ಮೋದಿ-ಶಾ ಜೋಡಿ ಬಗ್ಗೆ ದೇವೇಗೌಡರ ದುಗುಡ, ಅಜ್ಮೇರ್ ಸ್ಫೋಟ ಪ್ರಕರಣ: ಭಾಗಶಃ ಸಾಬೀತಾದ ಕೇಸರಿ ಉಗ್ರಕೃತ್ಯ, ಎಸ್ಸೆಸೆಲ್ಸಿ-ಪಿಯುಸಿ ಮೌಲ್ಯಮಾಪನ ಬಹಿಷ್ಕರಿಸಿದ್ರೆ 6 ತಿಂಗಳು ಜೈಲು! ಆಸೀಸ್ ನಾಯಕ ಸ್ಮಿತ್ ವಿರುದ್ಧ ಟೀಂ ಇಂಡಿಯಾ ದೂರು

ಮಾಜಿ ಸಚಿವರಾದ ಕೆ.ಜಯಪ್ರಕಾಶ ಹೆಗ್ಡೆ ಹಾಗೂ ಮಾಜಿ ಶಾಸಕ ರತನ್ ಸಿಂಗ್ ಮತ್ತು ಮಾಜಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೇಘನಾಥ ಶೆಟ್ಟಿ ಅವರು ಬುಧವಾರ ಬಿಜೆಪಿ ಸೇರ್ಪಡೆಯಾಗಿದ್ದು, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಈ ಮೂವರು ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಡಿಜಿಟಲ್ ಕನ್ನಡ ಟೀಮ್:

ದೇವೇಗೌಡ್ರ ಭವಿಷ್ಯ!

ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುತಿಸಿದ್ದು, ಬಿಜೆಪಿಯೂ ಅಲ್ಲ, ಆರೆಸ್ಸೆಸ್ ಕೂಡ ಅಲ್ಲ. ಅವರನ್ನು ಗುರುತಿಸಿ ಅಧಿಕಾರ ಏರುವಂತೆ ಮಾಡಿದ್ದು ಗುಜರಾತಿನ ಐವರು ಕಾರ್ಪೋರೇಟ್ ಧಣಿಗಳು. ಮೋದಿ ಹಾಗೂ ಅಮಿತ್ ಶಾ ಅವಳಿ ಸಹೋದರರಂತೆ. ಅವರು ಕರ್ನಾಟಕದ ಮೇಲೂ ದಂಡೆತ್ತಿ ಬರಬಹುದು. ಉತ್ತರ ಪ್ರದೇಶ ಚುನಾವಣೆ ಫಲಿತಾಂಶದ ನಂತರ ದೇಶದ ರಾಜಕೀಯ ಸ್ವರೂಪ ಬದಲಾಗಲಿದ್ದು, ಬಿಜೆಪಿ ಅಧಿಕಾರ ಪಡೆದರೆ ನಮ್ಮಂತಹ ಪ್ರಾದೇಶಿಕ ಪಕ್ಷಗಳಿಗೆ ತೊಂದರೆ ಖಚಿತ… ಇದು ಮಾಜಿ ಪ್ರಧಾನಿ ಎಚ್.ಡಿ ದೇವೇ ಗೌಡರು ನುಡಿದಿರುವ ಭವಿಷ್ಯ.

ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್ ಕ್ಲಬ್ ಏರ್ಪಡಿಸಿದ್ದ ಪತ್ರಿಕಾ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಗೌಡರು ಹೇಳಿದಿಷ್ಟು… ‘ಮೋದಿ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ತಂದು ಪ್ರಧಾನಿಯನ್ನಾಗಿ ಮಾಡಿದ್ದು, ಕಾರ್ಪೋರೇಟ್ ಧಣಿಗಳು. ಆ ಮೂಲಕ ಆ ಉದ್ದಿಮೆದಾರರು ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುತ್ತಿದ್ದಾರೆ. ಆ ಐವರು ಯಾರು ಎಂಬುದು ನನಗೆ ಗೊತ್ತಿದೆ. ಬಿಹಾರದಲ್ಲಿ ಅವರು ನಡೆಸಿದ ಮೊದಲ ಸಭೆಯ ಕುರಿತ ಮಾಹಿತಿಯೂ ನನಗೆ ತಿಳಿದಿದೆ. ಇಡೀ ದೇಶವನ್ನು ತಮ್ಮ ಕಪಿಮುಷ್ಟಿಗೆ ತೆಗೆದುಕೊಳ್ಳುವ ಪ್ರಯತ್ನ ಈಗಾಗಲೇ ನಡೆದಿದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಿದರೆ, ದಕ್ಷಿಣ ಭಾರತದ ಹೆಬ್ಬಾಗಿಲು ಆಗಿರುವ ಕರ್ನಾಟಕದಲ್ಲಿ ಮತ್ತೆ ಅಧಿಕಾರ ಪಡೆಯಲು ಹಣಬಲ, ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ದಾಳಿಗಳೂ ಸೇರಿದಂತೆ ಎಲ್ಲಾ ಕಾರ್ಯತಂತ್ರಗಳನ್ನು ಪ್ರಯೋಗಿಸಲಿದೆ. ಇದೇ ತಿಂಗಳು ನಡೆಯಲಿರುವ ಸಂಸತ್ ಅಧಿವೇಶನದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಲು ಯಾರ ಅನುಮತಿಯೂ ಬೇಡ ಎಂದು ವಿಧೇಯಕಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಇದನ್ನು ರಾಜಕೀಯ ಬಾಣವನ್ನಾಗಿ ಬಳಸಿಕೊಳ್ಳು ಬಿಜೆಪಿ ಷಡ್ಯಂತ್ರ ನಡೆಸಿದೆ. ಅಂಬೇಡ್ಕರ್ ಬರೆದಿರುವ ಸಂವಿಧಾನ ಹಾಗೂ ಪ್ರಜಾವ್ಯವಸ್ಥೆ ಬುಡಮೇಲು ಆಗಲಿದೆ.’

