ಸೇನೆಯ ಕೆಳಹಂತದ ಯೋಧರ ದುಮ್ಮಾನಗಳನ್ನು ದೇಶಪ್ರೇಮದ ಘೋಷಣೆಗಳಲ್ಲಿ ಕಟ್ಟಿ ಪಕ್ಕಕ್ಕಿಡುವುದು ಸರಿಯೇ?

ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಡಿಜಿಟಲ್ ಕನ್ನಡ ಟೀಮ್:

ಸೇನೆಯ ಸಹಾಯಕ್ ಪದ್ಧತಿಯಲ್ಲಿ ಲೋಪವಿರುವುದಂತೂ ಹೌದೆಂಬುದು ದೃಢವಾಗುತ್ತಿದೆ. ಆದರೆ ಈ ಪದ್ಧತಿ ಸುಧಾರಣೆ ನಿಟ್ಟಿನಲ್ಲಿ ಚರ್ಚೆಯ ಅವಶ್ಯವಿರುವುದಂತೂ ಖರೆ. ಅಂತೆಯೇ ತೂರಿಬರುತ್ತಿರುವ ಆರೋಪಗಳಲ್ಲೂ ಕೆಲವು ದೋಷಗಳಿರುವುದು ಸ್ಪಷ್ಟ.

ಈ ಎಲ್ಲ ಮಾತುಗಳು ಏಕೆಂದರೆ ಸಿಂಧವ್ ಜೋಗಿದಾಸ್ ಎಂದು ಗುರುತಿಸಿಕೊಂಡಿರುವ ಸೈನಿಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಈ ಪದ್ಧತಿ ವಿರುದ್ಧ ಪ್ರತಿಭಟನೆ ದಾಖಲಿಸಿರುವ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಕ್ವಿಂಟ್ ಜಾಲತಾಣದ ಕುಟುಕು ಕಾರ್ಯಾಚರಣೆಯಲ್ಲಿ ಸಹಾಯಕ ಪದ್ಧತಿ ವಿರುದ್ಧ ಕಿಡಿಕಾರಿ ಆತ್ಮಹತ್ಯೆಗೆ ಶರಣಾದ ಯೋಧ ರಾಯ್ ಮ್ಯಾಥ್ಯೂ ಪ್ರಕರಣದ ಬೆನ್ನಲ್ಲೇ ತೆರೆದುಕೊಂಡಿರುವ ವಿದ್ಯಮಾನವಿದು. ಆದರೆ ಮ್ಯಾಥ್ಯೂ ಪ್ರಕರಣಕ್ಕೂ ಇಲ್ಲಿಗೂ ಮೂಲಭೂತ ವ್ಯತ್ಯಾಸವೊಂದಿದೆ. ಅಲ್ಲಿ ತನ್ನನ್ನು ಚಿತ್ರೀಕರಿಸುತ್ತಿದ್ದಾರೆಂದು ಗೊತ್ತಿಲ್ಲದೇ ಆಕ್ರೋಶ ಹೊರಗೆಡವಿ ನಂತರ ಹೆದರಿಕೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಮಾನವಿದೆ. ಅರ್ಥಾತ್ ಮಾಧ್ಯಮವು ಹಾಗೆ ಗೊತ್ತಿರದಂತೆ ವಿಡಿಯೊ ಚಿತ್ರೀಕರಣ ನಡೆಸಿ ಬಹಿರಂಗಗೊಳಿಸದಿದ್ದರೆ ಯೋಧನ ಸಾವಾಗುತ್ತಿರಲಿಲ್ಲ. ಆದರೆ ಈಗಿನ ವಿದ್ಯಮಾನದಲ್ಲಿ ಯೋಧನೇ ಸ್ವಯಂಪ್ರೇರಿತವಾಗಿ ವಿಡಿಯೋ ಪ್ರತಿಭಟನೆ ದಾಖಲಿಸಿರುವುದು ಗಮನಾರ್ಹ.

