ಆಸ್ಟ್ರೇಲಿಯನ್ನರಿಗೆ ಅಪಾಯವಾದ ಅಶ್ವಿನ್! ಬೆಂಗಳೂರಿನ ಪಂದ್ಯ ಗೆದ್ದು ಸೇಡು ತೀರಿಸಿಕೊಂಡ ಟೀಂ ಇಂಡಿಯಾ

India's Ravichandran Ashwin, facing camera, celebrates the dismissal of Australia's Mitchell Marsh during the fourth day of their second test cricket match in Bangalore, India, Tuesday, March 7, 2017. (AP Photo/Aijaz Rahi)

ಡಿಜಿಟಲ್ ಕನ್ನಡ ಟೀಮ್:

ಟೆಸ್ಟ್ ಕ್ರಿಕೆಟ್ಟೇ ಹಾಗೆ… ಐದು ದಿನಗಳ ಪಂದ್ಯದ ಬಹುತೇಕ ಅವಧಿ (ಸೆಷನ್) ಗಳಲ್ಲಿ ಹಿನ್ನಡೆ ಅನುಭವಿಸಿದರೂ ಮಹತ್ವದ ಎರಡು ಅವಧಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಪಂದ್ಯದ ಫಲಿಂತಾಂಶವನ್ನೇ ಬದಲಿಸಬಹುದು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್ ಪಂದ್ಯದಲ್ಲೂ ಆಗಿದ್ದು ಇದೇ.

ಪಂದ್ಯದ ಬಹುತೇಕ ಹಂತಗಳಲ್ಲಿ ಆಸ್ಟ್ರೇಲಿಯನ್ನರ ವಿರುದ್ಧ ಹಿನ್ನಡೆ ಅನುಭವಿಸಿದ್ದ ಭಾರತ, ಸೋಮವಾರ ದಿನದಾಟದ ಅಂತಿಮ ಅವಧಿ ಹಾಗೂ ಇಂದಿನ ದಿನದಾಟದ ಎರಡನೇ ಅವಧಿಯಲ್ಲಿ ಪ್ರಾರಮ್ಯ ಮೆರೆದು 75 ರನ್ ಗಳ ಅಂತರದಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ಈ ಜಯದೊಂದಿಗೆ ಭಾರತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.

ಮೊದಲ ದಿನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ, ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 189 ರನ್ ಗಳಿಗೆ ಆಲೌಟ್ ಆಗಿ ಹಿನ್ನಡೆ ಅನುಭವಿಸಿತು. ನಂತರ ಎರಡನೇ ದಿನ ಆಸ್ಟ್ರೇಲಿಯಾ ಇನಿಂಗ್ಸ್ ಮುನ್ನಡೆ ಪಡೆಯುವ ಮೂಲಕ ಭಾರತದ ವಿರುದ್ಧ ಮೇಲುಗೈ ಸಾಧಿಸಿ ಪಂದ್ಯವನ್ನು ಜಯಿಸುವತ್ತ ಹೆಜ್ಜೆ ಹಾಕಿತು. ಮೂರನೇ ದಿನದ ಆರಂಭಿಕ ಎರಡು ಅವಧಿಯಲ್ಲೂ ಭಾರತದ ಎರಡನೇ ಇನಿಂಗ್ಸ್ ನಲ್ಲಿ ಆರಂಭಿಕ ಆಟಗಾರರ ವಿಕೆಟ್ ಪಡೆದು ಆಸ್ಟ್ರೇಲಿಯಾ ತಂಡ ನಿಯಂತ್ರಣ ಸಾಧಿಸಿತ್ತು.

ಹೀಗೆ ಪಂದ್ಯದ ಆರಂಭಿಕ ಮೂರುವರೆ ದಿನದ ಆಟದಲ್ಲಿ ಸತತವಾಗಿ ಹಿನ್ನಡೆ ಅನುಭವಿಸಿದ್ದ ಭಾರತ ತಂಡಕ್ಕೆ ಮೂರನೇ ದಿನದ ಅಂತಿಮ ಅವಧಿ ಮಹತ್ವದ್ದಾಗಿ ಪರಿಣಮಿಸಿತ್ತು. ಭಾರತದ ಆರಂಭಿಕ ಬ್ಯಾಟಿಂಗ್ ವಿಭಾಗ ಕುಸಿದಿದ್ದ ಸಂದರ್ಭದಲ್ಲಿ ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ ಅವರ ಜತೆಯಾಟ ಸೋಲಿನ ಭೀತಿಯಲ್ಲಿದ್ದ ಭಾರತಕ್ಕೆ ದೊಡ್ಡ ವರದಾನವಾಯಿತು.

ಪಂದ್ಯದ ನಾಲ್ಕನೇ ದಿನವಾದ ಇಂದಿನ ಆಟದ ಮೊದಲ ಅವಧಿಯಲ್ಲಿ ಮತ್ತೆ ಬ್ಯಾಟಿಂಗ್ ಕುಸಿತ ಕಂಡ ಭಾರತ 274 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ 187 ರನ್ ಗಳ ಗುರಿ ನೀಡಿತ್ತು.

ಭಾರತ ನೀಡಿದ್ದ ಗುರಿ ಆಸ್ಟ್ರೇಲಿಯಾಕ್ಕೆ ಸವಾಲಾಗುವುದೇ ಎಂಬ ಪ್ರಶ್ನೆ ಭಾರತೀಯ ಅಭಿಮಾನಿಗಳಲ್ಲಿ ಹುಟ್ಟುಕೊಂಡಿತ್ತು. ಕಾರಣ ಆಸ್ಟ್ರೇಲಿಯಾ ತಂಡ ಈ ಗುರಿಯನ್ನು ಮುಟ್ಟಲು ಐದು ಅವಧಿಗಳ ಅಂದರೆ, ಒಂದೂವರೆ ದಿನದಾಟದಷ್ಟು ಕಾಲಾವಕಾಶವಿತ್ತು. ಹೀಗಾಗಿ ಭಾರತ ನೀಡಿದ್ದ 187 ರನ್ ಗಳ ಗುರಿ ಆಸ್ಟ್ರೇಲಿಯಾ ತಂಡಕ್ಕೆ ಸುಲಭವಾಗಲಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿತು.

