ನಡುರಾತ್ರಿಯಲ್ಲಿ ಪಿಜಿಗೆ ನುಗ್ಗಿದ ಕಳ್ಳ ಲೈಂಗಿಕ ದೌರ್ಜನ್ಯಕ್ಕೆ ಮುಂದಾದ, ಮಾಲಿಕನಿಗಿಲ್ಲ ಯುವತಿಯ ಗೌರವದ ಕಾಳಜಿ: ಆಕ್ರೋಶ ಹುಟ್ಟಬೇಕಾದ ವಿದ್ಯಮಾನವಿದು

(ಪ್ರಾತಿನಿಧಿಕ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ಮಹಿಳಾ ಸುರಕ್ಷತೆ ವಿಷಯ ಬಂದಾಗ ಕೆಲವು ರಾಷ್ಟ್ರೀಯಮಟ್ಟದಲ್ಲಿ ಪ್ರಚಾರ ಪಡೆದು ಸಮಸ್ಯೆಯ ಪರಿಹಾರಕ್ಕೆ ಒತ್ತಡವೊಂದು ನಿರ್ಮಾಣವಾಗುತ್ತದೆ. ಆದರೆ ಕೆಲವೊಂದು ಮಾತ್ರ ತೀರ ಚರ್ಚೆಗೆ ಆಸ್ಪದವಾಗದಂತೆ ನಡೆದುಕೊಂಡೇ ಇರುತ್ತವೆ. ಹಾಗಾದರೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ವಿದ್ಯಮಾನಕ್ಕೆ ವಿವರಗಳನ್ನು ತುಂಬುವ ಶಕ್ತಿ ಇದ್ದರೆ ಮಾತ್ರ ಅದು ಸುದ್ದಿಯಾಗುತ್ತದೆಯೇ ಎಂಬ ಪ್ರಶ್ನೆ ಕಾಡುತ್ತದೆ. ಉದಾಹರಣೆಗೆ- ಸಿಸಿಟಿವಿ ದೃಶ್ಯಾವಳಿ, ವಿದೇಶಿ ಮಹಿಳೆ, ಮಧ್ಯರಾತ್ರಿ ಕೆಲಸದಿಂದ ಹಿಂತಿರುಗುತ್ತಿದ್ದ ಯುವತಿ… ಇವರೆಲ್ಲರಿಗೂ ನ್ಯಾಯ ಸಿಗಬೇಕೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ವಿವರಗಳಿಲ್ಲದ ಪ್ರಕರಣಗಳು?

ಬೆಂಗಳೂರಿನ ಕುಂಡಲಹಳ್ಳಿ ಗೇಟ್ ಬಳಿ ಪಿಜಿ ಒಂದರಲ್ಲಿ ಮಾರ್ಚ್ 5ರಂದು ನಡೆದಿರುವ ಪ್ರಕರಣ ಗಮನಿಸಿ.

ಈ ಪಿಜಿಯಲ್ಲಿ ಆಶ್ರಯ ಪಡೆದಿದ್ದ ಮುಂಬೈ ಮೂಲದ ಮಹಿಳೆಯೊಬ್ಬರು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನಲ್ಲಿ ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.

‘ಅಂದು ರಾತ್ರಿ ನಾನು ಮೊಬೈಲ್ ಬಳಸಿ ಮಲಗಿದೆ. ಮಧ್ಯರಾತ್ರಿ 1.30ರ ಸುಮಾರಿಗೆ ಎಚ್ಚರವಾಯಿತು. ಆಗ ಒಬ್ಬ ವ್ಯಕ್ತಿ ಚಾಕು ಹಿಡಿದುಕೊಂಡು ಕೊಠಡಿಯೊಳಗೆ ನಿಂತಿದ್ದನ್ನು ನೋಡಿದೆ. ನಾನು ಎಚ್ಚರವಾದ ನಂತರ ನನ್ನ ಬಳಿ ಇರುವ ಎಲ್ಲ ದುಡ್ಡನ್ನು ನೀಡುವಂತೆ ಕೇಳಿದ. ಜತೆಗೆ ಚಾಕು ತೋರಿಸಿ ತನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಹೆದರಿಸಿದ. ನನ್ನ ಹೆಸರು, ಊರು, ಎಲ್ಲಿ ಕೆಲಸ ಮಾಡುತ್ತೇನೆ ಎಂಬೆಲ್ಲಾ ವಿವರಗಳನ್ನು ಕೇಳಿದ. ಆಗ ನಾನು ತಪ್ಪು ವಿವರಗಳನ್ನು ನೀಡಿದೆ. ತಕ್ಷಣವೇ ಆತ ನನ್ನ ಹೊದಿಕೆಯನ್ನು ಎಳೆಯಲು ಪ್ರಯತ್ನಿಸಿದ. ಅದಕ್ಕೆ ವಿರೋಧಿಸಿದ ನನಗೆ ಆತ ಚಾಕುವಿನಿಂದ ಹಲ್ಲೆ ಮಾಡಿದ. ನನಗೆ ಗಾಯಗಳಾದವು. ನಂತರ ನನ್ನನ್ನು ಅಸಭ್ಯ ರೀತಿಯಲ್ಲಿ ಮುಟ್ಟಲು ಆರಂಭಿಸಿದ’ ಎಂದು ಆ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಇದೇ ವೇಳೆ ಆ ವ್ಯಕ್ತಿ ‘ನಾನು ಐದು ಜನರ ತಂಡದೊಂದಿಗೆ ಆಗಮಿಸಿದ್ದು, ಅವರು ಬೇರೆ ಕೊಠಡಿಗಳಲ್ಲಿ ಬೇರೆ ಹುಡುಗಿಯರ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ನನ್ನ ಬಾಸ್ ಪಕ್ಕದ ಕೊಠಡಿಯಲ್ಲಿದ್ದು, ಆತನಿಗೆ ನಿನ್ನ ಬಳಿ ಇರುವ ದುಡ್ಡು ನೀಡು ಎಂದು ಹೇಳಿದ. ತಕ್ಷಣವೇ ತನ್ನ ಮೊಬೈಲ್ ಅನ್ನು ಹುಡುಕಾಡಿದೆ. ಆಗ ನಿನ್ನ ಫೋನ್ ಬಾಸ್ ಕೈಗೆ ಸೇರಿದೆ’ ಎಂದು ಹೇಳಿದ. ಕೆಲ ಹೊತ್ತಿನ ನಂತರ ಯಾರಾದರೂ ಬರುತ್ತಿದ್ದಾರಾ ಎಂಬುದನ್ನು ನೋಡಲು ಆತ ಕೊಠಡಿಯ ಬಾಗಿಲ ಬಳಿ ತೆರಳಿದ. ಈ ಸಮಯದಲ್ಲಿ ನಾನು ಸ್ನಾನದ ಮನೆಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡೆ. ನಂತರ ಆತ ಬಾಗಿಲನ್ನು ಜೋರಾಗಿ ಬಡಿದು ತೆರೆಯುವಂತೆ ಕೇಳಿದ. ಆದರೆ ನಾನು ತೆರೆಯಲಿಲ್ಲ. ಸ್ವಲ್ಪ ಸಮಯದ ನಂತರ ಪಿಜಿಯಲ್ಲಿದ್ದ ನನ್ನ ಸ್ನೇಹಿತೆಯರು ಆಗಮಿಸಿದರು. ಆನಂತರ ಬಾಗಿಲು ತೆರೆದೆ. ಅಷ್ಟು ಹೊತ್ತಿಗಾಗಲೇ ಆತ ಪರಾರಿಯಾಗಿದ್ದ’ ಎಂದು ವಿವರಿಸಿದ್ದಾರೆ.

