ಧರೆಗುರುಳಿದೆ ಧರೆಬಗೆದು ರೆಡ್ಡಿ ಬಳಗ ತೊಟ್ಟ ಕಿರೀಟ

author-thyagarajಸ್ವಾರ್ಥ, ಲೋಭ, ದುರಾಸೆಯ ಸ್ತಂಭದ ಮೇಲೆ ಕಟ್ಟಿಕೊಂಡ ಸಂಬಂಧಗಳು ಹೆಚ್ಚು ಕಾಲ ಬಾಳುವುದಿಲ್ಲ. ಏಕೆಂದರೆ ಅಲ್ಲಿ ಭಾವನೆಗಳಿಗೆ ಆಸ್ಪದ ಇರುವುದಿಲ್ಲ. ಸಂತೆ ವ್ಯಾಪಾರಕ್ಕಷ್ಟೇ ಸೀಮಿತ. ಅದು ಮುಗಿದ ಮೇಲೆ ಕಂತೆ ಕಟ್ಟಲೇಬೇಕು. ಬಳ್ಳಾರಿ ಗಣಿ ರೆಡ್ಡಿ ಬಳಗದಲ್ಲಿ ಇವತ್ತು ಆಗಿರುವುದು ಇದೇ.

ಬರಡು ನಾಡು ಬಳ್ಳಾರಿ ಜನರ ಮುಗ್ಧತೆಗೆ ಯಾವತ್ತೂ ಬರವಿರಲಿಲ್ಲ. ಅದೇ ರೆಡ್ಡಿ ಬಳಗದ ಮೂಲ ಬಂಡವಾಳ. ಜನ್ಮೋಪಿ ಸಹೋದರರಾದ ಕರುಣಾಕರರೆಡ್ಡಿ, ಸೋಮಶೇಖರರೆಡ್ಡಿ,  ಜನಾರ್ದನ ರೆಡ್ಡಿ ಹಾಗೂ ‘ಆಮದು ಸಹೋದರ’ ಶ್ರೀರಾಮುಲು ಅವರನ್ನೊಳಗೊಂಡ ಗಣಿ ಬಳಗದ ಬಾಂಧವ್ಯ ಅವಕಾಶವಾದದ ತಳಹದಿಯ ಮೇಲೆ ನಿರ್ಮಾಣವಾಗಿತ್ತು. ಅದು ವ್ಯಾಪಾರ ಇರಬಹುದು, ರಾಜಕೀಯ ಇರಬಹುದು, ತಮ್ಮ ದಾರಿಗೆ ಅಡ್ಡಿಯಾದವರ ನಿವಾರಣೆಗೆ ಬಳಕೆ ಆಗುವ ತೋಳ್ಬಲ ಇರಬಹುದು – ಈ ಮೂರು ಉದ್ದೇಶಗಳ ಒಟ್ಟು ಲೆಕ್ಕವೇ ಗಣಿ ರೆಡ್ಡಿ ಬಳಗ. ವ್ಯವಹಾರ, ಸಂಪತ್ತು, ಅಧಿಕಾರದ ದೆಸೆಯಿಂದ ಹುಟ್ಟಿಕೊಂಡ ಈ ಸ್ನೇಹ- ಸಂಬಂಧ ಬಳ್ಳಾರಿ ಕೆಂದೊಡಲ ಬಗೆಬಗೆದು ತೆಗೆದ ಕಪ್ಪು ಚಿನ್ನವನ್ನು ಒಂದೇ ತಟ್ಟೆಯಲ್ಲಿ ಹಂಚುಂಡು ತೇಗಲು, ಕಾಳಮಾರ್ಗದಲ್ಲಿ ಬಂದ ಅನಾಯಾಸ ಸಂಪತ್ತು ಅರ್ಧ ರಾತ್ರಿಯಲಿ ತಂದ ಅಧಿಕಾರದ ಮದದಿಂದ ಬೀಗಲು, ಸಂಪತ್ತಿಗಿರುವ ಆಯುಷ್ಯ ಅಧಿಕಾರಕ್ಕಿಲ್ಲ ಎಂಬುದನ್ನು ಅರಿಯದೆ ವಿಜಯನಗರ ಸಾಮ್ರಾಜ್ಯದ ಸಾರ್ವಭೌಮತ್ವವನ್ನು ಕಲ್ಪಿಸಿಕೊಂಡು ಮೆರೆಯಲು ಸೀಮಿತವಾಗಿತ್ತು. ‘ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲಿ ಕೊಡೆ ಹಿಡಿದ’ ಎಂಬ ಗಾದೆಯನ್ನು ನೆನಪಿಸುವಂತೆ ಮೈತುಂಬ ದುರಹಂಕಾರ, ದುರುಳತನವನ್ನೇ ಬಳಿದುಕೊಂಡಿದ್ದರು. ಆದರೆ ಎಲ್ಲಕ್ಕೂ ಒಂದು ಅಂತ್ಯವಿರುತ್ತದಲ್ಲ. ಭ್ರಮೆ ಕಳಚಿ ಬಿದ್ದಿದೆ. ಲೆಕ್ಕ ಚುಕ್ತವಾಗಿದೆ. ಹೀಗಾಗಿ ‘ವಿಜಯನಗರ ಸಾರ್ವಭೌಮರು’ ಇದೀಗ ಹಾಳುಕೊಂಪೆಯ ಹಂದಿ-ನಾಯಿಗಳಂತೆ ಕಚ್ಚಾಡುತ್ತಿದ್ದಾರೆ.

