ಡಿಜಿಟಲ್ ಕನ್ನಡ ಟೀಮ್:
ಪ್ರತಿ ವರ್ಷ ದೇಶದಲ್ಲಿ ಸುಮಾರು 20 ಲಕ್ಷ ಮಂದಿ ಹೃದಯಾಘಾತ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಆ ಪೈಕಿ ಅನೇಕರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೃದ್ರೋಗಿಗಳಿಗೆ ಅಗತ್ಯ ಸಂದರ್ಭದಲ್ಲಿ ಉತ್ತಮ ಚಿಕಿತ್ಸೆ ದೊರಕಬೇಕು ಎಂಬ ಉದ್ದೇಶದಿಂದ ಹೃದಯಾಘಾತಕ್ಕೆ ಸಂಬಂಧಿಸಿದಂತೆ ಸಂಹಿತೆ ಜಾರಿಗೊಳಿಸಿ ದೇಶದೆಲ್ಲೆಡೆ ಹೃದ್ರೋಗ ಆಸ್ಪತ್ರೆಗಳ ಜಾಲ ನಿರ್ಮಾಣ ಮಾಡಬೇಕೆಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್) ಶಿಫಾರಸ್ಸನ್ನು ಕೊಟ್ಟಿದೆ.
ಎಲ್ಲಾ ರಾಜ್ಯಗಳಲ್ಲಿ ಇರುವ ಆ್ಯಂಬುಲೆನ್ಸ್ ಗಳನ್ನು ಬಳಸಿಕೊಂಡು ಎಲ್ಲಾ ದೊಡ್ಡ ಹಾಗೂ ಸಣ್ಣ ಹೃದ್ರೋಗ ಆಸ್ಪತ್ರೆಗಳ ಜಾಲವನ್ನು ನಿರ್ಮಿಸಿ ರೋಗಿಗಳಿಗೆ ಪರಿಣಾಮಕಾರಿ ಸೇವೆ ಒದಗಿಸುವುದಕ್ಕೆ ಸಂಹಿತೆ ಜಾರಿಗೊಳಿಸಬೇಕೆಂಬುದು ಐಸಿಎಂಆರ್ ಸಲಹೆ. ಈ ಜಾಲದಲ್ಲಿ ಒಳಪಡುವ ಎಲ್ಲ ಆ್ಯಂಬುಲೆನ್ಸ್ ಗಳಲ್ಲೂ ಮೊಬೈಲ್ ಮೂಲಕ ರೋಗಿಯ ಎಲೆಕ್ಟ್ರೋಕಾರ್ಡಿಯೋಗ್ರಾಫ್ (ಇಸಿಜಿ)ಯನ್ನು ಆರೋಗ್ಯ ಕೇಂದ್ರಗಳಿಗೆ ರವಾನಿಸಿ ಅಲ್ಲಿರುವ ತಜ್ಞರಿಂದ ಸೂಕ್ತ ಸಲಹೆ ಪಡೆಯುವ ಸೌಲಭ್ಯ ಕಲ್ಪಿಸಲಾಗುವುದು. ಜತೆಗೆ ಈ ಆ್ಯಂಬುಲೆನ್ಸ್ ನಲ್ಲಿ ನುರಿತ ವೈದ್ಯರನ್ನು ನೇಮಿಸಲಾಗುವುದು.
ಸದ್ಯ ಹೃದ್ರೋಗ ತಜ್ಞರು ಎಸ್.ಟಿ-ಎಲೆವೇಷನ್ ಮೈಕಾರ್ಡಿಯಲ್ ಇಫ್ರಾಕ್ಷನ್ (ಎಸ್ಟಿಇಎಂಐ) ಎಂಬ ವ್ಯವಸ್ಥೆ ಅಭಿವೃದ್ಧಿಪಡಿಸಿ 32 ವಾರಗಳ ಕಾಲ ತಮಿಳುನಾಡಿನಲ್ಲಿ ಪ್ರಯೋಗ ಮಾಡಿದೆ. ಈ ಪ್ರಯೋಗದ ವೇಳೆ ಅಗತ್ಯ ರೋಗಿಗಳಿಗೆ ಹೃದಯಾಘಾತ ಸಂಭವಿಸಿದಾಗ ತಕ್ಷಣವೇ ಅತ್ಯುತ್ತಮ ಚಿಕಿತ್ಸೆ ನೀಡಬಹುದು ಎಂಬುದು ಸಾಬೀತಾಗಿದೆ.
