ದೇಶದ್ರೋಹಿ ಮಗನ ದೇಹ ಸ್ವೀಕರಿಸಲಾರೆ ಎಂದು ಆದರ್ಶ ಮೆರೆದ ತಂದೆ!

ಡಿಜಿಟಲ್ ಕನ್ನಡ ಟೀಮ್:

ಲಕ್ನೋದಲ್ಲಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಐಎಸ್ಐಎಸ್ ಪ್ರೇರಿತ ಉಗ್ರ ಸೈಫುಲ್ಲಾನನ್ನು ಹೊಡೆದು ಹಾಕಿರುವುದು ಸರಿಯಷ್ಟೆ.

ಅದಾದ ನಂತರ ಕಾನ್ಪುರದಲ್ಲಿರುವ ಆತನ ತಂದೆ ಸರ್ತಾಜ್ ಅವರು ಪ್ರತಿಕ್ರಿಯಿಸಿರುವ ರೀತಿ ಮಾತ್ರ ಅಮೋಘವಾಗಿದೆ. ಮಗನ ದೇಹವನ್ನು ಸ್ವೀಕರಿಸುವುದಕ್ಕೆ ನಿರಾಕರಿಸಿರುವ ಅವರು ಹೇಳಿರುವುದಿಷ್ಟು- ‘ಒಬ್ಬ ದೇಶದ್ರೋಹಿ ನನ್ನ ಮಗನಾಗಿರುವುದಕ್ಕೆ ಸಾಧ್ಯವಿಲ್ಲ. ನಾವು ಭಾರತೀಯರು. ಇಲ್ಲೇ ಹುಟ್ಟಿದವರು, ನಮ್ಮ ಹಿರಿಯರು ಇದೇ ನೆಲದಲ್ಲಿ ಹುಟ್ಟಿದವರು. ಇಂಥ ದೇಶದ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗುವವನನ್ನು ಮಗ ಎಂದು ಹೇಗೆ ಒಪ್ಪಿಕೊಳ್ಳಲಿ?’ ಇದು ಎಎನ್ಐ ಸುದ್ದಿಸಂಸ್ಥೆಗೆ ಉಗ್ರನ ತಂದೆ ಪ್ರತಿಕ್ರಿಯಿಸಿರುವ ರೀತಿ.

ತನ್ನ ಮಗ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎಂಬ ಸುಳಿವೇ ಸಿಗಲಿಲ್ಲ ಎಂದು ಆಘಾತ ವ್ಯಕ್ತಪಡಿಸಿದ್ದಾರೆ ಸರ್ತಾಜ್.

sartaj
ಸರ್ತಾಜ್

ಉಗ್ರ ಕೃತ್ಯದಲ್ಲಿ ಯುವಕರ ಬಂಧನವಾದಾಗಲೆಲ್ಲ ಹಿಂದೆ-ಮುಂದೆ ಯೋಚಿಸದೇ ಮಾಧ್ಯಮಗಳ ಮುಂದೆ ‘ನನ್ನ ಮಗ ನಿರ್ದೋಷಿ’ ಎಂದು ಸಮುದಾಯದ ಕಾರ್ಡ್ ಉಪಯೋಗಿಸುವವರೇ ಹೆಚ್ಚಿರುವಾಗ ಇದೊಂದು ಅತ್ಯುನ್ನತ ಮಾದರಿ. ಉಗ್ರನನ್ನು ಭದ್ರತಾ ಪಡೆಗಳು ಹೊಡೆದು ಹಾಕಿದಾಗ ಅವನ ಪರ ಪ್ರತಿಭಟನೆ ಮಾಡುವ, ಸಹಸ್ರ ಸಂಖ್ಯೆಯಲ್ಲಿ ನಿಂತು ಅಂತ್ಯಕ್ರಿಯೆ ಮಾಡುವ ಮಂದಿಗೆ ಆದರ್ಶವಾಗಬೇಕಿರುವ ಸಂಗತಿ ಇದು. ಯಾಕೂಬ್ ಮೆನನ್ ನಂಥ ದೇಶಕ್ಕೆ ಬಾಂಬಿಟ್ಟ ಉಗ್ರ ನೇಣಿಗೇರಿದಾಗಲೂ ಕಣ್ಣೀರಿಟ್ಟ ಬುದ್ಧಿಜೀವಿಗಳಿಗೆ, ಹೀರೋ ಎಂಬಂತೆ ಅಂತ್ಯಸಂಸ್ಕಾರ ನಡೆಸಿದ ಮುಂಬೈ ಮುಸ್ಲಿಮರಿಗೆ ತಾಗಬೇಕಾದ ನಡೆ ಕಾನ್ಪುರದ ಈ ತಂದೆಯದ್ದು!