ವಾಸ್ತವವಾಗಿ ಮೊದಲಿಂದಲೂ ಈ ರೆಡ್ಡಿ ಬಳಗದ ಸಂಬಂಧ ಒಳಗೊಳಗೇ ಹಳಸಿಕೊಂಡಿತ್ತು. ಅದರ ವಾಸನೆ ಮಾತ್ರ ಅವರು ವಹಿಸಿದ್ದ ಅಸೀಮ ನಾಜೂಕುತನದಿಂದ ಯಾರಿಗೂ ಬಡಿದಿರಲಿಲ್ಲ. ಜನಾರ್ದನ ರೆಡ್ಡಿ ತಾಯಿ ರುಕ್ಮಿಣಮ್ಮ ತಮಗೆ ನಾಲ್ವರು ಮಕ್ಕಳು,  ಶ್ರೀರಾಮುಲು ನಾಲ್ಕನೇ ಮಗ ಎನ್ನುತ್ತಿದ್ದರು. ಆದರೆ ‘ಬಯಲಾಜಿಕಲ್ ಬ್ರದರ್ಸ್’ ರೆಡ್ಡಿ ತ್ರಯರ ನಡುವೆಯೇ ಹೊಂದಾಣಿಕೆ ಇರಲಿಲ್ಲ. ಹಣ, ಆಸ್ತಿ, ಅಧಿಕಾರ ಸಂಪಾದನೆ ಮತ್ತು ಹಂಚಿಕೆ ವಿಷಯದಲ್ಲಿ ಯಾವತ್ತೂ ಯಾದವಿ ಕಲಹ ಚಾಲ್ತಿಯಲ್ಲಿತ್ತು. ಹೊರಗೆ ಅಪೂರ್ವ ಸಹೋದರರಂತೆ ಪೋಸು ಕೊಟ್ಟಿದ್ದರೂ ಒಳಗೆ ಕುತ್ತಿಗೆ ಪಟ್ಟಿ ಹಿಡಿದು ಅಲ್ಲಾಡಿಸುವಷ್ಟು ಸಂಬಂಧ ಟೊಳ್ಳಾಗಿತ್ತು. ಒರಿಜನಲ್ ಸಹೋದರರ ಕತೆಯೇ ಹೀಗಿದ್ದಾಗ ಇನ್ನು ಇಂಪೋರ್ಟೆಡ್ ಬ್ರದರ್ ಶ್ರೀರಾಮುಲು ಸ್ಥಿತಿ..? ‘ಹನುಮಂತನೇ ಹಗ್ಗ ಕಡಿಯುವಾಗ ಪೂಜಾರಿ ಶಾವಿಗೆ ಕೇಳಿದ’ ಎಂಬಂತಾಗಿತ್ತು!