ಇಂಥ ಪ್ರಕರಣಗಳು ಈ ಹಿಂದೆಯೂ ವರದಿಯಾಗಿವೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ, ಯುವತಿ ನೀಡಿರುವ ದೂರಿನ ಪ್ರಕಾರ, ಪಿಜಿಯ ಮಾಲೀಕ ಈ ಪ್ರಕರಣವನ್ನು ಪೊಲೀಸರಿಗೆ ಒಯ್ಯದಂತೆ ಒತ್ತಡ ಹಾಕಿದನಂತೆ! ಮೊಬೈಲ್ ಫೋನ್ ಬೇಕಾದರೆ ಹೊಸದು ಕೊಡಿಸುತ್ತೇನೆ, ಇದನ್ನು ಬೆಳೆಸುವುದು ಬೇಡ ಎಂದನಂತೆ ಆತ! ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವುದಕ್ಕೂ ಆತ ಸಹಕಾರ ನೀಡಿಲ್ಲ.

ದೇಶಾದ್ಯಂತ ದಿನಂಪ್ರತಿ ಅತ್ಯಾಚಾರ ವಿದ್ಯಮಾನಗಳ ನಡುವೆಯೂ ಸಮಾಜ ಹೇಗೆ ಜಡ್ಡುಗಟ್ಟಿದೆ ಎಂಬುದಕ್ಕೆ ಉದಾಹರಣೆ ಇದು. ತನ್ನ ಮನೆಯವರನ್ನು ಸಂತ್ರಸ್ತರ ಸ್ಥಾನದಲ್ಲಿ ಕಲ್ಪಿಸಿಕೊಂಡರೆ ಆ ಮಾಲೀಕ ಇದೇ ಮನಸ್ಥಿತಿ ತೋರುತ್ತಾನಾ? ಮೊದಲನೆಯದಾಗಿ ಪಿಜಿ ಭದ್ರತೆಯ ಹೊಣೆ ಆತನದ್ದು. ನಡುರಾತ್ರಿಯಲ್ಲಿ ಯಾರೋ ಕಾಮುಕ ಯುವತಿಯರ ಕೊಠಡಿಗೆ ನುಗ್ಗುತ್ತಾನೆ ಎಂದರೆ ಏನರ್ಥ? ಸಂತ್ರಸ್ತೆಯ ಪರ ನಿಂತು ಅಂಥವನನ್ನು ಹುಡುಕಿ ದಂಡಿಸುವ ಕಾರ್ಯದಲ್ಲಿರಬೇಕಾದವರು ‘ಅಡ್ಜಸ್ಟ್ ಮಾಡಿಕೊ’ ಎಂಬಂತೆ ಮಾತನಾಡುತ್ತಾರೆಂದರೆ ಎಲ್ಲಿ ಸತ್ತಿದೆ ಸಂವೇದನೆ?

ನಗರದ ಹೊರಭಾಗದ ಇಂಥ ಎಷ್ಟು ನಿವಾಸಗಳಲ್ಲಿ ಈ ಬಗೆಯ ಗೌರವರಹಿತ, ಭಯಯುಕ್ತ ವಾತಾವರಣ ನೆಲೆಸಿದೆಯೋ ಬಲ್ಲವರಾರು?

Leave a Reply