ಬೆಂಗಳೂರಿಗೆ ಪರ್ಯಾಯ ರಾಜಧಾನಿಯಾಗಿ ಕೆಜಿಎಫ್- ರೋಶನ್ ಬೇಗ್, ಲೈಂಗಿಕ ಕಿರುಕುಳ: ಕೇರಳದಲ್ಲಿ 6 ಮಂದಿ ಬಂಧನ, ಶ್ರೀಲಂಕಾ ನೌಕಾ ಪಡೆಯಿಂದ ಭಾರತೀಯ ಮೀನುಗಾರನ ಹತ್ಯೆ

ಸರ್ಕಾರದ ವಿವಿಧ ಇಲಾಖೆಗಳ ಪ್ರಗತಿ ಮತ್ತು ಆರ್ಥಿಕ ಸಾಧನೆ ಕುರಿತ ಮಾಹಿತಿ ಕೋಶ ‘ಪ್ರತಿಬಿಂಬ’ ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಬಿಡುಗಡೆ ಮಾಡಿದರು.

ಡಿಜಿಟಲ್ ಕನ್ನಡ ಟೀಮ್:

ಕೆಜಿಎಫ್ ಪರ್ಯಾಯ ರಾಜಧಾನಿ!

ಬೆಂಗಳೂರಿನ ಜನಸಂಖ್ಯೆಯನ್ನು ತಗ್ಗಿಸುವ ಸಲುವಾಗಿ ಮೈಸೂರು ಹಾಗೂ ದಾವಣಗೆರೆಯನ್ನು ಅಭಿವೃದ್ಧಿ ಪಡೆಸುವ ಕುರಿತ ಮಾತುಗಳು ಕೇಳಿಬಂದಿದ್ದವು. ಆದರೆ ಈಗ ಸಚಿವ ರೋಶನ್ ಬೇಗ್ ಅವರು ಕೋಲಾರದ ಕೆಜಿಎಫ್ ಅನ್ನು ಪರ್ಯಾಯ ರಾಜಧಾನಿಯನ್ನಾಗಿ ಅಭಿವೃದ್ಧಿಪಡೆಸುತ್ತೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವರು ಹೇಳಿದಿಷ್ಟು… ‘ಆಂಧ್ರ ಪ್ರದೇಶಕ್ಕೆ ರಾಜಧಾನಿಯನ್ನಾಗಿ ಅಮರಾವತಿ ನಗರ ನಿರ್ಮಾಣ ಮಾಡುತ್ತಿರುವ ಮಾದರಿಯಲ್ಲೇ ಈ ಹೊಸ ನಗರ ಅಭಿವೃದ್ಧಿಯಾಗಲಿದೆ. ಕೆಜಿಎಫ್ ನಲ್ಲಿ ಚಿನ್ನದ ಗಣಿಗಾರಿಕೆ ಸ್ಥಗಿತಗೊಂಡ ನಂತರ ಕೇಂದ್ರ ಸರ್ಕಾರ 12 ಸಾವಿರ ಎಕರೆ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಿದೆ. ಆ ಪೈಕಿ ಒಂದು ಸಾವಿರ ಎಕರೆ ಭೂಮಿ ವಿವಿಧ ಕಾನೂನು ಬಿಕ್ಕಟ್ಟಿನಿಂದ ನ್ಯಾಯಾಲಯಗಳಲ್ಲಿವೆ. ಉಳಿದ ಭೂಮಿ ರಾಜ್ಯ ಸರ್ಕಾರದ ವಶದಲ್ಲಿದ್ದು, ಈ ಪ್ರದೇಶದಲ್ಲಿ ಹೊಸ ರಾಜಧಾನಿ ತಲೆ ಎತ್ತಲಿದೆ.’