ಹೃದಯಾಘಾತ ಸಂಭವಿಸಿದ ವ್ಯಕ್ತಿಗೆ ನೀಡಲಾಗುವ ಅತ್ಯುತ್ತಮ ಚಿಕಿತ್ಸೆ ಎಂದರೆ ಆ್ಯಂಜಿಯೋಗ್ರಾಫಿ ಮತ್ತು ಆ್ಯಂಜಿಯೋಪ್ಲಾಸ್ಟಿ. ಭಾರತದಲ್ಲಿ ಸುಮಾರು 800 ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ನೀಡುವ ಸೌಲಭ್ಯ ಕಲ್ಪಿಸಲಾಗಿದೆ. ಇನ್ನು ಅನೇಕ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಪ್ರಯೋಗಾಲಯ ಚಿಕಿತ್ಸಾ ಕೇಂದ್ರಗಳಿವೆ. ಆದರೆ ಈ ಸೌಲಭ್ಯಗಳಿರುವ ಆಸ್ಪತ್ರೆಗಳು ಕೇವಲ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಮಾತ್ರ ಇವೆ. ಹೀಗಾಗಿ ಹೃದ್ರೋಗ ಆಸ್ಪತ್ರೆಗಳ ನಡುವೆ ಸಂಪರ್ಕ ಕಲ್ಪಿಸಿ ಒಂದು ಜಾಲವನ್ನು ನಿರ್ಮಿಸಿದರೆ ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಬಹುದು ಎಂಬುದು ಈ ಸಲಹೆ ಹಿಂದಿರುವ ಮೂಲ ಉದ್ದೇಶ.
ಈ ಜಾಲ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡುವುದಾದರೆ, ರೋಗಿಯು ಹೃದಯಾಘಾತಕ್ಕೆ ಒಳಗಾದಾಗ ಸಮೀಪದಲ್ಲೇ ಆ್ಯಂಜಿಯೋಗ್ರಾಫಿ ಮತ್ತು ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸಾ ಸೌಲಭ್ಯವಿರುವ ಆಸ್ಪತ್ರೆ ಇದ್ದರೆ ಆತನನ್ನು ಆ್ಯಂಬುಲೆನ್ಸ್ ಮೂಲಕ ನೇರವಾಗಿ ಅಲ್ಲಿಗೆ ಕರೆದೊಯ್ಯಲಾಗುವುದು. ಒಂದು ವೇಳೆ ಈ ಚಿಕಿತ್ಸಾ ಆಸ್ಪತ್ರೆ ಸಮೀಪದಲ್ಲಿ ಇಲ್ಲವಾದರೆ, ಸಮೀಪದಲ್ಲೇ ಇರುವ ಇತರೆ ಹೃದ್ರೋಗ ಆಸ್ಪತ್ರೆಗಳಿಗೆ ರೋಗಿಯನ್ನು ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಆತನಿಗೆ ಥ್ರೊಂಬೊಲಿಟಿಕ್ಸ್ ಚಿಕಿತ್ಸೆ ನೀಡಲಾಗುವುದು. ಹೀಗೆ ರೋಗಿಯನ್ನು ಆ್ಯಂಬುಲೆನ್ಸ್ ನಲ್ಲಿ ಕರೆದೊಯ್ಯುವಾಗ ಮೊಬೈಲ್ ಮೂಲಕವೇ ರೋಗಿಯ ಇಸಿಜಿ ಮಾಹಿತಿಯನ್ನು ಸಮೀಪದಲ್ಲೇ ಇರುವ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಅಲ್ಲಿರುವ ತಜ್ಞರಿಂದ ಮಾಹಿತಿ ಪಡೆಯಲಾಗುವುದು. ಹೀಗೆ ಮಾಹಿತಿ ಪಡೆದು ರೋಗಿಗೆ ಅಗತ್ಯ ಸಂದರ್ಭದಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಗುವುದು. ನಂತರ ತಜ್ಞರ ಸಲಹೆ ಮೇರೆಗೆ ಮುಂದಿನ 3 ರಿಂದ 24 ಗಂಟೆಗಳ ಒಳಗಾಗಿ ರೋಗಿಯ ಅಗತ್ಯದ ಆಧಾರದ ಮೇಲೆ ಬೇರೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಬಹುದು.