ಬಜೆಟ್ ಕುರಿತು ಮಂತ್ರಿ ಪರಿಷತ್ತಿನಲ್ಲಿ ಚರ್ಚೆ, ಬೇಸಿಗೆಯಲ್ಲಿ ವಿದ್ಯುತ್ ಕಡಿತ ಇಲ್ಲ- ಡಿಕೆಶಿ, ಬಾಬ್ರಿ ಮಸೀದಿ ಧ್ವಂಸ- ಆಡ್ವಾಣಿ ಸೇರಿದಂತೆ ಇತರರ ವಿರುದ್ಧ ವಿಚಾರಣೆ ನಡೀಬೇಕು: ಸುಪ್ರೀಂ, ಮುಂಬೈ ದಾಳಿ ಮಾಡಿದ್ದು ಪಾಕ್ ಉಗ್ರರೇ ಎಂದ ಪಾಕ್ ಮಾಜಿ ಭದ್ರತೆ ಸಲಹೆಗಾರ

ವರನಟ ಡಾ.ರಾಜ್ ಕುಮಾರ್ ಅವರ ಹೆಸರಿನಲ್ಲಿ ರಾಜ್ ಕುಟುಂಬ ರಾಜ್ಯದ ಆಸಕ್ತ ಯುವಕರಿಗೆ ಉಚಿತವಾಗಿ  ನಾಗರೀಕ ಸೇವಾ ಪರೀಕ್ಷೆಗೆ ತರಬೇತಿ ನೀಡಲು ‘ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ’ ಆರಂಭಿಸಿದ್ದು, ಇದರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್.

ಡಿಜಿಟಲ್ ಕನ್ನಡ ಟೀಮ್:

ಮಂತ್ರಿ ಪರಿಷತ್ ಸಭೆಯಲ್ಲಿ ಏನಾಯ್ತು?

ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬಾರಿಯ ರಾಜ್ಯ ಬಜೆಟ್ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಮತದಾರರನ್ನು ಸೆಳೆಯುವ ಉದ್ದೇಶದಿಂದ ಸರ್ಕಾರ ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುವ ಬಗ್ಗೆ ಇಂದು ನಡೆದ ಮಂತ್ರಿ ಪರಿಷತ್ ಸಭೆಯಲ್ಲಿ ಚರ್ಚಿಸಲಾಯಿತು. ಮಾರ್ಚ್ 15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 12ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷ ಜನರನ್ನು ತಲುಪಲು ಇದನ್ನು ಪ್ರಮುಖ ಸಾಧನವಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. ಹೀಗಾಗಿ ಇಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಚಿವರುಗಳು ತಮ್ಮ ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಯಾವ ರೀತಿ ವಿಶೇಷ ಒತ್ತು ನೀಡಬೇಕು ಎಂಬುದರ ಬಗ್ಗೆ ಪ್ರಸ್ತಾವ ಹಾಗೂ ಸಲಹೆ ನೀಡಿದರು. ಈ ಸಭೆಯಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು ಹಿಗಿವೆ…

  • ಪ್ರಸ್ತುತ ಅಸ್ಥಿತ್ವದಲ್ಲಿರುವ ಕನ್ನಡ ಶಾಲೆಗಳಲ್ಲೇ ಪ್ರಾರಂಭಿಕ ಹಂತದಲ್ಲಿ ಇಂಗ್ಲೀಷ್ ಮಾಧ್ಯಮ ತರಗತಿ ಆರಂಭ ಮಾಡುವುದು.
  • ಹೊಸ ವೈದ್ಯಕೀಯ ಮತ್ತು ಇಂಜನಿಯರಿಂಗ್ ಕಾಲೇಜು ಆರಂಭ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಉನ್ನತ ತಂತ್ರಜ್ಞಾನ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಕಲ್ಪಿಸುವುದು.
  • ರೈತರ ಕೃಷಿ ಸಾಲಮನ್ನಾ, ಆಧುನಿಕ ತಂತ್ರಜ್ಞಾನ, ಕನಿಷ್ಠ ಪ್ರಮಾಣದಲ್ಲಿ ನೀರು ಬಳಸಿ, ಅಲ್ಪಾವಧಿ ಬೆಳೆಗೆ ಉತ್ತೇಜನದ ಜತೆಗೆ ಲಭ್ಯವಿರುವ ಜಲ ಸಮರ್ಪಕ ಬಳಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸುವುದು.
  • ಸಮಾಜ ಕಲ್ಯಾಣ ಇಲಾಖೆಗೆ ಹೆಚ್ಚು ಹಣ ನೀಡಲಾಗುತ್ತಿದೆ. ಆ ಹಣದಲ್ಲೇ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೊಸ ಯೋಜನೆ ಕಲ್ಪಿಸುವುದು.
  • ಕಳೆದ ಮೂರು ವರ್ಷಗಳಲ್ಲಿನ ಬರದ ಹಿನ್ನೆಲೆಯಲ್ಲಿ ಈ ಬಾರಿ ಮೋಡ ಬಿತ್ತನೆ ಮಾಡಲು ಸಜ್ಜಾಗಬೇಕು. ಸಾಧ್ಯವಾದಷ್ಟು ಬೇಗ ಮೋಡ ಬಿತ್ತನೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬ ಸಲಹೆ ನೀಡಲಾಯಿತು.