ಇನ್ನು ಮೈಸೂರಿನಲ್ಲಿ ಪ್ರವಾಸಿಗರ ಅನುಕೂಲ, ನಗರದ ಪರಿಸರ ಕಾಪಾಡುವ ಉದ್ದೇಶದಿಂದ ಇಲ್ಲಿನ ಸಂಚಾರಕ್ಕೆ ಬಾಡಿಗೆ ಸೈಕಲ್ ಪಡೆಯುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಲಿದೆ. ಈ ಯೋಜನೆಗೆ ₹ 20.52 ಕೋಟಿ ವೆಚ್ಚವಾಗುತ್ತಿದ್ದು, ಮೊದಲ ಹಂತದಲ್ಲಿ ₹ 7.73 ಕೋಟಿ ವೆಚ್ಚ ಮಾಡಿ 38 ಕೇಂದ್ರಗಳಲ್ಲಿ ಸೈಕಲ್ ನಿಲ್ದಾಣಗಳನ್ನು ಸ್ಥಾಪಿಸುತ್ತೇವೆ ಎಂದು ವಿವರಿಸಿದರು.

ಅಪ್ರಾಪ್ತೆಯರ ಮೇಲೆ ಲೈಂಗಿಕ ಕಿರುಕುಳ ಕೇರಳದಲ್ಲಿ 6 ಮಂದಿ ಬಂಧನ

ಇತ್ತೀಚೆಗಷ್ಟೇ ಕೇರಳದಲ್ಲಿ ಪಾದ್ರಿಯೊಬ್ಬ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಪೊಲೀಸರ ಬಂಧನಕ್ಕೆ ಒಳಗಾಗಿದ್ದ ಪ್ರಕರಣದ ಬೆನ್ನಲ್ಲೇ ಮತ್ತೊಂದು ಹೀನಕೃತ್ಯದ ಪ್ರಕರಣ ಬೆಳಕಿಗೆ ಬಂದಿದೆ. ಕೇರಳದ ಅನಾಥಾಲಯದಲ್ಲಿ ಇದ್ದ 7 ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಮೇಲೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಕೇರಳದ ಉತ್ತರ ಭಾಗದಲ್ಲಿರುವ ವಯನಾಡ್ ಜಿಲ್ಲೆಯ ಕಲ್ಪೆಟ್ಟಾ ಎಂಬ ಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ. ದುರಾದೃಷ್ಟಕರ ಎಂಬಂತೆ ಪಾದ್ರಿ ಅವರ ಪ್ರಕರಣವೂ ಇದೇ ಜಿಲ್ಲೆಯಲ್ಲಿ ನಡೆದಿತ್ತು.

ಸೋಮವಾರ ಸಂಜೆ ಯಥೀಮ್ ಖಾನ್ ಅನಾಥಾಲಯದಲ್ಲಿನ ಮಗುವೊಂದು ಅಲ್ಲೇ ಸಮಿಪದಲ್ಲಿರುವ ಅಂಗಡಿಯಿಂದ ಅಳುತ್ತಾ ಬರುವುದನ್ನು ಕಂಡ ಸೆಕ್ಯುರಿಟಿ ಗಾರ್ಡ್ ಆಕೆಯನ್ನು ವಿಚಾರಿಸಿದ. ಆಗ ಆ ಹುಡುಗಿ ತನಗಾದ ಹಿಂಸೆಯನ್ನು ಹೇಳಿಕೊಂಡಿದ್ದಾಳೆ. ಪೊಲೀಸರು ತನಿಖೆ ನಡೆಸಿ ಈ ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಇದೇ ಅನಾಥಾಲಯದಲ್ಲಿರುವ 12ರಿಂದ 16 ವರ್ಷದೊಳಗಿನ ಹಲವು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ. 6 ಮಂದಿ ಬಂಧನವಾಗಿದ್ದು, ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಭಾರತೀಯ ಮೀನುಗಾರನ ಹತ್ಯೆ

