ಪ್ರೊ. ಜಿ ಎನ್ ಸಾಯಿಬಾಬಾ
ಡಿಜಿಟಲ್ ಕನ್ನಡ ಟೀಮ್:
ಬಹಳಷ್ಟು ಸಾರಿ ಆರೋಪಗಳು ಕೇಳಿಬರುತ್ತವೆ. ನಂತರ ಅವುಗಳ ಜಾಡೇ ತಿಳಿಯುವುದಿಲ್ಲ.
ಆದರೆ ಮಂಗಳವಾರ ನೀವು ತಿಳಿದುಕೊಳ್ಳಬೇಕಿರುವ ಎರಡು ಪ್ರಕರಣಗಳ ಪ್ರಗತಿಗಳಿವೆ. ಒಂದು ನಕ್ಸಲ್ ತೀವ್ರವಾಧಕ್ಕೆ ಸಂಬಂಧಿಸಿದ್ದರೆ, ಇನ್ನೊಂದು ಇಸ್ಲಾಂ ಮೂಲಭೂತವಾದ ಪ್ರಚಾರಕ್ಕೆ ಸಂಬಂಧಿಸಿದ ಪ್ರಕರಣ. ಒಂದರಲ್ಲಿ ಜಿಲ್ಲಾ ನ್ಯಾಯಾಲಯವು ಪ್ರೊ. ಸಾಯಿಬಾಬಾ ಅವರಿಗೆ ನಕ್ಸಲ್ ಸಂಬಂಧ ಇರುವುದು ಹೌದು ಎಂದು ಶಿಕ್ಷೆ ವಿಧಿಸಿದೆ. ಇನ್ನೊಂದೆಡೆ ಇಸ್ಲಾಂ ಧರ್ಮಪ್ರಚಾರಕ ಜಾಕಿರ್ ನಾಯಕ್ ನಿಷೇಧಿತ ಸಂಸ್ಥೆಯ ಹಣಕಾಸು ವ್ಯವಹಾರಗಳ ಬಗ್ಗೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಜಾಕಿರ್ ಸಹೋದರಿ ಖಾತೆಯವರೆಗೆ ಬಂದು ತಲುಪಿದೆ.
ಮಾವೋವಾದಿಗಳ ಜತೆ ಸಂಪರ್ಕ ಹೊಂದಿದ ಆರೋಪದ ಮೇಲೆ ಬಂಧನವಾಗಿದ್ದ ದೆಹಲಿ ವಿಶ್ವವಿದ್ಯಾಲಯ ಪ್ರೊಫೆಸರ್ ಜಿ.ಸಾಯಿಬಾಬಾ ಅವರನ್ನು ಅಪರಾಧಿ ಎಂದು ಗಡ್ಚಿರೋಲಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ಪ್ರೊ.ಸಾಯಿಬಾಬಾ ಜತೆಗೆ ಇತರೆ ಐವರನ್ನು ನ್ಯಾಯಾಲಯ ತಪ್ಪಿತಸ್ಥರೆಂದು ಘೋಷಿಸಿದೆ. ಸಾಯಿಬಾಬಾಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಪ್ರೊ.ಸಾಯಿಬಾಬಾ ಅವರು ನಕ್ಸಲರ ಜತೆ ನಂಟು ಹೊಂದಿದ್ದರು ಎಂಬ ಕಾರಣದಿಂದ 2014ರಲ್ಲಿ ಗಡ್ಚಿರೋಲಿ ಪೊಲೀಸರು 2014ರಲ್ಲಿ ಬಂಧಿಸಿದ್ದರು. ನಂತರ ಅವರ ವಿರುದ್ಧ ಐಪಿಸಿ ಸೆಕ್ಷನ್ 13, 18, 20, 38 ಹಾಗೂ 39 (ಕಾನೂನು ಬಾಹೀರ ಚಟುವಟಿಕೆ ನಿಯಂತ್ರಣ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇವರ ವಿರುದ್ಧ ಸೆಕ್ಷನ್ 20ರ ಅಡಿಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಇವರಿಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಸರ್ಕಾರ ಪರ ವಕೀಲರು ವಾದಿಸಿದರು. ಇದಕ್ಕೂ ಮೊದಲು 14 ತಿಂಗಳು ಜೈಲಿನಲ್ಲಿ ಕಳೆದಿದ್ದ ಸಾಯಿಬಾಬಾಗೆ ಜೂನ್ 2016ರಲ್ಲಿ ಆರೋಗ್ಯ ಕಾರಣಗಳಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು.