sahayakಕೇವಲ ವೈಯಕ್ತಿಕ ನೆಲೆಯಲ್ಲಿ ಈ ಪ್ರಕರಣ ನೋಡಿದಾಗ ಯೋಧನ ವಾದದಲ್ಲೂ ಕೆಲ ಲೋಪಗಳಿರುವುದು ಗೊತ್ತಾಗುತ್ತದೆ. ‘ನನ್ನ ರಜೆಯನ್ನು ವಿಸ್ತರಿಸಲಿಲ್ಲ. ಎರಡು ದಿನ ತಡವಾಗಿ ಕರ್ತವ್ಯಕ್ಕೆ ಬಂದಿದ್ದಕ್ಕೆ ಸಹಾಯಕ ಹುದ್ದೆಗೆ ಹಾಕಿದರು. ಅದಕ್ಕೆ ಒಪ್ಪದಿದ್ದಾಗ 7 ದಿನಗಳ ಕಾಲ ಸೇನಾ ಬಂಧನದಲ್ಲಿ ಇರಿಸಲಾಯಿತು. ಸಹಾಯಕ ಕೆಲಸದಲ್ಲಿ ಯೋಧನನ್ನು ಗುಲಾಮನಂತೆ ನಡೆಸಿಕೊಳ್ಳಲಾಗುತ್ತದೆ’ ಎಂಬುದು ಸಿಎನ್ಎನ್ ನ್ಯೂಸ್18 ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸಿಂಧವ್ ಜೋಗಿದಾಸ್ ದೂರಿರುವುದು.

ಇಷ್ಟನ್ನೇ ಗಮನಿಸಿದಾಗ ಪ್ರಶ್ನೆ ಏಳುವುದು ಸಹಜ. ಸೇನೆಯಲ್ಲಿ ಕೆಲಸಕ್ಕೆ ಸೇರುವುದೆಂದರೆ ಅದು ಯಾವುದೇ ರೀತಿಯ ಕಾರ್ಪೊರೇಟ್ ಉದ್ಯೋಗವಲ್ಲ ಎಂಬ ಅರಿವು ಮೊದಲೇ ಇರಬೇಕಾದದ್ದು ಅಪೇಕ್ಷಣೀಯ. ರಜೆ ಮತ್ತು ಶಿಸ್ತುಪಾಲನೆ ವಿಷಯದಲ್ಲಿ ಸೇನೆ ನಿಷ್ಠುರತೆಯನ್ನೇ ಪ್ರದರ್ಶಿಸುತ್ತದೆ. ಭಾರತ ಅಂತಲ್ಲ, ಯಾವುದೇ ಸೇನಾ ವ್ಯವಸ್ಥೆ ಇಂಥ ಕಾಠಿಣ್ಯವನ್ನು ಪ್ರದರ್ಶಿಸಲೇಬೇಕು. ಹೀಗಿರುವಾಗ ಎರಡು ದಿನ ವಿಳಂಬವಾಗಿ ಕೆಲಸಕ್ಕೆ ಬಂದಾಗಲೂ ಯಾವುದೇ ಕ್ರಮ ಕೈಗೊಳ್ಳಬಾರದೆಂಬಂತೆ ಮಾತಾಡುವುದು ಒಪ್ಪಲಾಗದ್ದು.

ಆದರೆ…

ಸಹಾಯಕ ಕೆಲಸವನ್ನು ಶಿಕ್ಷೆಯ ಚೌಕಟ್ಟಿನಲ್ಲಿ ಸೇನೆ ನೋಡುತ್ತದೆ ಎಂಬುದೂ ಅಷ್ಟೇ ಆಕ್ಷೇಪಾರ್ಹ ಸಂಗತಿಯೇ ಆಗುತ್ತದೆ. ಸಹಾಯಕ ಪದ್ಧತಿ ಯಾವ ಹಂತದಲ್ಲಿದೆ, ಅದರ ಕುರಿತ ಗ್ರಹಿಕೆ ಏನು ಎಂಬುದೂ ಇಲ್ಲೇ ನಿಚ್ಚಳವಾಗಿಬಿಡುತ್ತದೆ.

