ಮೋದಿಯವರ ಕಾಶಿ ಭಕ್ತಿ ಪ್ರದರ್ಶನದೊಂದಿಗೆ ಮುಕ್ತಾಯಗೊಂಡ ಉಪ್ರ ಪ್ರಚಾರ ಬಿರುಸು, ಸಿಗುತ್ತಿರುವ ಸೂಚನೆಗಳದ್ದು ಯಾವ ದಿಕ್ಕು?

ಡಿಜಿಟಲ್ ಕನ್ನಡ ವಿಶೇಷ:

ಉತ್ತರ ಪ್ರದೇಶದಲ್ಲಿ ಸೋಮವಾರ ಪ್ರಚಾರದ ಕೊನೆ ಚರಣವೂ ಮುಕ್ತಾಯವಾಗಿದೆ. ಉಳಿದಿರುವುದು ಎರಡು ಹಂತಗಳ ಮತದಾನ ಮತ್ತು ಫಲಿತಾಂಶ ನಿರೀಕ್ಷಣೆ.

ಸೋಮವಾರದ ಕೊನೆಹಂತದ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪರ ಪ್ರಚಾರಕ್ಕೆಂದು ತಮ್ಮ ಸ್ವಕ್ಷೇತ್ರ ವಾರಾಣಸಿಯಲ್ಲಿ ದಿನವಿಡೀ ಪ್ರದರ್ಶನಗಳಲ್ಲಿ ಭಾಗಿಯಾದರು. ಇದು ಒಂದರ್ಥದಲ್ಲಿ ಈವರೆಗೆ ನಡೆದುಕೊಂಡು ಬಂದ ಹಣಾಹಣಿಯ ದಿಕ್ಕನ್ನು ಪರಿಚಯಿಸುವಂತಿತ್ತು. ಕಾಲಭೈರವನಿಗೆ ಪೂಜೆ, ಗೋವಿಗೆ ಆಹಾರ ಸಮರ್ಪಣೆ ಹೀಗೆ ಸನಾತನ ಭಾವನಾತ್ಮಕತೆಯ ಎಲ್ಲ ಬಿಂದುಗಳನ್ನೂ ಪ್ರಧಾನಿ ಮೋದಿ ಸ್ಪರ್ಶಿಸಿರುವುದು ಹಾಗೂ ಬಿಜೆಪಿ ತಂಡ ಅದನ್ನು ಸಶಕ್ತವಾಗಿ ಪ್ರಚಾರದಲ್ಲಿರುವಂತೆ ನೋಡಿಕೊಂಡಿರುವುದು ಮುಖ್ಯಾಂಶವೊಂದನ್ನು ತಿಳಿಸುತ್ತಿದೆ.

ಇಡೀ ಚುನಾವಣಾ ಪ್ರಚಾರವನ್ನು ಗಮನಿಸಿಕೊಂಡರೆ ಇದು ನಿಸ್ಸಂಶಯವಾಗಿ ಮೋದಿ ವರ್ಸಸ್ ಅಖಿಲೇಶ್ ಎಂಬ ಭೂಮಿಕೆಯಲ್ಲೇ ಬೆಳೆದುಬಂತು. ರಾಹುಲ್ ಗಾಂಧಿ ಮತ್ತು ಮಾಯಾವತಿ ಆಗೀಗ ಬಂದುಹೋದ ಪಾತ್ರಗಳಂತಿದ್ದರು. ಹೀಗೆ ಪ್ರಾರಂಭದಿಂದಲೇ ಎಸ್ಪಿ ವರ್ಸಸ್ ಬಿಜೆಪಿ ಎಂಬುದನ್ನು ರೂಪಿಸುವುದಕ್ಕೆ ಬಿಜೆಪಿ ತಕ್ಕಮಟ್ಟಿಗೆ ಯಶಸ್ವಿಯಾಗುತ್ತ ಹೋಗುತ್ತಿದ್ದಂತೆಯೇ ಕಾರ್ಯತಂತ್ರವೂ ಸ್ಪಷ್ಟವಾಯಿತು. ಯಾದವರು ಮತ್ತು ಮುಸ್ಲಿಮರು ಎಸ್ಪಿಯ ಸಾಂಪ್ರದಾಯಿಕ ಮತಗಳೆಂಬುದೊಂದು ಗ್ರಹಿಕೆ. ಹೀಗಾಗಿ ಯಾದವೇತರ ಹಿಂದುಳಿದ ವರ್ಗಗಳನ್ನು ಎಷ್ಟು ಗಟ್ಟಿಯಾಗಿ ಸೆಳೆಯಲಾಗುವುದೆಂಬ ಮೇಲೆ ಬಿಜೆಪಿ ಗಟ್ಟಿಯಾಗುವ ಸೂತ್ರ ತೆರೆದುಕೊಳ್ಳುತ್ತದೆ.

ಹಿಂದುಳಿದ ವರ್ಗಗಳ ಮೇಲೆ ಬುದ್ಧಿಜೀವಿಗಳ ಗಂಭೀರ ವ್ಯಾಖ್ಯಾನಗಳು ಏನೇ ಇದ್ದಿರಲಿ. ಈ ವರ್ಗ ಸಂಪ್ರದಾಯಗಳ ಬಗ್ಗೆ ಶ್ರದ್ಧೆ ಹೊಂದಿರುವ, ದೈವಭೀರು ಜನವರ್ಗವೆಂಬುದಂತೂ ಉತ್ತರ ಪ್ರದೇಶದಮಟ್ಟಿಗೆ ಹೌದು. ಹಾಗೆಂದೇ ನರೇಂದ್ರ ಮೋದಿ ‘ಖಬರಿಸ್ತಾನ ಮತ್ತು ಸ್ಮಶಾನಗಳ’ ಹೋಲಿಕೆ ತರುತ್ತ ಹಿಂದುಗಳ ಎಲ್ಲ ಜಾತಿಗಳನ್ನು ಒಂದು ಕಡೆ ಹಿಡಿದಿಡುವ ಯತ್ನಕ್ಕೆ ಮುಂದಾಗಿದ್ದು.

ಹಾಗಂತ ಅಭಿವೃದ್ಧಿ ಕನಸುಗಳಿಗೆ ಉತ್ತರ ಪ್ರದೇಶದಲ್ಲಿ ಜಾಗವೇ ಇಲ್ಲ ಎಂದಲ್ಲ. ಆದರೆ ಈ ಕನಸನ್ನು ಬಿತ್ತುವುದರಲ್ಲಿ, ಈ ಬಗ್ಗೆ ಕತೆಗಳನ್ನು ಕಟ್ಟಿಕೊಡುವಲ್ಲಿ ನರೇಂದ್ರ ಮೋದಿಗೆ ತಕ್ಕಮಟ್ಟಿಗೆ ಅಖಿಲೇಶ್ ಯಾದವ್ ಪೈಪೋಟಿ ಕೊಟ್ಟೇ ಇದ್ದಾರೆ. ವಿಕಾಸದಲ್ಲಿ ಯಾರು ಮುಂದೆ ಎಂಬುದಲ್ಲ ಪ್ರಶ್ನೆ. ಆ ಭಾಷೆಯನ್ನು ಹೇಗೆ ಉಪಯೋಗಿಸುತ್ತಾರೆಂಬುದು ಮುಖ್ಯವಾಗಿಬಿಡುತ್ತದೆಯಾದ್ದರಿಂದ ಲ್ಯಾಪ್ಟಾಪು ಕೊಡುತ್ತೇನೆನ್ನುವ ಅಖಿಲೇಶ್ ಸಹ ಆಕರ್ಷಣೆಯೇ. ಆಲೂಗಡ್ಡೆ ಫ್ಯಾಕ್ಟರಿಯ ಕತೆ ಹೇಳುವ ರಾಹುಲ್ ಗಾಂಧಿಯನ್ನು ಜೋಕರ್ ಎಂಬಂತೆ ಪಕ್ಕ ತಳ್ಳುವಷ್ಟು ಸಲೀಸಲ್ಲ ಅಖಿಲೇಶ್ ಕಥಾನಕ. ಅಖಿಲೇಶ್ ಅಲ್ಲದೇ ಮುಲಾಯಂ ಮುಂಚೂಣಿಯಲ್ಲಿದ್ದಿದ್ದರೆ ಆಗ ಮೋದಿಯೇ ವಿಕಾಸಪುತ್ರ ಎನ್ನಿಸಿಬಿಡುತ್ತಿತ್ತೇನೋ.

ಟಿವಿ ವಾಹಿನಿಗಳು ಅಭಿಪ್ರಾಯ ಪಡೆಯುತ್ತಿರುವ ಆಧಾರದಲ್ಲಿ ನೋಡಿದರೆ ಪ್ರಧಾನಿ ನರೇಂದ್ರ ಮೋದಿ ಪ್ರಯತ್ನದ ಬಗ್ಗೆ ಜನರಲ್ಲಿ ಸಹಾನೂಭೂತಿ ಹಾಗೂ ಇನ್ನಷ್ಟು ಕಾಯುವ ಸಮ್ಮತಿ ವ್ಯಕ್ತವಾಗುತ್ತಿದ್ದದ್ದು ಸುಳ್ಳಲ್ಲ. ನೋಟು ಅಮಾನ್ಯದ ಬಗ್ಗೆ ನಕಾರಾತ್ಮಕ ಮಾತುಗಲು ಹೆಚ್ಚಿನದಾಗಿ ವ್ಯಕ್ತವಾಗಿದ್ದು ಮುಸ್ಲಿಂ ಸಮುದಾಯದಿಂದ. ಇವೆಲ್ಲದರ ಹಿನ್ನೆಲೆಯಲ್ಲಿ ಮೋದಿ ವಿಕಾಸದ ಕತೆ ಹೇಳುತ್ತಲೇ ಅಗತ್ಯವಿರುವಲ್ಲಿ ಧ್ರುವೀಕರಣದ ಮಾತುಗಳನ್ನೂ ಆಡಿದರು. ಹಾಗೆಯೇ ಅಖಿಲೇಶ್ ಸರ್ಕಾರದ ಇನ್ನೊಂದು ನಕಾರಾತ್ಮಕ ಅಂಶವಾದ ಕಾನೂನು ಪರಿಪಾಲನೆ ವೈಫಲ್ಯದ ಮೇಲೂ ಮಾತುಗಳು ಬಂದವು. ಗಾಯತ್ರಿ ಪ್ರಜಾಪತಿಯಂಥ ಅತ್ಯಾಚಾರ ಆರೋಪಿ ಇನ್ನೂ ಬಂಧನವಾಗದೇ ಉಳಿದಿರುವ ಅಂಶ ಈ ನಕಾರಾತ್ಮಕತೆಗೆ ಪುಷ್ಟಿ ನೀಡುವಂತೆಯೇ ಇತ್ತು. ಕೊನೆಯಲ್ಲಿ ಕಾಶಿಯಲ್ಲೇ ಪ್ರಚಾರ ಪರಿಸಮಾಪ್ತಿಗೊಳಿಸಿ ಅದೊಂದು ಹಿಂದು ಭಾವಸ್ಪರ್ಶದ ವಿವರಗಳಿಂದ ಕೂಡಿರುವಂತೆಯೂ ನೋಡಿಕೊಂಡಿದ್ದಾರೆ.