ನಿಜ, ಅಲ್ಯಾವನೋ ಗಣಿ ವ್ಯವಹಾರಕ್ಕೆ ಅಡ್ಡ ಬಂದವನ ಅಡ್ಡಡ್ಡ ಮಲಗಿಸಲು, ಇಲ್ಯಾವನೋ ರಾಜಕೀಯ ಸವಾಲು ಒಡ್ಡಿದವನ ನಡ ಮುರಿಯಲು ಏಕಶರೀರ, ಏಕಧ್ವನಿಯಂತೆ ನಿಲ್ಲುತ್ತಿದ್ದ ಈ ನಾಲ್ವರ ಬಳಗ ಆಂತರಿಕವಾಗಿ ಪರಸ್ಪರ ದ್ವೇಷಾಸೂಯೆ, ಈರ್ಷೆಯಿಂದ ನರಳುತ್ತಿತ್ತು. ಆದರೆ ವ್ಯವಹಾರಿಕ, ರಾಜಕೀಯ ಎದುರಾಳಿಗಳನ್ನು ಸದೆಬಡಿಯಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಅದನ್ನು ನುಂಗಿಕೊಂಡು ‘ವಿಷಕಂಠ’ರಂತೆ ಬದುಕುತ್ತಿದ್ದರು. ಬಳ್ಳಾರಿಯ ಒಂಬತ್ತು ವಿಧಾನಸಭೆ ಕ್ಷೇತ್ರಗಳ ಪೈಕಿ ಐದು ರಾಮುಲು ಪ್ರತಿನಿಧಿಸುವ ಪರಿಶಿಷ್ಟ ಪಂಗಡಕ್ಕೆ ಮೀಸಲು. ಇನ್ನೆರಡು ಪರಿಶಿಷ್ಟ ಜಾತಿ, ಮತ್ತೆರಡು ಸಾಮಾನ್ಯ ವರ್ಗಕ್ಕೆ. ರಾಮುಲು ಪ್ರಾತಿನಿಧ್ಯದ ನಾಯಕ ಸಮುದಾಯ ಬಳ್ಳಾರಿಯ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 20 ಕ್ಕೂ ಹೆಚ್ಚಿದೆ. ರೆಡ್ಡಿ ಬಳಗ ಅವರನ್ನು ತಮ್ಮೊಳಗೆ ಬಿಟ್ಟುಕೊಂಡು, ಪಕ್ಕದಲ್ಲಿ ಇಟ್ಟುಕೊಂಡಿದ್ದೇ ಈ ಕಾರಣಕ್ಕೆ.

ಇದಕ್ಕೂ ಮೊದಲು ಅಂದರೆ ರೆಡ್ಡಿ ಬಳಗ ರಾಜಕೀಯ ಕ್ಷೇತ್ರಕ್ಕೆ ಪಾದವಿಡುವ ಮೊದಲು ಶ್ರೀರಾಮುಲು ಇವರಿಗೆ ಪರಿಚಯ ಆಗಿದ್ದೇ ‘ಪಂಟರು’ ಎಂಬ ಕಾರಣಕ್ಕೆ. ಆರಂಭದಲ್ಲಿ ‘ಎನೋಬಲ್ ಇಂಡಿಯಾ’ ಎಂಬ ಚಿಟ್ ಫಂಡ್ ಸಂಸ್ಥೆ ನಡೆಸುತ್ತಿದ್ದ ಜನಾರ್ದನರೆಡ್ಡಿ ಸಾಲ, ಬಡ್ಡಿ, ಚೀಟಿ ಹಣ ವಸೂಲಿ ತಗಾದೆಗಳಿಗೆ ‘ಶ್ರೀರಾಮುಲು ರಕ್ಷೆ’ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಬಳ್ಳಾರಿ ಗಡಿಗೆ ಅಂಟಿಕೊಂಡಿರುವ ಆಂಧ್ರ ಪ್ರದೇಶದ ಕಬ್ಬಿಣ ಅದಿರು ಗಣಿಗಾರಿಕೆಯ ಓಬಳಾಪುರಂ ಮೈನಿಂಗ್ ಸಂಸ್ಥೆ (ಓಬಿಸಿ) ಪಾಲುದಾರರ ಜಗಳ ಬಗೆಹರಿಸುವ ಡೀಲ್ ಜನಾರ್ದನರೆಡ್ಡಿಗೆ ಬಂತು. ಶ್ರೀರಾಮುಲು ಪ್ರಭಾವದಿಂದ ರೆಡ್ಡಿ ಅದೆಷ್ಟು ಚೆನ್ನಾಗಿ ಈ ವ್ಯಾಜ್ಯ ಪರಿಹರಿಸಿದರೆಂದರೆ ಮುಂದೆ ಆ ಸಂಸ್ಥೆಗೆ ತಾವೇ ಒಡೆಯರಾದರು!

