ಸಾರ್ವಜನಿಕರ ಒತ್ತಡಕ್ಕೆ ಮಣಿದ ಟ್ರಂಪ್ ಪರಿಷ್ಕೃತ ವಲಸೆ ನೀತಿ, ಆರು ರಾಷ್ಟ್ರಗಳಿಗಿಲ್ಲ ಹೊಸ ವೀಸಾ

ಡಿಜಿಟಲ್ ಕನ್ನಡ ಟೀಮ್:

ಅಮೆರಿಕದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ವಲಸಿಗರ ಹಾಗೂ ವೀಸಾ ನೀತಿಯನ್ನು ಪರಿಷ್ಕರಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ನೂತನ ನೀತಿಗೆ ಸಹಿ ಹಾಕಿದ್ದಾರೆ. ಫೆಬ್ರವರಿಯಲ್ಲಿ ಮೊದಲ ಬಾರಿಗೆ ಹೊರಡಿಸಿದ್ದ ನೀತಿಯಲ್ಲಿ 7 ಮುಸ್ಲಿಂ ರಾಷ್ಟ್ರಗಳ ಮೇಲೆ ನಿಷೇಧ ಹೇರಲಾಗಿತ್ತು. ಈಗ ಆ ಏಳು ರಾಷ್ಟ್ರಗಳ ಪೈಕಿ ಇರಾಕ್ ಅನ್ನು ಹೊರತುಪಡಿಸಿ ಉಳಿದ ಆರು ರಾಷ್ಟ್ರಗಳಿಗೆ ಹೊಸ ವೀಸಾ ನೀಡುವುದನ್ನು ನಿಷೇಧಿಸಿದ್ದಾರೆ.

ಟ್ರಂಪ್ ಅವರ ಮೊದಲ ನೀತಿಗೂ ಪರಿಷ್ಕೃತ ನೀತಿಗೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ. ಪರಿಷ್ಕೃತ ನೀತಿಯ ಮೂಲಕ ಅಮೆರಿಕಕ್ಕೆ ನಿರಾಶ್ರಿತರ ಪ್ರವೇಶದ ಮಿತಿಯನ್ನು 50 ಸಾವಿರಕ್ಕೆ ಇಳಿಸಲಾಗಿದೆ. ಒಬಾಮಾ ಅಧಿಕಾರ ಅವಧಿಯಲ್ಲಿ ಈ ಮಿತಿ 1.10 ಲಕ್ಷಕ್ಕೆ ನಿಗದಿಯಾಗಿತ್ತು. ಇರಾಕ್ ಹೊರತು ಪಡಿಸಿ ಇರಾನ್, ಸುಡಾನ್, ಸೊಮಾಲಿಯಾ, ಲಿಬಿಯಾ, ಸಿರಿಯಾ ಹಾಗೂ ಯೆಮನ್ ರಾಷ್ಟ್ರಗಳ ಮೇಲಿನ ನಿಷೇಧ ಮುಂದುವರಿಸಿದೆ. ರಾಷ್ಟ್ರೀಯ ಭದ್ರತೆಯ ಹಿನ್ನೆಲೆಯಲ್ಲಿ ಈ ಆರು ರಾಷ್ಟ್ರಗಳಿಗೆ ಕೇವಲ ಹೊಸ ವಿಸಾ ನೀಡುವುದಕ್ಕೆ ಮಾತ್ರ ನಿಷೇಧ ಹೇರಲಾಗಿದೆ.

ಈ ನೀತಿಯಲ್ಲಿ ಕೆಲವು ವರ್ಗದವರಿಗೆ ಮಾತ್ರ ವೀಸಾ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದ್ದು, ಅಮೆರಿಕದಲ್ಲಿ ಶಿಕ್ಷಣಕ್ಕಾಗಿ, ಕೆಲಸಕ್ಕಾಗಿ ಅಥವಾ ಇತರೆ ಚಟುವಟಿಕೆಗಾಗಿ ವೀಸಾ ಬಯಸುವವರು ಹಾಗೂ ಪ್ರಮುಖ ವ್ಯಾಪಾರ ಹಾಗೂ ತಮ್ಮ ಕುಟುಂಬದವರ ಜತೆ ಇರಲು ವೀಸಾ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಟ್ರಂಪ್ ಅವರ ಈ ಹಿಂದಿನ ವಲಸಿಗರ ನೀತಿಗೆ ಸಾರ್ವಜನಿಕ ಹಾಗೂ ಕೋರ್ಟ್ ಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆ ಕಾರಣಕ್ಕೆ ಟ್ರಂಪ್ ತಮ್ಮ ನೀತಿಯನ್ನು ಪರಿಷ್ಕರಿಸಿದ್ದಾರೆ. ಈ ನೀತಿ ಮಾರ್ಚ್ 16ರಿಂದ ಜಾರಿಗೆ ಬರಲಿದೆ.

ಈ ನೂತನ ನೀತಿಯಲ್ಲಿ ಇರಾಕ್ ದೇಶಕ್ಕೆ ವಿನಾಯಿತಿ ನೀಡಿರುವುದೇಕೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಅದಕ್ಕೆ ಅಮೆರಿಕದ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ಸನ್ ಕೊಟ್ಟಿರುವ ಕಾರಣ ಹೀಗಿದೆ… ‘ಐಎಸ್ಐಎಸ್ ಉಗ್ರ ಸಂಘಟನೆಯ ವಿರುದ್ಧ ಹೋರಾಟ ನಡೆಸಲು ಇರಾಕ್ ಜತೆಗಿನ ಸ್ನೇಹ ಅಮೆರಿಕಕ್ಕೆ ಮಹತ್ವದ್ದಾಗಿದೆ. ಹೀಗಾಗಿ ಇರಾಕ್ ದೇಶವನ್ನು ಈ ನಿಷೇಧದ ಪಟ್ಟಿಯಿಂದ ಕೈ ಬಿಡಲು ನಿರ್ಧರಿಸಲಾಗಿದೆ.’

ಈ ಹಿಂದಿನ ನೀತಿಯಲ್ಲಿದ್ದ ಬಿಗಿ ಹಿಡಿತವನ್ನು ಪರಿಷ್ಕೃತ ನೀತಿಯಲ್ಲಿ ಸಡಿಲಗೊಳಿಸಿದ್ದರೂ ಈ ನೀತಿಯ ಬಗ್ಗೆ ಅಮೆರಿಕದ ಉದಾರವಾದಿಗಳು ಮತ್ತೆ ಅಪಸ್ವರ ನುಡಿದಿದ್ದಾರೆ. ‘ಪರಿಷ್ಕೃತ ನೀತಿಯೂ ಸಹ ಸ್ವಲ್ಪ ಮಟ್ಟದಲ್ಲಿ ಮುಸ್ಲಿಂ ವಿರೋಧಿ ನೀತಿಯಾಗಿದ್ದು, ಆ ಸಮುದಾಯದ ಜನರಿಗೆ ತಾರತಮ್ಯ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಷ್ಟೇ ಅಲ್ಲದೆ ಕಾನೂನಿನ ಚೌಕಟ್ಟಿನಲ್ಲಿ ಈ ನೀತಿ ಹಲವು ದೋಷಗಳನ್ನು ಹೊಂದಿದೆ’ ಎಂಬುದು ಉದಾರವಾದಿಗಳ ಭಿನ್ನರಾಗ.

Leave a Reply