ಬೇಸಿಗೆಯಲ್ಲಿ ವಿದ್ಯುತ್ ಕಡಿತ ಇರುವುದಿಲ್ಲ- ಡಿಕೆಶಿ

‘ಬೇಸಿಗೆಯ ಮುಂದಿನ ಮೂರು ತಿಂಗಳುಗಳ ಕಾಲ ರಾಜ್ಯದ ಬೇಡಿಕೆ ಪೂರೈಸುವಷ್ಟು ವಿದ್ಯುತ್ ಲಭ್ಯವಿದ್ದು, ಯಾವುದೇ ಕಾರಣಕ್ಕೂ ವಿದ್ಯುತ್ ಕಡಿತ ಮಾಡುವುದಿಲ್ಲ. ಹೀಗಾಗಿ ರಾಜ್ಯದ ಜನತೆ ಆತಂಕಪಡಬೇಕಾಗಿಲ್ಲ’ ಎಂದು ಅಭಯ ನೀಡಿದ್ದಾರೆ ಇಂಧನ ಸಚಿವ ಡಿ.ಕೆ.ಶಿವಕುಮಾರ್. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಪ್ರತಿನಿತ್ಯ 10,422 ಮೆಗಾವ್ಯಾಟ್ ವಿದ್ಯುತ್ ಬಳಕೆಯಾಗುತ್ತಿದೆ. ಇನ್ನೂ ಹೆಚ್ಚುವರಿಯಾಗಿ 1 ಸಾವಿರ ಮೆಗಾವ್ಯಾಟ್ ವಿದ್ಯುತ್ ಲಭ್ಯವಿದೆ. ಯರಮಸ್ ಸೇರಿದಂತೆ ವಿವಿಧ ಯೋಜನೆಗಳಿಂದ ಕಳೆದ ವಾರವಷ್ಟೇ 1300 ಮೆಗಾವ್ಯಾಟ್ ಹೆಚ್ಚಿನ ವಿದ್ಯುತ್ ಲಭ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ವಿದ್ಯುತ್ ಲಭ್ಯವಾಗಲಿದೆ. ರಾಜ್ಯದ ಬೇಡಿಕೆ ಪೂರೈಸಿ ಬೇರೆ ರಾಜ್ಯಗಳಿಗೆ ನೀಡುವಷ್ಟು ಪ್ರಮಾಣದಲ್ಲಿ ವಿದ್ಯುತ್ ಲಭ್ಯವಿದೆ. ಹೀಗಾಗಿ ಈ ಬಾರಿ ಬೇಸಿಗೆಯಲ್ಲಿ ವಿದ್ಯುತ್ ಅಭಾವ ತಲೆದೋರದು’ ಎಂದರು.

ಅರಣ್ಯ ಬೆಂಕಿ ಹಿಂದೆ ಪ್ರಭಾವಿಗಳ ಕೈವಾಡ?

ಕಪ್ಪತಗುಡ್ಡ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದ ಘಟನೆಯ ಹಿಂದೆ ಪ್ರಭಾವಿ ಗಣಿಧಣಿಯೊಬ್ಬರ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಸಚಿವ ಜೀವರಾಜ್, ‘ಕಪ್ಪತಗುಡ್ಡ ಅರಣ್ಯ ಪ್ರದೇಶವನ್ನು ಗಣಿಗಾರಿಕೆಗೆ ಕೊಡಲು ಸರ್ಕಾರ ಸಜ್ಜಾಗಿದೆ. ಈ ಕಾರಣಕ್ಕೆ ಅರಣ್ಯ ಪ್ರದೇಶವನ್ನು ಸಂರಕ್ಷಿಸುವ ಅಗತ್ಯ ಕಾನೂನನ್ನು ಜಾರಿಗೆ ತರಲು ಸರ್ಕಾರ ಮುಂದಾಗಿಲ್ಲ. ಜನವಸತಿ ಪ್ರದೇಶ ಹೊರತುಪಡಿಸಿ ಉಳಿದೆಡೆ ಕಾಡ್ಗಿಚ್ಚು ಹಬ್ಬಿರುವ ಹಿಂದಿನ ಮರ್ಮವನ್ನು ಸುಲಭವಾಗಿ ಊಹಿಸಬಹುದು. ಏನೇ ಒಳಸಂಚು ನಡೆಸಿದರೂ ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ’ ಎಂದರು.

