15 ತಿಂಗಳ ಅವಧಿಯಲ್ಲಿ 16 ಉಗ್ರರ ಸಂಹಾರ, 64 ಬಂಧನ- ಬೊಡೊ ಉಗ್ರರ ಪಾಲಿಗೆ ಸಿಂಹಸ್ವಪ್ನವಾಗಿರೋ ಐಪಿಎಸ್ ಅಧಿಕಾರಿ ಸಂಜುಕ್ತಾ ಅವರ ಸಾಹಸಗಾಥೆ!

ಡಿಜಿಟಲ್ ಕನ್ನಡ ಟೀಮ್:

ಹೆಣ್ಣು ಕೇವಲ ಅಡುಗೆ ಮನೆ ಕೆಲಸಗಳಿಗೆ ಮಾತ್ರ ಸೀಮಿತ ಎಂಬ ಕಾಲ ಈಗ ಕ್ರಮೇಣ ಬದಲಾಗುತ್ತಿದೆ. ಆಕೆಯು ದುಡಿದು ಸಂಸಾರದ ಆಧಾರ ಸ್ತಂಭವಾಗಿರುವುದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಮಿಲಿಟರಿ, ಪೊಲೀಸ್ ನಂತಹ ವೃತ್ತಿ ಹೆಣ್ಣು ಮಕ್ಕಳಿಗಲ್ಲ ಎಂಬ ಭಾವನೆ ಈಗಲೂ ನಮ್ಮ ಸಮಾಜದಲ್ಲಿ ಸಾಕಷ್ಟಿದೆ. ಆದರೆ ಇದನ್ನೆಲ್ಲಾ ಅನೇಕ ಸಾಧಕಿಯರು ಸುಳ್ಳು ಎಂದು ಸಾಬೀತುಪಡಿಸುತ್ತಲೇ ಬಂದಿದ್ದಾರೆ. ಈಗ ಅಂತಹವರ ಸಾಲಿಗೆ ಐಪಿಎಸ್ ಅಧಿಕಾರಿ ಸಂಜುಕ್ತಾ ಪರಶಾರ್ ಸೇರ್ಪಡೆಯಾಗಿದ್ದಾರೆ.

ಕಳೆದ ಎರಡು ವಾರಾಂತ್ಯಗಳಲ್ಲಿ ನೀವು ಭಾರತದ ಇಬ್ಬರು ಐಪಿಎಸ್ ಅಧಿಕಾರಿಗಳಾದ ಅನುಪಮಾ ಹಾಗೂ ಕಿಂಜಲ್ ಸಿಂಗ್ ಅವರ ಸಾಧನೆಯನ್ನು ಓದಿದ್ದಿರಿ. ಮೇಘಾಲಯ ಹಾಗೂ ಅಸ್ಸಾಂ ಪ್ರದೇಶಗಳಲ್ಲಿ ಬೊಡೊ ಉಗ್ರರ ವಿರುದ್ಧ ಸಮರ ಸಾರಿರುವ ಸಂಜುಕ್ತಾ ಅವರ ಸಾಹಾಸಗಾಥೆ ಈ ವಾರಾಂತ್ಯದ ಓದಿಗೆ…

ತನ್ನ ಬಾಲ್ಯದಲ್ಲಿ ಉಗ್ರರ ದಾಳಿ ಭಯೋತ್ಪಾದನೆಯ ಕೃತ್ಯಗಳನ್ನು ನೋಡುತ್ತಾ ಬೆಳೆದ ಹುಡುಗಿ ಸಂಜುಕ್ತಾ. ಉಗ್ರರ ದಾಳಿಯಿಂದ ಆದ ಸಾವು ನೋವಿನಿಂದ ಕಂಗೆಟ್ಟಿದ್ದ ಸಂಜುಕ್ತಾಗೆ ಈ ಸಮಸ್ಯೆಗೆ ಅಂತ್ಯ ಹಾಡಲೇಬೇಕೆಂಬ ಆಸೆ ಬೇರೂರಿತು. ಚೆನ್ನಾಗಿ ಓದಿ ಐಪಿಎಸ್ ಆಫೀಸರ್ ಆಗಿ ಇಂದು ತನ್ನ ನಾಡಿನಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ಬೊಡೊ ಉಗ್ರವಾದದ ವಿರುದ್ಧ ಸಮರ ಸಾರಿದ್ದಾರೆ.