ಓಎಂಸಿ ಗಣಿ ವ್ಯವಹಾರದ ಮೂಲಕ ಆಂಧ್ರದ ಅಂದಿನ ಮುಖ್ಯಮಂತ್ರಿ ವೈ.ಎಸ್. ರಾಜಶೇಖರರೆಡ್ಡಿ ಸಂಪರ್ಕಕ್ಕೆ ಬಂದ ಜನಾರ್ದನರೆಡ್ಡಿ ಗಣಿಗಾರಿಕೆಗೆ ಅಕ್ರಮದ ಟಚ್ ಕೊಟ್ಟರು. ಬೇನಾಮಿ ವ್ಯವಹಾರ ಶುರು ಮಾಡಿದರು. ಅಕ್ರಮ ಗಣಿಗಾರಿಕೆಯಿಂದ ರಾತ್ರೋರಾತ್ರಿ ಕೋಟಿ ಕೋಟಿ ಹಣ ಸಂಪಾದಿಸಿದರು. ಅರಣ್ಯ, ಪರಿಸರ ಇಲಾಖೆ ಆಕ್ಷೇಪಗಳು, ಪ್ರತಿಪಕ್ಷ, ನಾನಾ ಸಂಘಟನೆಗಳ ಪ್ರತಿಭಟನೆಗಳು ವೈಎಸ್‌ಆರ್ ಪ್ರಭಾವದಿಂದ ಜನಾರ್ದನರೆಡ್ಡಿ ಕೂದಲು ಕೊಂಕಿಸಲಾಗಲಿಲ್ಲ. ಬದಲಿಗೆ ಅಕ್ರಮ ವ್ಯವಹಾರ ಮತ್ತಷ್ಟು ಹುರುಪುಗೊಂಡಿತು. ಜತೆಗೆ ಬಳ್ಳಾರಿಯಲ್ಲೂ ಅಸೋಸಿಯೇಟಡ್ ಮೈನಿಂಗ್ ಕಂಪನಿ (ಎಎಂಸಿ) ಖರೀದಿಸಿ ಕ್ರಮ, ಅದನ್ನು ಮೀರಿಸಿ ಅಕ್ರಮ ಗಣಿಗಾರಿಕೆ ಶುರು ಮಾಡಿದರು. ಜನಾರ್ದನರೆಡ್ಡಿ ಮತ್ತು ಪತ್ನಿ ಅರುಣಾ ಇದರ ಪಾಲುದಾರರು. ಯಾವ್ಯಾವುದೋ ಸಂಸ್ಥೆಯ ಅದಿರನ್ನು ತೆಗೆದುಕೊಂಡು ಪರವಾನಗಿ ಇಲ್ಲದೆ ಮಾರಾಟ ಮಾಡಿದರು. ಲೈಸೆನ್‌ಸ್‌ ಇಲ್ಲದೆಯೂ ಗಣಿಗಾರಿಕೆ ಮಾಡಿದರು. ಹಿರಿಯ ಸಹೋದರಾದ ಕರುಣಾಕರರೆಡ್ಡಿ, ಸೋಮಶೇಖರರೆಡ್ಡಿ ಹಾಗೂ ಶ್ರೀರಾಮುಲು ಅವರನ್ನು ಪಕ್ಕಕ್ಕೆ ಇಟ್ಟುಕೊಂಡೇ ಜನಾರ್ದನರೆಡ್ಡಿ ಬಳ್ಳಾರಿಯ ಕೆಂದೊಡಲು ಬಗೆದಲ್ಲೆಲ್ಲ ಬರೀ ಹಣವೇ ಚಿಮ್ಮಿತು. ಎಲ್ಲರ ಜೇಬುಗಳು ತುಂಬಿ ತುಳುಕಿದವು, ಭಾರಕ್ಕೆ ಬಳುಕಿದವು.