ಹೀಗಾಗಿ, 403 ವಿಧಾನಸಭೆ ಕ್ಷೇತ್ರಗಳ ಉತ್ತರಪ್ರದೇಶದಲ್ಲಿ ಬಿಜೆಪಿಯು ವಿಕಾಸದೊಂದಿಗೆ ಭಾವನಾತ್ಮಕತೆಯನ್ನೂ ಬೀಸಿದೆ. ಮುಸ್ಲಿಂ ಜನಸಂಖ್ಯೆ ಸಾಂದ್ರತೆ ಹೊಂದಿರುವ ಈ ರಾಜ್ಯದಲ್ಲಿ ಬಿಜೆಪಿಗೆ ಕಾರ್ಯತಂತ್ರದ ದೃಷ್ಟಿಯಿಂದ ಅನಿವಾರ್ಯವೂ ಹೌದಿದು.

ಮೋದಿ ಟೀಕಾಕಾರರು ಎಂಬ ವರ್ಚಸ್ಸನ್ನೇ ಹೊಂದಿರುವ ಮುಖ್ಯವಾಹಿನಿಯ ಇಬ್ಬರು ಪತ್ರಕರ್ತರು ಬಿಜೆಪಿ ಗೆಲುವನ್ನು ಊಹಿಸುತ್ತಿರುವುದು ವಿಶೇಷ. ಒಬ್ಬರು ರಾಜ್ದೀಪ್ ಸರ್ದೇಸಾಯಿ ಇನ್ನೊಬ್ಬರು ಪ್ರಣವ್ ರಾಯ್. ಬಿಜೆಪಿ ಗೆಲುವಿನ ಸಾಧ್ಯತೆ ಹೆಚ್ಚಿರುವ ಗ್ರಹಿಕೆ ತಮಗೆ ಸಿಗುತ್ತಿದೆ ಎಂಬುದು ಇವರಿಬ್ಬರೂ ದಾಖಲಿಸಿರುವ ಅಭಿಪ್ರಾಯ.

ಉತ್ತರ ಪ್ರದೇಶದ 80 ಲೋಕಸಭೆ ಕ್ಷೇತ್ರಗಳ ಪೈಕಿ ಮೈತ್ರಿ ಅಪ್ನಾದಳದೊಂದಿಗೊಡಗೂಡಿ 73 ಸಂಸದರನ್ನು ಹೊಂದಿರುವ ಬಿಜೆಪಿ ಅಲ್ಲಿ ಭಾರಿ ಕೆಲಸ ಮಾಡಿಬಿಟ್ಟಿದೆ ಎಂದಲ್ಲದಿದ್ದರೂ ಸಹಾನುಭೂತಿ ಮತ್ತು ಪ್ರಯತ್ನದ ಅಂಶಗಳು ಜನರಿಂದ ಗುರುತಿಸಲ್ಪಟ್ಟಿವೆ. ‘ಗಂಗಾಮಾತಾ ಎನ್ನುವ ಮೋದಿ ಶುದ್ಧೀಕರಣ ಸಾಧಿಸಿದರೇ’ ಎಂಬ ರಾಹುಲ್ ಗಾಂಧಿ ಪ್ರಶ್ನೆಗೆ ಹೌದೇ ಹೌದೆಂದು ಉತ್ತರಿಸಲಾಗದಿದ್ದರೂ ಮೊದಲು ಅಶುಚಿಯನ್ನೇ ಮಿಂದಿರುತ್ತಿದ್ದ ಘಾಟ್/ ನದಿದಂಡೆಗಳು ಸ್ವಚ್ಛವಾಗಿರುವುದನ್ನು ವರದಿಗಳೆಲ್ಲ ಸಾರುತ್ತಿವೆ. ಈ ಸ್ವಚ್ಛತಾ ಕಾರ್ಯ ಮುಂದುವರಿಯಬಹುದೆಂಬ ಆಸೆಯನ್ನೂಅದು ಹುಟ್ಟಿಸಿದೆ.

Leave a Reply