ಈಕೆ ಬ್ರಾ ಮಾರುತ್ತೇನೆ ಎಂದು ಹೊರಟಾಗ ಅಮ್ಮ ಹೌಹಾರಿದ್ದರು!

ಡಿಜಿಟಲ್ ಕನ್ನಡ ಟೀಮ್:

ವ್ಯಾಪಾರ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿರುವ ಅನೇಕ ಮಹಿಳಾ ಸಾಧಕಿಯರು ನಮ್ಮ ಕಣ್ಮುಂದೆ ಇದ್ದಾರೆ. ಆ ಪೈಕಿ ಮಹಿಳೆಯರ ಒಳ ಉಡುಪಿನ ಖ್ಯಾತ ಕಂಪನಿ ಜಿವಾಮೆಯ ಸಂಸ್ಥಾಪಕಿ ಹಾಗೂ ಸಿಇಒ ರಿಚಾ ಕರ್ ಸಹ ಒಬ್ಬರು. ಆರು ವರ್ಷಗಳ ಹಿಂದೆ ಅಂದರೆ 2011ರಲ್ಲಿ ಸಣ್ಣದಾಗಿ ಆರಂಭವಾದ ಈ ಕಂಪನಿ ಇಂದು ನಾಲ್ಕು ಪಟ್ಟು ಎತ್ತರಕ್ಕೆ ಬೆಳೆದು ನಿಂತಿದೆ.

ಸ್ತ್ರೀಯರ ಒಳ ಉಡುಪಿನ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದಕ್ಕೂ ಮುಜುಗರ ಪಡುವ ಪರಿಸ್ಥಿತಿಯಲ್ಲಿ ಅದನ್ನೇ ಮಾರಾಟ ಮಾಡುತ್ತೇನೆ ಎಂದು ರಿಚಾ ನಿರ್ಧರಿಸಿದಾಗ ಸಹಜವಾಗಿಯೇ ತನ್ನ ಮನೆಯವರು ಹಾಗೂ ಇತರರಿಂದ ವಿರೋಧ ಹಾಗೂ ಹಾಸ್ಯಕ್ಕೆ ತುತ್ತಾದರು. ಆದರೆ ಈ ಎಲ್ಲ ಸವಾಲುಗಳ ಮಧ್ಯೆ ತಮ್ಮ ಪರಿಶ್ರಮ ಹಾಕಿದ ರಿಚಾ ಅವರು ಇಂದು ದೊಡ್ಡ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಅನೇಕ ಸವಾಲುಗಳನ್ನು ಎದುರಿಸಿ ಈ ಸಾಧನೆ ಮಾಡಿರುವ ರಿಚಾ, ತಮ್ಮ ಯಶಸ್ಸಿನ ಹಾದಿಯ ಬಗ್ಗೆ ಮಾಧ್ಯಮ ಸಂದರ್ಶನದ ವೇಳೆ ಹೇಳಿರುವುದು ಹೀಗೆ…

‘2002ರಲ್ಲಿ ನಾನು ಪಳನಿಯ ಬಿಐಟಿಎಸ್ ಕಾಲೇಜಿನಲ್ಲಿ ನನ್ನ ಎಂಜಿನಿಯರಿಂಗ್ ಮುಗಿಸಿದೆ. ನಂತರ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಲು ಆರಂಭಿಸಿದೆ. ಈ ಹಂತದಲ್ಲಿ ನಾನು ಭವಿಷ್ಯದಲ್ಲಿ ತನ್ನದೇ ಆದ ವ್ಯಾಪಾರವೊಂದನ್ನು ಆರಂಭಿಸುವ ಬಗ್ಗೆ ಯೋಚಿಸುತ್ತಿದ್ದೆ. ಹೀಗಾಗಿ 2007ರಲ್ಲಿ ಎಂಬಿಎ ಸಹ ವ್ಯಾಸಂಗ ಮಾಡಿದೆ. ನಾನು ಮೊದಲು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಜಾಗತಿಕ ಮಹಿಳಾ ಒಳ ಉಡುಪು ಬ್ರ್ಯಾಂಡ್ ಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುತ್ತಿದ್ದೆ. ಆಗ ಭಾರತದಲ್ಲಿ ಮಹಿಳೆಯರ ಒಳ ಉಡುಪಿನ ಮಾರುಕಟ್ಟೆಯ ಕುರಿತ ಅಂಕಿ ಅಂಶಗಳು ನನ್ನ ಗಮನ ಸೆಳೆದವು. ಕಾರಣ, ಭಾರತದಲ್ಲಿ ಗ್ರಾಹಕರ ಆಶೋತ್ತರಗಳಿಗೆ ಸರಿಯಾಗಿ ಯಾವುದೇ ಬ್ರಾಂಡ್ ಕೆಲಸ ಮಾಡುತ್ತಿರಲಿಲ್ಲ. ಜತೆಗೆ ಈ ಉದ್ಯಮದಲ್ಲಿ ಭಾರತೀಯ ಗ್ರಾಹಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವುದು ನನ್ನ ಗಮನಕ್ಕೆ ಬಂದಿತು. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಭಾರತೀಯ ಗ್ರಾಹಕರನ್ನು ತಲುಪುವ ಆಲೋಚನೆ ಬಂದಿತು. ಹೀಗಾಗಿ ನಾನು ಮಹಿಳೆಯರ ಒಳ ಉಡುಪು ವ್ಯಾಪಾರ ಆರಂಭಿಸುವತ್ತ ಗಮನಹರಿಸಿದೆ.