ಸಂಪತ್ತು ಬಂದ ಮೇಲೆ ಅಧಿಕಾರ ಇಲ್ಲದಿದ್ದರೆ ಹೇಗೆ? ಸಂಪತ್ತು ಮತ್ತು ಅಧಿಕಾರ ಪರ್ಯಾಯ ಪದಗಳು. ಒಂದರಿಂದ ಮತ್ತೊಂದು. ರೆಡ್ಡಿ ಬಳಗಕ್ಕೆ ಹಣ ಬಂದಾಗಿತ್ತು. ಅದರ ರಕ್ಷಣೆ, ವೃದ್ಧಿ, ಪೋಷಣೆ, ಪ್ರದರ್ಶನಕ್ಕೆ ಅಧಿಕಾರ ಬೇಕಿತ್ತು. ಬಿಜೆಪಿಯಿಂದ ರಾಜ್ಯ ವಿಧಾನಸಭೆ ಪ್ರವೇಶಿಸಿದರು. ಮಂತ್ರಿಗಳೂ ಆದರು. ಅಷ್ಟೊತ್ತಿಗೆ ಸಿಎಂ ರಾಜಶೇಖರರೆಡ್ಡಿ ಹೆಲಿಕಾಪ್ಟರ್ ಅಪಘಾತದಲ್ಲಿ ದುರ್ಮರಣ ಹೊಂದಿದರು. ಆಪತ್ಬಾಂಧವ ಹೋದದ್ದು ರೆಡ್ಡಿ ಬಳಗಕ್ಕೆ ಅದರಲ್ಲೂ ಜನಾರ್ದರೆಡ್ಡಿಗೆ ಆಪತ್ತಾಗಿ ಪರಿಣಮಿಸಿತು. ನೂತನ ಮುಖ್ಯಮಂತ್ರಿ ರೋಸಯ್ಯ ಪ್ರತಿಪಕ್ಷ ತೆಲುಗುದೇಶಂ ಪ್ರತಿಭಟನೆಗೆ ಮಣಿದು ಓಎಂಸಿ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ವಹಿಸಿದರು. ಅಲ್ಲಿಂದಾಚೆಗೆ ಶುರುವಾದದ್ದು ರೆಡ್ಡಿ ಬಳಗಕ್ಕೆ ಶನಿದೆಸೆ.

ಬಳ್ಳಾರಿಯಲ್ಲೂ ಆರೋಪ, ಪ್ರತಿಭಟನೆ ಆರಂಭ. ಎಸ್.ಆರ್. ಹಿರೇಮಠ ದಾಖಲೆ ಬಿಡುಗಡೆ, ಲೋಕಾಯುಕ್ತ ಸಂತೋಷ ಹೆಗಡೆ ವರದಿ ಸಲ್ಲಿಕೆ, ಓಎಂಸಿ, ಎಎಂಸಿ ಅಕ್ರಮ ಗಣಿಗಾರಿಕೆ ಕುರಿತ ಸಿಬಿಐ ತನಿಖೆ ಜನಾರ್ದನರೆಡ್ಡಿ, ಕರುಣಾಕರರೆಡ್ಡಿ, ರಾಮುಲು ಮಂತ್ರಿ ಪದವಿಗಳನ್ನು ಕಸಿದುಕೊಂಡಿತು. ಧರೆ ಬಗೆದು ತಲೆಗೇರಿಸಿಕೊಂಡಿದ್ದ ಕಿರೀಟಗಳು ಮತ್ತೆ ಧರೆಗುರುಳಿದವು. ವಿಜಯನಗರ ಸಾಮ್ರಾಟ ಕೃಷ್ಣದೇವರಾಯನಿಗೆ ತಮ್ಮನ್ನು ಹೋಲಿಸಿಕೊಂಡಿದ್ದ ಜನಾರ್ದನರೆಡ್ಡಿ 2011ರ ಸೆಪ್ಟೆಂಬರ್‌ನಲ್ಲಿ ಜೈಲಿಗೂ ಹೋದರು. ಅಲ್ಲಿ ಅವರು ಮುರಿದ ಮುದ್ದೆಯಲ್ಲಿ ಕಬ್ಬಿಣದ ಅದಿರುಗಳೇ ಕಂಡವು!