ಅಜ್ಮೇರ್ ಸ್ಫೋಟ 3 ಮಂದಿ ಅಪರಾಧಿ, 6 ಮಂದಿ ನಿರ್ದೋಷಿ

ಅಜ್ಮೇರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಸ್ವಾಮಿ ಅಸೀಮಾನಂದ ಸೇರಿದಂತೆ 6 ಮಂದಿ ಆರೋಪಿಗಳನ್ನು ದೋಷಮುಕ್ತರೆಂದು ಘೋಷಿಸಿದೆ. ಇನ್ನು ಮೂವರು ಆರೋಪಿಗಳನ್ನು ಅಪರಾಧಿಗಳು ಎಂದು ಆದೇಶ ನೀಡಿದೆ.

2007ರ ಅಕ್ಟೋಬರ್ 11 ರ ಸಂಜೆ 6.14ರ ಸುಮಾರಿಗೆ ರೋಜಾ ಇಫ್ತಾರ್ ನಡೆಸುವಾಗ ಅಜ್ಮೇರ್ ನಲ್ಲಿರುವ ದರ್ಗಾ ಶರೀಫ್ ಆವರಣದೊಳಗೆ ಬಾಂಬ್ ಎಸೆಯಲಾಗಿತ್ತು. ಈ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದರೆ, 15 ಮಂದಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಆರೋಪ ಪಟ್ಟಿಯಲ್ಲಿ ಒಟ್ಟು 13 ಮಂದಿ ಹೆಸರಿತ್ತು. ಆ ಪೈಕಿ ಸ್ವಾಮಿ ಅಸೀಮಾನಂದ ಅವರು ಈ ಕೃತ್ಯದ ಹಿಂದಿನ ರೂವಾರಿ ಎಂದು ಹೇಳಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕೇವಲ ಮೂವರನ್ನು ಮಾತ್ರ ತಪ್ಪಿತಸ್ಥರು ಎಂದು ತೀರ್ಪು ನೀಡಿದೆ. ಸುನೀಲ್ ಜೋಷಿ (ಈಗಾಗಲೇ ಮೃತಪಟ್ಟಿದ್ದಾರೆ), ದೇವೇಂದ್ರ ಗುಪ್ತ ಹಾಗೂ ಭಾವೇಶ್ ಪಟೇಲ್ ಎಂಬುವವರು ದೋಷಿಗಳಾಗಿದ್ದಾರೆ.

ಮೌಲ್ಯ ಮಾಪನ ಬಹಿಷ್ಕರಿಸಿದ್ರೆ ಜೈಲು!