ಆದರೆ ಪಂದ್ಯ ಸಾಗುತ್ತಿದ್ದಂತೆ ಸ್ಪಿನ್ನರ್ ಗಳಿಗೆ ಸಾಥ್ ನೀಡಲಾರಂಭಿಸಿದ್ದ ಪಿಚ್, ಕಾಂಗರೂಗಳಿಗೆ ಈ ಗುರಿ ಕಬ್ಬಿಣದ ಕಡಲೆಯಂತಾಗಿಸಿತು. ಭಾರತದ ಪರ ಬಾಲಿಂಗ್ ದಾಳಿಯನ್ನು ಆರಂಭಿಸಿದ ಅಶ್ವಿನ್ ಹಾಗೂ ಇಶಾಂತ್ ಶರ್ಮಾ ಆರಂಭಿಕ ಓವರ್ ಗಳಲ್ಲಿ ರನ್ ಕೊಟ್ಟರಾದರೂ ತಕ್ಷಣವೇ ಅದಕ್ಕೆ ಬ್ರೇಕ್ ಹಾಕಿ ಎದುರಾಳಿ ಬ್ಯಾಟ್ಸ್ ಮನ್ ಗಳ ಮೇಲೆ ಒತ್ತಡ ಹೆಚ್ಚುವಂತೆ ನೋಡಿಕೊಂಡರು. ಆಸ್ಟ್ರೇಲಿಯಾದ ಬ್ಯಾಟಿಂಗ್ ಬೆನ್ನೆಲುಬು ಮುರಿದ ಅಶ್ವಿನ್ ಕೇವಲ 41 ರನ್ ನೀಡಿ ಪ್ರಮುಖ 6 ವಿಕೆಟ್ ಕಬಳಿಸಿ ಆಸ್ಟ್ರೇಲಿಯಾ ತಂಡ ಭಾರತದ ಮುಂದೆ ಮಂಡಿಯೂರುವಂತೆ ಮಾಡಿದರು.

ಈ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ವೈಫಲ್ಯ ಪ್ರಮುಖ ಸಮಸ್ಯೆಯಾಗಿ ದೊಡ್ಡದ್ದಾಗಿ ಕಂಡಿತು. ಆದರೆ ಬೌಲರ್ ಗಳ ಪ್ರದರ್ಶನ ತಂಡವನ್ನು ಪಾರು ಮಾಡಿತು. ಆದರೆ ಬ್ಯಾಟಿಂಗ್ ವೈಫಲ್ಯಗಳ ನಡುವೆಯೂ ತಂಡಕ್ಕೆ ಎರಡೂ ಇನಿಂಗ್ಸ್ ಗಳಲ್ಲೂ ಅತ್ಯಮೂಲ್ಯ ರನ್ ಕಾಣಿಕೆ ನೀಡಿದ ಕೆ.ಎಲ್.ರಾಹುಲ್ (90 ಮತ್ತು 51) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ರಾಹುಲ್ ಜತೆಗೆ ಎರಡನೇ ಇನಿಂಗ್ಸ್ ನಲ್ಲಿ ಚೇತೇಶ್ವರ ಪೂಜಾರ (92) ಹಾಗೂ ಅಜಿಂಕ್ಯ ರಹಾನೆ (52) ಐದನೇ ವಿಕೆಟ್ ಗೆ ಕಲೆ ಹಾಕಿದ 118 ರನ್ ಗಳ ಜತೆಯಾಟ ಪಂದ್ಯವನ್ನು ಭಾರತದ ಪಾಲಿಗೆ ಜೀವಂತವಾಗಿರುವಂತೆ ಮಾಡಿತು.

ಪುಣೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸೋತು ಮುಖಭಂಗ ಅನುಭವಿಸಿದ್ದ ಟೀಂ ಇಂಡಿಯಾ, ಈ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಂಡಿದೆ. ಅಷ್ಟೇ ಅಲ್ಲದೆ ಸರಣಿ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನು ಈ ಪಂದ್ಯ ಜಯಿಸಿ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನವನ್ನು ಗಟ್ಟಿ ಮಾಡಿಕೊಂಡಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮುಂದಿನ ಎರಡು ಪಂದ್ಯಗಳು ರಾಂಚಿ (ಮಾ.16- ಮಾ.20) ಹಾಗೂ ಧರ್ಮಶಾಲಾ (ಮಾ.25- ಮಾ.29) ಗಳಲ್ಲಿ ನಡೆಯಲಿವೆ.

ಸಂಕ್ಷಿಪ್ತ ಸ್ಕೋರ್

ಭಾರತ 189 ಮತ್ತು 274 (ಪೂಜಾರ 92, ರಹಾನೆ 52, ರಾಹುಲ್ 51- ಹ್ಯಾಜೆಲ್ ವುಡ್ 67ಕ್ಕೆ6)

ಆಸ್ಟ್ರೇಲಿಯಾ 276 ಮತ್ತು 112 (ಸ್ಮಿತ್ 28, ಹ್ಯಾಡ್ಸ್ ಕೊಂಬ್ 24, ವಾರ್ನರ್ 17- ಆರ್.ಅಶ್ವಿನ್ 41ಕ್ಕೆ 6)

Leave a Reply