ಸುದೀರ್ಘ 3 ದಶಕ ಭಾರತೀಯ ನೌಕಾಪಡೆಗೆ ಸೇವೆಸಲ್ಲಿಸಿದ ಐಎನ್ಎಸ್ ವಿರಾಟ್ ಇಂದು ವಿದಾಯ!

ಡಿಜಿಟಲ್ ಕನ್ನಡ ಟೀಮ್:

ಕಳೆದ 3 ದಶಕಗಳಿಂದ ಭಾರತೀಯ ನೌಕಾ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಐಎನ್ಎಸ್ ವಿರಾಟ್ ಯುದ್ಧ ಹಡಗು ಈಗ ವಿದಾಯ ಹೇಳುತ್ತಿದೆ. ಭಾರತೀಯ ನೌಕಾಪಡೆಯ ‘ಗ್ರ್ಯಾಂಡ್ ಓಲ್ಡ್ ಲೇಡಿ’ ಅಂತಲೇ ಖ್ಯಾತಿ ಪಡೆದಿದ್ದ ಈ ಯುದ್ಧನೌಕೆ ಸೋಮವಾರ ಸೇನೆಯ ಸೇವೆಯಿಂದ ನಿವೃತ್ತಿ ಪಡೆಯಲಿದೆ.

1959ರಲ್ಲೇ ಬ್ರಿಟೀಷ್ ರಾಯಲ್ ನೇವಿಯಲ್ಲಿ ಸೇವೆ ಆರಂಭಿಸಿದ್ದ ಯುದ್ಧ ವಿಮಾನ ಹೊತ್ತು ಸಾಗುವ ಯುದ್ಧ ಹಡಗು ಸುಮಾರು 28 ವರ್ಷಗಳ ಕಾಲ ಸೇವೆ ಸಲ್ಲಿಸಿತ್ತು. ಆ ನಂತರ 1987ರ ಮೇ 12ರಂದು ಭಾರತ ಸರ್ಕಾರ ಈ ಹಡಗನ್ನು ₹ 6.5 ಕೋಟಿಗೆ ಖರೀದಿಸಿ ತನ್ನ ನೌಕಾಪಡೆಗೆ ಸೇರಿಸಿಕೊಂಡಿತು. ಆ ಮೂಲಕ ನೌಕಾ ಪಡೆಗೆ ಸೇರಿದ ಅತ್ಯಂತ ಹಳೆಯ ಹಡಗು ಎಂಬ ಗಿನ್ನಿಸ್ ದಾಖಲೆಗೆ ಸೇರಿತು. ಅಲ್ಲಿಂದ ಇಲ್ಲಿಯವರೆಗೂ 30 ವರ್ಷಗಳ ಕಾಲ ಭಾರತೀಯ ನೌಕಾ ಪಡೆಯಲ್ಲಿ ಸೇವೆ ಸಲ್ಲಿಸಿದೆ. ಸದ್ಯ ಸೇವೆಗೆ ಗುಡ್ ಬೈ ಹೇಳುತ್ತಿರುವ ಈ ಐಎಲ್ಎಸ್ ವಿರಾಟ್ ಯುದ್ಧ ಹಡಗಿನ ವಿಶೇಷತೆಗಳೇನು ಎಂಬುದನ್ನು ತಿಳಿಯೋಣ ಬನ್ನಿ…

ಬ್ರಿಟೀಷ್ ನೌಕಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ‘ಎಚ್ಎಂಎಸ್ ಹರ್ಮ್ಸ್’ ಎಂದು ಕರೆಯಲಾಗುತ್ತಿದ್ದ ಈ ಯುದ್ಧ ಹಡಗನ್ನು ನಂತರ ಐಎನ್ಎಸ್ ವಿರಾಟ್ ಎಂದು ಮರುನಾಮಕರಣ ಮಾಡಲಾಯಿತು. ‘ಜಲಮೇವ ಯಸ್ಯಾ, ಬಲಮೇವ ತಸ್ಯ’ (ಸಾಗರದ ಮೇಲಿನ ನಿಯಂತ್ರಣ ಸಾಧಿಸಿದರೆ ಎಲ್ಲ ಬಲವನ್ನು ಪಡೆದಂತೆ) ಎಂಬ ಧ್ಯೇಯದೊಂದಿಗೆ ಭಾರತೀಯ ನೌಕಾ ಪಡೆಗೆ ಸೇರ್ಪಡೆಯಾಯಿತು.