ತಮಿಳುನಾಡಿನ ಮೀನುಗಾರನನ್ನು ಶ್ರೀಲಂಕಾ ನೌಕಾಪಡೆ ಹತ್ಯೆ ಮಾಡಿದ್ದು, ತಮಿಳುನಾಡಿನಲ್ಲಿ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. 22 ವರ್ಷದ ಸರವಣನ್ ಹಾಗೂ ಇತರರು ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದ ಸಂದರ್ಭದಲ್ಲಿ ಶ್ರೀಲಂಕಾ ಸೇನೆ ಗುಂಡು ಹಾರಿಸಿದೆ. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀಲಂಕಾ ಸರ್ಕಾರ, ಭಾರತದ ಮೀನುಗಾರನ ಹತ್ಯೆಗೆ ಶ್ರೀಲಂಕಾ ಪಡೆ ಕಾರಣವಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲದೆ ಈ ಬಗ್ಗೆ ಸೂಕ್ತ ತನಿಖೆ ನಡೆಸುವ ಭರವಸೆ ಕೊಟ್ಟಿದೆ.

ಲಖನೌನ ಕಟ್ಟಡವೊಂದರಲ್ಲಿ ಅವಿತು ಕುಳಿತ ಉಗ್ರ

ಲಖನೌನ ಥಾಕೂರ್ಗಂಜ್ ಪ್ರದೇಶದಲ್ಲಿ ಉಜ್ಜೈನ್ ರೈಲ್ವೆ ಸ್ಫೋಟದಲ್ಲಿ ಕೈವಾಡ ಹೊಂದಿರುವ ಶಂಕಿತ ಉಗ್ರ ಸೈಫುಲ್ಲಾ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದು, ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ಪಡೆ ಕಾರ್ಯಾಚರಣೆ ನಡೆಸುತ್ತಿದೆ. ಇಲ್ಲಿನ ಮನೆಯೊಂದರಲ್ಲಿ ಉಗ್ರ ಅಡಗಿದ್ದು, ಭದ್ರತಾ ಪಡೆ ಈತನನ್ನು ಸೆರೆ ಹಿಡಿಯುವ ಪ್ರಯತ್ನದಲ್ಲಿದೆ. ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಎಡಿಜಿ ದಲ್ಜೀತ್ ಚೌಧರಿ, ‘ರೈಲ್ವೇ ಸ್ಫೋಟದ ಒಬ್ಬ ಆರೋಪಿಯನ್ನು ಕಾನ್ಪುರದಲ್ಲಿ ಬಂಧಿಸಲಾಗಿದ್ದು, ಮತ್ತೊಬ್ಬ ವ್ಯಕ್ತಿ ಈಗ ಈ ಕಟ್ಟಡದೊಳಗೆ ಅವಿತುಕೊಂಡಿದ್ದಾನೆ. ಆತನನ್ನು ಹಿಡಿಯಲು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ’ ಎಂದರು. ಮಾಧ್ಯಮಗಳ ವರದಿ ಪ್ರಕಾರ ಸಂಜೆ 6.30ರ ವೇಳೆಗೆ ಭಯೋತ್ಪಾದನಾ ನಿಗ್ರಹ ಪಡೆ ಸಿಬ್ಬಂದಿಗಳು ಕಟ್ಟಡವನ್ನು ಪ್ರವೇಶಿಸಿದ್ದು, ಆದಷ್ಟು ಬೇಗನೆ ಆತನನ್ನು ಹಿಡಿಯಲಿದ್ದಾರೆ ಎಂಬ ಮಾಹಿತಿ ಬಂದಿವೆ. ಸೈಫುಲ್ಲಾ ಐಎಸ್ಐಎಸ್ ಉಗ್ರ ಸಂಘಟನೆಯ ಜತೆಗೆ ಸಂಪರ್ಕ ಹೊಂದಿದ್ದಾನೆ ಎಂಬ ಶಂಕೆಯು ವ್ಯಕ್ತವಾಗಿವೆ.

1 COMMENT

Leave a Reply