ಕ್ರಿಕೆಟ್ ನಲ್ಲೂ ಬರಲಿದೆ ರೆಡ್ ಕಾರ್ಡ್… ಬ್ಯಾಟ್ ಗಾತ್ರಕ್ಕೆ ಬ್ರೇಕ್… ಬದಲಾಗುತ್ತಿರುವ ಕ್ರಿಕೆಟ್ ನಿಯಮಗಳೇನು ಗೊತ್ತೆ?

ಡಿಜಿಟಲ್ ಕನ್ನಡ ಟೀಮ್:

ಕ್ರೀಡೆ ಹರಿಯುವ ನೀರಿನ ಹಾಗೆ. ಕಾಲ ಕಾಲಕ್ಕೆ ಹೊಸ ತಂತ್ರಜ್ಞಾನ ಅಳವಡಿಕೆ, ನಿಯಮ, ಸ್ವರೂಪಗಳಲ್ಲಿ ತಕ್ಕ ಮಟ್ಟಿಗೆ ಬದಲಾವಣೆ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುವ ಜತೆಗೆ ಕ್ರೀಡೆಯಲ್ಲಿ ಪಾರದರ್ಶಕತೆ ಮತ್ತು ರೋಚಕತೆ ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಕ್ರಿಕೆಟ್ ನಲ್ಲಿ ಇಂತಹ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಈಗ ಕ್ರಿಕೆಟ್ ನಲ್ಲಿ ಮತ್ತೆ ಕೆಲವು ನಿಯಮಗಳ ಬದಲಾವಣೆ ಮೂಲಕ ಹೊಸ ಪ್ರಯೋಗಕ್ಕೆ ಎಂಸಿಸಿ ಮುಂದಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಮವನ್ನು ನಿರ್ಧರಿಸುವ ಮಾರ್ಲೆಬೊನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಈಗ ಮತ್ತಷ್ಟು ನಿಯಮಗಳ ಬದಲಾವಣೆ ತರುತ್ತಿದೆ. ಈ ಬಾರಿ ರನೌಟ್ ವಿಚಾರದಲ್ಲಿನ ಕೆಲವು ಗೊಂದಲ ಬಗೆಹರಿಸುವುದು, ಆಟಗಾರರ ಮೈದಾನದಲ್ಲಿನ ವರ್ತನೆ ನಿಯಂತ್ರಿಸುವುದು ಹಾಗೂ ಸ್ಪರ್ಧಾತ್ಮಕತೆ ದೃಷ್ಟಿಯಿಂದ ಬ್ಯಾಟ್ ಗ್ರಾತಕ್ಕೆ ಮಿತಿ ನಿಗದಿಪಡಿಸುವ ಬದಲಾವಣೆಗೆ ಎಂಸಿಸಿ ಮುಂದಾಗಿದೆ. ಇದರಿಂದ ಕ್ರೀಡೆಯ ದಕ್ಷತೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.