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಎಲ್ಲ ರೀತಿ ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ. ಇದರ ಜತೆಗೆ ಈ ಬಾರಿಯ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಮೌಲ್ಯಮಾಪನ ಬಹಿಷ್ಕರಿಸುವವರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿವಿಧ ಸಂಘಟನೆಗಳ ಉಪನ್ಯಾಸಕರು ಮೌಲ್ಯಮಾಪನದಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಯಾರಾದರೂ ಮೌಲ್ಯಮಾಪನ ಬಹಿಷ್ಕರಿಸಿದರೆ ಶಿಕ್ಷಣ ಕಾಯ್ದೆ ಅನ್ವಯ ಜೈಲು ಶಿಕ್ಷೆ, ಕ್ರಿಮಿನಲ್ ಕೇಸ್ ಸೇರಿದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು. ಪಿಯುಸಿ ಪರೀಕ್ಷೆಯ ಮೌಲ್ಯ ಮಾಪನ ನಿಗದಿತ ವೇಳೆಯಲ್ಲಿ ನಡೆಯಲಿದ್ದು, ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಯಾವುದೇ ಆತಂಕಬೇಡ. ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ’ ಎಂದರು. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಾದ್ಯಂತ 6,84,490 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಆ ಪೈಕಿ 348562 ಬಾಲಕರು, 335909 ಬಾಲಕಿಯರು ಹಾಗೂ 19 ಮಂದಿ ತೃತೀಯ ಲಿಂಗಿಯರು ಇದ್ದಾರೆ. ಒಟ್ಟು 2175 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಡ್ರೆಸಿಂಗ್ ರೂಮ್ ವಿವಾದ: ಸ್ಮಿತ್ ವಿರುದ್ಧ ಟೀಂ ಇಂಡಿಯಾ ದೂರು

ಬೆಂಗಳೂರಿನಲ್ಲಿ ನಿನ್ನೆ ಮುಕ್ತಾಯವಾದ ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಾಂಗರೂ ಪಡೆಯ ನಾಯಕ ಸ್ಟೀವನ್ ಸ್ಮೀತ್ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಅಷ್ಟೇ ಅಲ್ಲದೆ ಸ್ಮಿತ್ ಅವರ ವರ್ತನೆ ವಿರುದ್ಧ ಭಾರತ ಕ್ರಿಕೆಟ್ ತಂಡ ಪಂದ್ಯದ ರೆಫರಿಗೆ ಇ ಮೇಲ್ ಮೂಲಕ ದೂರು ನೀಡಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

ನಿನ್ನೆಯ ಆಟದಲ್ಲಿ ಆಸ್ಟ್ರೇಲಿಯಾ ತಂಡ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಮಾಡುವಾಗ ಭಾರತದ ವೇಗಿ ಉಮೇಶ್ ಯಾದವ್ ಅವರ ಎಸೆತದಲ್ಲಿ ನಾಯಕ ಸ್ಟೀವನ್ ಸ್ಮಿತ್ ಎನ್ ಬಿಡಬ್ಲ್ಯೂ ಔಟಾದರು. ಈ ವೇಳೆ ಅಂಪೈರ್ ತೀರ್ಪು ವಿರುದ್ಧ ಮೇಲ್ಮನವಿ ಸಲ್ಲಿಸಲು ಡಿಆರ್ಎಸ್ ಅವಕಾಶ ಬಳಸಿಕೊಳ್ಳುವ ವೇಳೆ ಸ್ಟೀವನ್ ಸ್ಮಿತ್ ತಂಡದ ಡ್ರೆಸಿಂಗ್ ರೂಮ್ ಕಡೆ ನೋಡುತ್ತಾರೆ. ನಿಯಮದ ಪ್ರಕಾರ ಡಿಆರ್ಎಸ್ ನಿರ್ಧಾರವನ್ನು ಮೈದಾನದಲ್ಲಿರುವ ಆಟಗಾರರು ತೆಗೆದುಕೊಳ್ಳಬೇಕೆ ಹೊರತು ಡ್ರೆಸಿಂಗ್ ರೂಮ್ ನಿಂದ ಸಹ ಆಟಗಾರರ ಅಭಿಪ್ರಾಯ ಕೇಳುವಂತಿಲ್ಲ. ಸ್ಮಿತ್ ಈ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ತಕ್ಷಣವೇ ವಿರಾಟ್ ಕೊಹ್ಲಿ ಕೆಂಡಾಮಂಡಲವಾಗಿದ್ದರು. ಅಲ್ಲದೆ ಅಂಪೈರ್ ಗಳು ಸಹ ಸ್ಮಿತ್ ಅವರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದರು.

ಸ್ಮಿತ್ ಅವರ ಈ ನಡೆಯನ್ನು ಈಗ ಮೋಸದಾಟ ಎಂದೇ ಬಣ್ಣಿಸಲಾಗುತ್ತಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಈ ಪ್ರಕರಣದಲ್ಲಿ ಸ್ಮಿತ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಭಾರತದ ಮಾಜಿ ಆಟಗಾರರು ಅಭಿಪ್ರಾಯ ಪಟ್ಟಿದ್ದಾರೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ಅವರ ಆರೋಪಕ್ಕೆ ಬಿಸಿಸಿಐ ಸಹ ಬೆಂಬಲ ಸೂಚಿಸಿದೆ.

Leave a Reply