ಪೋಷಕರೇ ಎಚ್ಚರ: ಮಕ್ಕಳಿಗೆ ಅಪಾಯಕಾರಿಯಾಗುತ್ತಿದೆ ಕೈ ತೊಳೆಯುವ ದ್ರಾವಣ

ಡಿಜಿಟಲ್ ಕನ್ನಡ ಟೀಮ್:

ಇತ್ತೀಚಿನ ದಿನಗಳಲ್ಲಿ ಮಕ್ಕಳು ಕೊಳಕು ಕೈಗಳನ್ನು ಸ್ವಚ್ಛ ಮಾಡಿಕೊಳ್ಳಲು ಸ್ಯಾನಿಟೈಸರ್ ಗಳ ಬಳಕೆ ತೀರಾ ಸಾಮಾನ್ಯವಾಗಿಬಿಟ್ಟಿದೆ. ಈ ಸ್ಯಾನಿಟೈಸರ್ ಗಳು ಕೈಯಲ್ಲಿರುವ ಕೀಟಾಣುಗಳನ್ನು ಕೊಂದು ಶುದ್ಧವಾಗಿಡುತ್ತದೆ ಎಂಬುದು ಎಲ್ಲರ ನಂಬಿಕೆ. ಈಗ ಈ ಸ್ಯಾನಿಟೈರ್ ಗಳಿಂದ ಮಕ್ಕಳಿಗೆ ಉಪಯೋಗವಾಗುವುದಕ್ಕಿಂತ ಅಪಾಯವಾಗುವುದೇ ಹೆಚ್ಚು ಎನ್ನುವ ಅಂಶ ಬೆಳಕಿಗೆ ಬಂದಿದೆ.

ಹೌದು, ಮಕ್ಕಳು ಈ ಸ್ಯಾನಿಟೈಸರ್ ಬಳಕೆಯಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅಮೆರಿಕದ ಸಂಶೋಧಕರು ಬಹಿರಂಗಪಡಿಸಿದ್ದಾರೆ. ಈ ಸ್ಯಾನೆಟೈಸರ್ ಗಳು ಮಕ್ಕಳ ಹೊಟ್ಟೆ ಸೇರಿದರೆ ಜನನಾಂಗದಲ್ಲಿ ನೋವು, ವಾಂತಿ, ಹೊಟ್ಟೆ ನೋವು ಸೇರಿದಂತೆ ಇತರೆ ಆರೋಗ್ಯದ ಸಮಸ್ಯೆ ಎದುರಾಗಲಿವೆ ಎಂದು ಅಮೆರಿಕದ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಅಮೆರಿಕ ಕಾಯಿಲೆ ನಿಯಂತ್ರಣ ಕೇಂದ್ರದ ವಿಜ್ಞಾನಿಗಳು ಅಧ್ಯಯನ ನಡೆಸಿದ್ದು, ಈ ಸಂಶೋಧನೆಯಲ್ಲಿ ಸ್ಯಾನಿಟೈಸರ್ ಗಳ ದುಷ್ಪರಿಣಾಮ ಬೆಳಕಿಗೆ ಬಂದಿದೆ. ಈ ಸ್ಯಾನಿಟೈಸರ್ ಗಳಲ್ಲಿ ಅಪಾಯಕಾರಿ ಮದ್ಯದ ಅಂಶವಿರುತ್ತದೆ. ಮಕ್ಕಳು ಕೈ ತೊಳೆಯಲು ಈ ಸ್ಯಾನಿಟೈಸರ್ ಗಳನ್ನು ಬಳಸುವ ವೇಳೆ ಅವುಗಳನ್ನು ನೆಕ್ಕುವ ಪರಿಪಾಠ ಗಮನಕ್ಕೆ ಬಂದಿವೆ. ಕೆಲವೊಮ್ಮೆ ಕೈ ತೊಳೆದ ನಂತರವೂ ಸ್ಯಾನಿಟೈಸರ್ ಗಳ ಅಂಶ ಹೊಟ್ಟೆ ಸೇರುವ ಸಾಧ್ಯತೆಗಳಿದ್ದು, ಇಂತಹ ಸಂದರ್ಭಗಳಲ್ಲಿ ಮಕ್ಕಳ ಆರೋಗ್ಯ ಹದಗೆಡುವ ಸಾಧ್ಯತೆ ಇದೆ ಎಂದಿದ್ದಾರೆ ಸಂಶೋಧಕರು.

2011ರಿಂದ 2014ರವರೆಗೆ 12 ವರ್ಷದೊಳಗಿನ ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಈ ಮಕ್ಕಳು ಬಳಸುತ್ತಿದ್ದ ಸ್ಯಾನಿಟೈಸರ್ ಗಳಲ್ಲಿನ ಕೆಲವು ಅಂಶಗಳನ್ನು ವಿಷ ಎಂದು ವಿಜ್ಞಾನಿಗಳು ಪರಿಗಣಿಸಿದ್ದಾರೆ.

ಈ ಅಧ್ಯಯನದಲ್ಲಿ 12 ವರ್ಷದ ಮಕ್ಕಳಲ್ಲಿ 70,669 ಅಪಾಯಕಾರಿ ಅಂಶಗಳು ಕಂಡು ಬಂದಿದ್ದು, ಆ ಪೈಕಿ ಶೇ92ರಷ್ಟು ಅದರೆ 65,669 ಮದ್ಯದ ಸಾರ ಹೊಂದಿರುವ ಅಂಶಗಳಿವೆ. ಇನ್ನು ಶೇ.8ರಷ್ಟು ಅಂದರೆ 5,376 ಅಂಶಗಳು ಮದ್ಯರಹಿತ ಅಪಾಯಕಾರಿ ಅಂಶಗಳೆವೆ.

ಮಕ್ಕಳು ಈ ಸ್ಯಾನಿಟೈಸರ್ ಬಳಕೆ ಮಾಡುವ ಸಂಖ್ಯೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಲು ನಿಖರವಾದ ಕಾರಣ ಏನು ಎಂಬುದು ವಿಜ್ಞಾನಿಗಳಿಗೆ ತಿಳಿದು ಬಂದಿಲ್ಲ. ಆದರೆ ಜ್ವರದಂತಹ ಸಾಂಕ್ರಾಮಿಕ ರೋಗ ಹೆಚ್ಚಾದ ಸಂದರ್ಭದಲ್ಲಿ ಹಾಗೂ ಮಕ್ಕಳು ಶಾಲೆಗೆ ಹೋಗುವ ಸಂದರ್ಭದಲ್ಲಿ ಇವುಗಳ ಬಳಕೆ ಹೆಚ್ಚಾಗಿವೆ ಎಂಬುದು ಗಮನಕ್ಕೆ ಬಂದಿವೆ.

Leave a Reply