ಈ ಹೊಸ ನಿಯಮಗಳು ಇದೇ ವರ್ಷ ಅಕ್ಟೋಬರ್ 1 ರಿಂದ ಜಾರಿಯಾಗಲಿದ್ದು, ಏನೆಲ್ಲಾ ನಿಯಮ ಬದಲಾವಣೆಯಾಗಲಿವೆ ಎಂಬುದನ್ನು ನೋಡೋಣ ಬನ್ನಿ…

david-warner-bat

  1. ಬ್ಯಾಟ್ ಹಾಗೂ ಬಾಲ್ ನಡುವಣ ಹೊಂದಾಣಿಕೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಎಂಸಿಸಿ ದೊಡ್ಡ ಗಾತ್ರದ ಬ್ಯಾಟ್ ಬಳಕೆಗೆ ಬ್ರೇಕ್ ಹಾಕಲು ನಿರ್ಧರಿಸಿದೆ. ಇದರೊಂದಿಗೆ ಇನ್ನುಮುಂದೆ ಆಟಗಾರರು ಗರಿಷ್ಟ 108 ಎಂಎಂನಷ್ಟು ಅಗಲ, 67 ಎಂಎಂ ದಪ್ಪ ಹಾಗೂ ಬ್ಯಾಟಿನ ಅಂಚಿನ ಗಾತ್ರ 40 ಎಂಎಂನಷ್ಟು ಮಾತ್ರ ಇರಬೇಕು ಎಂದು ಹೇಳಿದೆ. ಒಂದು ವೇಳೆ ಆಟಗಾರ ತಮ್ಮ ಬ್ಯಾಟ್ ಅನ್ನು ಈ ಗಾತ್ರಕ್ಕೆ ಅನುಗುಣವಾಗಿ ಬಳಸದೆ ದೊಡ್ಡ ಗಾತ್ರದ ಬ್ಯಾಟ್ ಬಳಕೆ ಮುಂದುವರಿಸಿದರೆ ಅದನ್ನು ಕಾನೂನು ಉಲ್ಲಂಘನೆ ಎಂದು ಪರಿಗಣಿಸಲಾಗುವುದು. ಈ ಬದಲಾವಣೆಯಿಂದ ಕೆಲವು ದೈತ್ಯ ದಾಂಡಿಗರು ಈಗ ಬ್ಯಾಟ್ ಬದಲಾವಣೆಗೆ ಮುಂದಾಗಲೇಬೇಕಿದೆ. ಉದಾಹರಣೆಗೆ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್. ವಾರ್ನರ್ ಅವರು ಸದ್ಯ 85 ಎಂಎಂ ದಪ್ಪದ ಬ್ಯಾಟ್ ಅನ್ನು ಬಳಸುತ್ತಿದ್ದು, ಹೊಸ ನಿಯಮಕ್ಕಿಂತ 18 ಎಂಎಂನಷ್ಟು ಹೆಚ್ಚಾಗಿದೆ.
  2. ರನೌಟಿಗೆ ಸಂಬಂಧಿಸಿದ ಬದಲಾವಣೆ ಎಂದರೆ, ಬೌಲರ್ ಚೆಂಡನ್ನು ಬೌಲ್ ಮಾಡುವ ಮುನ್ನ ನಾನ್ ಸ್ಟ್ರೈಕರ್ ಬದಿಯಲ್ಲಿರುವ ಆಟಗಾರ ಕ್ರೀಸ್ ನಿಂದ ಹೊರಗೆ ಹೋದಾಗ ಬೌಲರ್ ನೇರವಾಗಿ ರನೌಟ್ ಮಾಡಬಹುದು. ಈ ವಿಷಯವಾಗಿ ಇಷ್ಟು ದಿನಗಳ ಕಾಲ ಸಾಕಷ್ಟು ಗೊಂದಲಗಳಿದ್ದವು. ಅಲ್ಲದೆ, ಇಂತಹ ರನೌಟ್ ಗಳು ವಿವಾದಕ್ಕೂ ಕಾರಣವಾಗುತ್ತಿದ್ದವು. ಈಗ ಎಂಸಿಸಿ ಇದನ್ನು ನಿಯಮವಾಗಿ ಜಾರಿಗೊಳಿಸಿರುವುದರಿಂದ ಬೌಲರ್ ಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಸಿಕ್ಕಿದ್ದು, ಬ್ಯಾಟ್ಸ್ ಮನ್ ಗಳು ಇನ್ನು ಮುಂದೆ ಜಾಗರೂಕತೆಯಿಂದ ಇರಬೇಕು.bouncing-bat-run-out
