ಮಹಾರಾಷ್ಟ್ರದ ಪುಟ್ಟ ಹಳ್ಳಿಯಲ್ಲಿರುವ ದೇಶದ ಮೊದಲ ಅಜ್ಜಿಯಂದಿರ ಶಾಲೆ ಬಗ್ಗೆ ನಿಮಗೆ ಗೊತ್ತೆ?

ಡಿಜಿಟಲ್ ಕನ್ನಡ ಟೀಮ್:

ಕಲಿಕೆಗೆ ವಯಸ್ಸಿನ ಮಿತಿ ಇಲ್ಲ… ಈ ಮಾತನ್ನು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಫಂಗಾನೆ ಎಂಬ ಹಳ್ಳಿಯಲ್ಲಿರುವ ಅಜ್ಜಿಯಂದಿರ ಶಾಲೆ ಸಾಬೀತುಪಡಿಸಿದೆ. ಅಜ್ಜಿಯಂದಿರ ಶಾಲೆ… ಕೇಳಲು ವಿಭಿನ್ನ ಅನಿಸಬಹುದು. ಆದರೆ ಇದು ನಿಜ. ಈ ಶಾಲೆಯಲ್ಲಿ ವಿದ್ಯಾರ್ಥಿಗಳಾಗಿ ಕಲಿಯುತ್ತಿರುವವರು 60 ರಿಂದ 90 ವರ್ಷದೊಳಗಿನ ಹಿರಿಯ ಮಹಿಳೆಯರು ಎಂಬುದು ಗಮನಾರ್ಹ.

ತಮ್ಮ ಬಾಲ್ಯದ ದಿನಗಳಲ್ಲಿ ಶಾಲೆಗೆ ಸೇರಲು ಸಾಧ್ಯವಾಗದೇ ಜೀವನ ಪೂರ್ತಿ ಅನಕ್ಷರರಾಗಿ ಜೀವನ ನಡೆಸಿದ ಈ ಹಿರಿಯ ಮಹಿಳೆಯರು ಈಗ ಈ ಶಾಲೆಯ ಮೂಲಕ ಕಲಿಕೆಯ ಅನುಭವವನ್ನು ಇಳಿ ವಯಸ್ಸಿನಲ್ಲಿ ಪಡೆಯುತ್ತಿದ್ದಾರೆ.

ತಮ್ಮ ಗ್ರಾಮದಲ್ಲಿ ಶೇ.100 ರಷ್ಟು ಸಾಕ್ಷರತೆ ಸಾಧಿಸಬೇಕೆಂಬ ಉದ್ದೇಶದಿಂದ ಯೋಗೇಂದ್ರ ಬಂಗಾರ್ ಹಾಗೂ ಮೋತಿರಾಮ್ ದಲಾಲ್ ಚಾರಿಟಬಲ್ ಟ್ರಸ್ಟ್ ಜಂಟಿಯಾಗಿ ಈ ಗ್ರಾಮದ ಹಿರಿಯ ಮಹಿಳೆಯರಿಗಾಗಿ ಶಾಲೆಯನ್ನು ಆರಂಭಿಸಿದ್ದು, ಇದು ದೇಶದ ಮೊಟ್ಟ ಮೊದಲ ಅಜ್ಜಿಯಂದಿರ ಶಾಲೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಪ್ರತಿನಿತ್ಯ ಈ ಗ್ರಾಮದಲ್ಲಿರುವ 28 ಹಿರಿಯ ಮಹಿಳೆಯರು ತಮ್ಮ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ಮಧ್ಯಾಹ್ನದ ವೇಳೆ ಎರಡು ಗಂಟೆಗಳ ಕಾಲ ಶಾಲೆಗೆ ಹೋಗಿ ಪಾಠ ಕಲಿಯುತ್ತಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಗುಲಾಬಿ ಬಣ್ಣದ ಸಮವಸ್ತ್ರದ ಸೀರೆಯನ್ನುಟ್ಟ ಅಜ್ಜಿಯಂದಿರು, ತಮ್ಮ ಕೈಯಲ್ಲಿ ಶಾಲಾ ಬ್ಯಾಗನ್ನು ಹಿಡಿದು ಶಿಸ್ತಿನಿಂದ ತಮ್ಮ ಶಾಲೆಗೆ ಆಗಮಿಸಿ ತರಗತಿಯಲ್ಲಿ ಹಾಜರಾಗುತ್ತಾರೆ. ಇತರೆ ಶಾಲೆಗಳಂತೆ ಇಲ್ಲಿಯೂ ಅಕ್ಷರ ಕಲಿಕೆ, ಪದ್ಯ, ಗಣಿತದ ಪಾಠ ಹಾಗೂ ಚಿತ್ರಕಲೆಗಳು ಈ ಶಾಲೆಯ ಪಠ್ಯಕ್ರಮವಾಗಿದೆ. ಈ ಅಜ್ಜಿಯಂದಿರೂ ಸಹ ಆಸಕ್ತಿ ಹಾಗೂ ಉತ್ಸಾಹದಿಂದ ಶಾಲೆಗೆ ಹೋಗುತ್ತಿದ್ದು, ನಿತ್ಯ ಶಾಲೆಯಲ್ಲಿ ನೀಡುವ ಮನೆಕೆಲಸ ಪೂರ್ತಿ ಮಾಡಿ ಮರುದಿನ ಶಾಲೆಗೆ ಆಗಮಿಸುತ್ತಾರೆ. ಈ ಒಂದು ಪ್ರಕ್ರಿಯೆಯ ಚಿತ್ರಣವನ್ನು ಕಲ್ಪಿಸಿಕೊಳ್ಳುವುದೇ ಒಂದು ರೀತಿಯ ವಿಭಿನ್ನ ಅನುಭವ ನೀಡುತ್ತದೆ.