ಬಿಳಿ ಹುಲಿ ಎಂದೇ ಖ್ಯಾತಿ ಪಡೆದಿದ್ದ ಐಎನ್ಎಎಸ್ 300 ಯುದ್ಧ ವಿಮಾನ, ಜಲಾಂತರ್ಗಾಮಿ ನಿಗ್ರಹ ಯುದ್ಧವಿಮಾನ ಸೀ ಕಿಂಗ್ ಎಂಕೆ42ಬಿ, ಸೀ ಕಿಂಗ್ ಎಂಕೆ42ಸಿ, ಎಸ್ಎಆರ್ ಹೆಲಿಕಾಪ್ಟರ್ ಚೇತನ್, ಎಎಲ್ಎಚ್ ಧ್ರುವ್, ರಷ್ಯಾದ ಕ್ಯಾಮೊವ್-31 ಯುದ್ಧ ವಿಮಾನಗಳನ್ನು ಈ ಯುದ್ಧನೌಕೆ ಹೊಂದಿತ್ತು.

ಇನ್ನು ಐಎನ್ಎಸ್ ವಿರಾಟ್ ನ ಪ್ರಮುಖ ಸೇವೆಗಳನ್ನು ನೆನೆಯುವುದಾದರೆ, 1989 ರಲ್ಲಿ ಶ್ರೀಲಂಕಾದಲ್ಲಿ ಶಾಂತಿ ನೆಲೆಸುವಂತೆ ಮಾಡಲು ನಡೆಸಿದ ಆಪರೇಷನ್ ಜ್ಯುಪಿಟರ್, 2001-2002ರಲ್ಲಿನ ಆಪರೇಷನ್ ಪರಾಕ್ರಮದಲ್ಲಿ ಐಎನ್ಎಸ್ ವಿರಾಟ್ ನ ಸೇವೆ ಮಹತ್ವದ್ದಾಗಿದೆ.

ಒಟ್ಟು 28,700 ಟನ್ ತೂಕವಿರುವ 226.5 ಮೀ. ಉದ್ದ, 48.78 ಮೀಟರ್ ಅಗಲ ಈ ನೌಕೆ 1500 ನಾವಿಕರು ಹಾಗೂ 150 ನೌಕಾಧಿಕಾರಿಗಳನ್ನು ಹೊಂದುವ ಸಾಮರ್ಥ್ಯವಿತ್ತು. ಈಗ ನಿವೃತ್ತಿ ಪಡೆಯುತ್ತಿರುವ ಈ ಯುದ್ಧನೌಕೆ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದರ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಆಂಧ್ರ ಪ್ರದೇಶ ಸರ್ಕಾರ ಈ ನೌಕೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಬಗ್ಗೆ ಚಿಂತನೆ ನಡೆಸಿದೆ. ಈ ಐಎನ್ಎಸ್ ವಿರಾಟ್ ಅನ್ನು ಐಶಾರಾಮಿ ಹೋಟೆಲ್ ಹಾಗೂ ವಸ್ತುಸಂಗ್ರಹಾಲಯವನ್ನಾಗಿ ಮಾಡಬೇಕೆಂಬ ಬಗ್ಗೆ ಚರ್ಚೆಗಳು ನಡೆದಿವೆ.

ಐಎನ್ಎಸ್ ವಿರಾಟ್ ವಿದಾಯದ ನಂತರ ಭಾರತೀಯ ನೌಕಾಪಡೆಯಲ್ಲಿ ಕೇವಲ ಐಎನ್ಎಸ್ ವಿಕ್ರಮಾದಿತ್ಯ ಎಂಬ ಯುದ್ಧನೌಕೆ ಸೇವೆ ಸಲ್ಲಿಸುತ್ತಿದ್ದು, ಐಎನ್ಎಸ್ ವಿಕ್ರಾಂತ್ ಹೆಸರಿನ ಮತ್ತೊಂದು ಯುದ್ಧನೌಕೆ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ ನಲ್ಲಿ ನಿರ್ಮಾಣವಾಗುತ್ತಿದೆ.

Leave a Reply