  3. ಇನ್ನು ಮತ್ತೊಂದು ಬದಲಾವಣೆ ರನೌಟಿಗೆ ಸಂಬಂಧ ಪಟ್ಟಿರುವುದು. ಇಷ್ಟು ದಿನಗಳ ಕಾಲ ಬ್ಯಾಟ್ಸ್ ಮನ್ ಡೈವ್ ಮಾಡಿ ಕ್ರೀಸ್ ನೊಳಗೆ ಬ್ಯಾಟ್ ಸೇರಿಸುವ ವೇಳೆ ಆತನ ಬ್ಯಾಟ್ ನೆಲಕ್ಕೆ ತಾಗಿ ಕ್ರೀಸ್ ಒಳಗೆ ಪ್ರವೇಶಿಸುವಾಗ ಬ್ಯಾಟಿನ ಹಿಂಬದಿ ನೆಲಕ್ಕೆ ತಾಗಿ ಮೇಲೆ ಬರುತ್ತಿತ್ತು. ಆಗ ವಿಕೆಟ್ ನ ಬೇಲ್ಸ್ ಎಗರಿದರೆ ಬ್ಯಾಟ್ಸ್ ಮನ್ ಔಟೆಂದು ತೀರ್ಪು ನೀಡಲಾಗುತ್ತಿತ್ತು. ಇಂತಹ ಪ್ರಕರಣಗಳಲ್ಲಿ ಬ್ಯಾಟ್ಸ್ ಮನ್ ಕ್ರೀಸ್ ಮುಟ್ಟಿಸಿದ್ದರೂ ಬ್ಯಾಟ್ ಬೌನ್ಸ್ ಆಗಿ ನೆಲವನ್ನು ತಾಕಿಲ್ಲ ಎಂಬ ಕಾರಣಕ್ಕೆ ಔಟ್ ಎಂದು ನೀಡಲಾಗುತ್ತಿತ್ತು. ಇದರಿಂದ ಬ್ಯಾಟ್ಸ್ ಮನ್ ಗೆ ಹಿನ್ನಡೆಯಾಗುತ್ತದೆ ಎಂಬ ಕಾರಣಕ್ಕೆ ಇನ್ನು ಮುಂದೆ ಇಂತಹ ಪರಿಸ್ಥಿತಿಯಲ್ಲಿ ಬ್ಯಾಟ್ಸ್ ಮನ್ ಅನ್ನು ನಾಟೌಟ್ ಎಂದು ಪರಿಗಣಿಸಲಾಗುವುದು.
  4. ಫುಟ್ಬಾಲ್ ಮಾದರಿಯಲ್ಲಿ ಬರಲಿದೆ ರೆಡ್ ಕಾರ್ಡ್ ಬಳಕೆ. ಹೌದು, ಮೈದಾನದಲ್ಲಿ ಆಟಗಾರರ ವರ್ತನೆಗೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಎಂಸಿಸಿ ಕೆಲವು ಮಹತ್ವದ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಆಟಗಾರರ ವರ್ತನೆ ತೀವ್ರ ಮಟ್ಟದ ಕಾನೂನು ಉಲ್ಲಂಘನೆಯಾದರೆ ಆತನ ವಿರುದ್ಧ ಅಂಪೈರ್ ರೆಡ್ ಕಾರ್ಡ್ ನೀಡಿ ಮೈದಾನದಿಂದ ಹೊರ ಹಾಕುವ ಅಧಿಕಾರ ಕೊಟ್ಟಿದೆ. ಆಟಗಾರರ ವರ್ತನೆ ಹಾಗೂ ಅವರು ಯಾವ ಹಂತದ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂಬುದರ ಮೇಲೆಗೆ ಕೆಲವು ಶಿಸ್ತುಕ್ರಮಗಳನ್ನು ನಿಗದಿಪಡಿಸಿದೆ. ಅವುಗಳು ಹೀಗಿವೆ…
  • ಮೊದಲ ಹಂತದ ಉಲ್ಲಂಘನೆ: ಅನವಶ್ಯಕವಾಗಿ ಅಂಪೈರ್ ಬಳಿ ಎದುರಾಳಿ ಬ್ಯಾಟ್ಸ್ ಮನ್ ಔಟೆಂದು ಮನವಿ ಮಾಡುವುದು ಹಾಗೂ ಅಂಪೈರ್ ಗಳ ತೀರ್ಮಾನಕ್ಕೆ ಅಗೌರವ ತೊರುವುದನ್ನು ಮೊದಲ ಹಂತದ ದುರ್ವತನೆ ಎಂದು ಪರಿಗಣಿಸಲಾಗುತ್ತದೆ. ಪಂದ್ಯದಲ್ಲಿ ಒಂದು ಬಾರಿ ಈ ವರ್ತನೆ ತೋರಿದರೆ ಎಚ್ಚರಿಕೆ ನೀಡಲಾಗುತ್ತದೆ. ಮತ್ತೆ ಈ ತಪ್ಪು ಮರುಕಳಿಸಿದರೆ ಎದುರಾಳಿ ತಂಡಕ್ಕೆ 5 ರನ್ ಸೇರ್ಪಡೆಯಾಗುತ್ತದೆ.