ಇಲ್ಲಿಂದಾಚೆಗೆ ಅನಾವರಣಗೊಂಡದ್ದು ರೆಡ್ಡಿ ಬಳಗ ಬಾಂಧವ್ಯದ ಆತ್ಮಛಿದ್ರ ಕಥನ. ಮಂತ್ರಿ ಸ್ಥಾನ ಹೋದ ನಂತರ ಕರುಣಾಕರರೆಡ್ಡಿ, ರಾಮುಲು ಮಹತ್ವ ಬಳ್ಳಾರಿಯಲ್ಲೇ ಕಡಿಮೆ ಆಯಿತು. ಕೇಳುವವರೇ ಇಲ್ಲವಾದರು. ಜೈಲಲ್ಲಿದ್ದ ಜನಾರ್ದನ ರೆಡ್ಡಿ ಸ್ಥಿತಿ ಹೇಳುವುದೇ ಬೇಡ. ಸ್ವಂತ ಅಣ್ಣ ಕರುಣಾಕರರೆಡ್ಡಿಯೇ ಜೈಲಿಗೆ ಹೋಗಿ ನೋಡಲಿಲ್ಲ. ಜಾಮೀನು ಅರ್ಜಿ ಸಲ್ಲಿಕೆ ಉಸ್ತುವಾರಿಯನ್ನೂ ವಹಿಸಿಕೊಳ್ಳಲಿಲ್ಲ. ಜೈಲಿಗೆ ಹೋಗಿ ಸಂಪರ್ಕ ಇಟ್ಟುಕೊಂಡರೆ ತನಿಖೆ ಉರುಳು ತಮ್ಮ ಕೊರಳಿಗೆ ಸುತ್ತಿಕೊಳ್ಳಬಹುದು ಅನ್ನೋ ಭಯವೋ, ಜನ ತನ್ನನ್ನು ತಮ್ಮನಿಗಿಂತ ಭಿನ್ನ ದೃಷ್ಟಿಯಲ್ಲಿ ನೋಡಲಿ ಎಂಬ ಭ್ರಮೆಯೋ, ತಮ್ಮ ತನಗಿಂತಲೂ ಹೆಚ್ಚು ಸಂಪಾದನೆ ಮಾಡಿಟ್ಟುಕೊಂಡಿದ್ದಾನೆ ಅನ್ನೋ ಸಂಕಟವೋ.. ಏನೋ ಒಟ್ಟಿನಲ್ಲಿ ಜೈಲಿನತ್ತ ತಲೆ ಹಾಕಿಯೂ ಮಲಗಲಿಲ್ಲ. ಆಗ ಮಲಗಿದ್ದು ಜನಾರ್ದನರೆಡ್ಡಿ ಮತ್ತು ಕರುಣಾಕರೆಡ್ಡಿ ಸಂಬಂಧ ಮಾತ್ರ.

ಇದಾದ ನಂತರ ಜನಾರ್ದನರೆಡ್ಡಿ ಅಣತಿ ಮೇರೆಗೆ ರಾಮುಲು ಬಿಜೆಪಿ ತೊರೆದು ಬಿಎಸ್‌ಆರ್ ಕಾಂಗ್ರೆಸ್ ಕಟ್ಟಿದರು. ಪಕ್ಷ ಸೇರುವಂತೆ ಕರೆದರೂ ಕರುಣಾಕರೆಡ್ಡಿ ಕ್ಯಾರೇ ಅನ್ನಲಿಲ್ಲ. ‘ಕರ್ನಾಟಕದಲ್ಲಿ ಸ್ಥಳೀಯ ಪಕ್ಷಗಳೆಲ್ಲ ಮಖಾಡೆ ಮಲಗಿವೆ. ನಾನು ಬರಲ್ಲ’ ಅಂತ ಬಿಜೆಪಿಯಲ್ಲೇ ಅದೃಷ್ಟ ಅರಸಿದ ಕರುಣಾಕರೆಡ್ಡಿ ಅವರನ್ನು ಜನರೇ ಮಲಗಿಸಿದರು. ಕರುಣಾಕರರೆಡ್ಡಿ ವಿರುದ್ಧ ರಾಮುಲು ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರು. ಆ ಪುಣ್ಯಾತ್ಮ ಸುಮಾರು ಒಂಬತ್ತು ಸಾವಿರ ಮತ ಪಡೆದರು. ಕರುಣಾಕರೆಡ್ಡಿ 8,400 ಮತಗಳ ಅಂತರದಿಂದ ಸೋತರು. ಅಲ್ಲಿಗೆ ತನ್ನ ಸೋಲಿಗೆ ರಾಮುಲುವೇ ಕಾರಣ ಎಂಬ ತೀರ್ಮಾನಕ್ಕೆ ಬಂದ ಕರುಣಾಕರೆಡ್ಡಿ ಅವತ್ತು ರಾಮುಲುವತ್ತ ವಿಷ ಕಾರಲು ಶುರು ಮಾಡಿದ್ದು ಇವತ್ತಿಗೂ ನಿಂತಿಲ್ಲ. ಮತ್ತೆ ಬಿಜೆಪಿಗೆ ವಾಪಸಾದ ರಾಮುಲು ಮುಂದಿನ ಚುನಾವಣೇಲಿ ಕರುಣಾಕರರೆಡ್ಡಿ ಸೋಲಿಸೋ ಪಣ ತೊಟ್ಟಿದ್ದಾರೆ. ಅಲ್ಲಿಗೆ ಇವರಿಬ್ಬರ ಸಂಬಂಧವೂ ಶ್ರೀರಾಮನ ಪಾದ ಸೇರಿದಂತಾಗಿದೆ.