ಈ ವ್ಯಾಪಾರದ ಕುರಿತು ನನ್ನ ಮನೆಯವರಿಗೆ ಹೇಳಿದಾಗ ಅವರು ಅಚ್ಚರಿಯಾದರು. ಅದರ ಜತೆಗೆ ವಿರೋಧಿಸಿದರು. ಅದರಲ್ಲೂ ನನ್ನ ತಾಯಿ ‘ನನ್ನ ಸ್ನೇಹಿತೆಯರು ನಿನ್ನ ಕೆಲಸದ ಬಗ್ಗೆ ಕೇಳಿದರೆ ಏನು ಹೇಳಲಿ? ನನ್ನ ಮಗಳು ಕಂಪ್ಯೂಟರ್ ಮೂಲಕ ಬ್ರಾ ಮಾರುತ್ತಾಳೆ ಎಂದು ಹೇಳಬೇಕೆ?’ ಎಂದು ಬೈದರು. ಇನ್ನು ನನ್ನ ಯೋಜನೆ ಏನೆಂಬುದು ನನ್ನ ತಂದೆಗೆ ಅರ್ಥವಾಗಲೇ ಇಲ್ಲ. ಸಣ್ಣ ಪ್ರಮಾಣದಲ್ಲಿ ನಾನು ಈ ವ್ಯಾಪಾರ ಆರಂಭಿಸಲು ಮುಂದಾದೆ. ಈ ಹಂತದಲ್ಲಿ ನನ್ನ ವ್ಯಾಪಾರಕ್ಕೆ ನೆರವಾಗಲು ಒಳ ಉಡುಪುಗಳ ಸರಕುಗಳನ್ನು ಇಟ್ಟುಕೊಳ್ಳಲು ನಮ್ಮ ಮನೆಯ ಮಾಲೀಕರ ಬಳಿ ಹೆಚ್ಚಿನ ಜಾಗಬೇಕೆಂದು ಮನವಿ ಮಾಡಿದೆ. ನಾನು ಬ್ರಾ ಮಾರುತ್ತೇನೆ ಎಂಬ ಕಾರಣಕ್ಕೆ ಅವರು ಜಾಗ ನೀಡಲು ನಿರಾಕರಿಸಿದರು. ನಮ್ಮ ಸಮಾಜದಲ್ಲಿ ಈಗಲೂ ಮಹಿಳೆಯರ ಒಳ ಉಡುಪಿನ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಇಂತಹ ತಪ್ಪುಕಲ್ಪನೆಗಳು ನಿರ್ಮೂಲನೆಯಾಗಬೇಕು ಎಂದು ನಿರ್ಧರಿಸಿ ನನ್ನ ಪ್ರಯತ್ನದತ್ತ ಗಮನಹರಿಸಿದೆ.

2011ರಲ್ಲಿ ನನ್ನ ಉಳಿಸಿದ್ದ ಹಣದ ಜತೆಗೆ, ಸ್ನೇಹಿತರು ಹಾಗೂ ಸಂಬಂಧಿಕರ ಆರ್ಥಿಕ ನೆರವು ಪಡೆದು ಒಟ್ಟು ₹ 35 ಲಕ್ಷ ಬಂಡವಾಳದೊಂದಿಗೆ ಈ ವ್ಯಾಪಾರ ಆರಂಭಿಸಿದೆ. ಆರಂಭದಲ್ಲೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದಂತೆ ಮನೆಯವರು ನಿಧಾನವಾಗಿ ನನಗೆ ಪ್ರೋತ್ಸಾಹ ನೀಡಲು ಆರಂಭಿಸಿದರು. ನಂತರ ಕಲಾರಿ ಕ್ಯಾಪಿಟಲ್ ಹಾಗೂ ಐಡಿಜಿ ವೆಂಚರ್ಸ್ ನಂತಹ ಕಂಪನಿಗಳು ಆರ್ಥಿಕ ಸಹಾಯ ಮಾಡಲು ಮುಂದಾದವು. ಕ್ರಮೇಣವಾಗಿ ಕಂಪನಿ ಬೆಳೆಯಿತು.

ಸದ್ಯ ನಮ್ಮ ದೇಶದ ಮಹಿಳೆಯರ ಒಳ ಉಡುಪಿನ ಮಾರುಕಟ್ಟೆ ₹ 12 ಸಾವಿರ ಕೋಟಿ ಮೌಲ್ಯದ್ದಾಗಿದೆ. ಈ ಮಾರುಕಟ್ಟೆಯಲ್ಲಿ ಹಲವು ಸ್ಪರ್ಧಿಗಳಿದ್ದರೂ ನಮ್ಮ ಕಂಪನಿ ಈಗ ಹೆಚ್ಚು ನಿಯಂತ್ರಣ ಸಾಧಿಸಿದೆ. ಗ್ರಾಹಕರ ಸಮಸ್ಯೆಯನ್ನು ಬಗೆಹರಿಸಿ ಅವರನ್ನು ತಲುಪಿದ್ದು ಮುಂದಿನ ದಿನಗಳಲ್ಲೂ ಮತ್ತಷ್ಟು ಮಾರುಕಟ್ಟೆ ವಿಸ್ತರಿಸುವ ಗುರಿ ಇದೆ.’

1 COMMENT

Leave a Reply