  • ಎರಡನೇ ಹಂತದ ಉಲ್ಲಂಘನೆ: ಆಟದ ವೇಳೆ ಆಟಗಾರನ ಮೇಲೆ ಅನಗತ್ಯವಾಗಿ ಚೆಂಡನ್ನು ಎಸೆಯುವುದು, ಉದ್ದೇಶಪೂರಕವಾಗಿ ಆಟಗಾರನಿಗೆ ಡಿಕ್ಕಿ ಹೊಡೆಯುವುದು ಹಾಗೂ ಇತರೆ ರೀತಿಯಲ್ಲಿ ನಡೆದುಕೊಂಡರೆ ತಕ್ಷಣವೇ ಎದುರಾಳಿ ತಂಡಕ್ಕೆ 5 ರನ್ ನೀಡಲಾಗುವುದು.
  • ಮೂರನೇ ಹಂತದ ಉಲ್ಲಂಘನೆ: ಅಂಪೈರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದು, ಆಟಗಾರರಿಗೆ ಬೆದರಿಕೆ ಅಥವಾ ಬೈಯುವುದು, ತಂಡದ ಅಧಿಕಾರಿ ಅಥವಾ ಪ್ರೇಕ್ಷಕರಿಗೆ ನಿಂಧಿಸುವುದು ಮಾಡಿದರೆ ಎದುರಾಳಿ ತಂಡಕ್ಕೆ ಐದು ಪೆನಾಲ್ಟಿ ರನ್ ನೀಡುವುದರ ಜತೆಗೆ ಆ ವರ್ತನೆ ತೋರಿದ ಆಟಗಾರನನ್ನು ನಿರ್ದಿಷ್ಟ ಓವರ್ ಗಳ ಕಾಲ ಮೈದಾನದಿಂದ ಹೊರಗೆ ಕಳುಹಿಸಲಾಗುವುದು. ಇದು ಟೆಸ್ಟ, ಏಕದಿನ ಹಾಗೂ ಟಿ20 ಮಾದರಿಗೆ ತಕ್ಕಂತೆ ನಿರ್ಧರಿಸಲಾಗುವುದು.
  • ನಾಲ್ಕನೇ ಹಂತದ ಉಲ್ಲಂಘನೆ: ಆಟದ ವೇಳೆ ಅಂಪೈರ್ ಗೆ ಬೆದರಿಕೆ ಹಾಕುವುದು, ಹಿಂಸಾಚಾರಕ್ಕೆ ಮುಂದಾಗುವುದು ಮಾಡಿದರೆ ಎದುರಾಳಿ ತಂಡಕ್ಕೆ ಐದು ಪೆನಾಲ್ಟಿ ರನ್, ಆ ಆಟಗಾರನನ್ನು ಆ ಪಂದ್ಯದಿಂದ ವಜಾಗೊಳಿಸುವುದು. ಒಂದು ವೇಳೆ ಬ್ಯಾಟ್ಸ್ ಮನ್ ಈ ರೀತಿಯಾದ ತಪ್ಪು ಮಾಡಿದರೆ ಆತನನ್ನು ರಿಟೈರ್ಡ್ ಔಟ್ ಎಂದು ಪರಿಗಣಿಸಲಾಗುವುದು.

Leave a Reply