ಈ ಶಾಲೆ ಹಾಗೂ ಇಳಿ ವಯಸ್ಸಿನಲ್ಲಿ ಕಲಿಯುತ್ತಿರುವ ಅನುಭವದ ಬಗ್ಗೆ 87 ವರ್ಷದ ವಿದ್ಯಾರ್ಥಿ ರಮಾಭಾಯಿ ಗಣ್ಪತ್ ಚಂದೆಲ್ಲೆ ಹೇಳುವುದು ಹೀಗೆ…

‘ನಾನು ಮರದಲ್ಲಿ ಮಾಗಿರುವ ಹಣ್ಣಿನ ಹಾಗೆ. ರೆಂಬೆಯಿಂದ ಯಾವಾಗ ಬೀಳುತ್ತೇನೊ ಗೊತ್ತಿಲ್ಲ. ಚಿಕ್ಕ ವಯಸ್ಸಿನಲ್ಲಿ ನಾನು ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ. ಜೀವನಪೂರ್ತಿ ಅವಿದ್ಯಾವಂತೆಯಾಗಿಯೇ ಕಾಲ ಕಳೆದೆ. ಮುಂದಿನ ಕೆಲವು ದಿನಗಳಲ್ಲಾದರೂ ಸಾಧ್ಯವಾದಷ್ಟು ಕಲಿತು ಶಿಕ್ಷಿತಳಾಗಿ ಇರುವ ಆಸೆ. ಅನಕ್ಷರಸ್ಥೆಯಾಗಿ ಸಾಯಲು ನನಗೆ ಇಷ್ಟವಿಲ್ಲ. ಈ ಶಾಲೆಯಲ್ಲಿ ಕಲಿತು ನಾನು ಬೇರೆ ಪ್ರಪಂಚದೊಂದಿಗೆ ನಾಲ್ಕು ಪದಗಳನ್ನು ಮಾತನಾಡಬಲ್ಲೆ. ನಾನು ಶಾಲೆ ಮುಗಿಸಿ ಮನೆಗೆ ಬಂದ ನಂತರ ನನ್ನ ಮೊಮ್ಮಕ್ಕಳು ನನ್ನ ತಪ್ಪನ್ನು ತಿದ್ದಿ ಸರಿಪಡಿಸುತ್ತಾರೆ. ಹೇಗೆ ಬರಿಯಬೇಕು, ಹೇಗೆ ಓದಬೇಕು ಎಂಬುದನ್ನು ಹೇಳಿಕೊಡುತ್ತಾರೆ. ಅವರು ಸಹ ನನ್ನ ಜತೆ ಓದುತ್ತಾರೆ. ನಾವೆಲ್ಲರು ಒಬ್ಬರೊಬ್ಬರ ಪಾಠ, ಪದ್ಯವನ್ನು ಓದುತ್ತೇವೆ. ಇದು ವಿಭಿನ್ನ ಅನುಭವವಾಗಿದ್ದು, ಆನಂದಿಸುತ್ತಿದ್ದೇನೆ…’

school-for-elderly-woman-ma

ರಮಾಭಾಯಿ ಅವರ ಈ ಮಾತುಗಳಲ್ಲಿ ಶಿಕ್ಷಣದ ಮಹತ್ವ ಬಿಂಬಿತವಾಗುತ್ತಿದೆ. ವಿದ್ಯೆ ಕಲಿಯಬೇಕೆಂಬ ಆಸೆ ಕೇವಲ ಅವರಿಗೆ ಮಾತ್ರ ಸೀಮಿತವಾಗಿಲ್ಲ, ದೇಶದ ಅನೇಕರ ಆಸೆಯೂ ಆಗಿದೆ. ಹೀಗೆ ವಿಭಿನ್ನ ಪ್ರಯತ್ನದ ಮೂಲಕ ಹೊಸ ಅಧ್ಯಾಯವನ್ನು ಬರೆದಿರುವ ಅಜ್ಜಿಯಂದಿರ ಶಾಲೆ ಕೇವಲ ಈ ಒಂದು ಹಳ್ಳಿಗೆ ಮಾತ್ರ ಸೀಮಿತವಾಗದೇ ದೇಶದಾದ್ಯಂತ ಪಸರಿಸಿ, ಆಸಕ್ತರಿಗೆ ಕಲಿಯುವ ವೇದಿಕೆ ಸಿಗುವಂತಾಗಲಿ ಎಂಬುದೆ ಎಲ್ಲರ ಆಶಯ.

Leave a Reply