ಪ್ರೊ. ಜಿ. ಎನ್ ಸಾಯಿಬಾಬಾರ ದೈಹಿಕ ವೈಕಲ್ಯ ಏನೇ ಇದ್ದರೂ ದೇಶದ ವಿರುದ್ಧ ಶಸ್ತ್ರ ಹೋರಾಟ ನಡೆಸುವ ನಕ್ಸಲ್ ಹಿಂಸೆಗೆ ಬೆಂಬಲಿಸುವಲ್ಲಿ ಅದೇನೂ ಅಡ್ಡ ಬಂದಿಲ್ಲವಾದ್ದರಿಂದ ಶಿಕ್ಷೆಯಲ್ಲೂ ಸಹಾನುಭೂತಿ ಅವಶ್ಯವಿಲ್ಲ ಎಂದು ಸರ್ಕಾರಿ ವಕೀಲರು ವಾದಿಸಿದ್ದರು.
ಸಾಯಿಬಾಬಾ ವಿಷಯದಲ್ಲಿ ಒಂದು ಸೈದ್ಧಾಂತಿಕ ಸಂಘರ್ಷವೂ ರೂಪುಗೊಂಡಿತ್ತು. ಸಾಯಿಬಾಬಾ ದೆಹಲಿ ವಿಶ್ವವಿದ್ಯಾಲಯಕ್ಕೆ ಹಿಂತುರುಗಿ ಹೋಗಿದ್ದ ಸಂದರ್ಭದಲ್ಲಿ ಎಬಿವಿಪಿ ಪ್ರತಿಭಟನೆ ದಾಖಲಿಸಿತ್ತು. ದೇಶದ್ರೋಹಿಯೇ ವಾಪಾಸು ಹೋಗು ಎಂಬ ಪ್ರತಿಭಟನೆಗಳೂ ಮೊಳಗಿದ್ದಾಗಿ ವರದಿಯಾಗಿತ್ತು.
ಇನ್ನು….
ಭಾರತದ ವಿವಾದಾತ್ಮದ ಇಸ್ಲಾಂ ಧರ್ಮ ಪ್ರಚಾರಕ ಜಾಕಿರ್ ನಾಯಕ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನಡೆಸುತ್ತಿರುವ ವಿಚಾರಣೆ ಯಾವ ಹಂತದವರೆಗೂ ಬಂದು ನಿಂತಿದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಕಳೆದ ವಾರವಷ್ಟೇ ಎನ್ಐಎ ಜಾಕೀರ್ ನಾಯಕ್ ಅವರ ಸಹೋದರಿ ನೈಲ್ಹಾ ನೌಶದ್ ಅವರ ವಿಚಾರಣೆ ನಡೆಸಿತ್ತು. ಇದರ ಬೆನ್ನಲ್ಲೇ ಮಂಗಳವಾರ ಜಾರಿ ನಿರ್ದೇಶನಾಲಯ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಲ್ಹಾ ನೌಶದ್ ಅವರಿಗೆ ನೊಟೀಸ್ ಜಾರಿ ಮಾಡಿದೆ.
ಜಾಕೀರ್ ವಿರುದ್ಧದ ವಿಚಾರಣೆಗೂ ಅವರ ಸಹೋದರಿಗೂ ಏನು ಸಂಬಂಧ ಎಂದರೆ ಜಾಕೀರ್ ನಾಯಕ್ ಅವರ ಹಾರ್ಮೊನಿ ಮಿಡಿಯಾ ಪ್ರೈ.ಲಿ ಜತೆ ಸಂಪರ್ಕ ಹೊಂದಿರುವ ಐದು ಖಾಸಗಿ ಕಂಪನಿಗಳಿಗೆ ನೈಲ್ಹಾ ನೌಶದ್ ನಿರ್ದೇಶಕಿಯಾಗಿದ್ದಾರೆ.
ಕಳೆದ ವಾರ ಎನ್ಐಎ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದ ನೈಲ್ಹಾ ನೌಶದ್, ಈ ಕಂಪನಿಗಳಿಗೆ ತಾನು ಕೇವಲ ನಾಮಕಾವಸ್ಥೆಗೆ ನಿರ್ದೇಶಕಿಯಾಗಿದ್ದೇನೆ. ಆದರೆ ಈ ಕಂಪನಿಗಳ ಸಂಪೂರ್ಣ ಅಧಿಕಾರ ತಮ್ಮ ಸಹೋರದ ಜಾಕೀರ್ ನಾಯಕ್ ಅವರ ನಿಯಂತ್ರಣದಲ್ಲಿರುವುದಾಗಿ ಹೇಳಿದ್ದರು.
ಆದರೆ ನೌಶದ್ ಖಾತೆಯಲ್ಲಿ 50 ಕೋಟಿ ರುಪಾಯಿಗಳಷ್ಟು ಹಣದ ಹರಿವು ದಾಖಲಾಗಿದ್ದು, ಇದರ ಮೂಲಗಳನ್ನು ಈಗ ಜಾರಿ ನಿರ್ದೇಶನಾಲಯವು ಶೋಧಿಸುತ್ತಿರುವುದಾಗಿ ಸುದ್ದಿವಾಹಿನಿಗಳು ವರದಿ ಮಾಡಿವೆ.