ಜೈಲಿಂದ ಬಿಡುಗಡೆ ಆದ ನಂತರ ಜನಾರ್ದನರೆಡ್ಡಿ ಅತ್ಯಂತ ವಿಜೃಂಭಣೆಯಿಂದ ನೆರವೇರಿಸಿದ ಪುತ್ರಿ ಬ್ರಹ್ಮಿಣಿ ಮದುವೆಗೆ ಕರುಣಾಕರರೆಡ್ಡಿಯನ್ನು ಕರೆಯಲಿಲ್ಲ. ಕರೆಯದಿದ್ದ ಮೇಲೆ ಇವರೇಕೆ ಹೋಗುತ್ತಾರೆ. ಮಧ್ಯಮ ಸೋದರ ಸೋಮಶೇಖರರೆಡ್ಡಿ ಅನುಜ, ಅಗ್ರಜರ ನಡುವೆ ಸಂಧಾನ ಏರ್ಪಡಿಸಲು ನಡೆಸಿದ ಪ್ರಯತ್ನ ಉಕ್ಕಿನ ಕಾರ್ಖಾನೆ ಚಿಮಣಿಯ ಆವಿಯಂತಾಯಿತು. ‘ಜೈಲಿಗೆ ಹೋಗಿ ಬಂದರೂ ನನಗೇನೂ ಆಗಿಲ್ಲ, ಕೂದಲು ಕೂಡ ಕೊಂಕಿಲ್ಲ’ ಎಂಬುದನ್ನು ತೋರಿಸಿಕೊಳ್ಳುವುದು ಮಗಳ ವೈಭವದ ವಿವಾಹದ ಹಿಂದಿದ್ದ ರೆಡ್ಡಿ ಉದ್ದೇಶ. ಆದರೆ ಇಷ್ಟೆಲ್ಲ ಆದರೂ ದವಲತ್ತು, ಧಿಮಾಕು ಮಾತ್ರ ಹೋಗಿಲ್ಲ ಎಂದು ಜನ ಮಾತಾಡಿಕೊಂಡರು.

ಇಷ್ಟರ ಮಧ್ಯೆ ಈಗ ಹೊಸದಾಗಿ ಶ್ರೀರಾಮುಲು ಮತ್ತು ಕರುಣಾಕರರೆಡ್ಡಿ ನಡುವೆ ಆಸ್ತಿ ಕಚ್ಚಾಟ ಶುರುವಾಗಿದೆ. ಬಳ್ಳಾರಿಯ ಹದ್ದಿನಗುಂಡು ಪ್ರದೇಶದಲ್ಲಿ 1997ರಲ್ಲಿ ಕರುಣಾಕರರೆಡ್ಡಿ ಮತ್ತು ರಾಮುಲು ಅಕ್ಕಪಕ್ಕದಲ್ಲಿ ಕ್ರಮವಾಗಿ 2 ಎಕರೆ 73 ಸೆಂಟ್ ಹಾಗೂ 8 ಎಕರೆ 23 ಸೆಂಟ್ ಜಮೀನು ಖರೀದಿಸಿದ್ದರು. ಇಬ್ಬರೂ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಮೇರೆಗೆ ಭೂಪರಿವರ್ತನೆ ಮಾಡಿಕೊಂಡು ನಿವೇಶನಗಳನ್ನು ನಿರ್ಮಿಸಿದ್ದಾರೆ. ರಾಮುಲು ತಮ್ಮ ಪಾಲಿನ ಜತೆಗೆ ಪಕ್ಕದಲ್ಲೇ ಇದ್ದ ಕರುಣಾಕರರೆಡ್ಡಿ ಪಾಲಿನ ಹತ್ತು ನಿವೇಶನಗಳನ್ನೂ ತಿಮ್ಮರಾಜು ಎಂಬ ಜನರಲ್ ಪವರ್ ಆಫ್ ಅಟಾರ್ನಿದಾರನ ಮೂಲಕ ಮಾರಾಟ ಮಾಡಿಸಿದ್ದು, ಪ್ರಕರಣ ಇದೀಗ ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ಇದಕ್ಕೆ ಪ್ರತಿಯಾಗಿ ಶ್ರೀರಾಮುಲು ತಮ್ಮ ಬೆಂಬಲಿಗರ ಮೂಲಕ ಕರುಣಾಕರರೆಡ್ಡಿ ವಿರುದ್ಧ ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸಿದ್ದಾರೆ. ಜನಾರ್ದನರೆಡ್ಡಿ ಬೆಂಬಲವಿಲ್ಲದೆ ಶ್ರೀರಾಮುಲು ಈ ಕೆಲಸ ಮಾಡಲು ಸಾಧ್ಯವಿಲ್ಲ ಎಂಬುದು ಕರುಣಾಕರೆಡ್ಡಿ ನಂಬಿಕೆ. ಈ ನಂಬಿಕೆ ಸಹೋದರರ ಸಂಬಂಧವನ್ನು ಮತ್ತಷ್ಟು ಚಿಂದಿ ಚಿತ್ರಾನ್ನ ಮಾಡಿದೆ. ಬಹಿರಂಗವಾಗಿಯೇ ಬಯ್ದುಕೊಂಡು ಓಡಾಡುವ ಮಟ್ಟ ತಲುಪಿದೆ.

ಜನಾರ್ದನರೆಡ್ಡಿ ಮತ್ತು ಕರುಣಾಕರರೆಡ್ಡಿ ಸಂಬಂಧ ಹಾಳಾಗಲು ಶ್ರೀರಾಮುಲುವೇ ಕಾರಣ. ಆತನಿಂದಾಗಿಯೇ ತಮ್ಮ ಕುಟುಂಬ ಒಡೆದ ಗಾಜಿನ ಚೂರಿನಂತಾಗಿದೆ ಎಂಬುದು ಸೋಮಶೇಖರರೆಡ್ಡಿ ಆಂತರ್ಯದ ಅಭಿಮತ. ಆದರೆ ಮೇಲ್ನೋಟಕ್ಕೆ ತಮ್ಮ ಕುಟುಂಬದ ಏಳ್ಗೆಗೆ ಶ್ರೀರಾಮುಲು ಕಾರಣ. ಅವರ ವಿರುದ್ಧ ಕರುಣಾಕರರೆಡ್ಡಿ ಕೇಸು ಹಾಕಬಾರದಿತ್ತು ಎಂದು ಹೇಳುತ್ತಾರೆ. ಮನೆಬಾಗಿಲಿಗೆ ಬರುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ರಾಮುಲು ಪ್ರತಿನಿಧಿಸುವ ನಾಯಕ ಸಮುದಾಯದ ಮತಗಳು ಕಾಲೆತ್ತಿಕೊಂಡರೆ ತಾವು ತಲೆಗೆ ಕೈಯೊತ್ತಿ ಮಲಗಬೇಕಾಗುತ್ತದೆ ಎಂಬ ಭೀತಿ. ಒಟ್ಟಾರೆ ರುಕ್ಮಿಣಮ್ಮನವರ ನಾಲ್ವರು ಪುತ್ರರ ಪೈಕಿ ಇಬ್ಬಿಬ್ಬರು ಒಂದೊಂದು ಕಡೆ ಮುಖ ತಿರುಗಿಸಿ ನಿಂತಿದ್ದಾರೆ. ವಿಜಯನಗರ ಅರಸರೆಂದು ಭ್ರಮಿಸಿಕೊಂಡು ಮೆರೆದ ರೆಡ್ಡಿ ಬಳಗ ಕಿತ್ತೋದ ರೈಲ್ವೆ ಕಂಬಿಯಂತಾಗಿರುವುದನ್ನು ಕಂಡು ಬಳ್ಳಾರಿ ಜನ ಮನಸ್ಸಿನಲ್ಲೇ ನೆಟಿಕೆ ಮುರಿಯುತ್ತಿದ್ದಾರೆ. ಅಲ್ಲೂ ಬಳ್ಳಾರಿಯ ಕೆಂಧೂಳೇ ಪಟಪಟನೆ ಸಿಡಿಯುತ್ತಿದೆ!

ಲಗೋರಿ: ಭ್ರಮಾಧೀನನಿಗೆ ಭ್ರಮೆಯ ಮಿತಿ ಇರುವುದಿಲ್ಲ.

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply