ಉಪ್ರದಲ್ಲಿ ಕೇಸರಿ ಅಲೆ ಎಂದಿವೆ ಸಮೀಕ್ಷೆಗಳು, ನಂಜನಗೂಡು- ಗುಂಡ್ಲುಪೇಟೆ ಉಪಚುನಾವಣೆ ಮೂಹೂರ್ತ ಫಿಕ್ಸ್, ವಿಷಾಹಾರ ಸೇವನೆಯಿಂದ ಮೂವರು ಸಾವು…

ಟೈಮ್ಸ್ ನೌ- ವಿಎಂಆರ್ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ 402 ವಿಧಾನಸಭಾ ಸ್ಥಾನಗಳಉತ್ತರ ಪ್ರದೇಶದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು 195- 210 ಸ್ಥಾನಗಳವರೆಗೆ ಗೆಲ್ಲಬಹುದೆಂದು ಊಹಿಸಲಾಗಿದೆ. ಇಂಡಿಯಾ ಟುಡೆ- ಎಕ್ಸಿಸ್ ಸಮೀಕ್ಷೆ ಪ್ರಕಾರ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಅತಿದೊಡ್ಡ ಗೆಲುವು, ಪಂಜಾಬಿನಲ್ಲಿ ಕಾಂಗ್ರೆಸ್ ಗೆಲುವು, ಗೋವಾ ಮತ್ತು ಉತ್ತರಾಖಾಂಡದಲ್ಲಿ ಬಿಜೆಪಿಯೇ ಗೆಲ್ಲಲಿದೆ ಹಾಗೂ ಮಣಿಪುರದಲ್ಲಿ ಕಾಂಗ್ರೆಸ್ ಸರ್ಕಾರವೇ ಉಳಿಯಲಿದೆ.

ಡಿಜಿಟಲ್ ಕನ್ನಡ ಟೀಮ್:

ಏ.9ಕ್ಕೆ ಉಪಚುನಾವಣೆ

ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಎಪ್ರಿಲ್ 9ಕ್ಕೆ ನಡೆಸಲು ನಿರ್ಧರಿಸಲಾಗಿದ್ದು, ಏ.13ರಂದು ಫಲಿತಾಂಶ ಪ್ರಕಟವಾಗಲಿದೆ. ತಮಿಳುನಾಡು, ಕೇರಳ, ಜಮ್ಮುಕಾಶ್ಮೀರ, ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳ 27ವಿಧಾನಸಭೆ ಕ್ಷೇತ್ರಗಳಿಗೆ ಏ.9ರಂದು ಉಪಚುನಾವಣೆ ನಡೆಯಲಿದ್ದು, ಅದರ ಜತೆಗೆ ರಾಜ್ಯದ ಎರಡು ಕ್ಷೇತ್ರಗಳಲ್ಲಿ ನಡೆಯಲಿವೆ. ಕಾಂಗ್ರೆಸ್ ಮಾಜಿ ನಾಯಕ ಹಾಗೂ ಸಚಿವರಾಗಿದ್ದ ಶ್ರೀನಿವಾಸ ಪ್ರಸಾದ್ ಅವರು ಪಕ್ಷ ತೊರೆದು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ನಂಜನಗೂಡು ಕ್ಷೇತ್ರದ ಶಾಸಕ ಸ್ಥಾನ ತೆರವಾಗಿದ್ದು, ಇದು ಪ್ರತಿಷ್ಠೆಯ ಕಣವಾಗಿದೆ. ಈ ಕ್ಷೇತ್ರದಲ್ಲಿ ಶ್ರೀನಿವಾಸ್ ಪ್ರಸಾದ್ ಅವರು ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದು, ಇವರ ವಿರುದ್ಧ ಕಾಂಗ್ರೆಸ್ ಜೆಡಿಎಸ್ ನಲ್ಲಿದ್ದ ಕಳಲೆ ಕೇಶವಮೂರ್ತಿ ಅವರನ್ನು ಸೆಳೆದು ಕಣಕ್ಕಿಳಿಸುತ್ತಿದೆ. ಇನ್ನು ಸಹಕಾರ ಸಚಿವರಾಗಿದ್ದ ಮಹದೇವ ಪ್ರಸಾದ್ ಅವರ ಅಕಾಲಿಕ ಮರಣದಿಂದ ಗುಂಡ್ಲುಪೇಟೆ ಕ್ಷೇತ್ರ ತೆರವುಗೊಂಡಿತ್ತು. ಇಲ್ಲಿ ಮಹದೇವ ಪ್ರಸಾದ್ ಅವರ ಪತ್ನಿ ಶ್ರೀಮತಿ ಗೀತಾ ಮಹದೇವಪ್ರಸಾದ್ ಅವರೇ ಸ್ಪರ್ಧಿಸಲಿದ್ದಾರೆ. ಮುಂದಿನ ವರ್ಷ ರಾಜ್ಯ ವಿಧಾನ ಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಎರಡು ಕ್ಷೇತ್ರಗಳ ಚುನಾವಣೆ ತೀವ್ರ ಮಹತ್ವ ಪಡೆದುಕೊಂಡಿದೆ.

