ಮೊನ್ನೆ ಕನ್ಸಾಸ್ ಶೂಟೌಟ್, ಈಗ ಕೆಂಟ್ ಶೂಟೌಟ್… ಅಮೆರಿಕದಲ್ಲಿ ಮುಂದುವರಿದಿದೆ ಭಾರತೀಯರ ಮೇಲಿನ ಜನಾಂಗೀಯ ದಾಳಿ

ಡಿಜಿಟಲ್ ಕನ್ನಡ ಟೀಮ್:

ಮೊನ್ನೆ ಮೊನ್ನೆಯಷ್ಟೇ ಅಮೆರಿಕದ ಕನ್ಸಾಸ್ ನಗರದಲ್ಲಿ ನಡೆದ ಜನಾಂಗೀಯ ದಾಳಿಯಲ್ಲಿ ಹೈದರಾಬಾದ್ ಮೂಲದ ಇಂಜಿನಿಯರ್ ಶ್ರೀನಿವಾಸ್ ಮೃತಪಟ್ಟ ಘಟನೆ ಸಾಕಷ್ಟು ಆತಂಕ ಸೃಷ್ಟಿಸಿತ್ತು. ಈಗ ಅಂತಹುದೇ ಮತ್ತೊಂದು ಜನಾಂಗೀಯ ದಾಳಿ ಪ್ರಕರಣ ದಾಖಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ವಾಶಿಂಗ್ಟನ್ನಿನ ಕೆಂಟ್ ಪ್ರದೇಶದಲ್ಲಿ ಭಾರತೀಯ ಮೂಲದ ವ್ಯಕ್ತಿ ಮೇಲೆ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಗೆ ಒಳಗಾಗಿರುವುದು ಸಿಖ್ ವ್ಯಕ್ತಿಯಾಗಿದ್ದು, ಆತನನ್ನು ಅಮೆರಿಕದ ಪ್ರಜೆ ದೀಪ್ ರೈ ಎಂದು ಹೇಳಲಾಗಿದೆ. ದೀಪ್ ರೈ ತಮ್ಮ ಮನೆಯ ಹೊರಗೆ ಬಂದಾಗ ಅರ್ಧ ಮುಸುಕುಧಾರಿ ವ್ಯಕ್ತಿ ಆಗಮಿಸಿ ‘ನಿಮ್ಮ ದೇಶಕ್ಕೆ ವಾಪಸ್ ಹೋಗಿ’ ಎಂದು ಕೂಗುತ್ತಾ ಗುಂಡಿನ ದಾಳಿ ನಡೆಸಿರುವುದಾಗಿ ಭಾರತದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಂಟ್ ಪೊಲೀಸರು ಹೇಳುವ ಪ್ರಕಾರ, ದೀಪ್ ರೈ ಹಾಗೂ ದಾಳಿ ಮಾಡಿರುವ ವ್ಯಕ್ತಿ ನಡುವೆ ವಾಗ್ವಾದ ನಡೆದಿದ್ದು, ಆ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ದೀಪ್ ರೈ ಅವರಿಗೆ‘ನಿಮ್ಮ ದೇಶಕ್ಕೆ ವಾಪಸ್ಸಾಗಿ’ ಎಂದು ಹೇಳುತ್ತಾ ಭುಜಕ್ಕೆ ಗುಂಡು ಹಾರಿಸಿದ್ದಾನೆ. ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ದೀಪ್ ರೈ, ತಮ್ಮ ಮೇಲೆ ದಾಳಿ ಮಾಡಿದ ವ್ಯಕ್ತಿ 6 ಅಡಿ ಉದ್ದವಿದ್ದ, ತನ್ನ ಮುಖದ ಕೆಳ ಭಾಗವನ್ನು ಮುಸುಕಿನಿಂದ ಮುಚ್ಚಿದ್ದ ಎಂದು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿರುವ ಕೆಂಟ್ ಪೊಲೀಸರು, ಈ ದಾಳಿಕೋರನಿಗಾಗಿ ಶೋಧ ನಡೆಸಲಾಗುತ್ತಿರುವುದಾಗಿ ತಿಳಿಸಿದ್ದಾರೆ. ಜತೆಗೆ ದೀಪ್ ರೈ ಅವರಿಗೆ ಯಾವುದೇ ಪ್ರಾಣಾಪಾಯವಿಲ್ಲ ಎಂದು ಖಚಿತಪಡಿಸಿದ್ದಾರೆ.

ಇತ್ತ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ದೀಪ್ ರೈ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ. ಒಟ್ಟಿನಲ್ಲಿ ಕನ್ಸಾಸ್ ಶೂಟೌಟ್ ಪ್ರಕರಣವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸಿದ ಬೆನ್ನಲ್ಲೇ ಭಾರತೀಯ ಮೂಲದ ವ್ಯಕ್ತಿಯ ಮೇಲೆ ಮತ್ತೊಂದು ದಾಳಿ ನಡೆದಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ.

Leave a Reply