ಐಎಸ್ಐಎಸ್ ನಂಥ ಉಗ್ರ ಸಂಘಟನೆಗಳು ಭಾರತದಲ್ಲಿ ಅಷ್ಟು ಸುಲಭಕ್ಕೆ ತಳ ಊರಲು ಏಕೆ ಸಾಧ್ಯವಿಲ್ಲವೆಂದರೆ ಮುಸ್ಲಿಂ ಪಾಲಕರೇ ಇದಕ್ಕೆ ವಿರುದ್ಧವಾಗಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಬಹಳ ವರ್ಷಗಳ ಹಿಂದೆಯೇ ವಿಚಾರಗೋಷ್ಟಿಯೊಂದರಲ್ಲಿ ಅಭಿಪ್ರಾಯಪಟ್ಟಿದ್ದರು. ತಮ್ಮ ಮಕ್ಕಳ ಸಂಶಯಾಸ್ಪದ ನಡೆ ಬಗ್ಗೆ ಭದ್ರತಾ ಪಡೆಗಳನ್ನು ಎಚ್ಚರಿಸಿದವರಲ್ಲಿ ಮುಸ್ಲಿಂ ಪಾಲಕರು ಬಹಳ ಮಂದಿಯಿದ್ದಾರೆ ಎಂದೂ ಅವರು ಪ್ರಶಂಸಿಸಿದ್ದರು. ಇದೀಗ ಉಗ್ರ ಸೈಫುಲ್ಲಾ ವಿಚಾರದಲ್ಲಿ ಆತನ ತಂದೆ ನಡೆದುಕೊಂಡಿರುವ ರೀತಿ ಈ ಎಲ್ಲ ಭರವಸೆಗಳನ್ನು ಜೀವಂತವಾಗಿಟ್ಟಿದೆ.

ಭಾರತದಲ್ಲಿ ರೂಪಿತವಾಗಿರುವ ಐಎಸ್ಐಎಸ್ ಜಾಲದ ಒಂಬತ್ತು ಮಂದಿಯ ಪೈಕಿ ಸೈಫುಲ್ಲಾ ಒಬ್ಬನಾಗಿದ್ದ ಎಂಬುದು ಸದ್ಯಕ್ಕೆ ತಿಳಿದಿರುವ ಮಾಹಿತಿ. ಈ ಗ್ಯಾಂಗ್ ಉಜ್ಜಯಿನಿ ರೈಲು ಮಾರ್ಗದಲ್ಲಿ ಕಡಿಮೆ ತೀವ್ರತೆಯ ಬಾಂಬ್ ವಿಸ್ಫೋಟಿಸಿತ್ತು. ಇದರಲ್ಲಿ 9 ಮಂದಿ ಗಾಯಗೊಂಡಿದ್ದರು. ಈ ಗ್ಯಾಂಗಿನ ಅಂತರ್ಜಾಲ ಹೆಜ್ಜೆ, ಸಿಸಿಟಿವಿ ದೃಶ್ಯಗಳನ್ನೆಲ್ಲ ಪರಿಶೀಲಿಸಿ ಈ ಪೈಕಿ ಮೂವರನ್ನು ಬಂಧಿಸಲಾಗಿತ್ತು. ಈ ಮೂವರ ವಿಚಾರಣೆ ವೇಳೆಯಲ್ಲೇ ಕಾನ್ಪುರದಲ್ಲಿ ಸೈಫುಲ್ಲಾ ವಿಧ್ವಂಸ ಸೃಷ್ಟಿಸಲು ಹೊರಟಿರುವ ಮಾಹಿತಿ ಹೊರಬಂದು ಭದ್ರತಾ ಪಡೆಗಳಿಗೆ ಕ್ಷಿಪ್ರ ಕಾರ್ಯಾಚರಣೆ ನಡೆಸುವುದಕ್ಕೆ ಸಹಾಯಕವಾಯಿತು.

Leave a Reply