ಸುದೀರ್ಘ 12 ತಾಸುಗಳ ಕಾರ್ಯಾಚರಣೆ ನಂತರ ಐಎಸ್ಐಎಸ್ ಉಗ್ರನ ಹತ್ಯೆ, ಅಪಾರ ಶಸ್ತ್ರಾಸ್ತ್ರ ವಶ

ಕಾರ್ಯಾಚರಣೆಯಲ್ಲಿ ನಿರತರಾಗಿರುವ ಭಯೋತ್ಪಾದನಾ ನಿಗ್ರಹ ಪಡೆ ಅಧಿಕಾರಿಗಳು…

ಡಿಜಿಟಲ್ ಕನ್ನಡ ಟೀಮ್:

ಲಖನೌನ ಥಾಕೂರ್ಗಂಜ್ ಪ್ರದೇಶದ ಕಟ್ಟಡವೊಂದರಲ್ಲಿ ಅಡಗಿ ಕುಳಿತಿದ್ದ ಐಎಸ್ಐಎಸ್ ಮೂಲದ ಉಗ್ರನನ್ನು ಭಾರತೀಯ ಭದ್ರತಾ ಪಡೆ ಹೊಡೆದುರುಳಿಸಿದೆ. ಉತ್ತರ ಪ್ರದೇಶದಲ್ಲಿ ಹಲವು ವಿಧ್ವಂಸಕ ಕೃತ್ಯಗಳನ್ನು ನಡೆಸಲು ತಯಾರಿ ನಡೆಸುತ್ತಿದ್ದ ಸೈಫುಲ್ಲಾ ಎಂಬ ಉಗ್ರನ ವಿರುದ್ಧ ಭಯೋತ್ಪಾದನಾ ನಿಗ್ರಹ ಪಡೆ ನಿನ್ನೆ ಸುದೀರ್ಘ 12 ಗಂಟೆಗಳ ಕಾರ್ಯಾಚರಣೆ ನಡೆಸಿ ಆತನನ್ನು ಹತ್ಯೆ ಮಾಡಿದೆ.

ನಿನ್ನೆ ಮಧ್ಯಾಹ್ನ 3.30 ರ ಸುಮಾರಿಗೆ ಆರಂಭವಾದ ಕಾರ್ಯಾಚರಣೆ ಇಂದು ಬೆಳಗಿನ ಜಾವ 3 ಗಂಟೆ ವರೆಗೂ ಸಾಗಿತು. ನಿನ್ನೆ ಸಂಜೆ 6 ಗಂಟೆ ವೇಳೆಗೆ ಆ ಕಟ್ಟಡವನ್ನು ಭಯೋತ್ಪಾದನಾ ನಿಗ್ರಹ ಪಡೆ ಸುತ್ತುವರಿದು, ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ಮುಕ್ತಾಯವಾಗುವ ನಿರೀಕ್ಷೆ ಇತ್ತು. ಆದರೆ ಆತನನ್ನು ಜೀವಂತವಾಗಿ ಹಿಡಿಯಬೇಕು ಎಂಬ ಉದ್ದೇಶದೊಂದಿಗೆ ಆತನಿಗೆ ಶರಣಾಗತಿಯಾಗಲು ಅವಕಾಶನ್ನು ಕೊಟ್ಟರು. ಅಲ್ಲದೆ ಆತನ ಸಹೋದರನ ಜತೆ ಮಾತನಾಡಿಸುವ ಪ್ರಯತ್ನವನ್ನು ಮಾಡಿದರು. ಈತನನ್ನು ಕಟ್ಟಡದಿಂದ ಹೊರಗೆ ಬರುವಂತೆ ಮಾಡಲು ಮೆಣಸಿನ ಬಾಂಬ್ ಅನ್ನು ಪ್ರಯೋಗಿಸಲಾಯಿತು. ಆದರೆ ಇದ್ಯಾವುದು ಫಲ ನೀಡಲಿಲ್ಲ. ಅಂತಿಮವಾಗಿ ಬೇರೆ ದಾರಿ ಇಲ್ಲದೆ ಭದ್ರತಾ ಪಡೆ ಗುಂಡಿನ ದಾಳಿಯೊಂದಿಗೆ ಈ ಕಾರ್ಯಾಚರಣೆಗೆ ತೆರೆ ಎಳೆಯಿತು.

thakurganj-encounter-weapons

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಸೈಫುಲ್ಲಾ ಐಎಸ್ಐಎಸ್ ಉಗ್ರ ಸಂಘಟನೆಯ ಸಕ್ರೀಯ ಸದಸ್ಯನಾಗಿದ್ದು, ಮಧ್ಯಪ್ರದೇಶದ ರೈಲ್ವೇ ಸ್ಫೋಟದಲ್ಲಿ ಈತನ ಕೈವಾಡವಿದೆ. ಸೈಫುಲ್ಲಾ ಸತ್ತ ನಂತರ ಆತನ ಬಳಿ 8 ಪಿಸ್ತೂಲ್, 650 ಸುತ್ತುಗಳ ಅಮ್ಯುನಿಷನ್, 50 ಪಿಸ್ತೂಲ್ ಗುಂಡುಗಳು, ಸ್ಫೋಟಕಗಳು, ಚಿನ್ನ, ನಗದು, ಪಾಸ್ ಪೋರ್ಟ್, ಸಿಮ್ ಕಾರ್ಡ್ ಜತೆಗೆ ರೈಲು ಪ್ರಯಾಣದ ವೇಳಾಪಟ್ಟಿಯ ವಿವರಗಳು ಪತ್ತೆಯಾದವು.

ಈ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ ಭಯೋತ್ಪಾದನಾ ನಿಗ್ರಹ ಪಡೆ ಅಧಿಕಾರಿ ಅಸೀಮ್ ಅರುಣ್ ಹೇಳಿದಿಷ್ಟು… ‘ಸೈಫುಲ್ಲಾನನ್ನು ಜೀವಂತವಾಗಿ ಹಿಡಿಯಲು ಪ್ರಯತ್ನಿಸಿದೆವು. ಆತನನ್ನು ಸೆರೆ ಹಿಡಿದಿದ್ದರೆ ಮತ್ತಷ್ಟು ಮಾಹಿತಿಗಳನ್ನು ಕಲೆಹಾಕಬಹುದಾಗಿತ್ತು. ಆದರೆ ಎಲ್ಲ ಪ್ರಯತ್ನಗಳು ವಿಫಲಅಂತಿಮವಾಗಿ ಬೇರೆ ದಾರಿ ಇಲ್ಲದೆ ಆತನನ್ನು ಹತ್ಯೆ ಮಾಡಬೇಕಾಯಿತು. ಕತ್ತಲಲ್ಲಿ ಇಬ್ಬರು ಉಗ್ರರಿರುವ ಅನುಮಾನ ವ್ಯಕ್ತವಾಗಿತ್ತು. ಆದರೆ ಭದ್ರತಾ ಸಿಬ್ಬಂದಿ ಕೊಠಡಿಯ ಬಾಗಿಲು ಹೊಡೆದು ಕೊಣೆಯೊಳಗೆ ಹೋದಾಗ ಸೈಫುಲ್ಲಾ ಸತ್ತು ಬಿದ್ದಿದ್ದ. ಆತನ ಬಳಿ ಅಪಾರ ಶಸ್ತ್ರಾಸ್ತ್ರ ಸಿಕ್ಕವು.’

Leave a Reply