ವಿಷಹಾರ ಸೇವನೆ ಮೂರು ವಿದ್ಯಾರ್ಥಿ ಸಾವು

ತುಮಕೂರಿನ ವಸತಿಶಾಲೆಯೊಂದರಲ್ಲಿ ವಿಷಹಾರ ಸೇವನೆಯಿಂದ ಮೂರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಮೂವರ ಗಂಭೀರ ಸ್ಥಿತಿಯಲ್ಲಿದ್ದಾರೆ. ಚಿಕ್ಕನಾಯಕನ ಹಳ್ಳಿಯಲ್ಲಿರುವ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಬೋರ್ಡಿಂಗ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ರಾತ್ರಿ ಊಟ ಸೇವಿಸಿದ ಬಳಿಕ ಐವರು ವಿದ್ಯಾರ್ಥಿಗಳು ಹಾಗೂ ಸೆಕ್ಯುರಿಟಿ ಗಾರ್ಡ್ ತೀವ್ರ ಅಸ್ವಸ್ಥರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮುಖ್ಯಮಂತ್ರಿಗಳು ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದಾರೆ.

ಶ್ವೇತ ಪತ್ರ ಹೊರಡಿಸಲು ಶೆಟ್ಟರ್ ಆಗ್ರಹ

ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ತಕ್ಷಣವೇ ಶ್ವೇತಪತ್ರ ಹೊರಡಿಸುವಂತೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ. ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ 160 ತಾಲೂಕುಗಳಲ್ಲಿ ಬರಗಾಲವಿದೆ. ಆದರೆ ಬರ ಪರಿಹಾರ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಹಳ್ಳಿಗಳಲ್ಲಿ ಪ್ರತಿ ಮನೆಗೆ ಒಂದು ಲೀಟರ್, ಎರಡು ಲೀಟರ್ ನೀರು ಹಂಚಿಕೆ ಮಾಡುವ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಕುಡಿಯುವ ನೀರು ಒದಗಿಸುವ ವಿಷಯದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು’ ಎಂದು ಹೇಳಿದ್ದಾರೆ.

ಸಮೀಕ್ಷೆ ನಡೆಸಿ ಬಿಜೆಪಿ ಅಭ್ಯರ್ಥಿ ಆಯ್ಕೆ: ಬಿಎಸ್ ವೈ

ಮುಂದಿನ ವರ್ಷ ನಡೆಯಲಿರುವ ವಿಧಾನ ಸಭೆ ಚುನಾವಣೆ ವೇಳೆ ದೆಹಲಿ ಅಥವಾ ಬೆಂಗಳೂರಿನಲ್ಲಿ ಕುಳಿತು ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಿಲ್ಲ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಸಮೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ತೀರ್ಮಾನಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ. ‘ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತದೆಯೋ ಇಲ್ಲವೋ ಎಂಬ ಅನುಮಾನ ಬೇಡ. ಗೆಲ್ಲುವ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲಾಗುವುದು. ಆಯಾ ಪರಿಸ್ಥಿತಿಗೆ ಅನುಗುಣವಾಗಿ ಟಿಕೆಟ್ ನೀಡಲಾಗುವುದೇ ಹೊರತು ಬೇರೊಬ್ಬರ ಶಿಫಾರಸ್ಸಿನಂತೆ ಆಯ್ಕೆ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

ಸೈಫುಲ್ಲಾ ತಂದೆಯನ್ನು ಶ್ಲಾಘಿಸಿದ ರಾಜನಾಥ್ ಸಿಂಗ್

ಐಎಸ್ಐಎಸ್ ಸಂಪರ್ಕ ಹೊಂದಿದ್ದ ಉಗ್ರ ಸೈಫುಲ್ಲಾನ ಮೃತ ದೇಹವನ್ನು ಸ್ವೀಕರಿಸಲು ನಿರಾಕರಿಸಿದ ಆತನ ತಂದೆ ಮೊಹಮದ್ ಸರ್ತಾಜ್ ಅವರನ್ನು ಹೊಗಳಿದ್ದಾರೆ. ‘ನಾವೆಲ್ಲರೂ ಸರ್ತಾಜ್ ಅವರನ್ನು ನೋಡಿ ಹೆಮ್ಮೆಪಡಬೇಕಿದೆ. ಇಂದು ಈ ಸದನದಲ್ಲಿರುವ ಎಲ್ಲ ಸಂಸದರೂ ನಮ್ಮ ಜತೆ ಸೇರಿ ಅವರಿಗೆ ಅನುಕಂಪ ತೋರುವ ನಂಬಿಕೆ ಇದೆ’ ಎಂದರು.

ನಂತರ ಸದನದಲ್ಲಿ ಮಾತನಾಡಿದ ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಅಮೆರಿಕದಲ್ಲಿ ನಡೆಯುತ್ತಿರುವ ಭಾರತೀಯ ಪ್ರಜೆಗಳ ಮೇಲಿನ ಹಲ್ಲೆ ಪ್ರಕರಣಗಳನ್ನು ಚರ್ಚಿಸಿ ‘ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ವಿಷಯಕ್ಕೂ ಪ್ರತಿಕ್ರಿಯೆ ನೀಡುತ್ತಾರೆ. ಆದರೆ ಈ ವಿಚಾರದಲ್ಲಿ ಈವರೆಗೂ ಒಂದೇ ಒಂದು ಮಾತನ್ನು ಆಡಿಲ್ಲ. ಇದರ ಹಿಂದಿನ ಕಾರಣವಾದರೂ ಏನು?’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ರಾಜನಾಥ್ ಸಿಂಗ್, ‘ಅಮೆರಿಕದಲ್ಲಿನ ದಾಳಿ ಪ್ರಕರಣವನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇವೆ’ ಎಂದರು.

ನಂತರ ಲೋಕಸಭೆಯಲ್ಲಿ ಹೆರಿಗೆ ಸೌಲಭ್ಯ ತಿದ್ದುಪಡಿ ಮಸೂದೆ 2016 ಮಂಡಿಸಲಾಯಿತು. ಈ ಮಸೂದೆ ಮೂಲಕ ಹೆರಿಗೆ ಅವಧಿಯಲ್ಲಿ ಮಹಿಳೆಯರಿಗೆ ನೀಡಲಾಗುತ್ತಿದ್ದ ರಜೆ ಅವಧಿಯನ್ನು 12 ವಾರದಿಂದ 26 ವಾರದವರೆಗೂ ವಿಸ್ತರಿಸಲಾಗಿದೆ.

Leave a Reply