ಆಡ್ವಾಣಿ, ಜೋಷಿ ಹಾಗೂ ಉಮಾ ವಿರುದ್ಧದ ತನಿಖೆ

ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಹಿರಿಯ ನಾಯಕ ಎಲ್.ಕೆ ಆಡ್ವಾಣಿ, ಮುರುಳಿ ಮೋಹರ್ ಜೋಷಿ ಹಾಗೂ ಉಮಾ ಭಾರತಿ ಅವರ ವಿರುದ್ಧ ವಿಚಾರಣೆ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಸಿಬಿಐ ಹಾಗೂ ಹಾಜಿ ಮಹಬೂಬ್ ಅಹ್ಮದ್ ಎಂಬುವವರು ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯಕ್ಕೆ ಬಂದಿದ್ದು, ಇದರೊಂದಿಗೆ ಈ ಮೂವರು ನಾಯಕರಿಗೆ ಮತ್ತೆ ಹೊಸದಾಗಿ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ. ಅಲಹಬಾದ್ ಹೈ ಕೋರ್ಟ್ ಆಡ್ವಾಣಿ, ಜೋಷಿ, ಉಮಾ ಭಾರತಿ ಮತ್ತು ಆಗಿನ ಉತ್ತರ ಪ್ರದೇಶ ಮುಖ್ಯಮಂತ್ರಿ ಹಾಗೂ ಪ್ರಸ್ತುತ ರಾಜಸ್ಥಾನ ಗವರ್ನರ್ ಕಲ್ಯಾಣ್ ಸಿಂಗ್ ಹಾಗೂ ಇತರರನ್ನು ಈ ಪ್ರಕರಣದಲ್ಲಿ ದೋಷಮುಕ್ತರು ಎಂದು ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಸಿಬಿಐ ಸುಪ್ರೀಂ ಕೋರ್ಟಿನಲ್ಲಿ ಮೇಲ್ವಿಚಾರಣ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಈ ಬಗ್ಗೆ ಎಲ್ಲ ಆರೋಪಿಗಳ ಪ್ರತಿಕ್ರಿಯೆಗೆ ಸೂಚನೆ ನೀಡಿದ್ದು, ಮಾರ್ಚ್ 22ರಂದು ಅಂತಿಮ ವಿಚಾರಣೆ ನಡೆಸಿ ಈ ಬಗ್ಗೆ ತೀರ್ಪು ನೀಡುವ ಸಾಧ್ಯತೆ ಇದೆ. ಜತೆಗೆ ಲಖನೌ ಹಾಗೂ ರಾಯ್ ಬರೇಲಿಯಲ್ಲಿ ಪ್ರತ್ಯೇಕವಾಗಿ ನಡೆಯುತ್ತಿರುವ ಪ್ರಕರಣಗಳ ವಿಚಾರಣೆಯನ್ನು ಒಟ್ಟಿಗೆ ನಡೆಸಲು ಆದೇಶ ನೀಡುವ ಸಾಧ್ಯತೆಯೂ ಇದೆ.

ಮುಂಬೈ ದಾಳಿ ನಡೆಸಿದ್ದು ಪಾಕ್ ಮೂಲದ ಉಗ್ರರೇ: ಪಾಕ್ ಮಾಜಿ ಭದ್ರತಾ ಸಲಹೆಗಾರ

2008ರಲ್ಲಿ ಮುಂಬೈ ಮೇಲಿನ ದಾಳಿಯನ್ನು ನಡೆಸಿದ್ದು ಪಾಕಿಸ್ತಾನ ಮೂಲದ ಉಗ್ರರೇ ಎಂದು ಪಾಕ್ ಮಾಜಿ ಭದ್ರತಾ ಸಲಹೆಗಾರ ಮಹ್ಮದ್ ಅಲಿ ಡುರ್ರಾನಿ ಒಪ್ಪಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಪಾಕಿಸ್ತಾನದ ಭದ್ರತಾ ಸಲಹೆಗಾರರಾಗಿದ್ದ ಡುರ್ರಾನಿ ಇಂದು ಇನ್ಸ್ ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಮತ್ತು ಅನಾಲಿಸಿಸ್ ನಲ್ಲಿ ನಡೆದ ಭಯೋತ್ಪಾದನ ನಿಗ್ರಹ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ‘2008ರ ನವೆಂಬರ್ 28ರಂದು ಮುಂಬೈನಲ್ಲಿ ನಡೆದ ದಾಳಿಯನ್ನು ಪಾಕಿಸ್ತಾನ ಮೂಲದ ಉಗ್ರರೇ ನಡೆಸಿದ್ದಾರೆ ಎಂಬ ಅಂಶವನ್ನು ಒಪ್ಪಿಕೊಳ್ಳಲು ನಾಚಿಕೆಯಾಗುತ್ತಿದೆ. ಅದು ಗಡಿಯೊಳಗೆ ನುಗ್ಗಿ ನಡೆಸಿದ ಅತ್ಯಂತ ದೊಡ್ಡ ಉಗ್ರರ ದಾಳಿ ಎಂದೇ ಪರಿಗಣಿಸಲಾಗಿದೆ’ ಎಂದು ಹೇಳಿದ್ದಾರೆ. ಜತೆಗೆ ಈ ದಾಳಿಗೂ ಪಾಕಿಸ್ತಾನ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳುವ ಮೂಲಕ ಡುರ್ರಾನಿ ಜಾರಿಕೊಂಡರು.

Leave a Reply