ಅಸ್ಸಾಂನಲ್ಲಿ ತನ್ನ ಬಾಲ್ಯವನ್ನು ಕಳೆದ ಸಂಜುಕ್ತಾ ಅಲ್ಲಿಯೇ ತನ್ನ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದರು. ಶಾಲೆಯಲ್ಲಿರುವಾಗಲೇ ಕ್ರೀಡಾಪಟುವಾಗಿದ್ದ ಸಂಜುಕ್ತಾ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರು. ನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ ರಾಷ್ಟ್ರ ರಾಜಧಾನಿ ನವದೆಹಲಿಗೆ ಆಗಮಿಸಿದ ಸಂಜುಕ್ತಾ ಇಂದ್ರಪ್ರಸ್ತ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದರು. ಮುಂದೆ ಜವಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಪದವಿಯನ್ನು ಪಡೆದರು. ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆ ಬರೆದ ಸಂಜುಕ್ತಾ ಐಪಿಎಸ್ ನಲ್ಲಿ 85ನೇ ಸ್ಥಾನ ಪಡೆದರು. ಸಂಜುಕ್ತಾ ಸೇವೆಗೆ ಸೇರ್ಪಡೆಯಾಗುವಾಗ ಆಕೆಯ ಮುಂದೆ ಹಲವು ರಾಜ್ಯಗಳಲ್ಲಿ ಸೇವೆ ಸಲ್ಲಿಸುವ ಅವಕಾಶಗಳು ಮುಂದಿದ್ದವು. ಆದರೆ ತನ್ನ ತವರಿನ ಪ್ರದೇಶದಲ್ಲಿ ಸಮಸ್ಯೆಯಾಗಿದ್ದ ಉಗ್ರರ ದಾಳಿಯನ್ನು ಹತ್ತಿಕ್ಕಬೇಕೆಂಬ ಹಠ ಹೊಂದಿದ್ದ ಸಂಜುಕ್ತಾ ಇತರೆ ರಾಜ್ಯಗಳ ಬದಲಿಗೆ ಅಸ್ಸಾಂ ಹಾಗೂ ಮೇಘಾಲಯ ಕ್ಯಾಡರ್ ನಲ್ಲಿ ಕರ್ತವ್ಯ ನಿರ್ವಹಿಸಲು ನಿರ್ಧರಿಸಿದರು. ತನ್ನ ತವರಿನ ಜನರು ಈ ಸಮಸ್ಯೆಯಿಂದ ಮುಕ್ತಗೊಂಡು ನೆಮ್ಮದಿಯ ಜೀವನ ನಡೆಸಬೇಕೆಂದು ಸಂಜುಕ್ತಾ ತಮ್ಮ ಸೇವೆ ಆರಂಭಿಸಿದರು.

2008ರಲ್ಲಿ ಮೊದಲ ಬಾರಿಗೆ ಮಕುಮ್ ನಲ್ಲಿ ಸಹಾಯಕ ಕಮಾಂಡಂಟ್ ಆಗಿ ಸೇವೆ ಆರಂಭಿಸಿದ ಸಂಜುಕ್ತಾ ನಂತರ ಉದಾಲ್ಗಿರಿಗೆ ವರ್ಗಾವಣೆಯಾದರು. ಇಲ್ಲಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಉಗ್ರರ ವಿರುದ್ಧ ತಮ್ಮ ಬೇಟೆ ಆರಂಭಿಸಿದ ಸಂಜುಕ್ತಾ ಕೇವಲ 15 ತಿಂಗಳಲ್ಲಿ ಭಯೋತ್ಪಾದಕರ ಪಾಲಿಗೆ ಸಿಂಹಸ್ವಪ್ನವಾದರು. ಇಲ್ಲಿಗೆ ಆಗಮಿಸುತ್ತಿದ್ದಂತೆ 16 ಬೊಡೊ ಉಗ್ರಗಾಮಿಗಳನ್ನು ಉಡಾಯಿಸಿದ ಸಂಜುಕ್ತಾ 15 ತಿಂಗಳ ಕಾಲಾವಧಿಯಲ್ಲಿ 64 ಉಗ್ರಗಾಮಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಈಕೆಯ ಈ ದಿಟ್ಟ ಹೋರಾಟ ಮಿಂಚಿನಂತೆ ಈ ಪ್ರದೇಶದಲ್ಲಿ ಪ್ರಶಂಸೆಗಳಿಸಿತು. ಆ ಮೂಲಕ ಸಂಜುಕ್ತಾ ಮನೆ ಮಾತಾಗಿಬಿಟ್ಟರು.

ನಾಲ್ಕು ವರ್ಷದ ಮಗುವಿಗೆ ತಾಯಿಯಾಗಿರುವ ಸಂಜುಕ್ತಾ, ಈ ಹೋರಾಟದಲ್ಲಿ ತನಗೆ ಹಾಗೂ ತನ್ನ ಕುಟುಂಬಕ್ಕೆ ಅಪಾಯವಿದೆ ಎಂದು ಗೊತ್ತಿದ್ದರೂ ಉಗ್ರವಾದ ವಿರುದ್ಧದ ಹೋರಾಟದಲ್ಲಿ ಎಂದಿಗೂ ಇಟ್ಟ ಹೆಜ್ಜೆಯನ್ನು ಹಿಂಪಡೆಯಲಿಲ್ಲ. ಇತ್ತೀಚೆಗೆ ನಡೆದ ಉಗ್ರರ ವಿರುದ್ಧದ ಕಾರ್ಯಾಚಾರಣೆಯಲ್ಲೂ ಸ್ವತಃ ತಾವೇ ಎಕೆ47 ಹಿಡಿದು ಬೇಟೆಗಿಳಿದಿದ್ದರು.

ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಅವರ ಹುಟ್ಟಡಗಿಸುವುದು ಬಿಟ್ಟು ಎರಡನೇ ಮಾತಿಲ್ಲ ಎಂಬಂತೆ ದಿಟ್ಟ ಹೆಜ್ಜೆ ಇಟ್ಟಿರುವ ಸಂಜುಕ್ತಾ ಅವರ ಹೆಸರು ಉಗ್ರರ ಎದೆಯಲ್ಲಿ ನಡುಕ ಹುಟ್ಟಿಸುತ್ತದೆ. ಅಲ್ಪಾವಧಿಯಲ್ಲಿ ಈಕೆ ಮಾಡಿರುವ ಸಾಧನೆಗೆ ಸ್ಥಳೀಯ ಜನರು ಕೊಂಡಾಡುತ್ತಿದ್ದು, ಈಕೆಗೆ ಅಭಿಮಾನದಿಂದ ಸ್ಮರಿಸುತ್ತಾರೆ. ಅಷ್ಟೇ ಅಲ್ಲದೆ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಮನೆಗಳಿಗೂ ಭೇಟಿ ನೀಡಿ ಸಂಜುಕ್ತಾ ಅವರಲ್ಲಿ ಭರವಸೆ ಮೂಡಿಸಿದ್ದಾರೆ.

ತನ್ನ ಧೈರ್ಯ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆಯಿಂದ ಹೆಸರು ಮಾಡಿರುವ ಸಂಜುಕ್ತಾ ನಿಜಕ್ಕೂ ನಮ್ಮೆಲ್ಲರಿಗೂ ಸ್ಫೂರ್ತಿ. ನಮ್ಮ ಪೊಲೀಸ್ ಇಲಾಖೆಗೆ ಇಂತಹ ಅಧಿಕಾರಿಗಳು ಇನ್ನು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೇರ್ಪಡೆಯಾಗಲಿ ಎಂಬುದೇ ನಮ್ಮೆಲ್ಲರ ಆಸೆ.

Leave a Reply