ಬಿಎಸ್ಎನ್ಎಲ್ ನಿಂದ 2510 ಕಿರಿಯ ಟೆಲಿಕಾಂ ಅಧಿಕಾರಿಗಳ ನೇಮಕ, ಸೋಮವಾರ ಅರ್ಜಿ ಪ್ರಕಟ

ಡಿಜಿಟಲ್ ಕನ್ನಡ ಟೀಮ್:

ಭಾರತ್ ಸಂಚಾರಿ ನಿಂಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ದೇಶದಾದ್ಯಂತ 2,510 ಇಂಜಿನಿಯರ್ ಗಳನ್ನು ಕಿರಿಯ ಟೆಲಿಕಾಂ ಅಧಿಕಾರಿ ಹುದ್ದೆಗೆ ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಕಳೆದ ಫೆಬ್ರವರಿಯಲ್ಲಿ ನಡೆದ ಗೇಟ್ ಪರೀಕ್ಷೆ ಬರೆದ ಅಭ್ಯರ್ಥಿಗಳೂ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು.

ಈ ಹುದ್ದೆಯ ಅರ್ಜಿಯನ್ನು ಬಿಎಸ್ಎನ್ಎಲ್ ಮಾರ್ಚ್ 6ರಂದು ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲಿದೆ. ಒಂದು ತಿಂಗಳ ಕಾಲ ಅಂದರೆ ಏಪ್ರಿಲ್ 6ರವರೆಗೂ ಅರ್ಜಿ ಸಲ್ಲಿಸಲು ಕಾಲಾವಕಾಶವಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಗೇಟ್ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದೇ ಹೊರತು ಇದರ ಹೊರತಾಗಿ ಬಿಎಸ್ಎನ್ಎಲ್ ಯಾವುದೇ ರೀತಿಯ ಪ್ರತ್ಯೇಕ ಪರೀಕ್ಷೆಯನ್ನಾಗಲಿ ಅಥವಾ ಸಂದರ್ಶನವನ್ನಾಗಲಿ ನಡೆಸುವುದಿಲ್ಲ ಎಂದು ಬಿಎಸ್ಎನ್ಎಲ್ ತಿಳಿಸಿದೆ.

ದೇಶದಾದ್ಯಂತ ಸೇವೆ ನೀಡುತ್ತಿರುವ ಬಿಎಸ್ಎನ್ಎಲ್ ಯಾವ ಯಾವ ವಿಭಾಗಗಳಲ್ಲಿ ಎಷ್ಟು ಹುದ್ದೆ ಖಾಲಿ ಇವೆಯೋ ಅದರ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಇಲ್ಲಿ ಆಯ್ಕೆಯಾದ ಅಭ್ಯರ್ಥಿ ಭಾರತದ ಎಲ್ಲಾ ಕ್ಯಾಡರ್ ಗಳ ಸೇವೆಗೂ ಲಭ್ಯವಾಗುವಂತೆ ಬಡ್ತಿ ಪಡೆಯುವವರೆಗೂ ಈಗ ಆಯ್ಕೆಯಾಗುವ ಪ್ರದೇಶದಲ್ಲೇ ಕಾರ್ಯನಿರ್ವಹಿಸಬೇಕು. 2510 ಹುದ್ದೆಗಳ ಪೈಕಿ ಕರ್ನಾಟಕ ರಾಜ್ಯದಲ್ಲೆ 300 ಹುದ್ದೆಗಳು ಖಾಲಿ ಇವೆ. ಈ ಅಭ್ಯರ್ಥಿಗಳಿಗೆ ₹ 16,400 ರಿಂದ ₹ 40,500 ವರೆಗಿನ ವೇತನ ಸಿಗಲಿದೆ.

ಈ ಕುರಿತ ಹೆಚ್ಚಿನ ಮಾಹಿತಿಯನ್ನು http://www.externalbsnlexam.com/ ಈ ವೆಬ್ ಸೈಟಿನಲ್ಲಿ ಪಡೆಯಬಹುದು.

Leave a Reply