ಹೀಗಾಗಿ ಒಟ್ಟಾರೆ ಈ ವ್ಯವಸ್ಥೆ ತೆಗೆಯುವುದು ಇಲ್ಲವೇ ಅದಕ್ಕೆ ಘನತೆ ತಂದುಕೊಡುವುದು ಹೇಗೆ ಎಂಬ ಬಗ್ಗೆ ಚರ್ಚೆಗಳು ಬೇಕು. ಈ ಬಗ್ಗೆ 2008-09ರಲ್ಲಿ ಸಲ್ಲಿಕೆಯಾಗಿರುವ ಸಂಸದೀಯ ಸಮಿತಿ ವರದಿಯೂ ಇದನ್ನು ತೆಗೆದುಹಾಕುವುದರ ಬಗ್ಗೆಯೇ ಮಾತಾಡಿದೆ. ಇದೊಂದು ತುಂಬ ಅಮಾನವೀಯ ಹಾಗೂ ವಸಾಹತುಶಾಹಿ ಕಾಲದ ಪದ್ಧತಿ ಎಂದೇ ವರದಿ ವ್ಯಾಖ್ಯಾನಿಸಿದೆ. ನೌಕಾಸೇನೆ, ವಾಯುಸೇನೆಗಳಲ್ಲಿ ಈ ಸಹಾಯಕ ಪದ್ಧತಿಯೇ ಇಲ್ಲ.

ಸುಬೇದಾರ್ ಹುದ್ದೆಯಿಂದ ಹಿಡಿದು ಅದರ ಮೇಲ್ಪಟ್ಟ ಅಧಿಕಾರಿಗಳಿಗೆ ಸಹಾಯಕರನ್ನು ನೀಡಲಾಗುತ್ತದೆ. ಯುದ್ಧ ಎದುರಿಸುವಂಥ ಸಂದರ್ಭಗಳಲ್ಲಿ ದಿನನಿತ್ಯದ ಕೆಲಸದ ಹೊರೆಯಿಲ್ಲದೇ ಕೇವಲ ರಣಾಂಗಣ ಕಾರ್ಯತಂತ್ರದ ಬಗ್ಗೆ ಯೋಚಿಸಲು ಅನುಕೂಲವಾಗುವಂತೆ ರೂಪುಗೊಳಿಸಿದ ವ್ಯವಸ್ಥೆ ಆಗಿತ್ತಿದು. ಆದರೆ ಶಾಂತಿಕಾಲದಲ್ಲೂ ಮುಂದುವರಿದು ಕೊನೆಗೆ ಅಧಿಕಾರಿಗಳ ಮನೆಗೆ ತರಕಾರಿ ಕೊಂಡೊಯ್ಯುವ, ಮನೆಯವರ ಕೆಲಸಕ್ಕೆ ಸಹಾಯ ಮಾಡುವ ಮಟ್ಟಕ್ಕೆ ಇಳಿದಿದೆ ಎಂಬುದು ಈಗ ಕೇಳಿಬರುತ್ತಿರುವ ಆರೋಪ.

ಹೀಗೆಲ್ಲ ಸೇನೆಯ ವಿಷಯವನ್ನು ಬಹಿರಂಗಗೊಳಿಸುವುದಕ್ಕೆ ಮುನ್ನ ನೇರವಾಗಿ ಮುಖ್ಯಸ್ಥರೊಂದಿಗೆ ಚರ್ಚಿಸಿ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ವಾಟ್ಸ್ಯಾಪ್ ನಂಬರ್ ಒಂದನ್ನು ನೀಡಿದ್ದರು. ಅಲ್ಲಿ ದೂರು ದಾಖಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬರಲೇ ಇಲ್ಲ ಎಂಬುದು ಸಿಂಧವ್ ಅವರ ಆರೋಪ.

