಾಯಕ. ಈ ಪ್ರತ್ಯೇಕತಾವಾದಿಗಳ ಪಾಳೆಯದ ಹಿರಿಯಜ್ಜ ಎಂದರೆ ಸಯ್ಯದ್ ಶಾ ಗಿಲಾನಿ.

ಗಿಲಾನಿ ಸೇರಿದಂತೆ ಎಲ್ಲ ಪ್ರತ್ಯೇಕತಾವಾದಿಗಳ ಬೂಟಾಟಿಕೆ ಆಗಾಗ ಬಯಲಾಗುತ್ತಲೇಬಂದಿದೆ. ಏಕೆಂದರೆ ಕಾಶ್ಮೀರಿ ಯುವಕರನ್ನು ಸೇನೆಯ ವಿರುದ್ಧ ಕಲ್ಲು ತೂರುವುದಕ್ಕೆ ಎತ್ತಿಕಟ್ಟುವ, ಸಾರ್ವಜನಿಕ ಆಸ್ತಿಪಾಸ್ತಿ ವಿಧ್ವಂಸಗೊಳಿಸುವ ಪ್ರತ್ಯೇಕತಾವಾದಿಗಳ ಮಕ್ಕಳ್ಯಾರೂ ಹಿಂಸಾತ್ಮಕ ಸಂಘರ್ಷದ ಭಾಗವಾಗಿಯೇ ಇಲ್ಲ. ಅವರೆಲ್ಲ ಒಳ್ಳೆಯ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ನಿರತರು. ಕುಚೋದ್ಯವೆಂದರೆ ಯಾವ ಭಾರತ ಸರ್ಕಾರ ತಮ್ಮದಲ್ಲವೇ ಅಲ್ಲ ಎಂದು ಜಿಹಾದ್ ಸಾರಿದ್ದಾರೋ ಅದೇ ಸರ್ಕಾರದ ಸಂಸ್ಥೆಗಳಲ್ಲೇ ಪ್ರತ್ಯೇಕತಾವಾದಿಗಳ ಕುಟುಂಬದವರು ನೌಕರಿ ಪಡೆದಿರುವ ಉದಾಹರಣೆಗಳಿವೆ.

ಇದಕ್ಕೆ ಒಂದು ಹೊಸ ಉದಾಹರಣೆ ಸೇರ್ಪಡೆಗೊಂಡಿದೆ. ಅದೆಂದರೆ ಈ ಸಯ್ಯದ್ ಅಲಿ ಶಾ ಗಿಲಾನಿ ಮೊಮ್ಮಗ ಅನೀಸ್ ಶಾ ಈಗ ಜಮ್ಮು-ಕಾಶ್ಮೀರ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಭಾಗವಾಗಿರುವ ‘ಶೇರ್ ಇ ಕಾಶ್ಮೀರಿ ಇಂಟರ್ನ್ಯಾಷನಲ್ ಕನ್ವೆನ್ಶನ್ ಸೆಂಟರ್’ನಲ್ಲಿ ಸಂಶೋಧನಕಾರರಾಗಿ ನೌಕರಿ ಪಡೆದಿದ್ದಾರೆ.

ತಾತನ ನಿಲುವುಗಳಿಗೆ ಅವನ ಕುಟುಂಬಸ್ಥರು ಬೆಲೆ ತೆರಬೇಕು ಎಂಬುದೇನಿಲ್ಲ ನಿಜ. ಆದರೆ ಕಂಡವರ ಮಕ್ಕಳನ್ನು ಕಲ್ಲು ತೂರಾಟಕ್ಕಿಳಿಸಿ ಗಿಲಾನಿಯಂಥವರು ಎಂಥ ನೀಚತನ ಮೆರೆಯುತ್ತಿದ್ದಾರೆ ಎಂಬುದಕ್ಕೆ ಇದೊಂದು ಉದಾಹರಣೆ. ಏಕೆಂದರೆ ಈ ಉದ್ಯೋಗಕ್ಕೆ ನೇಮಕ ಪ್ರಕ್ರಿಯೆ ಆರಂಭವಾಗಿದ್ದು ನವೆಂಬರ್ 2016ರಲ್ಲಿ. ಅಂದರೆ ಅದಕ್ಕೂ ತಿಂಗಳ ಹಿಂದೆಲ್ಲ ಕಾಶ್ಮೀರದ ನಾಲ್ಕೈದು ಪ್ರಾಂತ್ಯಗಳಲ್ಲಿ ಇನ್ನಿಲ್ಲದ ಕಲ್ಲುತೂರಾಟ, ಸೇನೆ ವಿರುದ್ಧ ಹಿಂಸಾಚಾರ ನಡೆದಿದ್ದವು. ಇವೆಲ್ಲವಕ್ಕೂ ಗಿಲಾನಿಯ ಬಹಿರಂಗ ಬೆಂಬಲವಿತ್ತು. ನಂತರದ ಹಂತದಲ್ಲಿ ಕಾಶ್ಮೀರದ ಮುಂದಿನ ತಲೆಮಾರಿನ ಭವಿಷ್ಯವನ್ನೂ ಹಾಳು ಮಾಡುವುದಕ್ಕೆ ಶಾಲೆಗಳಿಗೆ ಬೆಂಕಿ ಹಚ್ಚಲಾಯಿತು. ಇಲ್ಲಿಯೂ ಎಂಥ ನೀಚ ದ್ವಿಮುಖ ನಿಲುವು ಈ ಪ್ರತ್ಯೇಕತಾವಾದಿಗಳದ್ದು ಗಮನಿಸಿ. ಇದೇ ಗಿಲಾನಿ ಅಕ್ಟೋಬರ್ 2016ರಲ್ಲಿ ಶಾಲೆ ತೆರೆಯುವುದರ ವಿರುದ್ಧ ಕರೆ ಕೊಡುತ್ತಾನೆ. ಕೆಲದಿನಗಳಲ್ಲೇ ಗಿಲಾನಿಯ ಮಗ ನಯೀಮ್ ಮಗಳ ಶಾಲಾ ಪರೀಕ್ಷೆ ಎದುರಾಗುತ್ತದೆ. ಅದನ್ನು ಮಾತ್ರ ನಿರ್ವಿಘ್ನವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ ಪ್ರತ್ಯೇಕತಾವಾದಿಗಳು.

ಇದೀಗ ಮೊಮ್ಮಗ ಅನೀಸ್ಗೆ ವಾರ್ಷಿಕ 12 ಲಕ್ಷ ಆದಾಯದ ಸರ್ಕಾರಿ ಕೆಲಸ ಸಿಕ್ಕಿರುವುದರಲ್ಲೂ ವಿಶೇಷ ವಿನಾಯ್ತಿ ಏನೂ ಸಿಕ್ಕಿಲ್ಲ, ಎಲ್ಲರಂತೆ ಅರ್ಜಿ ಸಲ್ಲಿಸಿ- ಸಂದರ್ಶನಕ್ಕೆ ಹಾಜರಾಗಿ ಉದ್ಯೋಗ ಪಡೆದಿದ್ದಾರೆಂದು ಸಂಬಂಧಪಟ್ಟ ಇಲಾಖೆ ಸ್ಪಷ್ಟನೆ ಕೊಟ್ಟಿದೆ.

ವಿಷಯ ಅದಲ್ಲ. ಕಾಶ್ಮೀರದ ಸ್ವಾತಂತ್ರ್ಯ, ಭಾರತ ವಿರೋಧ ಅಂತೆಲ್ಲ ಕಲ್ಲು ತೂರಾಟಗಾರರನ್ನು ಸೃಷ್ಟಿಸುತ್ತಿರುವ ಗಿಲಾನಿಯಂಥ ಪ್ರತ್ಯೇಕತಾವಾದಿಗಳಿಗೆ ತಮ್ಮ ಮಕ್ಕಳು-ಮೊಮ್ಮಕ್ಕಳನ್ನು ಮಾತ್ರ ಅದರಲ್ಲಿ ಪಾಲ್ಗೊಳ್ಳದಂತೆ ಮಾಡಿ ಭವಿಷ್ಯ ಚೆನ್ನಾಗಿಟ್ಟಿರುವ ಧೂರ್ತತನವಿದೆ. ಇವನ್ನೆಲ್ಲ ಗಮನಿಸಿಯೂ ಅವತ್ತವತ್ತಿನ ಕಾಸಿಗಾಗಿ ಕಲ್ಲು ತೂರಾಡಿಕೊಂಡು ಭಾರತದ ಅಭಿವೃದ್ಧಿಗಾಥೆಯಿಂದ ದೂರವಿರುವ ಕಾಶ್ಮೀರಿ ಯುವಕರ ತಲೆಯಲ್ಲೇನಿದೆ?

Leave a Reply