ಇವೆಲ್ಲದರ ಬಗ್ಗೆ ಸೇನೆಯಿಂದ ಅಧಿಕೃತ ಪ್ರತಿಕ್ರಿಯೆಗಳು ಬಂದಿರದಿದ್ದರೂ ಸುದ್ದಿವಾಹಿನಿಗಳು ಉಲ್ಲೇಖಿಸುತ್ತಿರುವ ಮೂಲಗಳ ಪ್ರಕಾರ, ‘2014ರಲ್ಲಿ ಸಿಂಧವ್ ನೇಮಕವಾಗಿದ್ದೇ ಸ್ವಚ್ಛತಾ ಕೆಲಸಗಾರ ಹುದ್ದೆಗೆ. 2015ರಲ್ಲಿ ರಜೆಯ ಅವಧಿ ಮೀರಿ ಕೆಲಸಕ್ಕೆ ಹಾಜರಾಗದೇ ಇದ್ದಿದ್ದಕ್ಕೆ ಏಳು ದಿನಗಳ ದಂಡ ಹಾಕಲಾಗಿತ್ತು. ಆತ ಸೇವೆ ತೊರೆಯಲು ಹೋದಾಗ ಕೌನ್ಸೆಲಿಂಗ್ (ಆಪ್ತ ಸಲಹೆ) ಒದಗಿಸಲಾಯಿತು. ಆ ಪ್ರಕಾರ ನಿಯಮ ಮೀರದೇ ಇರುವುದಾಗಿ ಹಾಗೂ ಎತ್ತರದ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವುದಾಗಿ ಹೇಳಿದ್ದರು’

ಇವೇನೇ ಇರಲಿ. ಈ ಹಿಂದೆ ಕಳಪೆ ಆಹಾರದ ವಿಡಿಯೋ ಹಾಕಿದ್ದ ಸಿಆರ್ಪಿಎಫ್ ಯೋಧ ಹಾಗೂ ಸಹಾಯಕ ವರ್ಗದಿಂದ ಕೇಳಿಬರುತ್ತಿರುವ ದುಮ್ಮಾನಗಳು ಇವನ್ನೆಲ್ಲ ಸೂಕ್ತವಾಗಿ ಪರಿಹರಿಸಿಕೊಳ್ಳುವತ್ತ ಸೇನೆಯ ವ್ಯವಸ್ಥೆ ಆಸಕ್ತಿ ತೋರಲೇಬೇಕಾಗುತ್ತದೆ. ಇವೆಲ್ಲವನ್ನೂ ದೇಶಪ್ರೇಮದ ಪದಪುಂಜದಲ್ಲಿ ಅಡಗಿಸಿಡುವುದರಲ್ಲಿ ಅರ್ಥವಿಲ್ಲ. ಏಕೆಂದರೆ ವ್ಯವಸ್ಥೆಯೊಳಗಿನ ಕುಂದುಕೊರತೆಗಳನ್ನು ಸಹಾನೂಭೂತಿಯಿಂದ ಪರಿಹರಿಸದೇ ಇದ್ದರೆ, ತುಟಿ ಬಿಟ್ಟಿದರೆ ಹುಷಾರ್ ಎಂಬ ಫರ್ಮಾನಷ್ಟೇ ಹೊರಡಿಸಿದರೆ ಅದು ಹೆಚ್ಚು ದಿನ ತಾಳದು. ಅಸಮಾಧಾನ ಹೊರಬಿದ್ದಾಗ ಹುಟ್ಟಿಕೊಳ್ಳುವ ಚರ್ಚೆಗಳು ಸೇನೆಯ ವರ್ಚಸ್ಸು ಕುಗ್ಗಿಸುವ ಕೆಲಸವನ್ನೇ ಮಾಡುತ್ತವೆ.

ಇದು ವಿಮರ್ಶೆ ಮತ್ತು ತಿದ್ದಿಕೊಳ್ಳುವ ಕಾಲ.

Leave a Reply